ಚುನಾವಣೆ ಮುಗಿದು ಮೂರು ತಿಂಗಳಾದರೂ ಇದುವರೆಗೂ ಪಕ್ಷ ವಿರೋಧಿಗಳ ಮೇಲೆ ಕ್ರಮ ಕೈಗೊಳ್ಳದ ಬಗ್ಗೆ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ ಹಾಗೂ ಅಲ್ಪ ಮತಗಳ ಅಂತರದಿಂದ ಗೆದ್ದ ಬಿಜೆಪಿ ಅಭ್ಯರ್ಥಿಗಳು ತೀವ್ರ ಅಸಮಾಧಾನಗೊಂಡಿದ್ದಾರೆ.
ವಸಂತಕುಮಾರ ಕತಗಾಲ
ಕಾರವಾರ(ಆ.20): ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ಮೇಲೆ ಬಿಜೆಪಿ ಹೈಕಮಾಂಡ್ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಬೇಸರಗೊಂಡಿರುವುದು ಕೇವಲ ಶಿವರಾಮ ಹೆಬ್ಬಾರ ಮಾತ್ರ ಅಲ್ಲ, ಉಳಿದ ಅಭ್ಯರ್ಥಿಗಳೂ ಸಮಾನ ದುಃಖಿಗಳೇ.
ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ಕುರಿತು ಲಿಖಿತ ದೂರು ನೀಡಿದರೂ ಇದುವರೆಗೂ ಯಾವುದೆ ಕ್ರಮವಾಗದ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಬಗ್ಗೆ ತಮಗೆ ನೋವು ಆಘಾತ ಆಗಿದೆ ಎಂದು ತಿಳಿಸಿದ್ದಾರೆ.
'ಇದೊಂದು ಭಂಡತನದ ರಾಜಕೀಯ' ಹೆಬ್ಬಾರ್ ಘರ್ ವಾಪ್ಸಿಗೆ ಶಾಸಕ ಭೀಮಣ್ಣ ನಾಯ್ಕ್ ಕಿಡಿ
ವಿಧಾನಸಭೆ ಅಧ್ಯಕ್ಷರಾಗಿದ್ದ ಶಿರಸಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ಸ್ವಪಕ್ಷೀಯರೇ ತಮ್ಮ ವಿರುದ್ಧ ಕೆಲಸ ಮಾಡಿದ್ದರಿಂದ ತಾವು ಚುನಾವಣೆಯಲ್ಲಿ ಸೋಲಬೇಕಾಯಿತು ಎಂದು ಪಕ್ಷದ ವರಿಷ್ಠರಿಗೆ ಲಿಖಿತವಾಗಿ ದೂರಿದ್ದಾರೆ.
ಕಾರವಾರ ಅಂಕೋಲಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ರೂಪಾಲಿ ಎಸ್. ನಾಯ್ಕ ಸಹ ಅಲ್ಪ ಮತಗಳ ಅಂತರದಿಂದ ಪರಾಭವಗೊಂಡರು. ಇದಕ್ಕೆ ಸ್ವಪಕ್ಷೀಯರು ಮಾಡಿದ ಪಕ್ಷವಿರೋಧಿ ಚಟುವಟಿಕೆಯೇ ಕಾರಣ ಎಂದು ಅವರು ಸಭೆಯಲ್ಲೇ ಅಳಲನ್ನು ತೋಡಿಕೊಂಡಿದ್ದಾರೆ. ಭಟ್ಕಳದಲ್ಲಿ ಸೋಲನ್ನು ಅನುಭವಿಸಿದ ಬಿಜೆಪಿ ಅಭ್ಯರ್ಥಿ ಸುನೀಲ ನಾಯ್ಕ ಸಹ ತಮ್ಮ ಭಾರಿ ಮತಗಳ ಅಂತರದ ಸೋಲಿಗೆ ಸ್ವಪಕ್ಷೀಯರೇ ಕಾರಣ ಎಂದು ಕಿಡಿಕಾರಿದ್ದರು.
