ಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ದ ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಟಾಂಗ್ ನೀಡಿದ್ಧಾರೆ. ಹಾಸನ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ನಮ್ಮ ಪಕ್ಷದ ನಾಯಕರು ನಿರ್ಧರಿಸುತ್ತಾರೆ. ಬೇರೆಯವರಿಗೆ ಅದರ ಉಸಾಬರಿ ಬೇಡ ಎಂದಿದ್ದಾರೆ.
ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್
ಹಾಸನ (ಅ.3): ವಿಧಾನಸಭಾ ಚುನಾವಣೆಗೆ ಇನ್ನೂ ಆರೇಳು ತಿಂಗಳು ಬಾಕಿ ಇರುವಾಗಲೇ ಹಾಸನ ಕ್ಷೇತ್ರದಲ್ಲಿ ರಾಜಕಾರಣಿಗಳ ಟಾಕ್ ಫೈಟ್ ಜೋರಾಗಿದೆ. ಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ದ ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಟಾಂಗ್ ನೀಡಿದ್ಧಾರೆ. ಹಾಸನ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ನಮ್ಮ ಪಕ್ಷದ ನಾಯಕರು ನಿರ್ಧರಿಸುತ್ತಾರೆ. ಬೇರೆಯವರಿಗೆ ಅದರ ಉಸಾಬರಿ ಬೇಡ. ಅವರ ಕೆಲಸ ಅವರು ನೋಡಿಕೊಳ್ಳಲಿ ಎಂದು ಹೇಳುವ ಮೂಲಕ ಜಿಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ ಪರೋಕ್ಷವಾಗಿ ಶಾಸಕ ಪ್ರೀತಂ ಗೌಡ ಅವರಿಗೆ ಟಾಂಗ್ ನೀಡಿದರು. ನಗರದ ರಿಂಗ್ ರಸ್ತೆಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಹೋಮ, ಪೂಜೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಭವಾನಿರೇವಣ್ಣ, ಮುಂದೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಯಾರಿಗೆ ಟಿಕೆಟ್ ಕೊಡಬೇಕು, ಯಾರಿಗೆ ಕೊಡಬಾರದು ಎನ್ನುವ ತೀರ್ಮಾನವನ್ನು ಪಕ್ಷದ ವರಿಷ್ಠರು ಹಾಗೂ, ನಾಯಕರು ತೆಗೆದುಕೊಳ್ಳುತ್ತಾರೆ. ಸ್ಥಳೀಯ ಶಾಸಕರು ಅವರ ಕೆಲಸ ಏನಿದೆ ಅದನ್ನು ಮಾಡಿಕೊಂಡು ಇರಲಿ. ಅವರು ನಮಗೇನು ಆಹ್ವಾನ ಮಾಡುವುದು ಬೇಡ ಎಂದರು.
ನಮ್ಮ ಪಕ್ಷದಲ್ಲಿ ಯಾರಿಗೆ ಟಿಕೆಟ್ ಎಂಬ ಅವರೇಕೆ ಚರ್ಚೆ ಮಾಡುವುದು, ಯಾರೇ ಸ್ಪರ್ಧೆ ಮಾಡಿದರೂ ಫೈಟ್ ಮಾಡಲೇಬೇಕು. ಹೀಗಿರುವಾಗ ಇದು ಅವರಿಗೆ ಬೇಡವಾದ ವಿಷಯ ಇದು ಎಂದು ಸ್ಪರ್ಧೆಗೆ ಪಂಥಾಹ್ವಾನ ನೀಡಿದ್ದ ಶಾಸಕ ಪ್ರೀತಂ ಜೆ.ಗೌಡ ತಿರುಗೇಟು ನೀಡಿದರು. ಯಾರೇ ನಿಂತರೂ ಅವರ ಕೆಲಸ ಅವರು ಮಾಡಬೇಕು. ನಮ್ಮ ಕೆಲಸ ನಾವು ಮಾಡುತ್ತೇವೆ ಎಂದರು.
ನಿಮ್ಮ ಕುಟುಂಬದಿಂದಲೇ ಸ್ಪರ್ಧೆಗೆ ಬರಬೇಕು ಎಂಬ ಒತ್ತಾಯ ಕೇಳಿ ಬರುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಆ ಬಗ್ಗೆ ಪ್ರೀತಮ್‌ಗೌಡರನ್ನೇ ಕೇಳಿ. ನಾನು ಇದಕ್ಕೆ ಉತ್ತರಿಸಬೇಕಿಲ್ಲ. ಅವರು ನಮ್ಮ ಕುಟುಂಬದ ಬಗ್ಗೆ ಏಕೆ ಮಾತನಾಡುತ್ತಾರೆ ಅನ್ನುವುದು ನಮಗೆ ಗೊತ್ತಿಲ್ಲ. ಅವರು ಬಿಜೆಪಿಯಿಂದ ನಿಲ್ಲುತ್ತಾರೆ. ಜೆಡಿಎಸ್‌ನಿಂದ ಯಾರಿಗೆ ಟಿಕೆಟ್ ಕೊಡುತ್ತಾರೆಯೋ ಅವರು ಸ್ಪರ್ಧೆ ಮಾಡುತ್ತಾರೆ. ಆಗ ಫೈಟ್ ಮಾಡಬೇಕೇ ಹೊರತು, ಅವರು, ಇವರು ನಿಲ್ಲಲಿ ಎಂದು ಆಹ್ವಾನ ಕೊಡುವುದು ಏಕೆ? ನಾವು ಯಾರಿಂದಲೂ ಹೇಳಿಸಿಕೊಂಡು ರಾಜಕಾರಣ ಮಾಡಬೇಕಿಲ್ಲ ಎಂದು ತಿರುಗೇಟು ನೀಡಿದರು.
Hassan: ಮುಂದಿನ ಚುನಾವಣೆಯಲ್ಲಿ ಪರದೆ ಮೇಲೆ ಪಿಕ್ಚರ್ ತೋರಿಸ್ತೀನಿ: ಶಾಸಕ ಪ್ರೀತಂ ಗೌಡ ವಾಗ್ದಾಳಿ
ಗಣಪತಿ ಟೆಂಪಲ್‌ಗೆ ಭೇಟಿ ನೀಡುವ ಬದಲು, ಒಂದು ಸುತ್ತು ಹಳ್ಳಿಗಳ ಕಡೆಗೂ ಹೋಗಿ ವೀಕ್ಷಣೆ ಮಾಡಿದರೆ ಜೆಡಿಎಸ್ ಅಭ್ಯರ್ಥಿಯಾಗ ಬೇಕು ಎಂದುಕೊಂಡಿರುವವರು, ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರೆ ಎಂಬ ಶಾಸಕರ ಕೊಂಕು ಮಾತಿಗೆ, ಅದನ್ನು ಯಾರಿಂದಲೂ ಹೇಳಿಸಿಕೊಂಡು ಮಾಡಬೇಕಿಲ್ಲ ಎಂದರು.
ಹಾಸನದಲ್ಲಿ ಭವಾನಿ ರೇವಣ್ಣಗೆ ಸೋಲು ನಿಶ್ಚಿತ, ಟಾಂಗ್ ಕೊಟ್ಟ ಶಾಸಕ ಪ್ರೀತಂಗೌಡ
ಹಾಸನ ಕ್ಷೇತ್ರವನ್ನು ನಾನಾಗಲಿ, ಸಂಸದರಿಗಾಗಲಿ, ರೇವಣ್ಣನವರಾಗಲಿ ನಿನ್ನೆ, ಮೊನ್ನೆಯಿಂದ ನೋಡುತ್ತಿಲ್ಲ. ನಾವು ಏನು ಕೆಲಸ ಮಾಡಬೇಕು, ಹೇಗೆ ಮಾಡಬೇಕು ಎಂಬುದು ಗೊತ್ತಿದೆ. ಅವರ ಮಾತಿಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಉತ್ತರಿಸಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ, ಮುಖಂಡರಾದ ಬಿದರಿಕೆರೆ ಜಯರಾಮ್, ಗಿರೀಶ್ ಚನ್ನವೀರಪ್ಪ, ಪ್ರೇಮಮ್ಮ, ಗಿರೀಶ್ ಇತರರು ಉಪಸ್ಥಿತರಿದ್ದರು.