ಗೃಹಜ್ಯೋತಿ ಯೋಜನೆ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ನಾಯಕರು ವಿದ್ಯುತ್ ದುಂದುವೆಚ್ಚ, ದುರುಪಯೋಗ ಮಾಡುವಂತೆ ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬೆಂಗಳೂರು (ಜೂ.06): ಗೃಹಜ್ಯೋತಿ ಯೋಜನೆ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ನಾಯಕರು ವಿದ್ಯುತ್ ದುಂದುವೆಚ್ಚ, ದುರುಪಯೋಗ ಮಾಡುವಂತೆ ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಪ್ರತಿಯೊಂದು ವಿಚಾರದಲ್ಲೂ ಮನುಷ್ಯರಿಗೆ ವಿವೇಕ ಇರಬೇಕು. ನೀರು, ಗಾಳಿ, ವಿದ್ಯುತ್ ಯಾವುದನ್ನೂ ದುಂದುವೆಚ್ಚ ಮಾಡಬಾರದು. ಜನಸಾಮಾನ್ಯರು ತಿಂಗಳಿಗೆ ಬಳಸುವುದೇ 70-100 ಯುನಿಟ್ ವಿದ್ಯುತ್. ವರ್ಷದ ಸರಾಸರಿ ಮೇಲೆ ಶೇ.10ರಷ್ಟುಹೆಚ್ಚು ವಿದ್ಯುತ್ ಬಳಸಿದರೆ ಉಚಿತ. ಅದಕ್ಕಿಂತ ಹೆಚ್ಚು ಬಳಸಿದರೆ ಹಣ ಕೊಡಬೇಕಾಗುತ್ತದೆ ಎಂದು ನಾವು ಹೇಳಿದ್ದೇವೆ.
ಆದರೆ, ಬಿಜೆಪಿ 200 ಯುನಿಟ್‌ವರೆಗೆ ವಿದ್ಯುತ್ ಬಳಸಿ, ಅದು ಉಚಿತವಾಗುತ್ತದೆ ಎಂದು ಜನರಿಗೆ ದುಂದು ವೆಚ್ಚ ಮಾಡಲು ಕುಮ್ಮಕ್ಕು ನೀಡುತ್ತಿದೆ. ಜನರು ಎಷ್ಟುವಿದ್ಯುತ್ ಬಳಸುತ್ತಿದ್ದರೋ ಅಷ್ಟೇ ಬಳಸಬೇಕು. ಹೆಚ್ಚು ವಿದ್ಯುತ್ ಬಳಸಿದರೆ ದುಂದು ವೆಚ್ಚ ಆಗುತ್ತದೆ. ನಾವೂ ಬದುಕಬೇಕು, ಸಮಾಜದಲ್ಲಿರುವವರು ಬದುಕಬೇಕು. ಹಾಗಾಗಿ ಕೆಲವು ಮಿತಿ, ನಿಬಂಧನೆಗಳನ್ನು ಹಾಕಬೇಕಾಗುತ್ತದೆ ಎಂದರು. ಗೃಹಜ್ಯೋತಿ ಯೋಜನೆಯನ್ನು ರಾಜ್ಯದ ಜನತೆ ಒಪ್ಪಿಕೊಂಡಿದ್ದಾರೆ. ಆದರೆ ಜನರಿಂದ ತಿರಸ್ಕೃತಗೊಂಡಿರುವ ಬಿಜೆಪಿ, ವಿದ್ಯುತ್ ಅನ್ನು ಅನಗತ್ಯ ದುರ್ಬಳಕೆ -ದುಂದುವೆಚ್ಚ ಮಾಡಲು ಹೇಳಿದೆ. ದುಂದುವೆಚ್ಚ ಎನ್ನುವುದು ಪ್ರಕೃತಿ ವಿರೋಧಿ, ಜನ ವಿರೋಧಿ ಮತ್ತು ಪರಿಸರ ವಿರೋಧಿಯಾಗಿದೆ ಎಂದರು.
