ಕಾಂಗ್ರೆಸ್ಸಿಂದ ಸುಳ್ಳು ಕೇಸ್‌ ಕಿರುಕುಳ: ಡಿಜಿಪಿ ಅಲೋಕ್‌ಗೆ ಬಿಜೆಪಿ ದೂರು

Published : Sep 07, 2023, 04:14 AM IST
ಕಾಂಗ್ರೆಸ್ಸಿಂದ ಸುಳ್ಳು ಕೇಸ್‌ ಕಿರುಕುಳ: ಡಿಜಿಪಿ ಅಲೋಕ್‌ಗೆ ಬಿಜೆಪಿ ದೂರು

ಸಾರಾಂಶ

ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ನೇತೃತ್ವದ ಮುಖಂಡರ ನಿಯೋಗವು ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಅವರನ್ನು ಭೇಟಿ ಮಾಡಿ ದೂರು ನೀಡಿದ್ದು, ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿಯದಂತೆ ಮತ್ತು ಪ್ರಭಾವದಿಂದ ಕೆಲಸ ಮಾಡದಂತೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದೆ.

ಬೆಂಗಳೂರು(ಸೆ.07): ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಆದೇಶದ ಮೇರೆಗೆ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರ ವಿರುದ್ಧ ಪೊಲೀಸರಿಂದ ಬೆದರಿಕೆ, ಕಿರುಕುಳ ಮತ್ತು ದೌರ್ಜನ್ಯ ನಡೆಯುತ್ತಿದೆ. ಪೊಲೀಸರು ವೃತ್ತಿಪರ ನಡವಳಿಕೆ ತೋರಿಸಬೇಕು ಮತ್ತು ರಾಜಕೀಯ ಪ್ರಭಾವದಿಂದ ಕೆಲಸ ಮಾಡಬಾರದು ಎಂದು ಬಿಜೆಪಿ ಆಗ್ರಹಿಸಿದೆ.

ಈ ಸಂಬಂಧ ಬುಧವಾರ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ನೇತೃತ್ವದ ಮುಖಂಡರ ನಿಯೋಗವು ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಅವರನ್ನು ಭೇಟಿ ಮಾಡಿ ದೂರು ನೀಡಿದ್ದು, ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿಯದಂತೆ ಮತ್ತು ಪ್ರಭಾವದಿಂದ ಕೆಲಸ ಮಾಡದಂತೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದೆ.

