
ಬೆಂಗಳೂರು(ಆ.28): ಟಿಪ್ಪು ಸುಲ್ತಾನ್ ಕುರಿತು ಮಾಜಿ ಸಚಿವ ಎಚ್.ವಿಶ್ವನಾಥ್ ಅವರದ್ದು, ವೈಯಕ್ತಿಕ ಅಭಿಪ್ರಾಯವೇ ಹೊರತು ಪಕ್ಷದ ಅಭಿಪ್ರಾಯವಲ್ಲ ಎಂದು ರಾಜ್ಯ ಬಿಜೆಪಿ ಪ್ರತಿಕ್ರಿಯಿಸಿದೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯರೂ ಆದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ವಿಶ್ವನಾಥ್ ಹೇಳಿಕೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸುವುದಿಲ್ಲ. ಅಲ್ಲದೆ, ಅವರ ಹೇಳಿಕೆ ಪಕ್ಷಕ್ಕೆ ಮುಜುಗರ ಎಂದೆನ್ನಿಸುವುದಿಲ್ಲ. ಏಕೆಂದರೆ ವಿಶ್ವನಾಥ್ ಅವರದ್ದು ಆನ್ ಗೋಯಿಂಗ್ ಹೇಳಿಕೆ ಎಂದು ತಿರುಗೇಟು ನೀಡಿದರು.
ವಿಶ್ವನಾಥ್ ಅವರ ಹೇಳಿಕೆ ಅತ್ಯಂತ ಅಸಹಜ. ಕಾರ್ಯಕ್ರಮದ ಭಾಷಣದ ವೇಳೆ ಹಾಗೆ ಹೇಳಿದ್ದರೆ, ಪಕ್ಷ ಗಂಭೀರವಾಗಿ ಪರಿಗಣಿಸುತ್ತಿತ್ತು. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಯಾವುದೇ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಟಿಪ್ಪು ಸುಲ್ತಾನ್ ಈ ನೆಲದ ಮಗ, ವೀರ ಹೋರಾಟಗಾರ: ಬಿಜೆಪಿ ನಾಯಕ
ಟಿಪ್ಪು ಸುಲ್ತಾನ್ ಕುರಿತ ಬಿಜೆಪಿ ಚಿಂತನೆ ಬದಲಾಗಿಲ್ಲ, ಹಿಂದಿನ ಬದ್ಧತೆಯನ್ನು ಈಗಲೂ ಬಿಜೆಪಿ ಹೊಂದಿದೆ. ಟಿಪ್ಪು ಸುಲ್ತಾನ್ ಮತಾಂಧ. ಟಿಪ್ಪು ಈ ನೆಲದ ಮಣ್ಣಿನ ಮಗ ಅನ್ನುವುದನ್ನು ರಾಜ್ಯದ ಜನ ದುಃಖದಿಂದ ಹೇಳುತ್ತಾರೆ. ಕಾಂಗ್ರೆಸ್ ಮತ ಬ್ಯಾಂಕ್‌ಗಾಗಿ ಟಿಪ್ಪು ಹೆಸರನ್ನು ಪೂಜೆ ಮಾಡುತ್ತಿದೆ ಎಂದು ಹರಿಹಾಯ್ದರು.
ವೈಯಕ್ತಿಕ ಹೇಳಿಕೆ- ಕಾರ್ಣಿಕ್
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್, ವಿಶ್ವನಾಥ್ ಅವರ ಹೇಳಿಕೆಯಿಂದ ಬಿಜೆಪಿ ದೂರು ಉಳಿಯಲು ಬಯಸಲಿದ್ದು, ಅದು ಅವರ ವೈಯಕ್ತಿಕ ಹೇಳಿಕೆ ಎಂದಿದ್ದಾರೆ. ಟಿಪ್ಪು ಸುಲ್ತಾನ್ ಓರ್ವ ಮತಾಂಧನಾಗಿದ್ದ ಎಂಬುದಕ್ಕೆ ಪಕ್ಷ ಬದ್ಧವಾಗಿದೆ. ಈ ವಾದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಟಿಪ್ಪು ಸುಲ್ತಾನ್ ಇಸ್ಲಾಮಿಕ್ ಸಾಮ್ರಾಜ್ಯ ಸ್ಥಾಪಿಸುವ ಯತ್ನದ ವೇಳೆ ಕೊಡಗಿನಲ್ಲಿ ಸಹಸ್ರಾರು ಹಿಂದೂಗಳ ಹಾಗೂ ಮಂಗಳೂರಿನಲ್ಲಿ ಕ್ರಿಶ್ಚಿಯನ್ನರ ಮಾರಣಹೋಮ ಮಾಡಿದ್ದನ್ನು ಮರೆಯಲಾಗದು. ಟಿಪ್ಪು ಸುಲ್ತಾನ್ ಕತ್ತಿಯ ಹರಿತದಿಂದ ಜನರನ್ನು ಮತಾಂತರಗೊಳಿಸಲು ಯತ್ನಿಸಿದ್ದ. ಅಲ್ಲದೆ, ಪರ್ಸಿಯನ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿಸುವ ಮೂಲಕ ಕನ್ನಡ ವಿರೋಧಿಯೂ ಆಗಿದ್ದ. ಈ ಎಲ್ಲಾ ಕಾರಣಗಳಿಂದ ಬಿಜೆಪಿ ಎಂದಿಗೂ ಟಿಪ್ಪು ಸುಲ್ತಾನ್‌ನನ್ನು ಉತ್ತಮ ಆಡಳಿತಗಾರ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.