ದೇಶದಲ್ಲಿ ಬಿಜೆಪಿ ಸಾಕಷ್ಟು ಅಕ್ರಮ, ಭ್ರಷ್ಟಾಚಾರದಲ್ಲಿ ತೊಡಗಿದ್ದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಆಡಳಿತಕ್ಕೆ ಕೊನೆಗಾಣಿಸುವ ಉದ್ದೇಶದಿಂದಲೇ ಇಂಡಿಯಾ ಒಕ್ಕೂಟದಲ್ಲಿ ಆಮ್ ಆದ್ಮಿ ಪಾರ್ಟಿ ಭಾಗಿಯಾಗಿದೆ.
ರಾಯಚೂರು (ಅ.16): ದೇಶದಲ್ಲಿ ಬಿಜೆಪಿ ಸಾಕಷ್ಟು ಅಕ್ರಮ, ಭ್ರಷ್ಟಾಚಾರದಲ್ಲಿ ತೊಡಗಿದ್ದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಆಡಳಿತಕ್ಕೆ ಕೊನೆಗಾಣಿಸುವ ಉದ್ದೇಶದಿಂದಲೇ ಇಂಡಿಯಾ ಒಕ್ಕೂಟದಲ್ಲಿ ಆಮ್ ಆದ್ಮಿ ಪಾರ್ಟಿ ಭಾಗಿಯಾಗಿದೆ. ಆದರೆ ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ವಿರುದ್ಧದ ಸಂಘರ್ಷ ನಿರಂತರವಾಗಿರುತ್ತದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಪ್ರಧಾನಿ ಮೋದಿ ಅವರನ್ನು ಮಣಿಸಲು ಎಎಪಿ ಇಂಡಿಯಾ ಮೈತ್ರಿಕೂಟವನ್ನು ಸೇರಿ ಕೊಂಡಿದೆ. ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧವೇ ಎಎಪಿ ಸೆಣಸಾಟ ನಡೆಸಲಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಭ್ರಷ್ಟಾಚಾರದಲ್ಲಿಯೇ ಮುಳುಗಿವೆ. ಹಿಂದೆ ಬಿಜೆಪಿ ಕಮಿಷನ್ ದಂಧೆ ನಡೆಸಿತ್ತು. ಇದೀಗ ಕಾಂಗ್ರೆಸ್ ಅದೇ ಹಾದಿ ತುಳಿದಿದೆ. ಜೆಡಿಎಸ್ ಸಹ ಅಕ್ರಮದ ಹೊರತಾಗಿಲ್ಲ ಎಂದು ಹರಿಹಾಯ್ದರು.
BBK 10 Breaking: ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಮೊದಲ ಸ್ಪರ್ಧಿ ಸ್ನೇಕ್ ಶ್ಯಾಮ್!
ಮೋದಿಗೆ ಸರ್ವಾಧಿಕಾರದ ಅಮಲು: ಪ್ರಧಾನಿ ನರೇಂದ್ರ ಮೋದಿ ನಿರಂಕುಶ ಪ್ರಭುತ್ವದಲ್ಲಿ ಪ್ರಾಮಾಣಿಕತೆಗೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಆಮ್ ಆದ್ಮಿ ಪಕ್ಷದ (ಆಪ್) ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಇಂಡಿಯಾ'' ಒಕ್ಕೂಟದ ಪ್ರಹಾರದಿಂದ ಕಂಗಾಲಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಡಿ, ಸಿಬಿಐ, ಐಟಿ ದಾಳಿಯ ಮೂಲಕ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಸಾಕ್ಷ್ಯಾಧಾರಗಳಿಲ್ಲದೆ ಎಎಪಿ ಸಂಸದ ಸಂಜಯ್ ಸಿಂಗ್ ಅವರನ್ನು ಬಂಧಿಸಿರುವುದು ಅಕ್ಷಮ್ಯ. ಇದು ಪ್ರಜಾಪ್ರಭುತ್ವ ದ ಕಗ್ಗೋಲೆ. ಸಂವಿಧಾನ ವಿರೋಧಿ ನಡೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಬರುವ ಐದು ವಿಧಾನಸಭೆ ಚುನಾವಣೆಗಳು ಸೇರಿದಂತೆ 2024ರ ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿ ಶುರುವಾಗಿದೆ. ಅದಕ್ಕಾಗಿಯೇ ಸರ್ವಾಧಿಕಾರದ ಅಮಲಿನಲ್ಲಿ ಕೇಂದ್ರ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅವರು ಎಷ್ಟೇ ದಾಳಿ ನಡೆಸಿದರೂ ನಾವು ಹೆದರುವುದಿಲ್ಲ. ಭೀತಿ ಎಂಬುದು ಕೇವಲ ತಪ್ಪಿತಸ್ಥರ ಎದೆಯಲ್ಲಿರುತ್ತದೆ. ನಮ್ಮ ಎದೆಯಲ್ಲಿ ಹೋರಾಟದ ಕಿಚ್ಚಿದೆ ಎಂದರು.
