
ಬಾಳೆಹೊನ್ನೂರು (ಡಿ.21): ರಾಜ್ಯ ಸರ್ಕಾರದಲ್ಲಿ ಉದ್ಭವಿಸಿರುವ ಮುಖ್ಯಮಂತ್ರಿ ಕುರ್ಚಿ ಗೊಂದಲದ ಸಮಸ್ಯೆ ಬಗೆ ಹರಿಸಲು ಕಾಂಗ್ರೆಸ್ ಹೈಕಮಾಂಡ್‌ಗೆ ಏಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ಮೂಡಿದೆ. ಪವರ್ ಶೇರಿಂಗ್ ಗೊಂದಲದಿಂದಾಗಿ ಇಡೀ ರಾಜ್ಯದಲ್ಲಿ ಅಸ್ಥಿರತೆ, ಅರಾಜಕತೆ ನಿರ್ಮಾಣವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಭ್ರಷ್ಟಾಚಾರ ಎಂದರೆ ಕಾಂಗ್ರೆಸ್ ಎನ್ನುವ ಸ್ಥಿತಿಯಿದೆ. ರಾಜ್ಯದಲ್ಲಿ ಅರಾಜಕತೆ, ಅಸ್ಥಿರತೆಯಿಂದ ಆಡಳಿತ ಯಂತ್ರದ ನಿಯಂತ್ರಣ ಕಳೆದುಕೊಂಡ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಕಾಂಗ್ರೆಸ್ ಹೈಕಮಾಂಡ್‌ಗೆ ರಾಜ್ಯದ ನಾಯಕರ ಮೇಲೆ ನಿಯಂತ್ರಣ ಉಳಿದಿಲ್ಲ. ಕಾಂಗ್ರೆಸ್‌ನಲ್ಲಿ ಹೈ ಮಾತ್ರವಿದ್ದು, ಕಮಾಂಡ್ ಇಲ್ಲದಂತಾಗಿದೆ. ರಾಜ್ಯದವರೇ ರಾಷ್ಟ್ರೀಯ ಅಧ್ಯಕ್ಷರಾಗಿದ್ದರೂ, ಹೈಕಮಾಂಡ್‌ಗೆ ಕೇಳಿ ಇಲ್ಲಿನ ಪರಿಸ್ಥಿತಿಯನ್ನು ಸರಿ ಮಾಡುವುದಾಗಿ ಹೇಳುವ ಸ್ಥಿತಿ ಬಂದಿದೆ. ಗೊಂದಲಮಯ ವಾತಾವರಣದಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ದೂರಿದರು. ಜನರು ಐದು ವರ್ಷ ಆಡಳಿತ ಮಾಡಬೇಕು ಎಂದು ಕಾಂಗ್ರೆಸ್‌ನವರಿಗೆ ಅಧಿಕಾರ ಕೊಟ್ಟಿದ್ದಾರೆ. ನಮಗೆ ವಿರೋಧ ಪಕ್ಷದಲ್ಲಿರಲು ಜನಾದೇಶ ಬಂದಿದೆ. ನಾವು ಅದನ್ನು ಯಶಸ್ವಿಯಾಗಿ ನಡೆಸುತ್ತಿದ್ದೇವೆ. ರಾಜ್ಯ ಸರ್ಕಾರ ತನ್ನ ಕೆಲಸವನ್ನು ಸರಿಯಾಗಿ ಮಾಡಬೇಕು. ಇಲ್ಲದಿದ್ದರೆ ಜನ ಸೂಕ್ತ ಪಾಠ ಕಲಿಸಲಿದ್ದಾರೆ ಎಂದರು.
ಅಡಕೆ ಹಾನಿಕಾರಿಯಲ್ಲ: ಕೇಂದ್ರದ ಸ್ಪಷ್ಟ ನಿಲುವು: ಅಡಕೆಗೆ ತಂಬಾಕು ಸೇರಿಸಿದರೆ, ಅಡಕೆಯಿಂದ ಗುಟ್ಕಾ ತಯಾರು ಮಾಡಿದರೆ ಅದು ವಿಷಕಾರಕವಾಗುತ್ತದೆ. ಅವು ಆರೋಗ್ಯಕ್ಕೆ ಹಾನಿಕರ. ಆದರೆ, ಕೇವಲ ಅಡಕೆ ವಿಷಕಾರಕ ಅಲ್ಲ ಎಂಬುದು ಕೇಂದ್ರ ಸರ್ಕಾರದ ಸ್ಪಷ್ಟ ನಿಲುವಿದೆ. ಹಾಗಾಗಿ, ಬೇರೆ ಬೇರೆ ವೇದಿಕೆಗಳಲ್ಲಿ ಈ ಬಗ್ಗೆ ಮಂಡಿಸಲು ವೈಜ್ಞಾನಿಕ ವರದಿ ಕೊಡಬೇಕು. ಆ ಬಗ್ಗೆ ವರದಿಗಳು ಸಿದ್ಧವಾಗುತ್ತಿವೆ ಎಂದರು.
