ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ, ಮೋದಿಯೇ ಗೇಮ್‌ಚೇಂಜರ್‌: ಜೀ-ಮ್ಯಾಟ್ರಿಜ್‌ ಸಮೀಕ್ಷೆ

By Kannadaprabha NewsFirst Published May 2, 2023, 7:58 AM IST
Highlights

ಜೀ-ಮ್ಯಾಟ್ರಿಜ್‌ ಚುನಾವಣಾ ಪೂರ್ವ ಸಮೀಕ್ಷಾ ವರದಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ತನ್ನ ಸಮೀಕ್ಷೆಯಲ್ಲಿ ತಿಳಿಸಿದೆ.

ನವದೆಹಲಿ (ಮೇ.2): ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದ ಅಬ್ಬರ ಮುಗಿಲು ಮುಟ್ಟಿರುವ ಹೊತ್ತಿನಲ್ಲೇ, ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಮರಳುವ ಸಾಧ್ಯತೆ ಇದೆ. ಕಾಂಗ್ರೆಸ್‌ ತನ್ನ ಬಲ ವೃದ್ಧಿಸಿಕೊಂಡರೂ ಗೆಲುವಿನ ದಡ ಏರಲು ವಿಫಲವಾಗಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಯೊಂದು ಹೇಳಿದೆ. ಜೀ ಸುದ್ದಿವಾಹಿನಿಯು ಮ್ಯಾಟ್ರಿಜ್‌ ಜೊತೆಗೂಡಿ ರಾಜ್ಯದ 1.80 ಲಕ್ಷ ಪುರುಷರು ಮತ್ತು 1.12 ಲಕ್ಷ ಮಹಿಳೆಯರನ್ನು ಸಂದರ್ಶಿಸಿ ಸಮೀಕ್ಷಾ ವರದಿಯನ್ನು ಸಿದ್ಧಪಡಿಸಿದೆ. ಈ ವರದಿಯನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ.

ಯಾರಿಗೆ ಎಷ್ಟುಸ್ಥಾನ?: ಸಮೀಕ್ಷೆ ಅನ್ವಯ ಭಾರತೀಯ ಜನತಾ ಪಕ್ಷ 103-115 ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್‌ 79-91, ಜೆಡಿಎಸ್‌ 26-36, ಹಾಗೂ ಇತರರು 1-3 ಗೆಲ್ಲಲಿದ್ದಾರೆ. ಈ ಬಾರಿ ಬಿಜೆಪಿ ಶೇ.42, ಕಾಂಗ್ರೆಸ್‌ ಶೇ.40, ಜೆಡಿಎಸ್‌ ಶೇ.15 ಮತ್ತು ಇತರರು ಶೇ.3ರಷ್ಟುಮತ ಪಡೆಯಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ. 224 ಸದಸ್ಯಬಲದ ಕರ್ನಾಟಕ ವಿಧಾನಸಭೆಯಲ್ಲಿ ಬಹುಮತಕ್ಕೆ 113 ಸ್ಥಾನಗಳ ಅಗತ್ಯವಿದೆ. ಕಳೆದ ಬಾರಿ ಬಿಜೆಪಿ 104, ಕಾಂಗ್ರೆಸ್‌ 80, ಜೆಡಿಎಸ್‌ 37 ಸ್ಥಾನ ಗೆಲ್ಲುವಲ್ಲಿ ಸಫಲವಾಗಿದ್ದವು.

ಲಿಂಗಾಯತ ಬೆಂಬಲ ಬಿಜೆಪಿಗೆ: ಲಿಂಗಾಯತ ನಾಯಕರ ವಲಸೆ, ಮೀಸಲು ಗದ್ದಲದ ಹೊರತಾಗಿಯೂ ಲಿಂಗಾಯತ ಸಮುದಾಯ ಬಿಜೆಪಿಯನ್ನೇ ಹೆಚ್ಚು ಬೆಂಬಲಿಸಲಿದೆ. ಲಿಂಗಾಯತ ಸಮುದಾಯದ ಪೈಕಿ ಶೇ.66ರಷ್ಟುಜನರು ಬಿಜೆಪಿ, ಶೇ.16ರಷ್ಟುಜನರು ಕಾಂಗ್ರೆಸ್‌ ಮತ್ತು ಶೇ.8ರಷ್ಟುಜನರು ಜೆಡಿಎಸ್‌ ಮತ್ತು ಶೇ.10ರಷ್ಟುಜನರು ಇತರರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.

