ಕೋಲಾರದಲ್ಲಿ ಮತ್ತದೇ ಹಳೆ ಮುಖಗಳ ಮಧ್ಯೆ ಫೈಟ್‌: ಕೈ, ದಳ ಭದ್ರಕೋಟೆಯಲ್ಲಿ ಅರಳಲು ಬಿಜೆಪಿ ಯತ್ನ

By Kannadaprabha News  |  First Published May 8, 2023, 1:37 PM IST

ಕಾಂಗ್ರೆಸ್‌ ಪ್ರಾಬಲ್ಯದ ಕೋಲಾರ ಜಿಲ್ಲೆಯಲ್ಲಿ 6 ವಿಧಾನಸಭಾ ಕ್ಷೇತ್ರಗಳಿವೆ. ಪ್ರಸ್ತುತ ವಿಧಾನಸಭೆಯಲ್ಲಿ ಕಾಂಗ್ರೆಸ್‌ 4 ಹಾಗೂ ಜೆಡಿಎಸ್‌ ಒಂದು ಸ್ಥಾನಗಳನ್ನು ಹೊಂದಿದ್ದರೆ, ಪಕ್ಷೇತರರಾಗಿ ಸ್ಪರ್ಧಿಸಿ, ಗೆಲುವು ಸಾಧಿಸಿದ ಎಚ್‌.ನಾಗೇಶ್‌, ಬಿಜೆಪಿಯಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.


ಸ್ಕಂದಕುಮಾರ್‌ ಬಿ.ಎಸ್‌

ಕೋಲಾರ (ಮೇ.08):
ಕಾಂಗ್ರೆಸ್‌ ಪ್ರಾಬಲ್ಯದ ಕೋಲಾರ ಜಿಲ್ಲೆಯಲ್ಲಿ 6 ವಿಧಾನಸಭಾ ಕ್ಷೇತ್ರಗಳಿವೆ. ಪ್ರಸ್ತುತ ವಿಧಾನಸಭೆಯಲ್ಲಿ ಕಾಂಗ್ರೆಸ್‌ 4 ಹಾಗೂ ಜೆಡಿಎಸ್‌ ಒಂದು ಸ್ಥಾನಗಳನ್ನು ಹೊಂದಿದ್ದರೆ, ಪಕ್ಷೇತರರಾಗಿ ಸ್ಪರ್ಧಿಸಿ, ಗೆಲುವು ಸಾಧಿಸಿದ ಎಚ್‌.ನಾಗೇಶ್‌, ಬಿಜೆಪಿಯಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಮತ್ತದೇ ಹಳೆ ಮುಖಗಳ ಜಿದ್ದಾಜಿದ್ದಿ ಕಂಡು ಬರುತ್ತಿದೆ. ಕೋಲಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದಾಗ, ಆ ಕ್ಷೇತ್ರ ರಾಜ್ಯದ ಗಮನ ಸೆಳೆದಿತ್ತು. ಆದರೆ, ಅಂತಿಮವಾಗಿ ಕಾಂಗ್ರೆಸ್‌, ಕೊತ್ತೂರು ಮಂಜುನಾಥ್‌ಗೆ ಟಿಕೆಟ್‌ ನೀಡಿದೆ. 

ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ನೇರ ಫೈಟ್‌ ಇದೆ. ಈ ಮಧ್ಯೆ, ಜಿಲ್ಲೆಯಲ್ಲಿ ಕಮಲ ಅರಳಿಸಲು ಬಿಜೆಪಿ ರಣತಂತ್ರ ರೂಪಿಸಿದೆ. ಜಿಲ್ಲೆಯಲ್ಲಿ ಒಕ್ಕಲಿಗರು ಹಾಗೂ ಪರಿಶಿಷ್ಟಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಜೊತೆಗೆ, ಮುಸ್ಲಿಂ, ಕುರುಬ, ಬಲಿಜಿಗ ಜಾತಿಯವರೂ ಸಾಕಷ್ಟುಸಂಖ್ಯೆಯಲ್ಲಿದ್ದಾರೆ.

