Bagalkot: ತೇರದಾಳ ಕ್ಷೇತ್ರದ ಟಿಕೆಟ್‌ಗಾಗಿ ಹಾಲಿ ಮತ್ತು ಮಾಜಿಗಳಿಂದ ಬಿಗ್‌ ಫೈಟ್‌

By Sathish Kumar KH  |  First Published Dec 21, 2022, 7:08 PM IST

ಬಿಜೆಪಿ ಮತ್ತು ಕಾಂಗ್ರೆಸ್​​ನಲ್ಲಿ ಟಿಕೆಟ್​ಗಾಗಿ ಈಗಿಂದಲೇ ನಿಲ್ಲದ ಪೈಪೋಟಿ
ತೇರದಾಳದಲ್ಲಿ ಹಾಲಿ ಶಾಸಕ ಸಿದ್ದು ಸವದಿ ಬಿಟ್ಟು ನೇಕಾರರಿಗೆ ಬಿಜೆಪಿ ಟಿಕೆಟ್‌ ನೀಡಯುವಂತೆ ಪಟ್ಟು.
ಕಾಂಗ್ರೆಸ್​​ನಲ್ಲಿ ಮಾಜಿ ಸಚಿವೆ ಉಮಾಶ್ರೀಗೆ ಬಿಟ್ಟು ಸ್ಥಳೀಯ ನಾಯಕರಿಗೆ ಟಿಕೆಟ್​ ನೀಡುವಂತೆ ಒತ್ತಡ


ವರದಿ - ಮಲ್ಲಿಕಾರ್ಜುನ ಹೊಸಮನಿ ಏಷ್ಯಾನೆಟ್​ ಸುವರ್ಣನ್ಯೂಸ್ 

ಬಾಗಲಕೋಟೆ (ಡಿ.21): ರಾಜ್ಯದಲ್ಲಿ ಅತಿಹೆಚ್ಚು ನೇಕಾರರು ಇರುವ ವಿಧಾನಸಭಾ ಮತಕ್ಷೇತ್ರಗಳ ಪೈಕಿ ಒಂದು. ರಾಜಕೀಯವಾಗಿ ಇಲ್ಲಿ ಮೇಲಿಂದ ಮೇಲೆ ನೇಕಾರರಿಗೆ ಮನ್ನಣೆ ನೀಡಿ ಅನ್ನೋ ಕೂಗು ಕೇಳುತ್ತಲೇ ಇತ್ತು, ಇವುಗಳ ಮಧ್ಯೆ ಕಾಂಗ್ರೆಸ್​ ನೇಕಾರರಿಗೆ ಮಣೆ ಹಾಕಿ ಒಮ್ಮೆ ಗೆಲುವು ಕಂಡು ಇನ್ನೊಮ್ಮೆ ಸೋಲು ಕಂಡಿದ್ದು ಆಯ್ತು, ಆದ್ರೆ ಬಿಜೆಪಿಯಲ್ಲಿ ಮಾತ್ರ ಪ್ರತಿಬಾರಿ ನೇಕಾರರಿಗೆ ಸ್ಪರ್ಧೆಗೆ ಅವಕಾಶ ಕೊಡಿ ಎಂಬ ಕೂಗು ಇದ್ರೂ ಇದೂವರೆಗೂ ಬಿಜೆಪಿ ಮನ್ನಣೆ ನೀಡಿಲ್ಲ. ಇವುಗಳ ಮಧ್ಯೆ ಹಾಲಿ ಮತ್ತು ಮಾಜಿ ಶಾಸಕರಿಗೆ ಈ ಬಾರಿ ಟಿಕೆಟ್​ಗೆ ಇನ್ನಿಲ್ಲದ ಪೈಪೋಟಿಯೊಂದು ಶುರುವಾಗಿದೆ. ಅವರಾರು? ಅದೇಕೆ ಹೀಗೆ? ಅಂತೀರಾ. ಈ ಕುರಿತ ವರದಿ ಇಲ್ಲಿದೆ..

