ಜೆಡಿಎಸ್‌ ಕೈ ತಪ್ಪುತ್ತಾ ಕಲಬುರಗಿ ಮೇಯರ್ ಪಟ್ಟ: ಅಚ್ಚರಿ ಮೂಡಿಸಿದೆ ಬೊಮ್ಮಾಯಿ, ಕಟೀಲ್ ಹೇಳಿಕೆ!

By Kannadaprabha News  |  First Published Sep 10, 2021, 7:53 AM IST

* ಕಲಬುರಗಿ ಮೇಯರ್‌ ಪಟ್ಟನಮಗೇ: ಬಿಜೆಪಿ

* ಬಿಜೆಪಿಗರೇ ಮೇಯರ್‌ ಆಗ್ತಾರೆ: ಬೊಮ್ಮಾಯಿ

* ಯಾವ ರೀತಿ ಆಗುತ್ತೆ ಅಂತ ಕಾದು ನೋಡಿ: ನಿರಾಣಿ


ಕಲಬುರಗಿ(ಸೆ.10): ಜೆಡಿಎಸ್‌ ಜತೆ ಮೈತ್ರಿ ವಿಚಾರ ಇನ್ನೂ ಅಸ್ಪಷ್ಟವಾಗಿರುವಾಗಲೇ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿ ತೀವ್ರ ಕಸರತ್ತು ಮುಂದುವರೆಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪಕ್ಷದ ನಾಯಕರು ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಲಬುರಗಿ ಮಹಾನಗರ ಪಾಲಿಕೆ ಮೈತ್ರಿ ಬಗ್ಗೆ ಇನ್ನೂ ಮಾತುಕತೆ ಆರಂಭಿಕ ಹಂತದಲ್ಲಿದೆ. ಆದರೆ, ಅಲ್ಲಿ ಬಿಜೆಪಿಯವರೇ ಮೇಯರ್‌ ಆಗಲಿದ್ದಾರೆ ಎನ್ನುವ ವಿಶ್ವಾಸ ಇಟ್ಟುಕೊಳ್ಳಿ ಎಂದು ಹೇಳಿದರು.

Tap to resize

Latest Videos

ಕಲಬುರಗಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್‌ ನಿರಾಣಿ, ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಜತೆಗೆ ಜೆಡಿಎಸ್‌ ಹೆಜ್ಜೆ ಹಾಕುವ ವಿಶ್ವಾಸ ಇದೆ. ಬಿಜೆಪಿಯವರೇ ಮೇಯರ್‌ ಆಗಲಿದ್ದಾರೆ. ಅದು ಹೇಗೆ, ಯಾವ ರೀತಿ ಮಾಡುತ್ತೇವೆ ಎಂಬುದನ್ನು ಕಾದು ನೋಡಿ. ನಾವು ಫೈನಲ್‌ಗೆ ಬಂದಿದ್ದು, ನಾವೇ ಗೆಲ್ಲುತ್ತೇವೆ. ಸದ್ಯಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಯಾವುದೇ ಆಶ್ವಾಸನೆ ನೀಡಿಲ್ಲ. ಆದರೆ, ಯಾವುದೇ ಷರತ್ತು ಇಲ್ಲದೇ ಜೆಡಿಎಸ್‌ ಸದಸ್ಯರು ಬಿಜೆಪಿ ಬೆಂಬಲಿಸುವ ವಿಶ್ವಾಸ ಇದೆ ಎಂದು ನುಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ, ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ರಚನೆಗೆ ಎಲ್ಲಾ ರೀತಿಯ ತಂತ್ರಗಾರಿಕೆ ಬಳಸಿ ಪೂರ್ಣ ರೀತಿಯ ಅಧಿಕಾರ ಹಿಡಿಯಲು ಪ್ರಯತ್ನ ನಡೆಸುತ್ತೇವೆ. ಕಾರ್ಯಕರ್ತರು ಬಿಜೆಪಿಯನ್ನು ಗೆಲ್ಲಿಸಿ ಅದ್ಭುತವಾದ ಕಾರ್ಯ ಮಾಡಿದ್ದಾರೆ. ಮತದಾರರು ಸಹ ಬಿಜೆಪಿಗೆ ಮತ ನೀಡಿ ಆಶೀರ್ವದಿಸಿದ್ದಾರೆ. ನಾವೇ ಅಧಿಕಾರಕ್ಕೆ ಬರುತ್ತೇವೆ. ಇದೇ ಮೊದಲ ಬಾರಿಗೆ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್‌ ಕುಮಾರ್‌ ಸುರಾನಾ ಮಾತನಾಡಿ, ಕಲಬುರಗಿ ಸೇರಿದಂತೆ ಮೂರೂ ಕಡೆ ನಮ್ಮ ಪಕ್ಷದವರೇ ಮೇಯರ್‌ ಆಗುತ್ತಾರೆ. ಮೂರೂ ಕಡೆ ಅಧಿಕಾರಕ್ಕೆ ಬರುವುದು ನಮ್ಮ ಪಕ್ಷದ ತಂತ್ರವಾಗಿದೆ. ಸದಸ್ಯರು, ಶಾಸಕರು, ಪರಿಷತ್‌ ಸದಸ್ಯರು ಸೇರಿದಂತೆ ಬಹುಮತ ನಮ್ಮದಿದೆ. ಜನ ಉತ್ತಮ ಆಡಳಿತ ನೀಡಲು ಮತ ಹಾಕಿದ್ದಾರೆ. ಜೆಡಿಎಸ್‌ ನಮ್ಮ ಬೆಂಬಲಕ್ಕೆ ಬರಲು ಒಪ್ಪುತ್ತದೆ ಎಂಬ ವಿಶ್ವಾಸ ಇದೆ. ಕಲಬುರಗಿ ಅಭಿವೃದ್ಧಿ ದೃಷ್ಟಿಯಿಂದ ನಾವು ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

click me!