ಹೋರಾಟ ಮಾಡಿ, ಹಾರಾಟ ಬಿಡಿ: ಯತ್ನಾಳ್‌ಗೆ ಶಿಸ್ತು ಸಮಿತಿ ಖಡಕ್‌ ಸೂಚನೆ

Published : Dec 05, 2024, 07:36 AM ISTUpdated : Dec 05, 2024, 07:37 AM IST
ಹೋರಾಟ ಮಾಡಿ, ಹಾರಾಟ ಬಿಡಿ: ಯತ್ನಾಳ್‌ಗೆ ಶಿಸ್ತು ಸಮಿತಿ ಖಡಕ್‌ ಸೂಚನೆ

ಸಾರಾಂಶ

ಯತ್ನಾಳ್ ವಿರುದ್ಧ ಅಮಾನತಿನಂಥ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಕ್ಷೀಣಿಸಿದ್ದು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಸ್ಥಿತಿಯನ್ನು ಸರಿದೂಗಿಸುವ ದಿಕ್ಕಿನಲ್ಲಿ ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಯತ್ನಾಳ್ ಅವರು ನಡೆಸುತ್ತಿರುವ ವಕ್ಫ್‌ ವಿರುದ್ಧದ ಹೋರಾಟಕ್ಕೆ ಬ್ರೇಕ್ ಹಾಕದೆ ಅವರ ಬಹಿರಂಗ ಹೇಳಿಕೆಗಳಿಗೆ ಕಡಿವಾಣ ಹಾಕುವ ಪ್ರಯತ್ನ ನಡೆದಿದೆ.

ನವದೆಹಲಿ/ಬೆಂಗಳೂರು(ಡಿ.05): ವಕ್ಫ್‌ ವಿರುದ್ಧ ನಿಮ್ಮ ಹೋರಾಟವನ್ನು ಮುಂದುವರಿಸಿ. ಆದರೆ, ಪಕದ ನಾಯಕರ ವಿರುದ್ಧ ಮಾಧ್ಯಮಗಳ ಮುಂದೆ ಹೇಳಿಕೆ ನೀಡಬೇಡಿ, ಏನಾದರೂ ಇದರೆ ವರಿಷ್ಠರ ಮುಂದೆ ಹೇಳಿ ಎಂದು ಬಿಜೆಪಿ ಕೇಂದ್ರ ಶಿಸ್ತು ಸಮಿತಿಯು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಖಡಕ್ ಸೂಚನೆ ನೀಡಿದೆ. 

ಪರಿಣಾಮ ಯತ್ನಾಳ್ ವಿರುದ್ಧ ಅಮಾನತಿನಂಥ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಕ್ಷೀಣಿಸಿದ್ದು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಸ್ಥಿತಿಯನ್ನು ಸರಿದೂಗಿಸುವ ದಿಕ್ಕಿನಲ್ಲಿ ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಯತ್ನಾಳ್ ಅವರು ನಡೆಸುತ್ತಿರುವ ವಕ್ಫ್‌ ವಿರುದ್ಧದ ಹೋರಾಟಕ್ಕೆ ಬ್ರೇಕ್ ಹಾಕದೆ ಅವರ ಬಹಿರಂಗ ಹೇಳಿಕೆಗಳಿಗೆ ಕಡಿವಾಣ ಹಾಕುವ ಪ್ರಯತ್ನ ನಡೆದಿದೆ.

ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಕ್ರಮ: ಬಿಜೆಪೀಲಿ ಒತ್ತಡ ತೀವ್ರ

ಜತೆಗೆ ಯತ್ನಾಳ್ ಅವರು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸುವ ಅಥವಾ ಶನಿವಾರ ನಡೆಯುವ ಕೋರ್‌ಕಮಿಟಿ ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ಅವರು ಪ್ರಸ್ತಾಪಿಸಿ ಚರ್ಚಿಸುವ ನಿರೀಕ್ಷೆಯಿದೆ. 

ಒಟ್ಟಿನಲ್ಲಿ ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಪ್ರಮುಖ ಪ್ರತಿಪಕ್ಷವಾಗಿರುವ ಬಿಜೆಪಿಯಲ್ಲಿ ಒಡಕು ಮೂಡಿರುವುದು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಆಹಾರವಾಗದಂತೆ ನೋಡಿಕೊಳ್ಳುವತ್ತೆ ವರಿಷ್ಠರು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. 