Tap to resize

Latest Videos

undefined

ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ 7 ವಿಧಾನಸಭಾ ಮತಕ್ಷೇತ್ರಗಳ ಪೈಕಿ ತೇರದಾಳ ವಿಧಾನಸಭಾ ಮತಕ್ಷೇತ್ರ ಕೂಡ ಒಂದು. ತೇರದಾಳ ವಿಧಾನಸಭಾ ಮತಕ್ಷೇತ್ರದಲ್ಲಿ ಇಲ್ಲಿಯವರೆಗೆ 3 ಬಾರಿ ಚುನಾವಣೆ ನಡೆದಿದೆ. ಇದರಲ್ಲಿ ಎರಡು ಬಾರಿ ಬಿಜೆಪಿಯಿಂದ ಶಾಸಕರಾಗಿ ಸಿದ್ದು ಸವದಿ ಗೆದ್ದು ಬಂದಿದ್ದರೆ, ಒಂದು ಬಾರಿ ಉಮಾಶ್ರೀ ಶಾಸಕಿಯಾಗಿ ಸಚಿವೆಯಾಗಿದ್ದರು. ಸಧ್ಯ ಈ ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಸಿದ್ದು ಸವದಿ ಆಗಿದ್ದು, ಈ ಹಿಂದೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್​​ನಿಂದ ಮಾಜಿ ಸಚಿವೆ ಉಮಾಶ್ರೀ ಸ್ಪರ್ದಿಸಿ ಒಮ್ಮೆ ಗೆಲುವು ಕಂಡು ಕಳೆದ ಬಾರಿ ಸಿದ್ದು ಸವದಿ ವಿರುದ್ದ ಸೋಲನ್ನು ಅನುಭವಿಸಿದ್ದಾರೆ.  ಆದರೆ ಈಗ ಹಾಲಿ ಶಾಸಕ ಸಿದ್ದು ಸವದಿ ಮತ್ತು ಮಾಜಿ ಶಾಸಕಿ ಉಮಾಶ್ರೀ ಅವರಿಗೆ ಈ ಬಾರಿಯ ಟಿಕೆಟ್​ ದಕ್ಕೋದು ಅಷ್ಟು ಸುಲಭದ ಮಾತಲ್ಲ. ಯಾಕಂದ್ರೆ ಬಿಜೆಪಿ ಮತ್ತು ಕಾಂಗ್ರೆಸ್​​ನಲ್ಲಿ ಮುಖಂಡರುಗಳಿಂದ ಇನ್ನಿಲ್ಲದ ಪೈಪೋಟಿ ಶುರುವಾಗಿದೆ. 

ತೇರದಾಳ ಟಿಕೆಟ್ ಫೈಟ್, ಉಮಾಶ್ರೀ ವಿರುದ್ದ ಅಸಮಾಧಾನ ಸ್ಫೋಟ

ನೇಕಾರರಿಗೆ ಪ್ರಾಶಸ್ತ್ಯಕ್ಕಾಗಿ ನಿಲ್ಲದ ಕೂಗು: ತೇರದಾಳ ಮತಕ್ಷೇತ್ರದ ಬಿಜೆಪಿ ಪಕ್ಷದಲ್ಲಿ ನೋಡೋದಾದ್ರೆ ಬಿಜೆಪಿಯಿಂದ ಶಾಸಕರಾಗಿರೋ ಸಿದ್ದು ಸವದಿ ತೇರದಾಳ ಮತಕ್ಷೇತ್ರದಿಂದ 2 ಬಾರಿ ಗೆಲುವು ಕಂಡಿದ್ದಾರೆ. ನಿಗಮ ಮಂಡಳಿ ಅಧ್ಯಕ್ಷರೂ ಸಹ ಆಗಿದ್ದಾರೆ. ಆದ್ರೆ ನೇಕಾರರೇ ಹೆಚ್ಚಿರೋ ತೇರದಾಳ ಮತಕ್ಷೇತ್ರದಲ್ಲಿ ಬಿಜೆಪಿಯಲ್ಲಿ ನೇಕಾರರಿಗೆ ಆದ್ಯತೆ ಕೊಡಿ ಎಂಬ ಕೂಗು ಕೇಳುತ್ತಲೇ ಇದೆ. ಆದ್ರೆ ಅದು ಇದೂವರೆಗೂ ಸಾಧ್ಯವಾಗಿಲ್ಲ, ಆದ್ರೆ ಈ ಬಾರಿ ಜಿಲ್ಲೆಯ ನೇಕಾರ ಮುಖಂಡ , ಬಿಜೆಪಿ ಪಕ್ಷದಲ್ಲಿರುವ ಮನೋಹರ ಶಿರೋಳ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಯಾಕಂದ್ರೆ ನೇಕಾರರ ಓಟ್​ ಬ್ಯಾಂಕ್ ಹೊಂದಿರುವ ಬಿಜೆಪಿ ಇಲ್ಲಿಯವರೆಗೆ ಜಿಲ್ಲೆಯಲ್ಲಿ 1984ರಲ್ಲಿ ಗುಳೇದಗುಡ್ಡ ಮತಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಬನ್ನಿ ಅವರಿಗೆ ಒಂದು ಬಾರಿ ಮಾತ್ರ ಅವಕಾಶ ನೀಡಿದ್ದು  ಹೊರತುಪಡಿಸಿದರೆ ನೇಕಾರರಿಗೆ ಅವಕಾಶ ಕೊಟ್ಟದ್ದು ಬಹಳಷ್ಟು ಕಡಿಮೆ. 

