ಪರಿಷತ್ತಲ್ಲಿ ಮೊದಲ ಸಲ ಬಿಜೆಪಿಗೆ ಸ್ಪಷ್ಟ ಬಹುಮತ..!

Published : Jun 17, 2022, 05:00 AM IST
ಪರಿಷತ್ತಲ್ಲಿ ಮೊದಲ ಸಲ ಬಿಜೆಪಿಗೆ ಸ್ಪಷ್ಟ ಬಹುಮತ..!

ಸಾರಾಂಶ

*  2 ಚುನಾವಣೆಗಳಲ್ಲಿ 6 ಸ್ಥಾನ ಗೆದ್ದ ಕೇಸರಿ ಪಡೆ *  75 ಸದಸ್ಯ ಬಲದ ಮೇಲ್ಮನೆಯಲ್ಲಿ ಬಿಜೆಪಿಗೆ 39 *  ಹೊರಟ್ಟಿ ಮತ್ತೆ ಸಭಾಪತಿ?  

ಬೆಂಗಳೂರು(ಜೂ.17): ಇತ್ತೀಚೆಗೆ ನಡೆದ ಎರಡು ಚುನಾವಣೆಗಳಲ್ಲಿ ಆಡಳಿತಾರೂಢ ಬಿಜೆಪಿ ಹೆಚ್ಚಿನ ಸ್ಥಾನ ಪಡೆದುಕೊಳ್ಳುವ ಮೂಲಕ ಇದೇ ಮೊದಲ ಬಾರಿಗೆ ಮೇಲ್ಮನೆಯಲ್ಲಿ ಸ್ಪಷ್ಟಬಹುಮತ ಪಡೆದುಕೊಂಡಿದೆ.
ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ಸ್ಥಾನ ಮತ್ತು ಈಗಿನ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಎರಡು ಸ್ಥಾನದಲ್ಲಿ ಗೆಲುವು ಸಾಧಿಸುವ ಮೂಲಕ ಸದನದಲ್ಲಿ ಸಭಾಪತಿ ಸೇರಿದಂತೆ 39 ಸಂಖ್ಯಾಬಲ ಪಡೆದುಕೊಂಡಿದೆ.

ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಫಲಿತಾಂಶದಿಂದ ಬಿಜೆಪಿಗೆ ಲಾಭವೂ ಇಲ್ಲ, ನಷ್ಟವೂ ಇಲ್ಲದಂತಾಗಿದೆ. ಪ್ರತಿಪಕ್ಷ ಕಾಂಗ್ರೆಸ್‌ಗೆ ಎರಡು ಸ್ಥಾನ ಲಾಭವಾಗಿದೆ. ಜೆಡಿಎಸ್‌ ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿರುವುದರಿಂದ ಎರಡು ಸ್ಥಾನಗಳನ್ನು ಕಳೆದುಕೊಂಡಂತಾಗಿದೆ.

'ಅಡ್ಡ ಮತದಾನಕ್ಕೆ ಪ್ರೇರೇಪಿಸುವ ಸಿದ್ದರಾಮಯ್ಯ 2 ತಲೆ ಹಾವಿದ್ದಂತೆ'

ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ತಲಾ ಎರಡು ಕ್ಷೇತ್ರಗಳನ್ನು ಹಂಚಿಕೊಂಡಿವೆ. ನಾಲ್ಕು ಕ್ಷೇತ್ರದ ಫಲಿತಾಂಶ ಸಂಪೂರ್ಣವಾಗಿ ಹೊರಬಿದ್ದಿದ್ದು, ಪಶ್ಚಿಮ ಶಿಕ್ಷಕರ ಕ್ಷೇತ್ರ ಮತ್ತು ವಾಯವ್ಯ ಪದವೀಧರ ಕ್ಷೇತ್ರವು ಬಿಜೆಪಿ ಪಾಲಾದರೆ, ವಾಯವ್ಯ ಶಿಕ್ಷಕರ ಕ್ಷೇತ್ರ ಮತ್ತು ದಕ್ಷಿಣ ಪದವೀಧರ ಕ್ಷೇತ್ರ ಕಾಂಗ್ರೆಸ್‌ಗೆ ಸಿಕ್ಕಿದೆ.