ಬಹುತೇಕ ಪಾಲಕರು ಮಕ್ಕಳಿಗೆ ಬರೀ ಓದು, ಅಂಕ ಮತ್ತು ಉದ್ಯೋಗ ಗಳಿಕೆ ಹಾಗೂ ಹೊರದೇಶಕ್ಕೆ ಕಳುಹಿಸುವ ಹುಚ್ಚು ಮನಸ್ಸು ಹೊಂದಿದ್ದಾರೆ. ಇದನ್ನು ಬಿಟ್ಟು ಅವರಿಗೆ ಉತ್ತಮ ಸಂಸ್ಕಾರ ಹಾಗೂ ಸಂಸ್ಕೃತಿ ಕಲಿಸಬೇಕಿದೆ. ಉತ್ತಮ ಜೀವನದ ಪಾಠ ಹೇಳಿಕೊಡಬೇಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ತಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಸಿ ಅವರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡದೇ ಅವರಲ್ಲಿ ಜೀವನದ ಉತ್ಸಾಹ ಹಾಗೂ ಆತ್ಮವಿಶ್ವಾಸ ತುಂಬುವ ಮೂಲಕ ಉತ್ತಮ ಪ್ರಜೆಯನ್ನಾಗಿ ಮಾಡಬೇಕು ಎಂದ ಅವರು, ಆದಷ್ಟು ಪಾಲಕರು ಮಕ್ಕಳಿಂದ ಮೊಬೈಲ್ ದೂರ ಇರುವಂತೆ ನೋಡಿಕೊಳ್ಳಿ ಎಂಬ ಸಲಹೆ ನೀಡಿದರು.
ಡಾ. ರಾಜನ್ ದೇಶಪಾಂಡೆ 72ನೇ ವಯಸ್ಸಿನಲ್ಲೂ ಮಕ್ಕಳ ಕ್ಷೇತ್ರದಲ್ಲಿ ಕಾರ್ಯ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ವೈದ್ಯರಿಗೆ ತಮ್ಮ ವೃತ್ತಿ ನಿಭಾಯಿಸಲು ಇಡೀ ದಿನ ಸಾಲುವುದಿಲ್ಲ. ಇಂತಹ ಸಮಯದಲ್ಲಿ ಮಕ್ಕಳ ವೈದ್ಯರಾಗಿರುವ ಡಾ. ದೇಶಪಾಂಡೆ, ಮಕ್ಕಳು ಹಾಗೂ ಸಾಮಾಜಿಕ ಕೆಲಸದಲ್ಲಿ ನಿರತರಾಗಿರುವುದು ಶ್ಲಾಘನೀಯ ಎಂದರು. ಸಮಾರಂಭಕ್ಕೆ ಚಾಲನೆ ನೀಡಿದ ವಿಪ ಸಭಾಪತಿ ಬಸವರಾಜ ಹೊರಟ್ಟಿ, ಪ್ರತಿ ಪಾಲಕರು ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕೆ ತುಂಬ ಶ್ರಮಿಸುತ್ತಾರೆ. ಆದರೆ, ಬಹುತೇಕ ಮಕ್ಕಳನ್ನು ಪಾಲಕರನ್ನೇ ಮನೆಯಿಂದ ಹೊರ ಹಾಕುತ್ತಾರೆ. ಆದ್ದರಿಂದ ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಬೇಕು. ಈ ಸಂಸ್ಕಾರ ಹಾಗೂ ಉತ್ತಮ ಆರೋಗ್ಯ ಪಡೆಯಲು ಡಾ. ರಾಜನ್ ದೇಶಪಾಂಡೆ ಮಕ್ಕಳ ಅಕಾಡೆಮಿ ಮೂಲಕ 25 ವರ್ಷಗಳ ಕಾಲ ಪ್ರಯತ್ನಿಸಿದ್ದು ಖುಷಿ ತಂದಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.