ಅಧ್ಯಕ್ಷರ ಆಯ್ಕೆಗೆ ಈ ಬಾರಿ ಕಾಂಗ್ರೆಸ್‌ನಲ್ಲಿ ಚುನಾವಣೆ| ಖಾಸಗಿ ಸುದ್ದಿವಾಹಿನಿಗೆ ಸೋನಿಯಾ ಆಪ್ತ ಅಹ್ಮದ್ ಪಟೇಲ್ ಹೇಳಿಕೆ
ನವದೆಹಲಿ(ಆ.27): ಈ ಬಾರಿ ರಾಷ್ಟ್ರೀಯ ಕಾಂಗ್ರೆಸ್‌ಗೆ ಚುನಾವಣೆ ನಡೆಸಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು, ಆ ಚುನಾವಣೆಗೆ ಯಾರು ಬೇಕಾದರೂ ಸ್ಪರ್ಧಿಸಬಹುದು ಎಂದು ಪಕ್ಷದ ಹಿರಿಯ ನಾಯಕ ಹಾಗೂ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆಪ್ತ ಅಹ್ಮದ್ ಪಟೇಲ್ ತಿಳಿಸಿದ್ದಾರೆ. ಪಕ್ಷದ ಮೂಲಗಳ ಪ್ರಕಾರ ಜನವರಿ ತಿಂಗಳಿನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ.
ಪಕ್ಷದ 23 ಹಿರಿಯ ನಾಯಕರು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದ ವಿಚಾರ ವಿವಾದವಾಗಿ ಮಾರ್ಪಟ್ಟನಂತರ ಅದಕ್ಕೆ ತೆರೆಯೆಳೆಯುವ ಪ್ರಯತ್ನದ ಅಂಗವಾಗಿ ಅಹ್ಮದ್ ಪಟೇಲ್ ಅವರ ಹೇಳಿಕೆ ಹೊರಬಿದ್ದಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೆ, ಚುನಾವಣೆ ನಡೆಯುವುದರಿಂದ ಗಾಂಧಿ ಕುಟುಂಬದವರಲ್ಲದ ವ್ಯಕ್ತಿಯೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆಯೂ ಗೋಚರವಾಗಿದೆ.
ಈ ಕುರಿತು ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿರುವ ಅಹ್ಮದ್ ಪಟೇಲ್, ಪಕ್ಷದ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆಸಲಾಗುವುದು. ಅದರಲ್ಲಿ ಯಾರು ಬೇಕಾದರೂ ಸ್ಪರ್ಧಿಸಬಹುದು ಎಂದು ಹೇಳಿಕೆ ನೀಡಿದ್ದಾರೆ. ಇದೇ ವೇಳೆ, ಕಾಯಂ ನೇಮಕದವರೆಗೆ ಹಂಗಾಮಿ ಅಧ್ಯಕ್ಷರಿಗೆ ಸಹಕಾರ ನೀಡಲು ನಾಲ್ವರು ಸದಸ್ಯರ ಸಮಿತಿ ನೇಮಿಸುವ ಸುಳಿವನ್ನೂ ಅವರು ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯವಾಗಿ ಕಾರ್ಯಕಾರಿ ಸಮಿತಿಯ 23 ಸದಸ್ಯರೇ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ಅದನ್ನು ಎಐಸಿಸಿ ಅಧಿವೇಶನದಲ್ಲಿ ಘೋಷಿಸಲಾಗುತ್ತದೆ. ಆದರೂ ಸ್ವಾತಂತ್ರ್ಯಾನಂತರ ಹಲವು ಬಾರಿ ಅಧ್ಯಕ್ಷ ಹುದ್ದೆಗೆ ಪಕ್ಷದಲ್ಲಿ ನೇರ ಚುನಾವಣೆ ನಡೆದಿದೆ. ಅದರಂತೆ ಈ ಬಾರಿಯೂ ಚುನಾವಣೆ ನಡೆಸಲಾಗುತ್ತದೆ ಎಂಬ ಹೇಳಿಕೆ ಪಕ್ಷದಿಂದ ಹೊರಬಿದ್ದಿದೆ. ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ತಮ್ಮ ಪತ್ರದ ಬಗ್ಗೆ ಚರ್ಚೆಯೇ ನಡೆದಿಲ್ಲ, ತಮ್ಮ ಸಲಹೆಗೆ ಯಾರೂ ಬೆಲೆ ನೀಡುತ್ತಿಲ್ಲ ಎಂಬ 23 ನಾಯಕರ ಬೇಸರವನ್ನು ತಣಿಸುವ ಪ್ರಯತ್ನವನ್ನೂ ಪಕ್ಷ ಈ ಹೇಳಿಕೆಯ ಮೂಲಕ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ, ಅಹ್ಮದ್ ಪಟೇಲ್ ಅವರು ಇನ್ನುಮುಂದೆ ಪಕ್ಷದ ವಿಚಾರವಾಗಿ ನಾಯಕರು ಪತ್ರ ಬರೆಯುವುದರ ಬದಲು ನೇರವಾಗಿ ಸೋನಿಯಾ ಗಾಂಧಿಯವರ ಜೊತೆ ಮಾತನಾಡಬೇಕು ಎಂದು ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ.