ಸಂತೋಷಜಿ ನಿಮ್ಮ ಪಕ್ಷ ಸರಿ ಮಾಡಿಕೊಳ್ಳಿ, ಕಾಂಗ್ರೆಸ್‌ ಪಕ್ಷದ ಯೋಚನೆ ನಿಮಗ್ಯಾಕೆ?: ತಿಮ್ಮಾಪೂರ

ಬಿಜೆಪಿ ಕಾರ್ಯಕರ್ತರನ್ನು ಬೆದರಿಸಲು ಮತ್ತು ಕಿರುಕುಳ ನೀಡಲು ರಾಜಕೀಯ ಪ್ರೇರಿತವಾಗಿರುವ ನಾನ್‌ ಕಾಗ್ನಿಜಬಲ್‌, ಜಾಮೀನು ಮತ್ತು ಜಾಮೀನುರಹಿತ ಪ್ರಕರಣಗಳನ್ನು ರಾಜ್ಯಾದ್ಯಂತ ದಾಖಲಿಸಲಾಗುತ್ತಿದೆ. ಪೊಲೀಸರು ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಲು ಧಾವಿಸುತ್ತಿದ್ದು, ತಕ್ಷಣದಲ್ಲಿ ಬಂಧನಗಳನ್ನು ಮಾಡುತ್ತಿದ್ದಾರೆ. ಪೊಲೀಸರು ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ಅರ್ಧ ರಾತ್ರಿಯಲ್ಲಿ ಸಾಮಾನ್ಯ ಉಡುಪಿನಲ್ಲಿ ಬಂದು ಪಕ್ಷದ ಸದಸ್ಯರನ್ನು ಬಂಧಿಸಿ ಕರೆದೊಯ್ಯುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರ ರಾಜಕೀಯ ಸೇಡು ತೀರಿಸಿಕೊಳ್ಳಲು ಪೊಲೀಸ್‌ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮನವಿ ಪತ್ರದಲ್ಲಿ ಆರೋಪಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳನ್ನು ಭಯೋತ್ಪಾದನೆ ಮತ್ತು ರಾಷ್ಟ್ರೀಯ ವಿರೋಧಿ ಪ್ರಕರಣಗಳೆಂದು ತಪ್ಪಾಗಿ ಪರಿಗಣಿಸಲಾಗುತ್ತಿದೆ. ರಾಜಕೀಯ ಚಟುವಟಿಕೆಗಳನ್ನು ರಾಜಕೀಯವಾಗಿ ಎದುರಿಸಬೇಕೇ ಹೊರತು ಪೊಲೀಸ್‌ ಇಲಾಖೆಯ ಮೂಲಕ ಅಲ್ಲ. ಈ ನಡವಳಿಕೆಯನ್ನು ವಿರೋಧಿಸಿದಾಗ ಹಿರಿಯ ಅಧಿಕಾರಿಗಳ ಆದೇಶವನ್ನು ಪಾಲಿಸುತ್ತಿರುವುದಾಗಿ ಪೊಲೀಸರು ಅಸಹಾಯಕತೆಯನ್ನು ತೋರಿಸುತ್ತಿದ್ದಾರೆ. ರಾಜ್ಯಾದ್ಯಂತ ಕೆಲವು ಬಿಜೆಪಿ ಕಾರ್ಯಕರ್ತರನ್ನು ದೂರವಾಣಿ ಮೂಲಕ ಠಾಣೆಗೆ ಕರೆಸಲಾಗುತ್ತಿದೆ. ಸಿಸಿಬಿ ಅಧಿಕಾರಿಗಳು ಸ್ಥಳೀಯ ಪೊಲೀಸರ ಗಮನಕ್ಕೆ ತರದೆ ಕಾರ್ಯತಂತ್ರ ನಡೆಸುತ್ತಿದ್ದಾರೆ ಎಂದು ದೂರಲಾಗಿದೆ.

ನಾವು ರಾಜಕೀಯ ಪಕ್ಷವಾಗಿದ್ದು, ಸಂವಿಧಾನದ ವ್ಯಾಪ್ತಿಯಲ್ಲಿ ನಮ್ಮ ಪಾತ್ರವನ್ನು ನಿರ್ವಹಿಸುತ್ತಿದ್ದೇವೆ. ಕಾಂಗ್ರೆಸ್‌ನ ನಡೆಯನ್ನು ಸರಿಪಡಿಸುವ ಕ್ರಮ ಕೈಗೊಳ್ಳದಿದ್ದರೆ ಸಂವಿಧಾನದಡಿಯಲ್ಲಿ ನೀಡಿರುವ ಸ್ವಾತಂತ್ರ್ಯ ಮತ್ತು ರಕ್ಷಣೆಯನ್ನು ಕಾಪಾಡಲು ರಾಜ್ಯಾದ್ಯಂತ ಆಂದೋಲನವನ್ನು ಪ್ರಾರಂಭಿಸಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಲಾಗಿದೆ.

