ಮಧ್ಯಪ್ರದೇಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಇಂಡಿಯಾ ಕೂಟದ ಇತರ ಪಕ್ಷಗಳು ಹಾಗೂ ಬಿಎಸ್‌ಪಿ, ಎಐಎಂಐಎಂ ಸೇರಿ ಹಲವು ಪಕ್ಷಗಳು ಕಣದಲ್ಲಿವೆಯಾದರೂ ಅವುಗಳ ಸ್ಪರ್ಧೆ ನಗಣ್ಯ. ಆದಾಗ್ಯೂ ಅವು ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳಿಗೆ ಹಾನಿ ಉಂಟು ಮಾಡಬಲ್ಲವು ಎಂದು ಹೇಳಲಾಗಿದೆ. ನರೇಂದ್ರ ಮೋದಿ, ರಾಮಮಂದಿರ, ಈ ಹಿಂದಿನ ಶಿವರಾಜ ಸಿಂಗ್ ಚೌಹಾಣ್ ಆಡಳಿತವ ಬಿಜೆಪಿ ನೆಚ್ಚಿಕೊಂಡಿದೆ. ಆದರೆ ಕಾಂಗ್ರೆಸ್ ಇಲ್ಲಿ ಸೂಕ್ತ ಅಸ್ತ್ರವಿಲ್ಲದೇ ಪರದಾಡುತ್ತಿದೆ.
ಭೋಪಾಲ್(ಏ.02): ಮಧ್ಯಪ್ರದೇಶದ ಆಡಳಿತಾರೂಢ ಬಿಜೆಪಿ 4 ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಅಷ್ಟರಲ್ಲೇ ಈಗ ಮತ್ತೆ ಧುತ್ತೆಂದು ಲೋಕಸಭೆ ಚುನಾವಣೆ ಬಂದಿದೆ. ಕಾಂಗ್ರೆಸ್ ಪಕ್ಷ ಇಲ್ಲಿ ಅನಿರೀಕ್ಷಿತವಾಗಿ ಭಾರಿ ಮುಖಭಂಗದಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೆ ಚುನಾವಣೆ ಎದುರಾಗಿದೆ. ಜತೆಗೆ ಈ ಬಾರಿ ಮತ್ತೆ ಮೋದಿ ಅಲೆ ಅಬ್ಬರ ಕಾಣುತ್ತಿದೆ. ಹೀಗಾಗಿ ಕಾಂಗ್ರೆಸ್ಸನ್ನು ಹಿಂದಿಕ್ಕಿ ರಾಜ್ಯದ ಎಲ್ಲಾ 29 ಲೋಕಸಭಾ ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಗುರಿಯನ್ನು ಬಿಜೆಪಿ ಹೊಂದಿದೆ.
2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 28ರಲ್ಲಿ ಗೆದ್ದಿದ್ದರೆ, ಕಾಂಗ್ರೆಸ್ಸಿಗ ಕಮಲ್‌ನಾಥ್ ಅವರ ಭದ್ರಕೋಟೆಯಾದ ಛಿಂದ್ವಾಡಾದಲ್ಲಿ ಮಾತ್ರ ಬಿಜೆಪಿ ಗೆದ್ದಿತ್ತು. ಈಗ ಅದನ್ನೂ ವಶಪಡಿಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ಆದರೆ ಕಾಂಗ್ರೆಸ್ ಪಾಲಿಗೆ, ತನ್ನ ಹಳೆಯ ಚಾರ್ಮ್ ಅನ್ನು ಮರಳಿ ಪಡೆಯುವುದು ಈ ಸಲ ನಿರ್ಣಾಯಕವಾಗಿದೆ. ರಾಜ್ಯದಲ್ಲಿ ಏ.19, ಏ,26, ಮೇ 7 ಮತ್ತು ಮೇ 13 ರಂದು 4 ಹಂತಗಳಲ್ಲಿ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.