Latest Videos

undefined

ಎಚ್ಡಿಕೆ, ರೇವಣ್ಣ ಪ್ರತಿಷ್ಠೆ ಕ್ಷೇತ್ರದಲ್ಲಿ ಕೈ, ಕಮಲ ಪೈಪೋಟಿ: ಪ್ರಾಬಲ್ಯ ಮೆರೆಯಲು ಬಿಜೆಪಿ ರಣತಂತ್ರ

ಕೋಲಾರ
ವರ್ತೂರು, ಕೊತ್ತೂರು, ಶ್ರೀನಾಥ್‌ ಮಧ್ಯೆ ಪೈಪೋಟಿ:
ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎಂಬ ಕಾರಣಕ್ಕಾಗಿ ಕೋಲಾರ ಕ್ಷೇತ್ರ ರಾಜ್ಯದ ಗಮನ ಸೆಳೆದಿತ್ತು. ತೀವ್ರ ಕುತೂಹಲ ಮೂಡಿಸಿದ್ದ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಲು ಒಂದು ದಿನ ಬಾಕಿಯಿರುವಾಗ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ಗೆ ಕಾಂಗ್ರೆಸ್‌ ಟಿಕೆಟ್‌ ನೀಡಿತು. ಜೆಡಿಎಸ್‌, ಹೊಸಮುಖ ಸಿಎಂಆರ್‌ ಶ್ರೀನಾಥ್‌ ಅವರನ್ನು ಕಣಕ್ಕೆ ಇಳಿಸಿದೆ. ಬಿಜೆಪಿಯಿಂದ ಮಾಜಿ ಶಾಸಕ ವರ್ತೂರು ಪ್ರಕಾಶ್‌ ಅಭ್ಯರ್ಥಿಯಾಗಿದ್ದಾರೆ. ಇವರು ಕುರುಬ ಸಮುದಾಯಕ್ಕೆ ಸೇರಿದವರು. ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಇದೆ.

ಮುಳಬಾಗಿಲು
ಜೆಡಿಎಸ್‌, ಕಾಂಗ್ರೆಸ್‌ ಮಧ್ಯೆ ಜಿದ್ದಾಜಿದ್ದಿ:
ಜೆಡಿಎಸ್‌ನಿಂದ ಸಮೃದ್ಧಿ ಮಂಜುನಾಥ್‌ ಕಣಕ್ಕೆ ಇಳಿದಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಆದಿನಾರಾಯಣ ಅವರು ಕಣದಲ್ಲಿದ್ದಾರೆ. ಬಿಜೆಪಿಯಿಂದ ಮಾಜಿ ಶಾಸಕ ನಂಗಲಿ ಮುನಿಯಪ್ಪನವರ ಸಂಬಂಧಿ ಸೀಗೆನಹಳ್ಳಿ ಸುಂದರ್‌ ಕಣಕ್ಕೆ ಇಳಿದಿದ್ದಾರೆ. ಇಲ್ಲಿ ಮೂರೂ ಪಕ್ಷಗಳ ಅಭ್ಯರ್ಥಿಗಳು ರಿಯಲ್‌ ಎಸ್ಟೇಟ್‌ ಉದ್ಯಮಿಗಳಾಗಿರುವುದು ವಿಶೇಷ. ಮೇಲ್ನೋಟಕ್ಕೆ ಇಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇದೆ.

ಬಂಗಾರಪೇಟೆ
ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮಧ್ಯೆ ಪೈಪೋಟಿ:
ಹಾಲಿ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಅವರು ಕಾಂಗ್ರೆಸ್‌ನಿಂದ 3ನೇ ಬಾರಿಗೆ ಕಣಕ್ಕೆ ಇಳಿದಿದ್ದಾರೆ. ಜೆಡಿಎಸ್‌ನಿಂದ ಕಳೆದ ಬಾರಿ ಪರಾಭವಗೊಂಡಿದ್ದ ಎಂ.ಮಲ್ಲೇಶ್‌ಬಾಬು, ಈ ಬಾರಿಯೂ ಜೆಡಿಎಸ್‌ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಅವರನ್ನು ಕಣಕ್ಕೆ ಇಳಿಸಿದೆ. ಇಲ್ಲಿ ಮೂರೂ ಪಕ್ಷಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಕಳೆದ ಬಾರಿ ಎಸ್‌.ಎನ್‌.ನಾರಾಯಣಸ್ವಾಮಿ ವಿರುದ್ಧ ಜೆಡಿಎಸ್‌ನಿಂದ ಮಲ್ಲೇಶ್‌ಬಾಬು, ಬಿಜೆಪಿಯಿಂದ ಬಿ.ಪಿ.ವೆಂಕಟಮುನಿಯಪ್ಪ ಸ್ಪರ್ಧಿಸಿ, ಪರಾಭವಗೊಂಡಿದ್ದರು.