ರಿಪಬ್ಲಿಕ್‌ ಆಫ್‌ ಭಾರತ್‌, ಬಿಜೆಪಿಯರಿಗೆ ಲಾಭ ಆಗುತ್ತದೆ ಅಂದ್ರೆ ಏನು ಬೇಕಾದರೂ ಮಾಡ್ತಾರೆ, ಜಾರಕಿಹೊಳಿ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರವಿಕುಮಾರ್‌, ಬಿಜೆಪಿ ಕಾರ್ಯಕರ್ತರು ಮತ್ತು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಇರುವವರ ವಿರುದ್ಧ ಪೊಲೀಸ್‌ ದೌರ್ಜನ್ಯ ನಡೆಯುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುವಂತೆ ಪೊಲೀಸರು ಹೆದರಿಸುತ್ತಿದ್ದಾರೆ. ಈ ಕುರಿತು ಪೊಲೀಸ್‌ ಮಹಾನಿರ್ದೇಶಕರಿಗೆ ವಿವರಿಸಲಾಗಿದೆ. ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಹೀಗಾಗಿದೆ. ಪೊಲೀಸರು ತಮ್ಮ ಕರ್ತವ್ಯ ಹೊರತುಪಡಿಸಿ ಕರೆ ಮಾಡಿ ಬೆದರಿಸುವುದು, ಅನಗತ್ಯವಾಗಿ ಎಫ್‌ಐಆರ್‌ ಹಾಕುವುದನ್ನು ತಪ್ಪಿಸಲು ಸೂಚಿಸುವಂತೆ ಕೋರಲಾಗಿದೆ. ಕಾರ್ಯಕರ್ತರನ್ನು ಮತ್ತು ಮಾಧ್ಯಮದವರನ್ನು ಬೆದರಿಸದಂತೆ ತಿಳಿಸಿದ್ದೇವೆ. ಏನೇ ಇದ್ದರೂ ಪಕ್ಷಕ್ಕೆ ನೋಟಿಸ್‌ ಕೊಡಲು ಕೋರಿದ್ದೇವೆ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಡಿಜಿಪಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ನಿಯೋಗದಲ್ಲಿ ಶಾಸಕ ರವಿ ಸುಬ್ರಹ್ಮಣ್ಯ, ಮುಖಂಡರಾದ ಸಿದ್ದರಾಜು, ಜಗದೀಶ್‌ ಹಿರೇಮನಿ, ವಿವೇಕ್‌ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ದೂರಿನಲ್ಲಿ ಏನಿದೆ?

- ಬಿಜೆಪಿ ಕಾರ‍್ಯಕರ್ತರಿಗೆ ಕಿರುಕುಳ ನೀಡಲು ರಾಜಕೀಯ ಪ್ರೇರಿತ ಕೇಸು ದಾಖಲಿಸಲಾಗುತ್ತಿದೆ
- ರಾಜ್ಯಾದ್ಯಂತ ಕಾಗ್ನಿಜಿಬಲ್‌, ಜಾಮೀನು, ಜಾಮೀನುರಹಿತ ಪ್ರಕರಣಗಳನ್ನು ಹಾಕುತ್ತಿದ್ದಾರೆ
- ಪೊಲೀಸರು ಅರ್ಧರಾತ್ರಿಯಲ್ಲಿ ಸಮವಸ್ತ್ರವಿಲ್ಲದೆ ಬಿಜೆಪಿಗರ ಮನೆಗೆ ಬಂದು ಬಂಧಿಸುತ್ತಿದ್ದಾರೆ
- ಕಾಂಗ್ರೆಸ್‌ ಸರ್ಕಾರ ರಾಜಕೀಯ ಸೇಡು ತೀರಿಸಿಕೊಳ್ಳಲು ಪೊಲೀಸರ ದುರ್ಬಳಕೆ ಮಾಡಿಕೊಳ್ತಿದೆ
- ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳನ್ನು ಭಯೋತ್ಪಾದನೆ ಎಂಬಂತೆ ಸರ್ಕಾರ ಬಿಂಬಿಸುತ್ತಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ
ಸಿಎಂ ರೇಸಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಎಚ್‌ಕೆ, ಪರಂ, ಎಂಬಿಪಾ ಕೂಡ ಅರ್ಹ ಇದ್ದಾರೆ: ಕೆ.ಎನ್‌.ರಾಜಣ್ಣ