Lok Sabha Election 2024: ಅಭ್ಯರ್ಥಿಗಳ ಆಯ್ಕೆ ವೇಳೆ ಬಿಜೆಪಿಗರಿಗೆ ಮೋದಿ ಕ್ಲಾಸ್..!
ಬಿಜೆಪಿಗೆ ಮೋದಿ, ಚೌಹಾಣ್ ಬಲ:
ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನೇ ಬಿಜೆಪಿ ಹೆಚ್ಚು ನೆಚ್ಚಿಕೊಂಡಿದೆ. ಇದರ ಜತೆಗೆ ರಾಜ್ಯದಲ್ಲಿ ಇನ್ನೂ ವಿಧಾನಸಭೆ ಚುನಾವಣೆಯ ಗುಂಗು ಇದೆ. ಮೋಹನ್ ಯಾದವ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿ ಬಿಜೆಪಿ, ಒಬಿಸಿ (ಇತರ ಹಿಂದುಳಿದ ವರ್ಗಗಳ) ಮತಬ್ಯಾಂಕ್‌ಗೆ ಬಲವಾದ ಸಂದೇಶ ರವಾನಿಸಿದೆ.
ಜತೆಗೆ ರಾಮಮಂದಿರ ನಿರ್ಮಾಣ, ಉಜ್ಜಯಿನಿ ಮಹಾಕಾಲ ಕಾರಿಡಾರ್, ರಾಜ್ಯದಲ್ಲಿ ಈ ಹಿಂದೆ ಶಿವರಾಜ್ ಸಿಂಗ್ ಚೌಹಾಣ್ ತಂದಿದ್ದ ಮಹಿಳಾಪರ ಯೋಜನೆಗಳು, ಮೋದಿ ಸರ್ಕಾರದ ಯೋಜನೆಗಳು, ಡಬಲ್ ಎಂಜಿನ್ ಸರ್ಕಾರದ ಪ್ರತಿಪಾದನೆ, ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಈ ಸಲ ಬಿಜೆಪಿಯಲ್ಲಿ ಇರುವುದು- ಇವು ಬಿಜೆಪಿಗೆ ವರ ಆಗಬಹುದು, ಆದರೆ ಮೋಹನ್ ಯಾದವ್ ಮುಖ್ಯಮಂತ್ರಿಯಾಗಿ ಅನಿರೀಕ್ಷಿತವಾಗಿ ಆಯ್ಕೆಯಾದ ನಂತರ ಪ್ರಮುಖ ಬಿಜೆಪಿ ನಾಯಕರಲ್ಲಿ ಆಂತರಿಕ ಒಗ್ಗಟ್ಟಿನ ಕೊರತೆ ಇದೆ ಎನ್ನಲಾಗಿದೆ. ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರದ ಮಾಜಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಕೈಲಾಶ್ ವಿಜಯವರ್ಗೀಯ, ಫೈರ್‌ಬ್ರಾಂಡ್ ನಾಯಕಿ ಉಮಾಭಾರತಿ ಅವರಂತಹ ಪ್ರಮುಖರು ಕಡೆಗಣನೆಗೆ ಒಳಗಾಗಿದ್ದಾರೆ ಎಂಬ ಬೇಸರ ಬಿಜೆಪಿಗರಲ್ಲಿದೆ. ಆದರೆ ರಾಜಕೀಯ ನಿವೃತ್ತಿ ಹೊಂದುತ್ತಿದ್ದಾರೆ ಎನ್ನಲಾದ ಚೌಹಾಣ್ ಅವರಿಗೆ ಲೋಕಸಭೆ ಟಿಕೆಟ್ ನೀಡಿರುವುದು ಇಲ್ಲಿ ಗಮನಾರ್ಹ.
