ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಖಡಕ್ ವಾರ್ನಿಂಗ್ ನೀಡಲಾಗಿದೆ. ಆಂತರಿಕ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸದಂತೆ ಎಚ್ಚರಿಸಲಾಗಿದೆ.
ನವದೆಹಲಿ (ಫೆ.23): ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಗರಂ ಆಗಿರುವ ಬಿಜೆಪಿ ಹೈಕಮಾಂಡ್, ಪಕ್ಷದ ಆಂತರಿಕ ವಿಷಯಗಳನ್ನು ಬಹಿರಂಗವಾಗಿ ಚರ್ಚಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಹೈಕಮಾಂಡ್ ಬಲಾವ್ ಹಿನ್ನೆಲೆಯಲ್ಲಿ ಯತ್ನಾಳ್ ಸೋಮವಾರ ದೆಹಲಿಗೆ ತೆರಳಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿದ್ದಾರೆ. ಯತ್ನಾಳ್ ಅವರ ಬಹಿರಂಗ ಹೇಳಿಕೆಗಳ ಕುರಿತು ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಪಂಚಮಸಾಲಿ ಹೋರಾಟದಲ್ಲಿ ಕಾಣಿಸಿಕೊಂಡ ಯತ್ನಾಳ್‌ಗೆ ಶಾಕ್; ಹೈಕಮಾಂಡ್‌ನಿಂದ ಬುಲಾವ್ ...
ಪಂಚಮಸಾಲಿ ಸಮುದಾಯ ನಡೆಸುತ್ತಿರುವ ಹೋರಾಟ ನ್ಯಾಯಸಮ್ಮತವಾಗಿದ್ದು, ಸರ್ಕಾರ ಸಮುದಾಯದ ಬೇಡಿಕೆ ಈಡೇರಿಸಬೇಕಿದೆ ಎಂದು ಯತ್ನಾಳ್ ತಿಳಿಸಿದಾಗಲೂ ಈ ಸಂಬಂಧ ಯಾವುದೇ ರೀತಿಯ ಬಹಿರಂಗ ಹೇಳಿಕೆ ನೀಡದಂತೆ ನಡ್ಡಾ ನಿರ್ದೇಶನ ನೀಡಿದ್ದಾರೆ. ಪಕ್ಷದಲ್ಲಿ ಮುಂದುವರಿಯಲು ಬಯಸಿದಲ್ಲಿ, ಆಂತರಿಕ ವಿಷಯಗಳನ್ನು ಬಹಿರಂಗವಾಗಿ ಚರ್ಚಿಸಬಾರದು. ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಇರುಸು ಮುರುಸು ಉಂಟು ಮಾಡುವ ನಡೆ ಮುಂದುವರಿದರೆ ಶಿಸ್ತು ಕ್ರಮ ಅನಿವಾರ್ಯ ಎಂಬ ಎಚ್ಚರಿಕೆಯನ್ನೂ ನೀಡಿದ್ದು, ತಮ್ಮ ಭೇಟಿ ಬಳಿಕ ಪಕ್ಷದ ಶಿಸ್ತು ಪಾಲನಾ ಸಮಿತಿ ಎದುರು ಹಾಜರಾಗುವಂತೆಯೂ ನಡ್ಡಾ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ದಿಢೀರ್ ದೆಹಲಿಗೆ ದೌಡಾಯಿಸಿದ್ದ ಯತ್ನಾಳ್ ಮಾಧ್ಯಮಗಳಿಂದಲೂ ದೂರವುಳಿದಿದ್ದು, ಕರ್ನಾಟಕ ಭವನದ ಬದಲು ಖಾಸಗಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ.