12 ಸ್ಥಾನ ಗೆದ್ದರೆ ಬಿಜೆಪಿ ಇತಿಹಾಸ : ಮೊದಲ ಬಾರಿಗೆ ಅವಕಾಶ

By Kannadaprabha News  |  First Published Nov 10, 2021, 11:21 AM IST
  •  ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ನ 25 ಸ್ಥಾನಗಳಿಗೆ ಡಿ.10ರಂದು ನಡೆಯಲಿರುವ ಚುನಾವಣೆ
  • ಕನಿಷ್ಠ 12 ಸ್ಥಾನಗಳನ್ನು ಗೆದ್ದರೆ ರಾಜ್ಯ ಮೇಲ್ಮನೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ 

ಬೆಂಗಳೂರು (ನ.10):  ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಡಿ.10ರಂದು ನಡೆಯಲಿರುವ ಚುನಾವಣೆಯಲ್ಲಿ (Karnataka MLC Election) ಕನಿಷ್ಠ 12 ಸ್ಥಾನಗಳನ್ನು ಗೆದ್ದರೆ ರಾಜ್ಯ ಮೇಲ್ಮನೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಬಿಜೆಪಿಗೆ(BJP) ಸ್ಪಷ್ಟ ಬಹುಮತ ದೊರೆಯಲಿದೆ. 

ಮತ್ತೊಂದೆಡೆ, 23 ಸ್ಥಾನಗಳನ್ನು ಗಳಿಸಿದರೆ ಮಾತ್ರ ಕಾಂಗ್ರೆಸ್ಸಿಗೆ (Congress) ಬಹುಮತ ಪ್ರಾಪ್ತವಾಗಲಿದೆ. ವಿಧಾನ ಸಭೆಯಲ್ಲಿ (Karnataka Assembly ) ಸಂಖ್ಯಾಬಲ ಹೊಂದಿರುವ ಬಿಜೆಪಿಗೆ ಮೇಲ್ಮನೆಯಲ್ಲಿ ಬಹುಮತ ಎಂಬುದು ದಶಕಗಳಿಂದ ನಿಲುಕದ ನಕ್ಷತ್ರವಾಗಿದೆ. ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಪಕ್ಷದ ಪತಾಕೆ ಹಾರಿದರೂ ರಾಜ್ಯ ಮೇಲ್ಮನೆಯಲ್ಲಿ ಬಿಜೆಪಿಗೆ (BJP) ಸ್ಪಷ್ಟ ಸಂಖ್ಯಾಬಲ ಗಳಿಸಲು ಆಗಿಲ್ಲ. 

Tap to resize

Latest Videos

ಇದೀಗ 25 ಸ್ಥಾನಗಳಿಗೆ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆ (Election) ಆ ಪಕ್ಷದ ಪಾಲಿಗೆ ಬಹುಮತ ಗಳಿಸುವುದಕ್ಕೆ ಒಂದು ಅವಕಾಶ ರೂಪದಲ್ಲಿ ದೊರೆತಿದೆ. 

ಬಲಾಬಲ ಹೇಗಿದೆ? 75 ಸದಸ್ಯ ಬಲದ ವಿಧಾನ ಪರಿಷತ್‌ನಲ್ಲಿ ಬಹುಮತಕ್ಕೆ 38 ಸ್ಥಾನಗಳು ಬೇಕು. 32 ಸ್ಥಾನಗಳೊಂದಿಗೆ ಬಿಜೆಪಿ (BJP) ಅತಿದೊಡ್ಡ ಪಕ್ಷ ಎನಿಸಿಕೊಂಡಿದೆ. 29 ಸ್ಥಾನಗಳೊಂದಿಗೆ ಕಾಂಗ್ರೆಸ್ (Congress) ಎರಡನೇ ಸ್ಥಾನದಲ್ಲಿ ಹಾಗೂ 12 ಸದಸ್ಯರೊಂದಿಗೆ ಜೆಡಿಎಸ್ (JDS) ಮೂರನೇ ಸ್ಥಾನದಲ್ಲಿದೆ. ಒಬ್ಬ ಪಕ್ಷೇತರ ಸದಸ್ಯ ಹಾಗೂ ಸಭಾಪತಿ ಇದ್ದಾರೆ. 

ಈಗ 25 ಸ್ಥಾನಗಳು ತೆರವಾಗುತ್ತಿವೆ. ಆ ಪೈಕಿ ಬಿಜೆಪಿಯ 6, ಕಾಂಗ್ರೆಸ್ಸಿನ 14, ಜೆಡಿಎಸ್‌ನ 4 ಹಾಗೂ ಒಬ್ಬ ಪಕ್ಷೇತರ ಸದಸ್ಯರ ಅವಧಿ ಮುಗಿಯುತ್ತಿದೆ. ಇದರಿಂದಾಗಿ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಬಲ 26, ಕಾಂಗ್ರೆಸ್ಸಿನ ಸ್ಥಾನ 15, ಜೆಡಿಎಸ್ ಬಲ 8ಕ್ಕೆ ಇಳಿದಿದೆ.