ಒಕ್ಕಲಿಗರ ಮತ ಜೆಡಿಎಸ್‌ಗೆ: ಒಕ್ಕಲಿಗರ ಸಮುದಾಯದ ಶೇ.52ರಷ್ಟುಜನ ಜೆಡಿಎಸ್‌ಗೆ, ಶೇ.28ರಷ್ಟುಜನರು ಕಾಂಗ್ರೆಸ್‌ಗೆ, ಶೇ.16ರಷ್ಟುಜನರು ಬಿಜೆಪಿಗೆ ಮತ್ತು ಶೇ.4ರಷ್ಟುಜನರು ಇತರರಿಗೆ ಮತ ಹಾಕುವುದಾಗಿ ಹೇಳಿದ್ದಾರೆ.

ಮೋದಿ ಗೇಮ್‌ಚೇಂಜರ್‌: ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಬದಲಿಸುವ ಶಕ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಪ್ರಚಾರದಲ್ಲಿ ಮೋದಿ ಭಾಗಿ ಬಿಜೆಪಿ ಪಾಲಿಗೆ ಗೇಮ್‌ಚೇಂಜ್‌ ಆಗಿರಲಿದೆ ಎಂದು ಶೇ.44ರಷ್ಟುಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.34ರಷ್ಟುಜನರು ಮೋದಿ ಭಾಗಿ ಭಾಗಶಃ ನೆರವಾಗಲಿದೆ ಎಂದಿದ್ದರೆ ಶೆ.22ರಷ್ಟುಜನರು ಇದಕ್ಕೆ ಸಹಮತ ವ್ಯಕ್ತಪಡಿಸಿಲ್ಲ. ಜೊತೆಗೆ ರಾಹುಲ್‌ ಗಾಂಧಿ ಕೈಗೊಂಡ ದೇಶವ್ಯಾಪಿ ಭಾರತ್‌ ಜೋಡೋ ಯಾತ್ರೆ ಚುನಾವಣೆ ಮೇಲೆ ಹೆಚ್ಚಿನ ಪರಿಣಾಮ ಬೀರದು ಎಂದು ಮತದಾರರು ಹೇಳಿದ್ದಾರೆ.

ಸಿಎಂ ಗಾದಿಗೆ ಬೊಮ್ಮಾಯಿ ನಂ.1 ಆಯ್ಕೆ: ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಪ್ರಶ್ನೆಗೆ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ. ನಂತರದ ಆಯ್ಕೆಯಾಗಿ ಕ್ರಮವಾಗಿ ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್‌ ಸ್ಥಾನ ಪಡೆದಿದ್ದಾರೆ.

ಬೊಮ್ಮಾಯಿ ಬಗ್ಗೆ ಶೇ.30ರಷ್ಟು ಜನರ ತೃಪ್ತಿ: ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರ ಆಡಳಿತದ ಬಗ್ಗೆ ಶೇ.30ರಷ್ಟುಜನರು ತೃಪ್ತಿ ವ್ಯಕ್ತಪಡಿಸಿದ್ದಾರೆ. ಶೇ.41ರಷ್ಟುಜನರು ಭಾಗಶಃ ಮತ್ತು ಶೇ.29ರಷ್ಟುಜನರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ನಾನು ರಾಜಕೀಯಕ್ಕೆ ಬಂದಾಗ ಧರ್ಮೇಂದ್ರ ಇನ್ನೂ ರಾಜಕೀಯಕ್ಕೆ ಬಂದಿರಲಿಲ್ಲ

ಖರ್ಗೆ ವಿಷ ಸರ್ಪ ಹೇಳಿಕೆಯಿಂದ ಬಿಜೆಪಿಗೆ ಲಾಭ: ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷ ಸರ್ಪಕ್ಕೆ ಹೋಲಿಸಿ ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆಯು ಬಿಜೆಪಿಗೆ ಲಾಭ ತರಲಿದೆ ಶೇ.56ರಷ್ಟುಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.32ರಷ್ಟುಜನರು ಈ ಹೇಳಿಕೆಯಿಂದ ಕಾಂಗ್ರೆಸ್‌ಗೆ ನಷ್ಟವಾಗದು ಎಂದಿದ್ದರೆ, ಶೇ.12ರಷ್ಟುಜನರು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ.

ಅಂಬಾದೇವಿಯ ಆಶೀರ್ವಾದದಿಂದ ಅದೊಂದು ಆದ್ರೆ ಸವದಿ ಹೆಣ ಬಿದ್ದಂಗೆ ಲೆಕ್ಕ

ಬಿಜೆಪಿ-ಜೆಡಿಎಸ್‌ ಚುನಾವಣೋತ್ತರ ಮೈತ್ರಿಗೆ ಜೈ: ಒಂದು ವೇಳೆ ಅತಂತ್ರ ವಿಧಾನಸಭೆ ರಚನೆಯಾದರೆ ಬಿಜೆಪಿ- ಜೆಡಿಎಸ್‌ ನೇತೃತ್ವದ ಸರ್ಕಾರ ಮೈತ್ರಿ ಸರ್ಕಾರ ರಚನೆಗೆ ಶೇ.54ರಷ್ಟು ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

click me!