ಪೇ ಸಿಎಂ ಬಳಿಕ ಕಾಂಗ್ರೆಸ್ಸಿಂದ ಈಗ ಸೇ ಸಿಎಂ ಅಭಿಯಾನ..!

Published : Oct 19, 2022, 03:55 AM IST
ಪೇ ಸಿಎಂ ಬಳಿಕ ಕಾಂಗ್ರೆಸ್ಸಿಂದ ಈಗ ಸೇ ಸಿಎಂ ಅಭಿಯಾನ..!

ಸಾರಾಂಶ

ಬಿಜೆಪಿ ನೀಡಿದ್ದ ಭರವಸೆ ಬಗ್ಗೆ 50 ಪ್ರಶ್ನೆ ಕೇಳಿ ಟಾಂಗ್‌, 600 ಭರವಸೆ ನೀಡಿ 10% ಕೂಡ ಈಡೇರಿಸಿಲ್ಲ: ವಿಪಕ್ಷ

ಬೆಂಗಳೂರು(ಅ.19):  ‘ಪೇ ಸಿಎಂ’ ಅಭಿಯಾನ ಯಶಸ್ವಿಯಾದ ಬೆನ್ನಲ್ಲೇ ಅದೇ ಮಾದರಿಯಲ್ಲಿ ಇದೀಗ ರಾಜ್ಯ ಸರ್ಕಾರದ ವಿರುದ್ಧ ‘ಸೇ ಸಿಎಂ’ (ಹೇಳಿ ಸಿಎಂ) ಎಂಬ ಮತ್ತೊಂದು ಹೊಸ ಅಭಿಯಾನವನ್ನು ಪ್ರತಿಪಕ್ಷ ಕಾಂಗ್ರೆಸ್‌ ಆರಂಭಿಸಿದೆ. ತನ್ಮೂಲಕ ಬಿಜೆಪಿ ಪ್ರಣಾಳಿಕೆಯ ಭರವಸೆಗಳ ಈಡೇರಿಕೆ ಸಂಬಂಧ 50 ಪ್ರಶ್ನೆಗಳನ್ನು ಕೇಳಿದ್ದು, ಉತ್ತರಿಸುವಂತೆ ಆಗ್ರಹಿಸಿದೆ.

‘ಪೇ ಸಿಎಂ’ ಅಭಿಯಾನದಲ್ಲಿ ಸರ್ಕಾರದ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ ಆರೋಪ ಸೇರಿದಂತೆ ವಿವಿಧ ಇಲಾಖೆಗಳ ವಿರುದ್ಧ ಹಗರಣ, ಭ್ರಷ್ಟಾಚಾರ ಆಪಾದನೆಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಕಾಂಗ್ರೆಸ್‌, ಈಗ ‘ಸೇ ಸಿಎಂ’ ಅಭಿಯಾನದ ಮೂಲಕ ರಾಜ್ಯ ಬಿಜೆಪಿ 2018ರ ವಿಧಾನಸಭೆ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಯಾವ್ಯಾವುದನ್ನು ಈಡೇರಿಸಿದೆ, ಇದುವರೆಗೆ ಎಷ್ಟುಪ್ರಮಾಣದ ಭರವಸೆಗಳು ಈಡೇರಿವೆ ಎಂಬ ಬಗ್ಗೆ 2023ರ ವಿಧಾನಸಭೆ ಚುನಾವಣೆ ಬರುವವರೆಗೂ ಸರ್ಕಾರ ಮತ್ತು ಆಡಳಿತ ಪಕ್ಷಕ್ಕೆ ನಿರಂತರ ಪ್ರಶ್ನೆಗಳನ್ನು ಕೇಳಿಸಿ ಸರ್ಕಾರ ಮತ್ತು ಆಡಳಿತ ಪಕ್ಷವನ್ನು ಪೇಚಿಗೆ ಸಿಲುಕಿಸಲು ಮುಂದಾಗಿದೆ.

