ಬಿಜೆಪಿ ಕೊಟ್ಟ ಭರವಸೆಗಳ ಕಾನೂನು ಚೌಕಟ್ಟಿನಲ್ಲೇ ಈಡೇರಿಸಿದೆ: ಎಂ.ಪಿ.ರೇಣುಕಾಚಾರ್ಯ

By Govindaraj SFirst Published Feb 19, 2024, 10:23 PM IST
Highlights

ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಆರ್ಟಿಕಲ್ 370, ತ್ರಿವಳಿ ತಲಾಕ್, ರಾಮಮಂದಿರ ನಿರ್ಮಾಣ ಸೇರಿ ಅನೇಕ ಭರವಸೆಗಳ ಕಾನೂನಿನ ಚೌಕಟ್ಟಿನಲ್ಲಿ ನಾವು ಈಡೇರಿಸಿದ್ದೇವೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪ್ರತಿಪಾದಿಸಿದರು.

ಹೊನ್ನಾಳಿ (ಫೆ.19): ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಆರ್ಟಿಕಲ್ 370, ತ್ರಿವಳಿ ತಲಾಕ್, ರಾಮಮಂದಿರ ನಿರ್ಮಾಣ ಸೇರಿ ಅನೇಕ ಭರವಸೆಗಳ ಕಾನೂನಿನ ಚೌಕಟ್ಟಿನಲ್ಲಿ ನಾವು ಈಡೇರಿಸಿದ್ದೇವೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪ್ರತಿಪಾದಿಸಿದರು. ತಾಲೂಕಿನ ಗೊಲ್ಲರಹಳ್ಳಿ ಗ್ರಾಮದಲ್ಲಿ ವಿಕಸಿತ ಭಾರತಕ್ಕಾಗಿ ಗ್ರಾಮಚಲೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ರಾಮಮಂದಿರ ನಿರ್ಮಾಣಕ್ಕಾಗಿ ಹಿಂದೆ ನಡೆದ ಅನೇಕ ಹೋರಾಟದಲ್ಲಿ ಸಾವಿರಾರು ಕರಸೇವಕರು ತಮ್ಮ ಪ್ರಾಣ ಕಳೆದುಕೊಂಡಿದ್ದರು, ಇದೀಗ ರಾಮ ಮಂದಿರ ನಿರ್ಮಾಣದಿಂದ ಅವರ ಆತ್ಮಗಳಿಗೆ ಶಾಂತಿ ಸಿಕ್ಕಿದೆ. ಕೇಂದ್ರ ಸರ್ಕಾರವು ಕಿಸಾನ್ ಸಮ್ಮಾನ್ ಯೋಜನೆ, ರಿಯಾಯಿತಿ ದರದಲ್ಲಿ ರಸಗೊಬ್ಬರ, ಉಚಿತ ಪಡಿತರ ಅಕ್ಕಿ ನೀಡುತ್ತಿದ್ದು, ಸರ್ಕಾರದ ಫಲಾನುಭವಿಗಳಿಗೆ ನಗದು ಎಲ್ಲೂ ಸೋರಿಕೆಯಾಗದಿರಲಿ ಎಂದು ಜನ್ ಧನ್ ಖಾತೆ ತೆರೆಸಿದ ಕೀರ್ತಿ ಮೋದಿಯವರಿಗೆ ಸಲ್ಲಬೇಕು ಎಂದರು.