ಶಿಸ್ತು ಸಮಿತಿ ಮುಂದೆ ಹಾಜರು: 

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಾ ಬಂದ ಹಿನ್ನೆಲೆಯಲ್ಲಿ ಕೇಂದ್ರ ಶಿಸ್ತು ಸಮಿತಿ ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ನೀಡಿತ್ತು. ಹತ್ತು ದಿನಗಳ ಒಳಗೆ ನೋಟಿಸ್‌ಗೆ ಉತ್ತರ ನೀಡುವಂತೆ ತಿಳಿಸಿತ್ತು. ಅದರಂತೆ ಅವರು ಬುಧವಾರ ದೆಹಲಿಯಲ್ಲಿ ಶಿಸ್ತು ಸಮಿತಿ ಮುಂದೆ ಹಾಜರಾದರು. 

ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಅವರ ಮುಂದೆ ಹಾಜರಾಗಿ, ನೋಟಿಸ್‌ಗೆ ವಿವರಣೆ ನೀಡಿದರು. ವಿಜಯೇಂದ್ರ ಬಣದ ವಿರುದ್ಧ ಅವರು ಆರೋಪ ಪಟ್ಟಿ ಸಲ್ಲಿಸಿದರು ಎನ್ನಲಾಗಿದೆ. ಈ ವೇಳೆ, ವಕ್ಫ್‌ ವಿರುದ್ದದ ಅವರ ಹೋರಾಟವನ್ನು ಶ್ಲಾಘಿಸಿದ ಪಾಠಕ್, ನಿಮ್ಮ ಹೋರಾಟವನ್ನು ಮುಂದುವರಿಸಿ. ಆದರೆ, ಪಕ್ಷದ ವಿಚಾರವನ್ನು ಮಾಧ್ಯಮದ ಮುಂದೆ ಮಾತನಾಡಬೇಡಿ, ವರಿಷ್ಠರ ಮುಂದೆ ಹೇಳಿ ಎಂದು ಸೂಚನೆ ನೀಡಿದರು ಎನ್ನಲಾಗಿದೆ. 

ಬಳಿಕ, ಸುದ್ದಿಗಾರರ ಜೊತೆ ಮಾತನಾಡಿದ ಯತ್ನಾಳ್, ಒಂದು ಗಂಟೆಗೂ ಅಧಿಕ ಕಾಲ ವಿಸ್ತ್ರತವಾಗಿ ಮಾಹಿತಿ ನೀಡಿದ್ದೇನೆ. ಅವರು ನಾನು ನೀಡಿದ ಮಾಹಿತಿಯನ್ನು ಕೇಳಿಸಿಕೊಂಡಿದ್ದಾರೆ. ನಾನು ನೀಡಿದ ಮಾಹಿತಿಯನ್ನು ವರಿಷ್ಠ ರಿಗೆ ತಿಳಿಸುವುದಾಗಿ ಹೇಳಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರು, ಗೃಹ ಸಚಿವರು ಅಮಿತ್ ಶಾ, ಹಾಗೂ ಪ್ರಧಾನಿ ಮೋದಿಗೆ ತಿಳಿಸುವುದಾಗಿ ಹೇಳಿದ್ದಾರೆ. ವಕ್ಫ್‌ ಹೋರಾಟ ಮುಂದುವರಿ ಸಲು ಸೂಚನೆ ನೀಡಿದ್ದಾರೆ. ಈಗಿನ ರೀತಿಯಲ್ಲಿ ಹೋರಾಟ ಮುಂದುವರಿಸಿ ಎಂದಿದ್ದಾರೆ. ನಮ್ಮ ಹೋರಾಟವನ್ನು ಶ್ಲಾಘಿಸಿದ್ದಾರೆ ಎಂದರು. 

ನಿಮಗೆ ಒಳ್ಳೆಯ ಭವಿಷ್ಯ ಇದೆ. ಶಾಂತವಾಗಿರಿ. ಪಕ್ಷದ ವಿಚಾರವನ್ನು ಮಾಧ್ಯಮದ ಮುಂದೆ ಮಾತನಾಡಬೇಡಿ, ವರಿಷ್ಠರು ಮುಂದೆ ಹೇಳಿ ಎಂದು ಸಲಹೆ ನೀಡಿದ್ದಾರೆ. ಗುರುವಾರ ಜೆಪಿಸಿ ಸಭೆಯಲ್ಲಿ ಭಾಗಿಯಾಗಿ ಬೆಂಗಳೂರಿಗೆ ಮರಳುತ್ತೇನೆ ಎಂದು ತಿಳಿಸಿದರು.

