
ಬೆಳಗಾವಿ (ಡಿ.21): ರೈತರು ರಸಗೊಬ್ಬರ ಬಳಕೆ ಕಡಿಮೆ ಮಾಡಬೇಕಾಗಿದೆ. ರಸಗೊಬ್ಬರ ಬಳಕೆಯಿಂದ ಹೆಚ್ಚಿನ ಇಳುವರಿ ಬರುತ್ತದೆ ಎಂಬ ತಪ್ಪು ಕಲ್ಪನೆಯಿಂದ ರೈತರು ಹೊರ ಬರಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಬೆಳಗಾವಿ ತಾಲೂಕಿನ ಹುದಲಿ ಗ್ರಾಮದಲ್ಲಿನ ಬೆಳಗಾಂ ಶುಗರ್ಸ್ ಹತ್ತಿರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಹಾಗೂ ಸಕ್ಕರೆ ಕಾರ್ಖಾನೆಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ಕಬ್ಬು ಬೆಳೆಯುವ ಪ್ರದೇಶದಲ್ಲಿನ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ ನಿರ್ವಹಣೆ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ರೈತಪರ ಸರ್ಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ ನಿರ್ವಹಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಭೂಮಿ ಜೀವದ ತೊಟ್ಟಿಲು, ಇಂತಹ ಜೀವದ ತೊಟ್ಟಿಲನ್ನು ಬಂಜೆ ಮಾಡಬಾರದು ಎಂದರು. ರೈತರು ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಇಳುವರಿ ಜೊತೆಗೆ ಹೆಚ್ಚಿನ ಆದಾಯ ಪಡೆಯಲು ಮುಂದಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಬ್ಸಿಡಿ ಮೂಲಕ ಹೊಸ ಯಂತ್ರೋಪಕರಣ ವಿತರಿಸುತ್ತಿದೆ. ರಾಜ್ಯದಲ್ಲಿಯೇ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ವ್ಯವಸಾಯ ಮಾಡಲಾಗುತ್ತಿದೆ.
ಕೃಷಿ ಇಲಾಖೆ ಅಧಿಕಾರಿ, ಸಿಬ್ಬಂದಿ ಕ್ಷೇತ್ರಗಳಿಗೆ ಭೇಟಿ ನೀಡಿ ರೈತರಿಗೆ ಹೊಸ ಹೊಸ ತಂತ್ರಜ್ಞಾನ ಬಳಕೆ, ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಬೇಕು. ಕೃಷಿಯನ್ನು ಲಾಭದಾಯಕವ್ನಾಗಿಸಿ ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಲು ರಾಜ್ಯ ಸರ್ಕಾರ ಸದಾ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ರಾಜ್ಯದ ಕಬ್ಬು ಬೆಳೆಗಾರರಿಗೆ ಅನುಕೂಲವಾಗಬೇಕು. ಬೆಳೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳುವುದರ ಮೂಲಕ ಉತ್ತಮ ಆದಾಯ ಪಡೆಯಬೇಕೆನ್ನುವ ಉದ್ದೇಶದಿಂದ ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ, ನೀರಿನ ಸಮಗ್ರ ನಿರ್ವಹಣೆ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ರೈತರಿಗೆ ಅನುಕೂಲವಾಗುವ ಎಲ್ಲ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರೈತರನ್ನು ಬೆಂಬಲಿಸುವ ಕಾರ್ಯವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಕಡಿಮೆ ನೀರು, ಖರ್ಚಿನಲ್ಲಿ ಉತ್ತಮ ಇಳುವರಿ ತೆಗೆಯಬಹುದಾದ ತಳಿಗಳನ್ನು ಪರಿಚಯಿಸುವುದರ ಮೂಲಕ ರೈತರು ಉತ್ತಮ ಆದಾಯ ಪಡೆಯಬಹುದಾದ ಕಾರ್ಯಕ್ರಮ ರೂಪಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಮಣ್ಣು ಮತ್ತು ಆರೋಗ್ಯ ಚೀಟಿ, ಅಂಗಾಂಶ ಕೃಷಿಯಿಂದ ಉತ್ಪಾದಿಸಿದ ಕಬ್ಬಿನ ಸಸಿಗಳನ್ನು ವಿತರಿಸಿ, ಕಬ್ಬಿನ ರವದಿ ಕತ್ತರಿಸುವ (ಟ್ರ್ಯಾಷ್ ಕಟರ್), ಹೊದಿಕೆ ಯಂತ್ರದ(ಟ್ರ್ಯಾಷ್ ಮಲ್ಚರ್) ಹಾಗೂ ಕೃಷಿ ಭಾಗ್ಯ ಫಲಾನುಭವಿಗಳಿಗೆ ಕಾರ್ಯಾದೇಶ ವಿತರಿಸಲಾಯಿತು.
ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದೆ. ರೈತರಿಗೆ ಬೇಕಾದ ಸಹಾಯ ಮಾಡುವುದು ಸರ್ಕಾರಗಳ ಜವಾಬ್ದಾರಿ. ನೀರಿನ ನಿರ್ವಹಣೆ ಕುರಿತು ಪ್ರತಿಯೊಬ್ಬರು ತಿಳಿದುಕೊಂಡು ನೀರನ್ನು ಮಿತವಾಗಿ ಬಳಸಬೇಕು. ಈ ಕುರಿತು ಕೃಷಿ ಇಲಾಖೆ ಪ್ರತಿ ರೈತರ ಹತ್ತಿರ ಹೋಗಿ ಇಲಾಖೆಯಿಂದ ಪರಿಚಯಿಸಲಾಗುವ ಹೊಸ ತಳಿಗಳ ಕುರಿತು ಮಾಹಿತಿ ನೀಡಬೇಕು. ಕಳೆದ ಆಯವ್ಯಯದಲ್ಲಿ ಘೋಷಿಸಿದಂತೆ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.