ನಡೆದಿದೆ ಎನ್ನಲಾಗುತ್ತಿರುವ ಅಬಕಾರಿ ಹಗರಣದ ತನಿಖೆಯನ್ನು ಸುಮಾರು 15 ತಿಂಗಳಿಂದ ನಡೆಸಲಾಗುತ್ತಿದೆ. ನೂರಾರು ಅಧಿಕಾರಿಗಳು ಹಗಲು ರಾತ್ರಿ ಶೋಧ ನಡೆಸುತ್ತಿದ್ದಾರೆ. ಸುಮಾರು ಒಂದು ಸಾವಿರ ಸ್ಥಳಗಳ ಮೇಲೆ ದಾಳಿ ಮಾಡಿದ್ದಾರೆ. ನಮ್ಮ ಮುಖಂಡರಾದ ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ. ಕಸ್ಟಡಿಯಲ್ಲಿಟ್ಟು ಕಿರುಕುಳ ನೀಡಿದ್ದಾರೆ. ಸಲ್ಲದ ಆರೋಪಗಳನ್ನು ಮಾಡಿ ಹಿಂಸಿಸಿದ್ದಾರೆ. ಆದರೆ ಇದುವರೆಗೆ ಒಂದೇ ಒಂದು ಪೈಸೆ ಭ್ರಷ್ಟಾಚಾರದ ಹಣವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಚಂದ್ರು ತಿಳಿಸಿದರು.
ಚೀನಾದ ಫೋಟೋಗಳನ್ನ ಶೇರ್ ಮಾಡಿದ Dr Bro: ನಕಲಿಗಳ ಮಧ್ಯೆ ನೀವು ಕನ್ನಡದ ಅಸಲಿ ಚಿನ್ನ ಎಂದ ಫ್ಯಾನ್ಸ್!
ಸಂಜಯ್ ಸಿಂಗ್ ಅವರ ನಿವಾಸದಲ್ಲೂ ಒಂದು ರುಪಾಯಿ ಸಿಕ್ಕಿಲ್ಲ. ನಡೆದಿರದ ಭ್ರಷ್ಟಾಚಾರವನ್ನು ನಡೆದಿದೆ ಎಂದು ಆರೋಪ ಹೊರಿಸಿ ಎಷ್ಟು ಹುಡುಕಿದರೆ ಏನು ಪ್ರಯೋಜನ? ಇದೀಗ ಮೋದಿ ಹೀನಾಯ ಸೋಲು ಅನುಭವಿಸುವುದು ಗ್ಯಾರಂಟಿ ಎಂಬಂತಾಗಿದೆ. ಹಾಗಾಗಿ ವಿರೋಧ ಪಕ್ಷಗಳ ನಾಯಕರಿಗೆ ಇಲ್ಲಸಲ್ಲದ ಕಿರುಕುಳ ಕೊಟ್ಟಾದರೂ ಮುಂಬರುವ ಚುನಾವಣೆಯಲ್ಲಿ ಅಧಿಕಾರ ಹಿಡಿಯಬಹುದೇನೋ ಎಂಬ ಪ್ರಯತ್ನದಲ್ಲಿದ್ದಾರೆ. ಇದು ಮೋದಿ ಅವರ ಅಸಹಾಯಕತೆ, ಭೀತಿಯನ್ನು ತೋರಿಸುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ವಾಗ್ದಾಳಿ ನಡೆಸಿದರು.