ಬಿಜೆಪಿ ಟಿಕೆಟ್‌ಗೆ ಭಾರಿ ಪೈಪೋಟಿ: ಹೀಗಾಗಿ ಈ ಬಾರಿ ಶತಾಯಗತಾಯ ತೇರದಾಳ ಮತಕ್ಷೇತ್ರದಲ್ಲಿ ಟಿಕೆಟ್​ಗೆ ತೀವ್ರ ಪೈಪೋಟಿಯೊಂದು ಶುರುವಾಗಿದೆ. ಬಿಜೆಪಿಯ ನೇಕಾರ ಪ್ರಕೋಷ್ಠದ ರಾಜ್ಯ ಸಂಚಾಲಕನಾಗಿ ಕಾರ್ಯ ನಿರ್ವಹಿಸಿರುವ ಮನೋಹರ ಶಿರೋಳ ಹಾಲಿ ಶಾಸಕ ಸಿದ್ದು ಸವದಿ ಅವರಿಗೆ ಟಿಕೆಟ್ ಫೈಟ್​ ನೀಡುತ್ತಿದ್ದು, ಈ ಬಾರಿ ಬಿಜೆಪಿಯಿಂದ ಪಕ್ಷ ನೇಕಾರರಿಗೆ ಮನ್ನಣೆ ನೀಡಿ ಟಿಕೆಟ್​ ನೀಡಲಿದೆ ಎಂಬ ವಿಶ್ವಾಸದಲ್ಲಿದ್ದೆನೆಂದು ಟಿಕೆಟ್​ ಆಕಾಂಕ್ಷಿ ಮನೋಹರ ಶಿರೋಳ ತಿಳಿಸಿದ್ದಾರೆ. ಇನ್ನು ಇವುಗಳ ಮಧ್ಯೆ ಮೂರನೇ ವ್ಯಕ್ತಿ ಪಿಕೆಪಿಎಸ್​ ಮಾಜಿ ನಿರ್ದೆಶಕ ಭೀಮಶಿ ಮಗದುಮ್​ ಸಹ ತೀವ್ರ ಬಿಜೆಪಿ ಪಕ್ಷದ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ. 

ಬಿಜೆಪಿಯಲ್ಲಿನ ಭಿನ್ನಮತ ನಾನೇ ಶಮನಗೊಳಿಸುವೆ: ಲಕ್ಷ್ಮಣ ಸವದಿ

ಕಾಂಗ್ರೆಸ್​ ಟಿಕೆಟ್ ಸ್ಥಳೀಯರಿಗೆ ಆದ್ಯತೆ ಕೊಡಿ: ಕಾಂಗ್ರೆಸ್​ ಪಕ್ಷಕ್ಕೆ ಬಂದ್ರೆ ಈ ಹಿಂದೆ ತೇರದಾಳ ಮತಕ್ಷೇತ್ರದಿಂದ ಕೈ ಅಭ್ಯರ್ಥಿಯಾಗಿ ಉಮಾಶ್ರೀ ಅವರಿಗೆ ಅವಕಾಶ ನೀಡಿತ್ತು, ಉಮಾಶ್ರೀ ಒಮ್ಮೆ ಗೆದ್ದು ಕಾಂಗ್ರೆಸ್​ ಪಕ್ಷದ ಸರ್ಕಾರದಲ್ಲಿ ಸಚಿವೆ ಸಹ ಆಗಿದ್ದರು. ಮರಳಿ ಸೋಲು ಅನುಭವಿಸಿದ್ದರು. ಆದ್ರೆ ಈ ಬಾರಿ ಮತಕ್ಷೇತ್ರದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ ಎಂಬ ಕೂಗು ಬಲವಾಗಿ ಕೇಳಿ ಬರುತ್ತಿದೆ. ಉಮಾಶ್ರೀ ಅವರು ಬೆಂಗಳೂರಿನಲ್ಲಿರ್ತಾರೆ. ಸ್ಥಳೀಯವಾಗಿ ಕಾರ್ಯಕರ್ತರಿಗೆ ಸಿಗೋದಿಲ್ಲ ಎಂಬ ಆರೋಪ ಕೇಳಿ ಬಂದು ಸ್ಥಳೀಯ ನಾಯಕರು ಸಭೆ ಸೇರಿ ಬಹಿರಂಗವಾಗಿಯೇ ಉಮಾಶ್ರೀ ವಿರುದ್ದ ಅಸಮಾಧಾನ ಹೊರ ಹಾಕಿರೋ ಘಟನೆಗಳು ಸಹ ನಡೆದಿದ್ದವು. ಯಾರಿಗೆ ಟಿಕೆಟ್​ ನೀಡಿದ್ರೂ ಅದು ಸ್ಥಳೀಯರಿಗೆ ಆಗಲಿ ಅನ್ನೋ ಭಾವನೆಯಿಂದ ಕೈ ಪಕ್ಷದ ಆಕಾಂಕ್ಷಿಗಳು ಸಭೆ ಸೇರಿದ್ದರು. 

