ಸಿಂದಗಿ, ಹಾನಗಲ್‌ ಬಿಜೆಪಿ ಅಭ್ಯರ್ಥಿಗಳು ಇಂದು ಫೈನಲ್‌?

By Kannadaprabha News  |  First Published Oct 3, 2021, 7:13 AM IST

*  ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ ಇಂದು: ಉಪಸಮರ ಬಗ್ಗೆ ಚರ್ಚೆ
*  ಭೂಸನೂರ್‌ಗೆ ಸಿಂದಗಿ ಟಿಕೆಟ್‌ ನಿರೀಕ್ಷೆ
*  ಉದಾಸಿ ಸೊಸೆಗೂ ಸಿಗುತ್ತಾ?
 


ಬೆಂಗಳೂರು(ಅ.03):  ವಿಜಯಪುರ ಜಿಲ್ಲೆ ಸಿಂದಗಿ(Sindagi) ವಿಧಾನಸಭಾ ಕ್ಷೇತ್ರದಿಂದ ಮಾಜಿ ಶಾಸಕ ರಮೇಶ್‌ ಭೂಸನೂರು ಅವರಿಗೆ ಬಿಜೆಪಿ ಟಿಕೆಟ್‌ ನೀಡುವ ನಿರೀಕ್ಷೆಯಿದ್ದು, ಹಾವೇರಿ ಜಿಲ್ಲೆ ಹಾನಗಲ್‌(Hanagal) ವಿಧಾನಸಭಾ ಕ್ಷೇತ್ರದಿಂದ ಸಂಸದ ಶಿವಕುಮಾರ್‌ ಉದಾಸಿ ಪತ್ನಿ ರೇವತಿ ಅವರಿಗೆ ಟಿಕೆಟ್‌ ನೀಡಬೇಕೆ ಅಥವಾ ಬೇಡವೆ ಎಂಬುದರ ಬಗ್ಗೆ ಭಾನುವಾರ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.

ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಗೆಲುವೊಂದೇ ಮುಖ್ಯ ಎಂಬ ನಿಲವಿಗೆ ಬಂದಿರುವ ಬಿಜೆಪಿ(BJP) ನಾಯಕರು ಹಿರಿಯ ಶಾಸಕರಾಗಿದ್ದ ಸಿ.ಎಂ.ಉದಾಸಿ ಅವರ ನಿಧನದ ಅನುಕಂಪದ ಲಾಭ ಪಡೆದುಕೊಳ್ಳಲು ಅವರ ಸೊಸೆಯೂ ಆಗಿರುವ ರೇವತಿ ಅವರಿಗೆ ಟಿಕೆಟ್‌ ನೀಡುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Latest Videos

undefined

ಹಾನಗಲ್ ಉಪಸಮರ : ಶಿವಕುಮಾರ್ ಉದಾಸಿ/ಪತ್ನಿಗೆ ಟಿಕೆಟ್‌ ಕೊಟ್ಟರೆ ಪರಿಣಾಮವೇನು?

ಭಾನುವಾರ ಮಧ್ಯಾಹ್ನ ಬಿಜೆಪಿಯ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ ಕಮಿಟಿ ಸಭೆ ನಡೆಯಲಿದ್ದು, ಉಭಯ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌(Arun Singh) ಅವರು ಭಾನುವಾರ ಬೆಳಗ್ಗೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದು, ಕೋರ್‌ ಕಮಿಟಿ ಸಭೆಗೂ ಮುನ್ನ ಪಕ್ಷದ ಹಿರಿಯ ನಾಯಕರೊಂದಿಗೆ ಒಂದು ಸುತ್ತಿನ ಸಮಾಲೋಚನೆ ನಡೆಸಲಿದ್ದಾರೆ. ಬಳಿಕ ಕೋರ್‌ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಲಿದ್ದಾರೆ.

ಕುಟುಂಬ ರಾಜಕಾರಣಕ್ಕೆ ಆಸ್ಪದ ನೀಡಬಾರದು ಎಂಬ ತಾತ್ವಿಕ ಚಿಂತನೆಯನ್ನು ಬಿಜೆಪಿ ಇತ್ತೀಚೆಗೆ ರೂಢಿಸಿಕೊಂಡಿದ್ದರೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ(Byelection) ಅದನ್ನು ದೂರ ಇಟ್ಟು ಅಗಲಿದ ನಾಯಕ ಸುರೇಶ್‌ ಅಂಗಡಿ ಪತ್ನಿ ಮಂಗಳಾ ಅಂಗಡಿ ಅವರಿಗೇ ಟಿಕೆಟ್‌ ನೀಡಿತ್ತು. ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ಅದನ್ನು ಮುಂದುವರೆಸುವ ಸಂಭವ ಕಂಡು ಬರುತ್ತಿದೆ. ಹೊಸಬರಿಗೆ ಟಿಕೆಟ್‌ ಕೊಟ್ಟು ‘ರಿಸ್ಕ್‌’ ತೆಗೆದುಕೊಳ್ಳುವ ಬದಲು ಸಿ.ಎಂ.ಉದಾಸಿ ಅವರ ಸೊಸೆಗೆ ಟಿಕೆಟ್‌ ನೀಡಿದಲ್ಲಿ ಗೆಲುವು ಸುಲಭವಾಗಬಹುದೇನೊ ಎಂಬ ಚಿಂತನೆಯನ್ನು ಹಾವೇರಿ ಜಿಲ್ಲೆಯವರೇ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತಿತರರು ಹೊಂದಿದ್ದಾರೆ. ಮೇಲಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇದಕ್ಕೆ ಸಹಮತ ಸೂಚಿಸಬಹುದು ಎನ್ನಲಾಗಿದೆ.

click me!