ರಾಜ್ಯ ಬಿಜೆಪಿ ಅಭ್ಯರ್ಥಿಗಳ ಪೈಕಿ ಸಂಭಾವ್ಯರ ಪಟ್ಟಿ ಸಿದ್ಧವಾಗಿದ್ದು ಏ.8ರಂದು ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರು (ಏ.04): ರಾಜ್ಯದಲ್ಲಿ ಅತ್ಯಂತ ಕುತೂಹಲ ಕೆರಳಿಸಿರುವ ಆಡಳಿತಾರೂಢ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪಟ್ಟಿ ಈಗಾಗಲೇ ಸಿದ್ಧಗೊಂಡಿದೆ. ಈಗಾಗಲೇ ಸಂಭಾವ್ಯರ ಪಟ್ಟಿಯನ್ನು ಕೇಂದ್ರದ ಬಿಜೆಪಿ ಸಂಸದೀಯ ಮಂಡಳಿಗೆ ಕಳುಹಿಸಲಾಗಿದ್ದು, ಏ.8 ರಂದು ಅಥವಾ ಏ.9 ರಂದು ಮೊದಲ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಏ.8 ಅಥವಾ ಏ.9ರಂದು ಬಿಡುಗಡೆ ಮಾಡಲಾಗುತ್ತದೆ. ಕೇಂದ್ರ ಸಂಸದೀಯ ಮಂಡಳಿಗೆ ಈಗಾಗಲೇ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಕಳುಹಿಸಲಾಗಿದೆ. ಮುಂದಿನ ಎರಡು ದಿನಗಳ ಕಾಲ ರಾಜ್ಯದಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಇದಾದ ನಂತರ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಇನ್ನು ಮೊದಲ ಪಟ್ಟಿಯಲ್ಲಿ ಯಾವುದೇ ಗೊಂದಲಗಳು ಇರದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ನಂತರ, 2ನೇ ಪಟ್ಟಿಯಲ್ಲಿ ಗೊಂದಲವಿರುವ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
15 ಜಿಲ್ಲೆಗಳ ಬಿಜೆಪಿ ಕೋರ್ ಕಮಿಟಿ ಸಭೆ, ಯಾವ ಕ್ಷೇತ್ರದಲ್ಲಿ ಟಿಕೆಟ್ ಫೈಟ್?
ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆ: ಈ ಬಾರಿ ಚುನಾವಣೆ ಸಂದರ್ಭದಲ್ಲಿಯೇ ಸಂಪೂರ್ಣ ಬಹುಮತ ಪಡೆಯಬೇಕು ಎಂದು ಬಿಜೆಪಿ ಕಸರತ್ತು ನಡೆಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಳೆದು ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬರಲೇಬೇಕು ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ರಾಜ್ಯಕ್ಕೆ ಆಗಿಂದಾಗ್ಗೆ ಭೇಟಿ ನೀಡಿ ಪ್ರಚಾರ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮಗಳನ್ನು ನರೆವೇರಿಸಿದ್ದಾರೆ.
ಜಿಲ್ಲಾವಾರು ಕೋರ್ ಕಮಿಟಿ ಸಭೆ: ಪ್ರಸಕ್ತ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಪ್ರತಿ ವಿಧಾನಸಭಾ ಕ್ಷೇತ್ರದ ಸ್ಥಳೀಯ ಮುಖಂಡರು ಹಾಗೂ ಪದಾಧಿಕಾರಿಗಳಿಂದ ಮತದಾನ ಮಾದರಿಯಲ್ಲಿ ಅಭಿಪ್ರಾಯ ಸಂಗ್ರಹಿಸಿದ ಮರು ದಿನವಾದ ಶನಿವಾರ ಜಿಲ್ಲಾ ಕೋರ್ ಕಮಿಟಿಗಳ ಸದಸ್ಯರೊಂದಿಗೆ ರಾಜ್ಯ ಕೋರ್ ಕಮಿಟಿ ಸದಸ್ಯರು ಸಮಾಲೋಚನೆ ನಡೆಸಿದ್ದಾರೆ. ನಗರದ ಹೊರವಲಯದ ಗೋಲ್ಡನ್ ಪಾಮ್ ರೆಸಾರ್ಚ್‌ನಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ನಡೆದ ಸಭೆಯಲ್ಲಿ ರಾಜ್ಯ ಘಟಕದ ಹಿರಿಯ ನಾಯಕರು ಒಟ್ಟು 39 ಸಂಘಟನಾತ್ಮಕ ಜಿಲ್ಲೆಗಳ ಪೈಕಿ ಸುಮಾರು 19 ಸಂಘಟನಾತ್ಮಕ ಜಿಲ್ಲೆಗಳ ಕೋರ್ ಕಮಿಟಿಗಳ ಸದಸ್ಯರೊಂದಿಗೆ ಚರ್ಚಿಸಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ವೇಗ ನೀಡಿದರು.
ಖಾನಾಪುರದಲ್ಲಿ ಒಂದಾದ ಕಮಲ ಕಲಿಗಳು: ಕೈ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್‌ಗೆ ಬಿಗ್ ಶಾಕ್!
ಕೆಲವು ಕ್ಷೇತ್ರದಲ್ಲಿ ಹೊಸಬರಿಗೆ ಟಿಕೆಟ್: ಜಿಲ್ಲಾ ಕೋರ್ ಕಮಿಟಿಗೆ ಹೆಚ್ಚೂ ಕಡಮೆ ಅರ್ಧ ಗಂಟೆ ಸಮಯ ನೀಡಲಾಗಿತ್ತು. ಹೆಚ್ಚು ಕ್ಷೇತ್ರಗಳನ್ನು ಒಳಗೊಂಡಿರುವ ಜಿಲ್ಲೆಗಳ ಕೋರ್ ಕಮಿಟಿಗಳ ಸದಸ್ಯರು ಹೆಚ್ಚು ಸಮಯ ತೆಗೆದುಕೊಂಡು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಕೆಲವು ಕ್ಷೇತ್ರಗಳಲ್ಲಿ ಪಕ್ಷದ ಹಾಲಿ ಶಾಸಕರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವುದು ಸೂಕ್ತ ಎಂಬ ಅಭಿಪ್ರಾಯವೂ ಕೇಳಿಬಂದಿದೆ ಎನ್ನಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಹಿರಿಯ ನಾಯಕರು ಪಾಲ್ಗೊಂಡಿದ್ದ ಈ ಸಭೆ ಭಾನುವಾರವೂ ಮುಂದುವರೆದು ಇತರ ಜಿಲ್ಲೆಗಳ ಕೋರ್ ಕಮಿಟಿ ಸದಸ್ಯರೊಂದಿಗೆ ಮಾತುಕತೆ ನಡೆಸಲಿದ್ದಾರೆ.