ಯತ್ನಾಳ್‌ ನಮ್ಮವರೇ, ಕೂತು ಮಾತಾಡ್ತೀವಿ 

ಯತ್ನಾಳ್ ಕೂಡ ನಮ್ಮ ಪಕ್ಷದವರೆ. ಅವರು ಹೊರಗಿನವರಲ್ಲ. ಯಾವುದೋ ಕಾರಣಕ್ಕಾಗಿ ಆಕ್ರೋಶದಲ್ಲಿರ ಬಹುದು. ಆದರೆ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕೆನ್ನುವುದು ನನ್ನ ಅಪೇಕ್ಷೆ. ಏನೇ ವಿಚಾರ ಇದ್ದರೂ ಮುಖಾಮುಖಿಯಾಗಿ ಕುಳಿತು ಮಾತ ನಾಡಬೇಕು. ಸಮಸ್ಯೆ ಬಗೆಹರಿಸಿಕೊಂಡು ಮುಂದೆ ನಡೆಯಬೇಕು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. 

ಬಿಜೆಪಿಯಲ್ಲಿ ರೆಬೆಲ್ ನಾಯಕರ ಗುದ್ದಾಟ, ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ಜಟಾಪಟಿ!

ಬಿಎಸ್‌ವೈ ಹೇಳಿಕೆ ಸ್ವಾಗತ ಮಾಡ್ತೀನಿ 

ಯಡಿಯೂರಪ್ಪ ಅವರ ಹೇಳಿಕೆ ಯನ್ನು ನಾನು ಸ್ವಾಗತ ಮಾಡುತ್ತೇನೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಹೇಳಿದ್ದಾರೆ. 

ಯತ್ನಾಳ್‌ ತಂಡದಿಂದ ರಾಜನಾಥ್‌ ಸಿಂಗ್‌ ಭೇಟಿ: ವಿಜಯೇಂದ್ರ ವಿರುದ್ಧ ಕ್ರಮಕ್ಕೆ ಆಗ್ರಹ 

ನವದೆಹಲಿ: ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷಬಿ.ವೈ.ವಿಜಯೇಂದ್ರ ಅವರ ವಿರುದ್ದ ಸಿಡಿದೆದ್ದಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ತಂಡ ದೆಹಲಿಯಲ್ಲಿ ಬೀಡು ಬಿಟ್ಟು ಪಕ್ಷದ ವರಿಷ್ಠರಿಗೆ ದೂರು ನೀಡುವ ಕಾರ್ಯ ಮುಂದುವರೆಸಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಅವರನ್ನೂ ಭೇಟಿಯಾಗಿ ಬಿವೈವಿ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. 

ಕರ್ನಾಟಕ ರಾಜಕಾರಣವನ್ನು ಬಹು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಸಿಂಗ್ ಅವರನ್ನು ನಗರದಲ್ಲಿ ಬುಧವಾರ ಬಿಜೆಪಿಯ ರೆಬಲ್ ಟಿಂ ಗೌಪ್ಯವಾಗಿ ಭೇಟಿಯಾಗಿ ವಿಜಯೇಂದ್ರ ಕುರಿತು ಕಂಪ್ಲೆಟ್ ಹೇಳಿದ್ದು, ಸೂಕ್ತ ಕ್ರಮಕ್ಕೆ ಒತ್ತಾಯಿಸಿದೆ. ಅಲ್ಲದೆ, ರಾಜ್ಯದಲ್ಲಿ ನಡೆಸಿದ ವಕ್ಫ್‌ ವಿರೋಧಿ ಹೋರಾಟದ ಬಗ್ಗೆಯೂ ಮಾಹಿತಿ ಹಂಚಿಕೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೂರು ವರ್ಷಗಳಲ್ಲಿ 57,733 ಸೈಬರ್ ಅಪರಾಧ, ₹5,473 ಕೋಟಿ ವಂಚನೆ: ಗೃಹ ಸಚಿವ ಪರಮೇಶ್ವರ್
ಮೇಕೆದಾಟು, ಭದ್ರಾ, ಕೃಷ್ಣಾ ಯೋಜನೆಗಳಲ್ಲಿ ಕೇಂದ್ರ ಸರ್ಕಾರ ವಿಳಂಬ: ಡಿ.ಕೆ.ಶಿವಕುಮಾರ್ ಆಕ್ರೋಶ