* ರಾಜ್ಯದಲ್ಲಿ ರಂಗೇರಿದ ವಿಧಾನಪರಿಷತ್ ಚುನಾವಣೆ
* ಬೆಂಗಳೂರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ದೂರು ದಾಖಲು
* ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ
ಬೆಂಗಳೂರು, (ಡಿ.02): ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ (Karnataka MLC Election) ರಾಜಕೀಯ ಚಟುವಟಿಕೆಗಳು ರಂಗೇರಿದೆ. ಆದ್ರೆ, ಬೆಂಗಳೂರು ನಗರ ಜಿಲ್ಲೆ ಕಾಂಗ್ರೆಸ್ ಅಭ್ಯರ್ಥಿಗೆ (Congress Candidate) ಸಂಕಷ್ಟಗಳ ಮೇಲೆ ಸಂಕಷ್ಟ ಎದುರಾಗುತ್ತಲೇ ಇವೆ.
ಹೌದು..ಮೊನ್ನೇ ಅಷ್ಟೇ ಸಚಿವ ಎಸ್‌ಟಿ ಸೋಮಶೇಖರ್ ಅವರು ಬೆಂಗಳೂರು ಕಾಂಗ್ರೆಸ್ ಅಭ್ಯರ್ಥಿ ಯೂಸುಫ್ ಷರೀಫ್ (yousuf sharif ) ಅಲಿಯಾಸ್ ಕೆಜಿಎಫ್ ಬಾಬು( KGF Babu) ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದರು. ಇದೀಗ ಬಿಜೆಪಿ ಯೂಸುಫ್ ಷರೀಫ್ ವಿರುದ್ಧ ದೂರು ದಾಖಲಿಸಿದೆ.
ಬಿಕ್ಕಿಬಿಕ್ಕಿ ಅತ್ತ ಕಾಂಗ್ರೆಸ್ ಅಭ್ಯರ್ಥಿ, ಸಚಿವರೇ ನಿಮಗೆ ಅಕ್ಕ-ತಂಗಿಯರು ಇಲ್ವಾ ಎಂದ ಬಾಬು ಪತ್ನಿ
ಹಣದ ಆಮಿಷ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯೂಸುಫ್ ಷರೀಫ್ ಬಾಬು ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ (Election Commission) ದೂರು ನೀಡಿದೆ.
ಬಿಜೆಪಿ(BJP) ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ (N Ravikumar) ಮತ್ತು ಬಿಜೆಪಿ ಎಸ್.ಸಿ. ಮೋರ್ಚ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾಗೆ ದೂರು ಸಲ್ಲಿಸಿದ್ದು, ಪ್ರಚಾರ ಭಾಷಣದಲ್ಲಿ ಹಣ ನೀಡುವ ಆಮಿಷ ತೋರಿಸಿದ್ದಾರೆ. ಇದರಿಂದ ಅವರನ್ನ ಚುನಾವಣಾ ಕಣದಿಂದ ಬಾಬು ವಜಾಗೊಳಿಸುವಂತೆ ಮನವಿ ಮಾಡಿದ್ದಾರೆ.
ಇನ್ನು ಈ ಬಗ್ಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಪ್ರತಿಕ್ರಿಯಿಸಿದ್ದು, ಯೂಸುಫ್ ಬಾಬು ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಕಾಂಗ್ರೆಸ್ ಯೂಸುಫ್ ಬಾಬು ಅವರನ್ನು ಚುನಾವಣಾ ಕಣದಿಂದ ನಿವೃತ್ತಿಗೊಳಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ವಿರುದ್ಧ ಆರೋಪ ಮಾಡುವುದನ್ನು ಕಾಂಗ್ರೆಸ್ ನಿಲ್ಲಿಸಬೇಕು. ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಗೆ ಸಂವಿಧಾನದ ಬಗ್ಗೆ ಗೌರವ ಇದ್ದರೆ ಅಭ್ಯರ್ಥಿಯನ್ನು ನಿವೃತ್ತಿಗೊಳಿಸಲಿ. ಯೂಸುಫ್ ಬಾಬು ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಕ್ರಮ ತೆಗೆದುಕೊಳ್ಳಬೇಕು, ಪಕ್ಷದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಕೆಜಿಎಫ್ ಬಾಬು ವಿರುದ್ಧ ಬಿಜೆಪಿ ಟ್ವೀಟ್ ಬಾಣ
ಕೆಜಿಎಫ್ ಬಾಬು ಅಲಿಯಾಸ್ ಯೂಸುಫ್ ಷರೋಫ್ ಆಸ್ತಿ ರೂ. 4,000 ಕೋಟಿಯೋ ರೂ. 7,000 ಸಾವಿರ ಕೋಟಿಯೋ? ಎಂದು ಬಿಜೆಪಿ ಪ್ರಶ್ನೆ ಮಾಡಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಕೆಪಿಸಿಸಿ ಅಧ್ಯಕ್ಷರ ವಿಧಾನ ಪರಿಷತ್ ಅಭ್ಯರ್ಥಿ ಕೆಜಿಎಫ್ ಬಾಬು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಇದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಆರೋಪಿಸಿದೆ.
ಚುನಾವಣಾ ಆಯೋಗಕ್ಕೆ 1,743 ಕೋಟಿ ರೂ. ಆಸ್ತಿ ಹೊಂದಿದ್ದೇನೆ ಎಂದು ಮಾಹಿತಿ ನೀಡಿರುವ ಯೂಸುಫ್ ಷರೀಫ್ ಅವರು ಸಾರ್ವಜನಿಕವಾಗಿ ಬೇರೆ ಬೇರೆ ಲೆಕ್ಕ ಕೊಡುತ್ತಿದ್ದಾರೆ. ನಿಮ್ಮ ಅಭ್ಯರ್ಥಿಯ ಆಸ್ತಿ ಮೌಲ್ಯ ರೂ. 4,000 ಕೋಟಿಯೋ ರೂ. 7,000 ಸಾವಿರ ಕೋಟಿಯೋ? ಎಂದು ಬಿಜೆಪಿ ಪ್ರಶ್ನಿಸಿದೆ.
ಅಷ್ಟೇ ಅಲ್ಲದೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಆಯ್ಕೆ ಯಾವಾಗಲೂ ಎರಡರಲ್ಲಿ ಒಂದು. ಒಂದೋ ಅವರ ಆಪ್ತ ಬಣದಲ್ಲಿರುವವರು ರೌಡಿ ಹಿನ್ನೆಲೆ ಹೊಂದಿರಬೇಕು, ಇಲ್ಲವಾದರೆ ತೆರಿಗೆ ಕಳ್ಳರಾಗಿರಬೇಕು ಎಂದು ಬಿಜೆಪಿ ಲೇವಡಿ ಮಾಡಿದೆ.
ವಿಧಾನ ಪರಿಷತ್ ಚುನಾವಣೆ ದಿನಾಂಕ
ರಾಜ್ಯ ಮೇಲ್ಮನೆಯ 25 ಸ್ಥಾನಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದ್ದು ಡಿಸೆಂಬರ್ 14ರಂದು ಫಲಿತಾಂಶ ಪ್ರಕಟವಾಗಿಲಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, ಕೋಲಾರ, ಕೊಡಗು ಮತ್ತು ಮೈಸೂರು ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರಗಳಿಂದ ಚುನಾವಣೆ ನಡೆಯಲಿದೆ.