ನಾನು Pay Cm ಟೀ ಶರ್ಟ್ ಧರಿಸುವೆ, ಬಿಜೆಪಿ ಏನು ಮಾಡುತ್ತೆ ನೋಡ್ತಿನಿ: ಸರ್ಕಾರಕ್ಕೆ ಡಿಕೆಶಿ ಸವಾಲ್

ಟ್ವೀಟ್‌ ಮೂಲಕ ಅಭಿಯಾನ ಆರಂಭಿಸಿರುವ ಕಾಂಗ್ರೆಸ್‌, ಪ್ರಣಾಳಿಕೆ ಭರವಸೆಗಳ ಬಗ್ಗೆ ‘ನಿಮ್ಮತ್ರ ಉತ್ತರ ಇದ್ಯಾ ಸಿಎಂ ಬೊಮ್ಮಾಯಿಯವರೇ’, ‘ಬಿಜೆಪಿ ನಿಮ್ಮ ಹತ್ತಿರ ಇದೆಯಾ ಉತ್ತರ?’ ಎಂದು ಪ್ರಶ್ನಿಸಿದೆ. ಅಲ್ಲದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆಗೆ ವಿವಿಧ ಭ್ರಷ್ಟಾಚಾರ ಆರೋಪಗಳು ಕೇಳಿ ಬಂದಿರುವ ಹಲವು ಸಚಿವರ ಭಾವಚಿತ್ರಗಳನ್ನು ಪ್ರಶ್ನೆಯ ಚಿಹ್ನೆಯ ಆಕಾರದಲ್ಲಿ ಟ್ವೀಟ್‌ ಮಾಡಿ ‘ಹಗರಣಗಳ ತಲೆಗಳು, ಅಹಂಕಾರದ ಮುಖಗಳು ಪ್ರಶ್ನೆಗಳಿಗೆ ಉತ್ತರಿಸದ ಹೇಡಿಗಳು’, ‘ನಾವು ಕೇಳಿದ 50 ಪ್ರಶ್ನೆಗಳಿಗೆ ಉತ್ತರಿಸಲಾಗದ ನಿಮಗೆ 550 ಪ್ರಶ್ನೆಗಳಿಗೆ ಉತ್ತರಿಸುವ ತಾಕತ್ತಿದೆಯೇ’ ಎಂದು ಪ್ರಶ್ನಾ ಪ್ರಹಾರ ನಡೆಸಿದೆ.

ಇನ್ನು, ‘ಸೇ ಸಿಎಂ’ ಅಭಿಯಾನದ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್‌ ಖರ್ಗೆ, ‘ಪೇ ಸಿಎಂ’ ಜೊತೆಗೇ ನಾವು ‘ಸೇ ಸಿಎಂ’ ಅಭಿಯಾನ ಆರಂಭಿಸಿದ್ದೇವೆ. ರಾಜ್ಯ ಬಿಜೆಪಿಯವರು ಕಳೆದ ವಿಧಾನಸಭೆ ಚುನಾವಣೆ ವೇಳೆ ರಾಜ್ಯದ ಜನರಿಗೆ 600ಕ್ಕೂ ಹೆಚ್ಚು ಭರವಸೆಗಳನ್ನು ನೀಡಿದ್ದರು. ಆದರೆ, ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ 600 ಭರವಸೆಗಳಲ್ಲಿ ಶೇ.10ರಷ್ಟನ್ನೂ ಈಡೇರಿಸಿಲ್ಲ. ಈ ಬಗ್ಗೆ ಅಭಿಯಾನದ ಮೂಲಕ 50 ಪ್ರಶ್ನೆಗಳನ್ನು ಕೇಳಿದ್ದೇವೆ. ಇದುವರೆಗೆ ಯಾವುದೇ ಉತ್ತರ ಸರ್ಕಾರದಿಂದ ಬಂದಿಲ್ಲ ಎಂದರು.