ಪ್ರಕೃತಿ ನಡುವಿನ ಸಂಘರ್ಷದಲ್ಲಿ ನಾವು ಸೋತರೆ ಬದುಕುತ್ತೇವೆ: ರಿಷಬ್ ಶೆಟ್ಟಿ
ನೈತಿಕ ಪೊಲೀಸ್‌ಗಿರಿಗೆ ಅವಕಾಶ ನೀಡದಿರಿ: ಪತ್ರಿಕೆಗಳು, ಸುದ್ದಿ ವಾಹಿನಿಗಳು ಮತ್ತು ಸಾರ್ವಜನಿಕರಿಂದ ಬರುವ ದೂರುಗಳಿಗೆ ತಕ್ಷಣಕ್ಕೆ ಸ್ಪಂದಿಸುವ ಕೆಲಸ ಆಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು. ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾ ರಕ್ಷಣಾಧಿಕಾರಿಗಳು ಕ್ರಮ ಜರುಗಿಸಬೇಕು. ಈ ಬಗ್ಗೆ ಯಾವುದೇ ದೂರು ಬರದಂತೆ ನೋಡಿಕೊಳ್ಳಬೇಕು. ಆದರೆ, ಯಾವುದೇ ನೈತಿಕ ಪೊಲೀಸ್‌ಗಿರಿಗೆ ಅವಕಾಶ ಇರಬಾರದು ಎಂದು ಹೇಳಿದರು.
ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಾತನಾಡಿ ಕೊಡಗನೂರು ಕೆರೆ ಕಳೆದ ವರ್ಷ ಅತಿವೃಷ್ಟಿಯಿಂದಾಗಿ ಏರಿ ಕುಸಿದು ತೀವ್ರ ಹಾನಿಯಾಗಿತ್ತು. ಮೂರು ಸಲ ಇದೇ ರೀತಿ ಆಗಿದ್ದು, ಕೆರೆ ಏರಿ ದುರಸ್ತಿಗೆಂದೇ ಕೋಟ್ಯಾಂತರ ರು.ಗಳ ಖರ್ಚು ಮಾಡಿದ್ದರೂ, ಕೆರೆ ಏರಿ ಕಾಮಗಾರಿ ಗುಣಮಟ್ಟದಿಂದ ಆಗಿಲ್ಲ. ಕೂಲಂಕಷವಾಗಿ ಈ ಬಗ್ಗೆ ಜಿಲ್ಲಾಧಿಕಾರಿಯವರು ಪರಿಶೀಲಿಸಬೇಕು ಎಂದು ಸೂಚಿಸಿದರು. ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಇಂದಿರಾ ಕ್ಯಾಂಟೀನ್‌ಗಳ ಸಿಬ್ಬಂದಿಗೆ ಇಎಸ್‌ಐ, ಪಿಎಫ್ ಪಾವತಿಯಾಗಿಲ್ಲ. ಸಂಬಂಧಿಸಿದ ಏಜೆನ್ಸಿಗೆ ಸೂಕ್ತ ನಿರ್ದೇಶನ ನೀಡಿ, ಕಾಲಕಾಲಕ್ಕೆ ವೇತನ, ಇಎಸ್‌ಐ, ಪಿಎಫ್ ಪಾವತಿಸಲು ಕ್ರಮ ಕೈಗೊಳ್ಳಿ ಎಂದು ಜಿಲ್ಲಾಡಳಿತಕ್ಕೆ ಹೇಳಿದರು.
ಗ್ಯಾರಂಟಿ ಜಾರಿಗೆ ಕಾಂಗ್ರೆಸ್‌ನವರು ತೆರಿಗೆ ಹೆಚ್ಚಿಸ್ತಾರೆ: ಶಾಸಕ ಬಿ.ವೈ.ವಿಜಯೇಂದ್ರ
ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಹೊನ್ನಾಳಿಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾಗಿಲ್ಲ. ಕ್ಯಾಂಟೀನ್ ಆರಂಭಿಸಲು ಕ್ರಮ ಕೈಗೊಳ್ಳಿ. ಅತಿವೃಷ್ಟಿ, ನೆರೆ ಹಾವಳಿಯಿಂದ ಮನೆ ಬಿದ್ದವರನ್ನು ಸರಿಯಾಗಿ ಗುರುತಿಸದೇ, ಕೈಬಿಡಲಾಗಿದೆ. ಅಂತಹ ಸಂತ್ರಸ್ತರನ್ನು ಸರಿಯಾಗಿ ಗುರುತಿಸಿ, ಪರಿಹಾರ ನೀಡುವ ಕೆಲಸ ಆಗಬೇಕು ಎಂದು ತಿಳಿಸಿದರು. ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಇದ್ದರು.