ಮೋದಿ ಏಕಚಕ್ರಾಧಿಪತ್ಯ, ಬಿಜೆಪಿ, ನಿತೀಶ್‌ ಕುಮಾರ್ ಒಳ ರಾಜಕಾರಣವಿದು!

By Kannadaprabha NewsFirst Published Oct 9, 2020, 4:27 PM IST
Highlights

ರಾಜರಾಜೇಶ್ವರಿನಗರದ ಬಿಜೆಪಿ ಅಭ್ಯರ್ಥಿ ಆಯ್ಕೆ ಬಗ್ಗೆ ಮೋದಿ ಅವರಿದ್ದ ಕೇಂದ್ರೀಯ ಚುನಾವಣಾ ಸಮಿತಿ ಸಭೆಯಲ್ಲಿ ಚರ್ಚೆ ಆಗಿದೆ. ಆದರೂ ನಡ್ಡಾ ಅವರು ಇನ್ನೊಂದಿಷ್ಟುಚರ್ಚೆ ನಡೆಸಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ತೀರ್ಮಾನವಾಗಿದೆ.

ನವದೆಹಲಿ (ಅ. 09): ದಿಲ್ಲಿಯಲ್ಲಿ ಮೋದಿ ಕಾರಣದಿಂದ ಏಕ ಚಕ್ರಾಧಿಪತ್ಯ ಸ್ಥಾಪನೆ ಆದ ನಂತರ ಮಿತ್ರರಿಗೂ ಬಿಜೆಪಿಗೂ ಅಷ್ಟಕಷ್ಟೇ. ಕೆಲವರು ಬಿಜೆಪಿಯಿಂದ ಬೇಸತ್ತು ತಾವೇ ದೂರ ಹೋದರೆ, ಇನ್ನುಳಿದವರಿಗೆ ಬಿಜೆಪಿಯೇ ನಮಸ್ತೆ ಹೇಳಿದೆ.

ಬಹುಕಾಲದ ಮಿತ್ರರಾದ ಅಕಾಲಿದಳ ಮತ್ತು ಶಿವಸೇನೆ ಮೈತ್ರಿಯಿಂದ ತಮಗೇನು ಉಪಯೋಗವಿಲ್ಲ ಎಂದು ದೂರ ಹೋದರೆ ಬಿಹಾರದಲ್ಲಿ ಚುನಾವಣೆ ನಂತರ ಬಿಜೆಪಿ ಮತ್ತು ಜೆಡಿಯು ಮೈತ್ರಿ ಕೂಡ ಉಳಿಯುವ ಲಕ್ಷಣಗಳು ಕಾಣುತ್ತಿಲ್ಲ. ಚುನಾವಣೆಗೆ ಬಿಜೆಪಿ ಮತ್ತು ಜೆಡಿಯು ತಲಾ 122 ಸೀಟು ಹಂಚಿಕೊಂಡಿವೆ ನಿಜ. ಆದರೆ ಯಾರ ಸೀಟು ಜಾಸ್ತಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿದ್ದು, ಇದಕ್ಕಾಗಿ ಬಿಜೆಪಿ ಜೆಡಿಯುಗಿಂತ ಹತ್ತಾದರೂ ಸೀಟು ಹೆಚ್ಚು ತೆಗೆದುಕೊಳ್ಳಲು ಪಾಸ್ವಾನರ ಲೋಕ ಜನಶಕ್ತಿ ಪಕ್ಷ ವನ್ನು ಬಳಸಿಕೊಳ್ಳುತ್ತಿದೆ.

ನಿನ್ನೆ ಪಾಸ್ವಾನ್‌ ನಿಧನದ ನಂತರ ಲೋಕ ಜನಶಕ್ತಿಗೆ ಅನುಕಂಪದ ಲಾಭವೂ ಸಿಗಲಿದೆ. ಅಂದಹಾಗೆ ಎಲ್‌ಜೆಪಿ 50 ಸೀಟುಗಳಲ್ಲಿ ಮೋದಿ ಮತ್ತು ರಾಮ ವಿಲಾಸ್‌ ಪಾಸ್ವಾನರ ಫೋಟೋ ಹಾಕಿಕೊಂಡು ಕೇವಲ ಜೆಡಿಯು ವಿರುದ್ಧ ಸ್ಪರ್ಧಿಸಲಿದೆ. ಎಷ್ಟುಸೀಟು ನಿತೀಶ್‌ ಕುಮಾರ್‌ ಕಳೆದುಕೊಳ್ಳುತ್ತಾರೋ, ಅಷ್ಟುಬಿಜೆಪಿಗೆ ಲಾಭ. ಯಾವತ್ತಿಗೂ ರಾಜ ಪ್ರಬಲನಾಗಿ ಚಕ್ರವರ್ತಿ ಆದಾಗ ಶತ್ರುಗಳ ಜೊತೆಗೆ ಅಧಿಕಾರ ಕಳೆದುಕೊಳ್ಳುವುದು ಮಿತ್ರರಾಗಿದ್ದ ಮಾಂಡಲಿಕರು ತಾನೇ?

ಬಿಹಾರ ವಿಧಾನಸಬಾ ಚುನಾವಣೆ: ಲಾಲುಗೆ ಇದು ಕಡೆ ಚುನಾವಣೆ, ನಿತೀಶ್ ಕುಮಾರ್‌ಗೆ ಅಪಾಯ!

ರತ್ನ ಮತ್ತು ರಾಜು

ರಾಜರಾಜೇಶ್ವರಿನಗರದ ಬಿಜೆಪಿ ಅಭ್ಯರ್ಥಿ ಆಯ್ಕೆ ಬಗ್ಗೆ ಮೋದಿ ಅವರಿದ್ದ ಕೇಂದ್ರೀಯ ಚುನಾವಣಾ ಸಮಿತಿ ಸಭೆಯಲ್ಲಿ ಚರ್ಚೆ ಆಗಿದೆ. ಆದರೂ ನಡ್ಡಾ ಅವರು ಇನ್ನೊಂದಿಷ್ಟುಚರ್ಚೆ ನಡೆಸಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ತೀರ್ಮಾನವಾಗಿದೆ. ಸಂತೋಷ್‌ ಅವರಿಗೆ ತುಳಸಿ ಮುನಿರಾಜುಗೆ ಟಿಕೆಟ್‌ ಕೊಡಬೇಕು ಎಂಬ ಮನಸ್ಸಿದೆ. ಆದರೆ ಆಗ ಮುನಿರತ್ನ ಪಕ್ಷೇತರವಾಗಿ ಸ್ಪರ್ಧಿಸಿದರೆ ಗೆಲ್ಲೋದು ಕಷ್ಟಎಂಬ ಅಭಿಪ್ರಾಯವಿದೆ. ಯಡಿಯೂರಪ್ಪ ನಾನು ಭರವಸೆ ಕೊಟ್ಟಿದ್ದೇನೆ, ಮುನಿರತ್ನಗೇ ಟಿಕೆಟ್‌ ಕೊಡಿ ಎಂದು ನಡ್ಡಾ ಅವರಿಗೆ ಫೋನ್‌ ಮೇಲೆ ಫೋನ್‌ ಮಾಡುತ್ತಿದ್ದಾರೆ. ಒಮ್ಮೆ ಮುನಿರತ್ನ ಮತ್ತು ಮುನಿರಾಜುರನ್ನು ಎದುರುಬದುರು ಕೂರಿಸಿಯೇ ಟಿಕೆಟ್‌ ಘೋಷಣೆ ಮಾಡುವ ಸಾಧ್ಯತೆ ಜಾಸ್ತಿ ಇವೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

click me!