ಹೈಕಮಾಂಡ್‌ ಮೇಲೆ ಭಾರಿ ಒತ್ತಡ: ತೇರದಾಳ ಮತಕ್ಷೇತ್ರದಲ್ಲಿ ಕೈ ಪಕ್ಷದಲ್ಲಿ ಪ್ರಬಲ ಆಕಾಂಕ್ಷಿಯಾಗಿ ಸಿದ್ದು ಕೊಣ್ಣೂರು ಟಿಕೆಟ್​ಗಾಗಿ ಇನ್ನಿಲ್ಲದ ಫೈಟ್​ ನಡೆಸಿದ್ದು, ಈ ಬಾರಿ ಹೈಕಮಾಂಡ್ ನನಗೆ ಟಿಕೆಟ್ ನೀಡಲಿದೆ ಎಂಬ ವಿಶ್ವಾಸ ಇದೆ. ಇವುಗಳ ಮಧ್ಯೆ ಡಾ. ಎಂ.ಎಸ್​.ದಡ್ಡೇನವರ, ಡಾ.ಪದ್ಮಜೀತ್ ನಾಡಗೌಡ, ಡಾ.ಎ.ಆರ್​.ಬೆಳಗಲಿ ಸೇರಿದಂತೆ ಹಲವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆದರೆ ಈ ಬಾರಿ ಯಾರಿಗೆ ಟಿಕೆಟ್​ ನೀಡಿದ್ರೂ ಸ್ಥಳೀಯರಿಗೆ ನೀಡಿ ಎಂಬ ಸಂದೇಶವನ್ನ ತೇರದಾಳ ಮತಕ್ಷೇತ್ರದ ಕೈ ನಾಯಕರು ಹೈಕಮಾಂಡ್​ ಮುಂದಿಟ್ಟಿದ್ದಾರೆ. 

ಒಟ್ಟಿನಲ್ಲಿ ತೇರದಾಳ ಮತಕ್ಷೇತ್ರದಲ್ಲಿ ಈ ಬಾರಿ ಟಿಕೆಟ್​ ಹಂಚಿಕೆ ಬಿಜೆಪಿ ಮತ್ತು ಕಾಂಗ್ರೆಸ್​ ಪಕ್ಷಗಳಲ್ಲಿ ಮಾತ್ರ ಅಷ್ಟು ಸುಲಭವಾಗಿಲ್ಲ. ಯಾಕಂದ್ರೆ ಹಾಲಿ ಮತ್ತು ಮಾಜಿ ಶಾಸಕಿಗೆ ಇನ್ನಿಲ್ಲದ ಟಿಕೆಟ್​ ಫೈಟ್​ ನೀಡಲು ಆಯಾ ಪಕ್ಷಗಳಲ್ಲಿ ಲಾಭಿ ಶುರುವಾಗಿದ್ದು, ಇಷ್ಟಕ್ಕೂ ಬಿಜೆಪಿ ಮತ್ತು ಕಾಂಗ್ರೆಸ್​ ಪಕ್ಷಗಳ ಹೈಕಮಾಂಡ್​ ಯಾರಿಗೆ ಮಣೆ ಹಾಕುತ್ತೇ ಅಂತ ಕಾದು ನೋಡಬೇಕಿದೆ.

click me!