ಪಕ್ಷ ವಿರೋಧಿಗಳ ಮೇಲೆ ಕ್ರಮ:
ಚುನಾವಣೆ ಮುಗಿದು ಮೂರು ತಿಂಗಳಾದರೂ ಇದುವರೆಗೂ ಪಕ್ಷ ವಿರೋಧಿಗಳ ಮೇಲೆ ಕ್ರಮ ಕೈಗೊಳ್ಳದ ಬಗ್ಗೆ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ ಹಾಗೂ ಅಲ್ಪ ಮತಗಳ ಅಂತರದಿಂದ ಗೆದ್ದ ಬಿಜೆಪಿ ಅಭ್ಯರ್ಥಿಗಳು ತೀವ್ರ ಅಸಮಾಧಾನಗೊಂಡಿದ್ದಾರೆ.
ಶಿಸ್ತಿನ ಪಕ್ಷ ಎಂದು ಕರೆಸಿಕೊಳ್ಳುತ್ತಿದ್ದ ಬಿಜೆಪಿಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧವೇ ಕೆಲಸ ಮಾಡಿದ ಪದಾಧಿಕಾರಿಗಳು, ಕಾರ್ಯಕರ್ತರನ್ನು ಪತ್ತೆಹಚ್ಚಿ ಶಿಸ್ತಿನ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಪಕ್ಷದಲ್ಲಿ ಏನೇ ಮಾಡಿದರೂ ನಡೆಯುತ್ತದೆ ಎಂಬ ಮನೋಭಾವ ಉಂಟಾಗಿ ಮುಂದಿನ ಚುನಾವಣೆಗಳಲ್ಲೂ ಇದು ಪುನರಾವರ್ತನೆಯಾದೀತು.
ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧವೇ ಕೆಲಸ ಮಾಡಿದ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಾದ ಒತ್ತಡ. ಕ್ರಮ ಕೈಗೊಳ್ಳದೆ ಇದ್ದರೆ ಪ್ರಭಾವಿ ಮುಖಂಡರು ಪಕ್ಷದ ಚಟುವಟಿಕೆಯಿಂದಲೇ ದೂರ ಇರುವ ಅಥವಾ ಬೇರೆ ಪಕ್ಷದತ್ತ ಮುಖ ಮಾಡುವ ಸಾಧ್ಯತೆ ಇರುವುದರಿಂದ ಬಿಜೆಪಿ ವರಿಷ್ಠರು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.
ಶಾಸಕ ಹೆಬ್ಬಾರ್ ನಡೆಯ ಬಗ್ಗೆ ಮೂಡಿದ ಕುತೂಹಲ: ಬಾಂಬೆ ಬಾಯ್ಸ್ ಮರಳಿ ಕಾಂಗ್ರೆಸ್‌ಗೆ?
ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆಂದು ಆರೋಪಿಸಿ ಪಕ್ಷದ ಹೈಕಮಾಂಡಿಗೆ ನೀಡಿದ ಪಟ್ಟಿಯಲ್ಲಿ ಇರುವವರೆಲ್ಲ ಇದುವರೆಗೂ ಪಕ್ಷದಲ್ಲಿ ಏನೂ ಆಗಿಲ್ಲದಂತೆ ವರ್ತಿಸುತ್ತಿರುವುದು ದೂರು ನೀಡಿದವರಿಗೆ ಮಾನಸಿಕ ಹಿಂಸೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಬಗ್ಗೆ ಜಿಲ್ಲೆಯಿಂದ ಪಕ್ಷದ ವರಿಷ್ಠರಿಗೆ ವರದಿ ಕಳುಹಿಸಲಾಗಿದೆ. ಶೀಘ್ರದಲ್ಲಿ ಅಂದರೆ 2-3 ದಿನಗಳಲ್ಲಿ ಕ್ರಮ ಆಗುವ ಸಾಧ್ಯತೆ ಇದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ತಿಳಿಸಿದ್ದಾರೆ.