‘ಪೇ-ಸಿಎಂ’ ಪೋಸ್ಟರ್‌ನಲ್ಲಿ ತಪ್ಪಿಲ್ಲ: ಡಿಕೆಶಿ ಸಮರ್ಥನೆ

ಸರ್ಕಾರ ಮೂಕ ಬಸವನ ರೀತಿ ಕೂತರೆ ಆಗುವುದಿಲ್ಲ. ಪ್ರಣಾಳಿಕೆ ತೋರಿಸಿ ಜನರಿಂದ ಮತ ಹಾಕಿಸಿಕೊಂಡು ಅಧಿಕಾರಕ್ಕೆ ಬಂದಿರುವ ಬಿಜೆಪಿ ಎಲ್ಲ ಭರವಸೆಗಳನ್ನೂ ಈಡೇರಿಸಬೇಕು. ಇಲ್ಲದಿದ್ದರೆ ತಾವು ನೀಡಿದ್ದೆಲ್ಲಾ ಸುಳ್ಳು ಭರವಸೆ ಎಂದು ಒಪ್ಪಿಕೊಳ್ಳಬೇಕು. ತಮ್ಮ ವೈಫಲ್ಯಗಳ ಬಗ್ಗೆ ಉತ್ತರ ನೀಡುವ ಕಾಲ ಬಂದಾಗಲೆಲ್ಲಾ ಭಾವನಾತ್ಮಕ ವಿಚಾರಗಳನ್ನು ಸೃಷ್ಟಿಸಿ, ಕೆದಕಿ ಜನರ ಗಮನ ಬೇರೆಡೆ ಸೆಳೆಯುತ್ತಿದೆ. ಹಾಗಾಗಿ ಸೇ ಸಿಎಂ ಅಭಿಯಾನದ ಮೂಲಕ ಬಿಜೆಪಿಯ ಅಸಲಿಯತ್ತನ್ನು ಅನಾವರಣ ಮಾಡುತ್ತೇವೆ ಎಂದರು.

ಕಾಂಗ್ರೆಸ್‌ನ ಪ್ರಮುಖ ಪ್ರಶ್ನೆಗಳೇನು?

ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ್ದ ‘ರಾಷ್ಟ್ರೀಕೃತ ಮತ್ತು ಸ್ವಸಹಾಯ ಬ್ಯಾಂಕುಗಳಲ್ಲಿ 1 ಲಕ್ಷ ರು.ವರೆಗೆ ರೈತರ ಸಾಲ ಮನ್ನಾ’, ರೈತರ ಉತ್ಪನ್ನಗಳ ಮಾರಾಟದ ಸಕ್ರಿಯತೆಗೆ ‘ರೈತ ಬಂಧು ಬೃಹತ್‌ ರೈತ ಮಾರುಕಟ್ಟೆ’ಗಳ ನಿರ್ಮಾಣ, ಆರ್ಟಿಕಲ್‌ 371 ಜೆ ಮೀಸಲಾತಿಯಡಿ ಹೈದರಾಬಾದ್‌ ಕರ್ನಾಟಕದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿ, ಅಡಕೆ ಬೆಳೆಗಾರರ ಅಭಿವೃದ್ಧಿಗೆ ರಾಜ್ಯ ಅಡಕೆ ಮಂಡಳಿ ಸ್ಥಾಪನೆ, ಬಿಪಿಎಲ್‌ ಕಾರ್ಡುದಾರ ಕುಟುಂಬದ ಮಕ್ಕಳಿಗೆ ಪದವಿ ವ್ಯಾಸಂಗಕ್ಕೆ ತಲಾ 3 ಲಕ್ಷ, ಸಮಗ್ರ ಶಿಕ್ಷಣಕ್ಕೆ ತಲಾ 5 ಲಕ್ಷ ರು. ಶೂನ್ಯ ಬಡ್ಡಿದರದ ಸಾಲ, ರೈತರ ಪಂಪ್‌ಸೆಟ್‌ಗಳಿಗೆ ನಿತ್ಯ 10 ಗಂಟೆ ವಿದ್ಯುತ್‌, ಮಹಿಳೆಯರಿಗೆ ಉಚಿತ ಸ್ಮಾರ್ಟ್‌ ಫೋನ್‌, ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಎಲ್ಲಾ ಖಾಲಿ ಹುದ್ದೆಗಳ ಭರ್ತಿ, ಪರಿಶಿಷ್ಟಜಾತಿ, ಪರಿಶಿಷ್ಟಪಂಗಡದ ಸಮುದಾಯಗಳಿಗೆ 6500 ಕೋಟಿ ರು.ವೆಚ್ಚದಲ್ಲಿ ಮನೆಗಳ ನಿರ್ಮಾಣ’ ಹೀಗೆ ಒಟ್ಟು 50 ಭರವಸೆಗಳ ಈಡೇರಿಕೆಯ ಬಗ್ಗೆ ಸರ್ಕಾರವನ್ನು ಕಾಂಗ್ರೆಸ್‌ ಪ್ರಶ್ನಿಸಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