ಕಾಂಗ್ರೆಸ್ಸೇತರರು ಪಕ್ಷ ನಡೆಸಲು ಸಾಧ್ಯವೇ?
ಸ್ವಾತಂತ್ರ್ಯಾನಂತರದ ಬಹುತೇಕ ಅವಧಿಗೆ ಕಾಂಗ್ರೆಸ್ ಪಕ್ಷಕ್ಕೆ ಗಾಂಧಿ ಕುಟುಂಬದವರೇ ಅಧ್ಯಕ್ಷರಾಗಿದ್ದಾರೆ. ಈ ಅವಧಿಯಲ್ಲಿ ಗಾಂಧಿ ಕುಟುಂಬದಿಂದ 5 ಮಂದಿ ಹಾಗೂ ಗಾಂಧಿ ಕುಟುಂಬದ ಹೊರಗಿನಿಂದ 13 ಮಂದಿ ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಆದರೆ, ಈ 13 ಮಂದಿಯ ಒಟ್ಟಾರೆ ಅಧಿಕಾರಾವಧಿ ಬಹಳ ಕಡಿಮೆಯಿದೆ. ಬಹುತೇಕ ಅವಧಿಗೆ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅಧ್ಯಕ್ಷರಾಗಿದ್ದಾರೆ.
ಗಾಂಧಿ ಕುಟುಂಬದ ಹೊರಗಿನಿಂದ ಪಕ್ಷಕ್ಕೆ ಅಧ್ಯಕ್ಷರಾದವರು ಜೆ.ಬಿ.ಕೃಪಲಾನಿ, ಬಿ.ಪಟ್ಟಾಭಿ ಸೀತಾರಾಮಯ್ಯ, ಪುರುಷೋತ್ತಮ ದಾಸ್ ಟಂಡನ್, ಯು.ಎನ್.ಧೇಬರ್, ಎನ್.ಸಂಜೀವರೆಡ್ಡಿ, ಕೆ.ಕಾಮರಾಜ್, ಎಸ್.ನಿಜಲಿಂಗಪ್ಪ, ಜಗಜೀವನರಾಂ, ಶಂಕರ್ ದಯಾಳ್ ಶರ್ಮಾ, ಡಿ.ಕೆ.ಬರೋಹ, ಕೆ.ಬಿ.ರೆಡ್ಡಿ, ಪಿ.ವಿ.ನರಸಿಂಹರಾವ್ ಮತ್ತು ಸೀತಾರಾಂ ಕೇಸರಿ.
‘ಗಾಂಧಿ ಕುಟುಂಬದ ಹೊರಗಿನವರು ಕಾಂಗ್ರೆಸ್ ಪಕ್ಷಕ್ಕೆ ಅಧ್ಯಕ್ಷರಾಗುವುದು ಹೊಸತಲ್ಲ. ಆದರೆ, ಹಿನ್ನೆಲೆಯ ಶಕ್ತಿಯಾಗಿ ಗಾಂಧಿ ಕುಟುಂಬ ಇರುವಾಗ ಇವರು ಸ್ವತಂತ್ರವಾಗಿ ಕೆಲಸ ಮಾಡುವುದು ತಾತ್ವಿಕವಾಗಿ ಮಾತ್ರ ಸಾಧ್ಯವೇ ಹೊರತು ಪ್ರಾಯೋಗಿಕವಾಗಿ ಸಾಧ್ಯವಿಲ್ಲ’ ಎಂದು ರಾಜಕೀಯ ತಜ್ಞರಾದ ರಶೀದ್ ಕಿದ್ವಾಯಿ ಹೇಳಿದ್ದಾರೆ.