ಶ್ರೀನಿವಾಸಪುರ
ವೆಂಕಟಶಿವಾರೆಡ್ಡಿ, ರಮೇಶ್‌ ಕುಮಾರ್‌ ನಡುವೆ ಫೈಟ್‌:
ಜೆಡಿಎಸ್‌ನಿಂದ ಜಿ.ಕೆ.ವೆಂಕಟಶಿವಾರೆಡ್ಡಿ ಹಾಗೂ ಕಾಂಗ್ರೆಸ್‌ನಿಂದ ಮಾಜಿ ಸ್ಪೀಕರ್‌, ಶಾಸಕ ರಮೇಶ್‌ ಕುಮಾರ್‌ ಕಣಕ್ಕಿಳಿದಿದ್ದು, ಇವರಿಬ್ಬರ ಮಧ್ಯೆ ಮತ್ತೊಮ್ಮೆ ಜಿದ್ದಾಜಿದ್ದಿನ ಫೈಟ್‌ ನಡೆದಿದೆ. ಈ ಮಧ್ಯೆ, ಬಿಜೆಪಿಯಿಂದ ರಿಯಲ್‌ ಎಸ್ಟೇಟ್‌ ಉದ್ಯಮಿ, ಗೂಂಜೂರು ಶ್ರೀನಿವಾಸರೆಡ್ಡಿ ಸ್ಪರ್ಧಿಸುತ್ತಿದ್ದಾರೆ. ಇಲ್ಲಿ ಬಿಜೆಪಿಗೆ ಅಷ್ಟಾಗಿ ನೆಲೆ ಇಲ್ಲ. ಹೀಗಾಗಿ, ಇಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆಯೇ ನೇರ ಹಣಾಹಣಿ ಇದೆ.

ಹಾಸನ: ಪುತ್ರ ಸ್ವರೂಪ್ ಪರ ಮತ ಯಾಚಿಸಿ ಕಣ್ಣೀರಿಟ್ಟ ಲಲಿತಮ್ಮ ಪ್ರಕಾಶ್!

ಮಾಲೂರು
ಬಿಜೆಪಿಗೆ ಬಂಡಾಯದ ಬಿಸಿ:
ಜೆಡಿಎಸ್‌ ಅಭ್ಯರ್ಥಿಯಾಗಿ ಜಿ.ಇ.ರಾಮೇಗೌಡ ಕಣದಲ್ಲಿದ್ದಾರೆ. ಮಾಜಿ ಶಾಸಕ ಕೆ.ಎಸ್‌.ಮಂಜುನಾಥಗೌಡ ಅವರು ಜೆಡಿಎಸ್‌ ತೊರೆದು, ಬಿಜೆಪಿ ಸೇರಿ, ಬಿಜೆಪಿಯಿಂದ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಹಾಲಿ ಶಾಸಕ ಕೆ.ವೈ.ನಂಜೇಗೌಡ ಅವರು ಕಣದಲ್ಲಿದ್ದು, 2ನೇ ಬಾರಿಗೆ ಗೆಲ್ಲಲು ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಹೂಡಿ ವಿಜಿಕುಮಾರ್‌ ಅವರು ಟಿಕೆಟ್‌ ಸಿಗದಿದ್ದರಿಂದ ಮುನಿಸಿಕೊಂಡಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ಕೆಜಿಎಫ್‌
ಜೆಡಿಎಸ್‌ನಿಂದ ಹೊಸಮುಖ ಕಣಕ್ಕೆ:
ಜೆಡಿಎಸ್‌, ಹೊಸಮುಖ ಡಾ.ರಮೇಶ್‌ಬಾಬು ಅವರನ್ನು ಕಣಕ್ಕೆ ಇಳಿಸಿದೆ. ಬಿಜೆಪಿ, ಅಶ್ವಿನಿ ಸಂಪಂಗಿಯನ್ನು ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಹಾಲಿ ಶಾಸಕಿ ರೂಪಕಲಾ ಶಶಿಧರ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!