‘ನಾನು ಚುನಾವಣೆಯಲ್ಲಿ ಸೋತೆ ಎಂದು ಹತಾಶನಾಗಿ ಮನೆಯಲ್ಲಿ ಕೂರುವ ಜಾಯಮಾನದವನಲ್ಲ. ಸಿದ್ಧಾಂತಕ್ಕೆ ಬದ್ಧನಾಗಿ ಕೆಲಸ ಮಾಡುವುದನ್ನು ಬಿಡುವ ಪ್ರಶ್ನೆಯೇ ಇಲ್ಲ’ ಎಂದು ಮಾಜಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಬೆಂಗಳೂರು (ಮೇ.15): ‘ನಾನು ಚುನಾವಣೆಯಲ್ಲಿ ಸೋತೆ ಎಂದು ಹತಾಶನಾಗಿ ಮನೆಯಲ್ಲಿ ಕೂರುವ ಜಾಯಮಾನದವನಲ್ಲ. ಸಿದ್ಧಾಂತಕ್ಕೆ ಬದ್ಧನಾಗಿ ಕೆಲಸ ಮಾಡುವುದನ್ನು ಬಿಡುವ ಪ್ರಶ್ನೆಯೇ ಇಲ್ಲ’ ಎಂದು ಮಾಜಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಒಳಮೈತ್ರಿ ನನ್ನ ಸೋಲಿಗೆ ನಾಂದಿ ಎಂದೂ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕ್ಷೇತ್ರದಲ್ಲಿ ಈಗ ಹೋಗಿ ಕೇಳಿದರೂ ಸಿ.ಟಿ.ರವಿ ಕೆಲಸ ಮಾಡಿಲ್ಲ ಎಂದು ಯಾರೂ ಹೇಳಲ್ಲ. ನಡವಳಿಕೆ ಸರಿಯಿಲ್ಲ ಎಂಬ ಕಾರಣಕ್ಕೆ ಸೋಲಿಸಿದ್ದೇವೆ ಎಂದು ಯಾರೂ ಹೇಳಲ್ಲ. ರಾಜಕೀಯ ನಾಯಕರಿಗೆ ಹೇಳಿದ ಹೇಳಿಕೆಯನ್ನು ಜಾತಿಗೆ ಜೋಡಿಸಿದ್ದು, ನಮ್ಮ ಅತಿಯಾದ ವಿಶ್ವಾಸ ಹಾಗೂ ಎಲ್ಲರನ್ನೂ ಎದುರಿಸಿ ಗೆಲ್ಲುವ ಸಾಮರ್ಥ್ಯವನ್ನು ನಾವು ಬೆಳೆಸಿಕೊಳ್ಳದಿರುವುದೇ ಸೋಲಿಗೆ ಕಾರಣ ಇರಬಹುದು’ ಎಂದು ತಮ್ಮ ಸೋಲಿನ ಪರಾಮರ್ಶೆ ಮಾಡಿದರು.
ಸಚಿವ ಸ್ಥಾನಕ್ಕೂ ಇನ್ನಿಲ್ಲದಂತೆ ಲಾಬಿ: 50ಕ್ಕೂ ಹೆಚ್ಚು ಶಾಸಕರಿಂದ ಸಚಿವ ಸ್ಥಾನದ ಮೇಲೆ ಕಣ್ಣು
‘ಗೆದ್ದು ಬೀಗುವವರು ಕೆಲವರು. ಸೋಲಿಸಿ ಸಂತೋಷಪಡುವವರು ಕೆಲವರು. ಈಗ ಅವರು ಗೆದ್ದು ಬೀಗುತ್ತಿದ್ದಾರೆ. ಸೋಲಿಸಿ ಸಂತೋಷಪಡುತ್ತಿದ್ದಾರೆ. ಇದು ಪ್ರಕೃತಿಯ ನಿಯಮ. ಪಕ್ಷಕ್ಕೆ ಬದ್ಧನಾಗಿ ನಿಷ್ಠುರವಾಗಿ ಎಲ್ಲರನ್ನೂ ಎದುರು ಹಾಕಿಕೊಂಡು ಪಕ್ಷದ ಪರ ಸಮರ್ಥನೆ ಮಾಡಿದ್ದೇ ನಿನಗೆ ವೈಯಕ್ತಿಕ ನಷ್ಟವಾಗಿದೆ ಎಂದು ಕೆಲವರು ಹೇಳಿದ್ದಾರೆ. ವೈಯಕ್ತಿಕ ಲಾಭ-ನಷ್ಟನೋಡಿ ನಾನು ರಾಜಕೀಯಕ್ಕೆ ಬಂದಿಲ್ಲ. ಪಕ್ಷಕ್ಕಾಗಿ ಕೆಲಸ ಮಾಡುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಭಗವಂತ ಬೇರೆ ರೂಪದಲ್ಲಿ ನನಗೆ ಅವಕಾಶ ನೀಡಬಹುದು ನೋಡೋಣ’ ಎಂದರು.
ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ: ‘ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಳೆದ ಬಾರಿ ಜೆಡಿಎಸ್ 38 ಸಾವಿರ ಮತ ಪಡೆದಿತ್ತು. ಈ ಬಾರಿ ಜೆಡಿಎಸ್ ಅಭ್ಯರ್ಥಿ 1,700 ಮತ ಪಡೆದಿದ್ದಾರೆ. ಇದು ಕದ್ದು-ಮುಚ್ಚಿ ಆಗಿರುವುದಲ್ಲ. ಎರಡೂ ಪಕ್ಷಗಳು ಅಧಿಕೃತವಾಗಿ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂಬುದನ್ನು ಹೊರತುಪಡಿಸಿ ಮುಕ್ತವಾಗಿದೆ. ಜೆಡಿಎಸ್ ಪಕ್ಷದವರು ಕಾಂಗ್ರೆಸ್ ವೇದಿಕೆಗಳಲ್ಲಿ ಕಾಂಗ್ರೆಸ್ ಪರವಾಗಿ ಕ್ಯಾಂಪೇನ್ ಮಾಡಿದರು. ನಾನು ಇದನ್ನು ಮೀರಿ ಗೆಲ್ಲುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕಿತ್ತು. ಇದೇ ನನ್ನ ಸೋಲಿಗೆ ಕಾರಣ. ಈ ಎಲ್ಲ ಪಿತೂರಿಗಳನ್ನು ಮೀರಿ ಗೆಲ್ಲುವುದರ ಬಗ್ಗೆ ಯೋಚಿಸಬೇಕಿತ್ತು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸೋಲಿನ ಕಾರಣ ಗುರುತಿಸಿ ಮುಂದೆ ಸಾಗೋಣ, ಇದು ಮೋದಿ ಸೋಲು ಅಲ್ಲ: ಬೊಮ್ಮಾಯಿ
‘ನಿರಂತರ ಗೆಲುವು, ನಿರಾಯಾಸನ ಗೆಲುವು ಸಿಗಲಿದೆ ಎಂಬ ಅತಿಯಾದ ಆತ್ಮವಿಶ್ವಾಸ ಹಾಗೂ ರವಿ ಅಣ್ಣಾನನ್ನು ಸೋಲಿಸುವವರು ಯಾರು ಎಂಬ ನಮ್ಮ ಕಾರ್ಯಕರ್ತರ ಮನಸ್ಥಿತಿ ಈ ಎಲ್ಲವೂ ನನ್ನ ಸೋಲಿಗೆ ಕಾರಣವಾಗಿದೆ. ಇದನ್ನು ಸಾರ್ವಜನಿಕವಾಗಿ ವಿಶ್ಲೇಷಣೆಗೆ ಒಳಪಡಿಸುವುದಕ್ಕಿಂತ ನಮ್ಮೊಳಗೆ ವಿಶ್ಲೇಷಣೆಗೆ ಒಳಪಡಿಸಿ, ತಪ್ಪು ತಿದ್ದುಕೊಳ್ಳುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.