ಬಿಹಾರದ ರಾಜಕಾರಣದಲ್ಲಿ ಯಾದವರು, ಮುಸ್ಲಿಮರು ಲಾಲು ಯಾದವ್ ಜೊತೆಗೆ, ಕುರ್ಮಿಗಳು ಮತ್ತು ಇತರ ಹಿಂದುಳಿದವರು ನಿತೀಶ್ ಕುಮಾರ್ ಜೊತೆಗೆ, ಬ್ರಾಹ್ಮಣ ಠಾಕೂರ್ ಮತ್ತು ಭೂಮಿಹಾರರು ಬಿಜೆಪಿ ಜೊತೆಗೆ ಎಂದು ಎಲ್ಲರಿಗೂ ಗೊತ್ತಿರುವುದೇ. ಆದರೆ ಪ್ರತಿ ಬಾರಿ ಹೊಯ್ದಾಡುವುದು 15 ಪ್ರತಿಶತ ಇರುವ ದಲಿತರ ಮತಗಳು.
ನವದೆಹಲಿ (ಸೆ. 11): ಬಿಹಾರದ ರಾಜಕಾರಣದಲ್ಲಿ ಯಾದವರು, ಮುಸ್ಲಿಮರು ಲಾಲು ಯಾದವ್ ಜೊತೆಗೆ, ಕುರ್ಮಿಗಳು ಮತ್ತು ಇತರ ಹಿಂದುಳಿದವರು ನಿತೀಶ್ ಕುಮಾರ್ ಜೊತೆಗೆ, ಬ್ರಾಹ್ಮಣ ಠಾಕೂರ್ ಮತ್ತು ಭೂಮಿಹಾರರು ಬಿಜೆಪಿ ಜೊತೆಗೆ ಎಂದು ಎಲ್ಲರಿಗೂ ಗೊತ್ತಿರುವುದೇ. ಆದರೆ ಪ್ರತಿ ಬಾರಿ ಹೊಯ್ದಾಡುವುದು 15 ಪ್ರತಿಶತ ಇರುವ ದಲಿತರ ಮತಗಳು.
ಇದರಲ್ಲಿ ಪಾಸ್ವಾನ್‌ರ ಮತಗಳ ಮೇಲೆ ಕಬ್ಜಾ ಇಟ್ಟಿರುವ ರಾಮವಿಲಾಸ್ ಮತ್ತು ಚಿರಾಗ್ ಪಾಸ್ವಾನ್‌ರಿಗೆ ಬಿಜೆಪಿ ಬೇಕು ಆದರೆ ನಿತೀಶ್ ಬೇಡ. ಇನ್ನು ನಿತೀಶ್‌ರ ಅತ್ಯಾಪ್ತ ಭೋವಿ ಸಮುದಾಯದ ಶ್ಯಾಮ ರಜಕ್ ಮರಳಿ ಲಾಲು ಜೊತೆ ಹೋಗಿದ್ದರಿಂದ ಮಹಾದಲಿತ ಜೀತನ್ ರಾಮ್ ಮಾಂಜಿ ಪುನಃ ನಿತೀಶ್ ಜೊತೆ ಬಂದಿದ್ದಾರೆ. ಇವತ್ತಿನ ಸ್ಥಿತಿಯಲ್ಲಿ ಬಿಹಾರದ ಚುನಾವಣೆಯಲ್ಲಿ ಪಾಸ್ವಾನ್ ಮತ್ತು ಮಹಾದಲಿತರ ಮತಗಳು ನಿರ್ಣಾಯಕ ಎನಿಸಲಿವೆ.
ಬಿಹಾರದಲ್ಲಿ ಬಿಜೆಪಿ ಲೆಕ್ಕಾಚಾರ
ಬಿಹಾರದಲ್ಲಿ ಸರ್ಕಾರ ರಚಿಸಬೇಕಾದರೆ 122 ಸೀಟ್ ಗೆಲ್ಲಬೇಕು. ಹಿಂದೊಮ್ಮೆ ನಿತೀಶ್ 110ರ ವರೆಗೆ ಸೀಟ್ ಗೆಲ್ಲುತ್ತಿದ್ದರು. ಆದರೆ ಕಳೆದ ಬಾರಿ ಲಾಲು ಹೆಚ್ಚು ಸೀಟ್ ಗೆದ್ದರೂ ನಿತೀಶ್ ಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟರು. ಆದರೆ ಬಿಜೆಪಿ ಈ ಬಾರಿ ಹೇಗಾದರೂ ಮಾಡಿ ನಿತೀಶ್‌ಗಿಂತ ಜಾಸ್ತಿ ಸೀಟು ಗಳಿಸುವ ತಯಾರಿಯಲ್ಲಿದೆ. ಹೀಗಾಗಿಯೇ ಚಿರಾಗ್ ಪಾಸ್ವಾನ್ ಬಿಜೆಪಿ ಬೇಕು, ನಿತೀಶ್ ಬೇಡ ಎನ್ನುತ್ತಿದ್ದಾರೆ. ಒಂದು ವೇಳೆ ಪಾಸ್ವಾನ್‌ರ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಿ ಬಿಜೆಪಿ ವಿರುದ್ಧ ಅಭ್ಯರ್ಥಿ ಹಾಕದೇ ಕೇವಲ ಜೆಡಿಯು ವಿರುದ್ಧ ಸ್ಪಧಿರ್ಸಿದರೆ ಬಿಜೆಪಿಗೆ ದೊಡ್ಡ ಪಕ್ಷವಾಗುವುದು ಸುಲಭ.