ಈಶ್ವರಪ್ಪ ವಿರುದ್ಧ ಸುಳ್ಳು ಆರೋಪ: ಪಕ್ಷದ ಮುಖಂಡರಾದ ಕೆ.ಎಸ್.ಈಶ್ವರಪ್ಪ ದೇಶವಿರೋಧಿ ಹೇಳಿಕೆ ನೀಡುವವರಿಗೆ ಗುಂಡಿಕ್ಕಿ ಎಂದು ಹೇಳಿದ್ದಾರೆಯೇ ಹೊರತು ಡಿ.ಕೆ.ಸುರೇಶ್‍ಗೆ ಗುಂಡಿಕ್ಕಿ ಎಂದು ಎಲ್ಲೂ ಹೇಳಿಲ್ಲ. ಬಿಜೆಪಿ ವಿರುದ್ದ ಆರೋಪ ಮಾಡಲು ವಿಷಯವಿಲ್ಲದೇ ಹಾಗೂ ಲೋಕಸಭೆ ಚುನಾವಣೆ ಸಮೀಪವಿರುವುದರಿಂದ ಪಕ್ಷದ ಮುಖಂಡರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್‌ಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ತಿರುಗೇಟು ನೀಡಿದರು. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ನಾವೆಲ್ಲರೂ ಪ್ರತಿ ಮನೆ ಮನೆಗೆ ಹೋಗಿ ಕೇಂದ್ರ ಸರ್ಕಾರ ನೀಡಿರುವ ಯೋಜನೆಗಳ ಬಗ್ಗೆ ತಿಳಿಸಬೇಕು. 

ಈ ವಿಷಯದಲ್ಲಿ ನನ್ನನ್ನು ಸೇರಿದಂತೆ ಯಾರೂ ಮೈ ಮರೆಯಬಾರದು, ರಾಷ್ಟ್ರಕ್ಕೊಬ್ಬ ಸಮರ್ಥ ನಾಯಕ ಸಿಕ್ಕಿದ್ದಾರೆ, ಅಂತಹ ಪ್ರಧಾನಿಯ ನಾವು ಉಳಿಸಿಕೊಳ್ಳಬೇಕು. ನಮ್ಮ ದೇಶದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲಿಯೇ ಮೋದಿಯಂಥ ನಾಯಕ ಇರಬೇಕಿತ್ತು ಎಂದು ಹೇಳುತ್ತಿರುವುದು ನಾವೆಲ್ಲರೂ ಕೇಳಿದ್ದೇವೆ. ಹೆಮ್ಮೆಯಿಂದ ಬಿಜೆಪಿಗೆ ಮತ ಕೇಳಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್, ರಾಜ್ಯ ಬಿಜೆಪಿ ಒಬಿಸಿ ಉಪಾಧ್ಯಕ್ಷ ಕುಬೇಂದ್ರಪ್ಪ, ಮಾರುತಿ ನಾಯ್ಕ್, ದೊಡ್ಡೇರಿ ರಾಜಣ್ಣ, ಗಿರೀಶ್, ಸುರೇಂದ್ರ ನಾಯ್ಕ್, ಅರಕೆರೆ ನಾಗರಾಜ್, ಬೀರಗೊಂಡನಹಳ್ಳಿ ಬಸವರಾಜು ಸೇರಿ ಅನೇಕ ಬಿಜೆಪಿ ಮುಖಂಡರಿದ್ದರು.

ಯುಗಾದಿ ನಂತರ‌ ರಾಜ್ಯದಲ್ಲಿ ಧಾರ್ಮಿಕ ಮುಖಂಡನ ಸಾವಾಗಲಿದ್ದು, ಒಳ್ಳೆಯ ಮಳೆ-ಬೆಳೆಯಾಗಲಿದೆ: ಕೋಡಿಶ್ರೀ ಸ್ಫೋಟಕ ಭವಿಷ್ಯ!

ಕಾಂಗ್ರೆಸ್ ಮುಖಂಡರು "ನಮ್ಮ ತೆರಿಗೆ ನಮ್ಮ ಹಕ್ಕು" ಎಂದು ಸುಳ್ಳು ಹೇಳಿ ರಾಜ್ಯದ ಜನತೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಕೇಂದ್ರದಿಂದ ರಾಜ್ಯಕ್ಕೆ ಎಷ್ಟು ಅನುದಾನ ನೀಡಿದ್ದೇವೆ ಎಂದು ಅಂಕಿ ಅಂಶಗಳ ಸಹಿತ ಬಿಡುಗಡೆ ಮಾಡಿದ್ದಾರೆ. ಸುಖಾಸುಮ್ಮನೆ ಕೇಂದ್ರದ ವಿರುದ್ದ ಸುಳ್ಳು ಆರೋಪ ಮಾಡುತ್ತಿದ್ದಾರೆ ಅಷ್ಟೇ.
-ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ

click me!