ಕಾಂಗ್ರೆಸ್‌ಗೆ ಹೊಸಮುಖ ಸಾಥ್:
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಮಲನಾಥ್ ನೇತೃತ್ವದಲ್ಲಿ ಕಾಂಗ್ರೆಸ್ ಸೋತಿದೆ. ಹೀಗಾಗಿ ರಾಜ್ಯ ಘಟಕಕ್ಕೆ ಜಿತು ಪಟ್ವಾರಿ ಅಧ್ಯಕ್ಷತೆ ವಹಿಸಿದ್ದಾರೆ ಮತ್ತು ವಿರೋಧ ಪಕ್ಷದ ನಾಯಕರಾಗಿ ಉಮಂಗ್ ಸಿಂಘರ್ ನೇಮಕಗೊಂಡಿದ್ದಾರೆ. ಪಟ್ವಾರಿ ಅವರು ಪ್ರಮುಖ ಒಬಿಸಿ ನಾಯಕರಾಗಿದ್ದರೆ, ಸಿಂಘರ್ ಪಕ್ಷದ ಬುಡಕಟ್ಟು ನೇತಾರರಾಗಿದ್ದಾರೆ.
ಜತೆಗೆ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆಯು ಐದು ದಿನಗಳ ಕಾಲ ಮಧ್ಯಪ್ರದೇಶದಲ್ಲಿ ಸಂಚರಿಸಿ ಗ್ವಾಲಿಯರ್-ಚಂಬಲ್ ಮತ್ತು ಮಾಲ್ವಾ ಪ್ರದೇಶಗಳಲ್ಲಿ ಸಂಚಲನ ಮೂಡಿಸಿದೆ. ಇದು ಆದಿವಾಸಿ ಮತ ಸೆಳೆಯಬಹುದು ಎನ್ನಲಾಗಿದೆ. ಪಕ್ಷದ ಹಿರಿಯ ನಾಯಕರಾದ ಕಮಲ್ ನಾಥ್, ದಿಗ್ವಿಜಯ ಸಿಂಗ್, ಅಜಯ್ ಸಿಂಗ್ ಮತ್ತು ಅರುಣ್ ಯಾದವ್ ಅವರು ಹೊಸ ನಾಯಕತ್ವವನ್ನು ಮೆಚ್ಚಿದರೆ, ಅದು ಕಾಂಗ್ರೆಸ್‌ಗೆ ದೊಡ್ಡ ರೀತಿಯಲ್ಲಿ ಸಹಾಯ ಮಾಡುತ್ತದೆ ಎಂದು ವೀಕ್ಷಕರು ಹೇಳುತ್ತಾರೆ.
ಆದರೆ, ಜ್ಯೋತಿರಾದಿತ್ಯ ಸಿಂಧಿಯಾ, ಸುರೇಶ್ ಪಚೌರಿ ಅವರಂಥ ನಾಯಕರ ನಿರ್ಗಮನ, ಇತ್ತೀಚಿನ ಚುನಾವಣೆಯಲ್ಲಿ ಆದ ಘೋರ ಸೋಲು, ಮೋದಿಗೆ ಸರಿಸಮನಾದ ಪ್ರಧಾನಿ ಅಭ್ಯರ್ಥಿ ಕಾಂಗ್ರೆಸ್‌ನಲ್ಲಾಗಲಿ ಅಥವಾ ಕಾಂಗ್ರೆಸ್ ಇರುವ ಇಂಡಿಯಾ ಕೂಟದಲ್ಲಾಗಲಿ ಇರದೇ ಇರುವುದು ಕಾಂಗ್ರೆಸ್‌ಗೆ ಹಿನ್ನಡೆ ತರಬಲ್ಲದಾಗಿದೆ.
52 ವರ್ಷಗಳ ಕಾಲ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಸುರೇಶ್ ಪಚೌರಿ ಬಿಜೆಪಿಗೆ ಸೇರ್ಪಡೆ
ಅಲ್ಲದೆ, ಇಂಡಿಯಾ ಕೂಟ ಹಾಗೂ ವಿಪಕ್ಷಗಳಲ್ಲಿ ಹೊಂದಾಣಿಕೆ ಕೊರತೆ ಇದ್ದು ಆಪ್, ಬಿಎಸ್‌ಪಿ ಹಾಗೂ ಎಐಎಂಐಎಂ ತಮ್ಮದೇ ಆದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಇದು ಕಾಂಗ್ರೆಸ್ ಮತಕ್ಕೆ ಕನ್ನ ಹಾಕಬಹುದಾಗಿದೆ.