ಪ್ರಕರಣ ಯಾವುದೇ ಇರಲಿ, ಟಿವಿ ಸ್ಟುಡಿಯೋಗಳೇ ನ್ಯಾಯಾಲಯಗಳಾದರೆ?
ಹಾಗೊಂದು ವೇಳೆ ಸ್ಥಿತಿ ಅತಂತ್ರವಾಗಿ ಪಾಸ್ವಾನ್ ಕಿಂಗ್ ಮೇಕರ್ ಆಗಿ ಹೊರಹೊಮ್ಮಿದಾಗ ಕೂಡ ಬಿಜೆಪಿ ತನಗೇ ಮುಖ್ಯಮಂತ್ರಿ ಹುದ್ದೆ ಬೇಕು ಎಂದು ಪಟ್ಟು ಹಿಡಿದರೆ ಬಿಹಾರದ ರಾಜಕೀಯ ಪೂರ್ತಿ ಬದಲಾಗಬಹುದು. ಆ ಸ್ಥಿತಿಯಲ್ಲಿ ಲಾಲು, ಪಾಸ್ವಾನ್ ಸ್ವಯಂ ಮುಖ್ಯಮಂತ್ರಿ ಆಗಲಿ ಎಂದುಬಿಟ್ಟರೆ ಆಗ ಕಥೆಯೇ ಬೇರೆ. ಒಂದಂತೂ ಖಚಿತ, 2015ರಲ್ಲಿ ನಿತೀಶ್‌ಗಿದ್ದ ಕ್ರೇಜ್ ಈಗಿಲ್ಲ. ಇದರ ಲಾಭ ಯಾರು ಪಡೆಯುತ್ತಾರೆ ಎಂಬುದೇ ಬಿಹಾರದ ಕುತೂಹಲ.
ಬಲಹೀನ ಲಾಲು ಪ್ರಸಾದ್
ಜಾತಿಯ ಜೊತೆ ಗುರುತಿಸಿಕೊಳ್ಳುವ ಪಕ್ಷಗಳ ಸಮಸ್ಯೆ ಎಂದರೆ ಅವರ ಜಾತಿಯ ಮತಗಳು ಸಿಗುತ್ತವೆ, ಆದರೆ ಉಳಿದವರು ಹತ್ತಿರ ಬರೋಲ್ಲ. ದೇವೇಗೌಡರ ಪಕ್ಷಕ್ಕೆ ಒಕ್ಕಲಿಗರು, ಮುಲಾಯಂ ಪಕ್ಷಕ್ಕೆ ಯಾದವರು, ಮಾಯಾವತಿ ಪಕ್ಷಕ್ಕೆ ದಲಿತ, ಜಾಟರು ಬಿಟ್ಟರೆ ಉಳಿದವರು ವೋಟು ಹಾಕುವುದಿಲ್ಲ. ಹೀಗಾಗಿ ವೋಟು ಬರುತ್ತವೆ, ಸೀಟು ಬರೋಲ್ಲ. ಲಾಲು ಅವರದ್ದೂ ಕೂಡ ಅದೇ ಸ್ಥಿತಿ. ಯಾದವರು ಪೂರ್ತಿ ಜೊತೆಗಿದ್ದಾರೆ, ಆದರೆ ಮುಸ್ಲಿಮರು ಅರ್ಧ ನಿತೀಶ್ ಜೊತೆ ಹೋಗಿದ್ದಾರೆ.
ಹಿಂದೆ ಜೊತೆಗಿದ್ದ ನಿಷಾದ್, ಕೋರಿ, ಕುಶ್ವಾಹ, ಮಲ್ಹಾರರಂಥ ತೀರಾ ಹಿಂದುಳಿದ ಜಾತಿಗಳು ಅತಿಯಾದ ಯಾದವೀಕರಣದಿಂದಾಗಿ ದೂರ ಹೋಗಿವೆ. ಜೊತೆಗಿದ್ದ ಠಾಕೂರ್ ನಾಯಕ ರಘುವಂಶ ಪ್ರಸಾದ್ ಸಿಂಗ್‌ರನ್ನೂ ಲಾಲು ತಮ್ಮ ಪುತ್ರರಿಗಾಗಿ ದೂರ ಮಾಡಿದ್ದಾರೆ. ಸ್ವತಃ ಲಾಲು ಪರಮಾಪ್ತ, ಪುತ್ರ ತೇಜ್‌ಪ್ರತಾಪ್ ಯಾದವ್‌ಗೆ ಹೆಣ್ಣು ಕೊಟ್ಟಮಾವ ಚಂದ್ರಿಕಾರಾಯ್ ದೂರ ಹೋಗಿದ್ದಾರೆ. ತೇಜ್‌ಪ್ರತಾಪ್ ವಿರುದ್ಧ ಅವರ ಹೆಂಡತಿ ಐಶ್ವರ್ಯಾ ಚುನಾವಣೆಗೆ ನಿಲ್ಲುವ ಸಾಧ್ಯತೆಗಳಿವೆ. ಪುತ್ರ ತೇಜಸ್ವಿ, ತೇಜ್‌ಪ್ರತಾಪ್ ಮತ್ತು ಮಿಸಾ ಒಬ್ಬರ ಮುಖ ಒಬ್ಬರು ನೋಡೋಲ್ಲ. ಲಾಲು ಜೈಲು ಸೇರಿ ಆಸ್ಪತ್ರೆಯಲ್ಲಿದ್ದಾರೆ. ಪತ್ನಿ ರಾಬ್ಡಿ ದೇವಿಗೆ ಯಾದವ್ ಪಾಲಿಟಿಕ್ಸ್ ನಿಭಾಯಿಸೋದು ಕಷ್ಟವಾಗುತ್ತಿದೆ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