 ಒಂದು ವೇಳೆ, 25 ಸ್ಥಾನಗಳ ಪೈಕಿ ಬಿಜೆಪಿ ಕನಿಷ್ಠ 12 ಸ್ಥಾನಗಳನ್ನು ಗೆದ್ದರೆ ಬಿಜೆಪಿಯ ಒಟ್ಟು ಸ್ಥಾನ 38ಕ್ಕೇರಲಿದ್ದು, ಬಹುಮತ ದೊರೆಯಲಿದೆ. ಬಹುಮತ ಗಳಿಸಲು ಕಾಂಗ್ರೆಸ್ 23 ಸ್ಥಾನಗಳನ್ನು ಗಳಿಸಬೇಕಾಗುತ್ತದೆ. ಜೆಡಿಎಸ್ ಎಲ್ಲ 25 ಸ್ಥಾನಗಳನ್ನೂ ಗೆದ್ದರೂ ಆ ಪಕ್ಷಕ್ಕೆ ಬಹುಮತ ದೊರೆಯುವು ದಿಲ್ಲ. ಏಕೆಂದರೆ ಜೆಡಿಎಸ್ ಬಲ 8ಕ್ಕೆ ಕುಸಿದಿದೆ. 

ಸಭಾಪತಿ ಸ್ಥಾನ ಯಾರಿಗೆ ಸಿಗಬಹುದು? ಮೇಲ್ಮನೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲದ ಕಾರಣ ಸಭಾಪತಿ ಚುನಾವಣೆ ವೇಳೆ ಬಿಜೆಪಿ - ಜೆಡಿಎಸ್ ನಡುವೆ ಒಪ್ಪಂದವೇರ್ಪಟ್ಟಿತ್ತು. ಕಾಂಗ್ರಸ್ ಅನ್ನು ದೂರವಿಡುವ ಉದ್ದೇಶದಿಂದ ಜೆಡಿಎಸ್‌ಗೆ ಬಿಜೆಪಿ ಸಭಾಪತಿ ಸ್ಥಾನವನ್ನೇ ಬಿಟ್ಟು ಕೊಟ್ಟಿತ್ತು. ಒಂದು ವೇಳೆ, 25 ಸ್ಥಾನಗಳ ಚುನಾವಣೆ ಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆತರೆ ತನ್ನ ಪಕ್ಷದ ಸದಸ್ಯರನ್ನೇ ಸಭಾಪತಿ ಮಾಡುವ ಅವಕಾಶ ದೊರೆಯುತ್ತದೆ. ಮೈತ್ರಿ ಧರ್ಮ ಪಾಲನೆಗೆ ಒತ್ತು ನೀಡಿದರೆ ಮಾತ್ರ ಹಾಲಿ ಸಭಾಪತಿ ಬಸವರಾಜ ಹೊರಟ್ಟಿ ಅವರ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇರುವುದಿಲ್ಲ. ಮತ್ತೊಂದೆಡೆ ಮೈತ್ರಿ ಮುಂದುವರಿಸಿ ಸಭಾಪತಿ ಸ್ಥಾನಕ್ಕೆ ಪಟ್ಟು ಹಿಡಿದು ಉಪ ಸಭಾಪತಿ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಸಂಭವವೂ ಇದೆ.

  •  ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ನ 25 ಸ್ಥಾನಗಳಿಗೆ ಡಿ.10ರಂದು ನಡೆಯಲಿರುವ ಚುನಾವಣೆ
  •  ಕನಿಷ್ಠ 12 ಸ್ಥಾನಗಳನ್ನು ಗೆದ್ದರೆ ರಾಜ್ಯ ಮೇಲ್ಮನೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ
  • ಮತ್ತೊಂದೆಡೆ, 23 ಸ್ಥಾನಗಳನ್ನು ಗಳಿಸಿದರೆ ಮಾತ್ರ ಕಾಂಗ್ರೆಸ್ಸಿಗೆ ಬಹುಮತ
  • ವಿಧಾನಸಭೆಯಲ್ಲಿ ಸಂಖ್ಯಾಬಲ ಹೊಂದಿರುವ ಬಿಜೆಪಿಗೆ ಮೇಲ್ಮನೆಯಲ್ಲಿ ಬಹುಮತ ಎಂಬುದು ದಶಕಗಳಿಂದ ನಿಲುಕದ ನಕ್ಷತ್ರ
click me!