ಒಟ್ಟು ಕ್ಷೇತ್ರ 29
ಒಟ್ಟು ಹಂತ 4
ಕಣದಲ್ಲಿರುವ ಪ್ರಮುಖರು
ಶಿವರಾಜ್ ಸಿಂಗ್ ಚೌಹಾಣ್, ಜ್ಯೋತಿರಾದಿತ್ಯ ಸಿಂಧಿಯಾ, ದಿಗ್ವಿಜಯ ಸಿಂಗ್
2019ರ ಫಲಿತಾಂಶ (29 ಸ್ಥಾನ)
ಪಕ್ಷ ಸ್ಥಾನ % ಮತ
ಬಿಜೆಪಿ 28 58%
ಕಾಂಗ್ರೆಸ್ 01 34%
ಇತರರು 00 8%
ಪ್ರಮುಖ ಕ್ಷೇತ್ರಗಳು
ಛಿಂದ್ವಾಡಾ, ಗುನಾ, ವಿದಿಶಾ, ರಾಜಗಢ, ಭೋಪಾಲ್, ಇಂದೋರ್
ಕಣದಲ್ಲಿರುವ ಪ್ರಮುಖರು
ಶಿವರಾಜ್ ಸಿಂಗ್ ಚೌಹಾಣ್, ಜ್ಯೋತಿರಾದಿತ್ಯ ಸಿಂಧಿಯಾ, ನಕುಲ್ ನಾಥ್, ದಿಗ್ವಿಜಯ ಸಿಂಗ್
ಸ್ಪರ್ಧೆ ಹೇಗೆ?
ಮಧ್ಯಪ್ರದೇಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಇಂಡಿಯಾ ಕೂಟದ ಇತರ ಪಕ್ಷಗಳು ಹಾಗೂ ಬಿಎಸ್‌ಪಿ, ಎಐಎಂಐಎಂ ಸೇರಿ ಹಲವು ಪಕ್ಷಗಳು ಕಣದಲ್ಲಿವೆಯಾದರೂ ಅವುಗಳ ಸ್ಪರ್ಧೆ ನಗಣ್ಯ. ಆದಾಗ್ಯೂ ಅವು ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳಿಗೆ ಹಾನಿ ಉಂಟು ಮಾಡಬಲ್ಲವು ಎಂದು ಹೇಳಲಾಗಿದೆ. ನರೇಂದ್ರ ಮೋದಿ, ರಾಮಮಂದಿರ, ಈ ಹಿಂದಿನ ಶಿವರಾಜ ಸಿಂಗ್ ಚೌಹಾಣ್ ಆಡಳಿತವ ಬಿಜೆಪಿ ನೆಚ್ಚಿಕೊಂಡಿದೆ. ಆದರೆ ಕಾಂಗ್ರೆಸ್ ಇಲ್ಲಿ ಸೂಕ್ತ ಅಸ್ತ್ರವಿಲ್ಲದೇ ಪರದಾಡುತ್ತಿದೆ. ಏಕೆಂದರೆ ರಾಷ್ಟ್ರೀಯ ವಿಚಾರದಲ್ಲಿ ಚುನಾವಣೆ ನಡೆದಿರುವ ಕಾರಣ ಮೋದಿ ಅವರಿಗೆ ಸಮನಾಗಿ ನಿಲ್ಲಬಲ್ಲ ಪ್ರಧಾನಿ ಅಭ್ಯರ್ಥಿ ಇಂಡಿಯಾ ಕೂಟದಲ್ಲಿಲ್ಲ ಎಂಬುದನ್ನು ಮತದಾರ ಗಮನಿಸುತ್ತಿದ್ದಾನೆ.