ಪಶ್ಚಿಮ ಶಿಕ್ಷಕರ ಕ್ಷೇತ್ರ ಮತ್ತು ವಾಯವ್ಯ ಶಿಕ್ಷಕರ ಕ್ಷೇತ್ರದ ಫಲಿತಾಂಶ ಬುಧವಾರ ಸಂಜೆಯ ವೇಳೆಗೆ ಲಭಿಸಿದರೆ, ವಾಯವ್ಯ ಪದವೀಧರ ಮತ್ತು ದಕ್ಷಿಣ ಪದವೀಧರ ಕ್ಷೇತ್ರದ ಫಲಿತಾಂಶ ತಡರಾತ್ರಿಯ ವೇಳೆಗೆ ಪ್ರಕಟಗೊಂಡಿತು. ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಹಣಮಂತ ನಿರಾಣಿ 44,815 ಮತಗಳನ್ನು ಪಡೆದುಕೊಂಡು ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಅಭ್ಯರ್ಥಿ ಸುನೀಲ್‌ ಅಣ್ಣಪ್ಪ ಅವರ 10,122 ಮತಗಳನ್ನು ಪಡೆದು ಕೊಂಡಿದ್ದಾರೆ. ಇನ್ನು, ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜಿ.ಎಂ.ಮಧು ಅವರು 32,592 ಮತಗಳನ್ನು ಪಡೆದುಕೊಂಡು ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ರವಿಶಂಕರ್‌ 26,687 ಮತಗಳನ್ನು ಪಡೆದುಕೊಂಡು ಸೋಲನುಭವಿಸಿದ್ದಾರೆ.
ಎರಡು ಚುನಾವಣೆಯಲ್ಲಿ ಮೂರು ಪಕ್ಷಗಳ ಫಲಿತಾಂಶದ ಆಧಾರದ ಮೇಲೆ ಮೇಲ್ಮನೆಯ ಒಟ್ಟು 75 ಸದಸ್ಯರ ಬಲಾಬಲದಲ್ಲಿ ಬಿಜೆಪಿ ಸಂಖ್ಯಾಬಲ 38, ಕಾಂಗ್ರೆಸ್‌ 26, ಜೆಡಿಎಸ್‌ 8, ಪಕ್ಷೇತರ ಒಂದು, ಸಭಾಪತಿ ಒಂದು ಸ್ಥಾನ ಇದೆ. ಒಂದು ಸ್ಥಾನ ಖಾಲಿ ಇದೆ. ಬಿಜೆಪಿ ಸ್ಪಷ್ಟಬಹುಮತ ಪಡೆದುಕೊಂಡು ನಿರಾಳವಾಗಿದೆ.

ಬಿಜೆಪಿ ಅಭ್ಯರ್ಥಿ ಬಿಜೆಪಿಯ ಹಿಡಿತದಲ್ಲಿದ್ದ ವಾಯವ್ಯ ಶಿಕ್ಷಕರ ಕ್ಷೇತ್ರವು ಕಾಂಗ್ರೆಸ್‌ ಪಾಲಾಗಿದೆ. ವಾಯವ್ಯ ಕ್ಷೇತ್ರದಲ್ಲಿ ಬಿಜೆಪಿ ಪ್ರತಿನಿಧಿಸುತ್ತಿದ್ದ ಅರುಣ್‌ ಶಹಾಪೂರ ಸೋಲನುಭವಿಸಿದ್ದಾರೆ. ಇಲ್ಲಿ ಬಿಜೆಪಿ ಒಂದು ಸ್ಥಾನವನ್ನು ಕಳೆದುಕೊಂಡರೆ, ಜೆಡಿಎಸ್‌ನಿಂದ ಬಿಜೆಪಿಗೆ ಬಂದು ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಬಸವರಾಜ ಹೊರಟ್ಟಿಜಯ ಗಳಿಸಿದ್ದಾರೆ. ಇಲ್ಲಿ ಬಿಜೆಪಿ ಒಂದು ಸ್ಥಾನವನ್ನು ಪಡೆದುಕೊಂಡಿದೆ. ಇನ್ನು, ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಹಣಮಂತ ನಿರಾಣಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.

ಚುನಾವಣೆಗೂ ಮುನ್ನ ಕಾಂಗ್ರೆಸ್‌ ಈ ಪೈಕಿ ಯಾವುದೇ ಕ್ಷೇತ್ರದಲ್ಲಿಯೂ ಇರಲಿಲ್ಲ. ಚುನಾವಣೆ ಫಲಿತಾಂಶದ ಬಳಿಕ ಎರಡು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಪ್ರಕಾಶ್‌ ಹುಕ್ಕೇರಿ ಮತ್ತು ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಜಿ.ಎಂ.ಮಧು ಗೆಲುವು ಸಾಧಿಸಿದ್ದಾರೆ. ಜೆಡಿಎಸ್‌ ಭದ್ರಕೋಟೆ ಎನ್ನಿಸಿಕೊಂಡಿದ್ದ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಶ್ರೀಕಂಠೇಗೌಡ ಕಳೆದ ಬಾರಿ ಗೆಲುವು ಸಾಧಿಸಿದ್ದರು. ಈ ಬಾರಿ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಜಿ.ಎಂ.ಮಧು ಜಯಭೇರಿ ಸಾಧಿಸಿದ್ದಾರೆ. ಕಾಂಗ್ರೆಸ್‌ ಒಂದು ಸ್ಥಾನವನ್ನು ಬಿಜೆಪಿಯಿಂದ ಹಾಗೂ ಮತ್ತೊಂದು ಸ್ಥಾನವನ್ನು ಜೆಡಿಎಸ್‌ನಿಂದ ಕಿತ್ತುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಮೇಲ್ಮನೆಯಲ್ಲಿ ಕಾಂಗ್ರೆಸ್‌ ತನ್ನ ಸ್ಥಾನವನ್ನು 24ರಿಂದ 26ಕ್ಕೆ ಹೆಚ್ಚಿಸಿಕೊಂಡಿದೆ.

ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಯಾರೇ ಗೆದ್ದರೂ ಅದು ದಾಖಲೆಯೇ: ಹೊರಟ್ಟಿಯದ್ದೇ ಅಧಿಪತ್ಯ..!

ಚುನಾವಣೆಯಲ್ಲಿ ಜೆಡಿಎಸ್‌ ಶೂನ್ಯ ಸಂಪಾದನೆ ಮಾಡಿದ್ದು, ಇದ್ದ ಎರಡು ಸ್ಥಾನವನ್ನು ಕಳೆದುಕೊಂಡಿದೆ. ಪರಿಷತ್‌ನಲ್ಲಿ ಜೆಡಿಎಸ್‌ ಬಲ 10ರಿಂದ 8ಕ್ಕೆ ಕುಸಿದಿದೆ. ಹಲವು ವರ್ಷಗಳಿಂದ ಜೆಡಿಎಸ್‌ ಭದ್ರಕೋಟೆಯಾಗಿದ್ದ ಪಶ್ಚಿಮ ಶಿಕ್ಷಕ ಕ್ಷೇತ್ರವು ಬಿಜೆಪಿಯ ಪಾಲಾಗಿದೆ. ಬಸವರಾಜ ಹೊರಟ್ಟಿಅವರಿಂದಲೇ ದಳಪತಿಗಳ ಕೋಟೆ ಛಿದ್ರವಾಗಿದೆ ಮತ್ತು ಅವರಿಂದಲೇ ಬಿಜೆಪಿಗೆ ಬಾಗಿಲು ತೆಗೆಯುವಂತಾಗಿದೆ. ಇದು ಜೆಡಿಎಸ್‌ಗೆ ಬಾರಿ ಪೆಟ್ಟುಕೊಟ್ಟಂತಾಗಿದೆ. ಅಲ್ಲದೇ, ದಕ್ಷಿಣ ಪದವೀಧರ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಶ್ರೀಕಂಠೇಗೌಡ ಬದಲಿಗೆ ಈ ಬಾರಿ ರಾಮು ಎಂಬುವವರಿಗೆ ಟಿಕೆಟ್‌ ನೀಡಿತ್ತು. ಇದು ಜೆಡಿಎಸ್‌ಗೆ ಹೊಡೆತ ಬಿದ್ದಿದ್ದು, ಕಾಂಗ್ರೆಸ್‌ ತನ್ನ ಖಾತೆ ತೆರೆಯಲು ಸಾಧ್ಯವಾಯಿತು ಎಂದು ಹೇಳಲಾಗಿದೆ.

ಹೊರಟ್ಟಿ ಮತ್ತೆ ಸಭಾಪತಿ?

ಬೆಂಗಳೂರು: ವಿಧಾನಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಸತತ ಎಂಟನೇ ಬಾರಿಗೆ ಗೆಲುವು ಸಾಧಿಸಿರುವ ಬಿಜೆಪಿಯ ಬಸವರಾಜ ಹೊರಟ್ಟಿಅವರು ಮತ್ತೆ ಸಭಾಪತಿ ಸ್ಥಾನ ಅಲಂಕರಿಸುವ ಸಾಧ್ಯತೆಯಿದೆ. ಪಕ್ಷ ಸೇರುವ ಮೊದಲೇ ಹೊರಟ್ಟಿಅವರಿಗೆ ಈ ಕುರಿತು ಬಿಜೆಪಿ ನಾಯಕರು ಭರವಸೆ ಕೊಟ್ಟಿದ್ದಾರೆ ಎನ್ನಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಧಾನಸಭೆಯಲ್ಲಿ 'ಉತ್ತರ ಕರ್ನಾಟಕ' ವಿವಾದ: ಶಿವಲಿಂಗೇಗೌಡರ ಮಾತುಗಳಿಗೆ ಗರಂ ಆದ ಯತ್ನಾಳ್, ಗ್ಯಾರಂಟಿ, ಗುಂಡಿ ವಿಚಾರಕ್ಕೆ ಜಟಾಪಟಿ!
ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?