ಕಳಲೆಗೇಟ್ ಬಳಿ 25,000 ಕಾರ್ಯಕರ್ತರಿಗೆ ಭೋಜನದ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ 800 ಮಂದಿ ವಿಐಪಿಗಳಿಗೆ ಪ್ರತ್ಯೇಕವಾಗಿ ಭೋಜನದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಎಚ್.ಡಿ. ರಂಗಸ್ವಾಮಿ
ನಂಜನಗೂಡು(ಅ.01): ರಾಹುಲ್ ಗಾಂಧಿ ಅವರ ಕೈಗೊಂಡಿರುವ ಭಾರತ್ ಜೋಡೋ ಯಾತ್ರೆ ನಂಜನಗೂಡಿಗೆ ಶನಿವಾರ ಬೆಳಗ್ಗೆ 8.30ಕ್ಕೆ ಆಗಮಿಸಲಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡಿರುವ ಬೃಹತ್ ಪಾದಯಾತ್ರೆ, ಕೇರಳದಿಂದ ಗುಂಡ್ಲುಪೇಟೆ ಮೂಲಕ ಶುಕ್ರವಾರ ರಾಜ್ಯ ಪ್ರವೇಶಿಸಿದ್ದು. ಇಂದು(ಅ. 1)ರಂದು ತಾಲೂಕಿನ ಎಲಚಗೆರೆ ಬೋರೆಯ ಗೇಟ್‌ನಿಂದ ಮೈಸೂರು ಜಿಲ್ಲೆಯನ್ನು ಪ್ರವೇಶಿಸಲಿದೆ.
undefined
ಬೆಳಗ್ಗೆ 8.30 ರಿಂದ ಪಾದಯಾತ್ರೆಯ ಮೂಲಕ ಮೈಸೂರು ಜಿಲ್ಲೆಗೆ ಅಧಿಕೃತ ಪ್ರವೇಶ ಮಾಡುವ ರಾಹುಲ್‌ಗಾಂಧಿ ಅವರು ಕಳಲೆ ಗೇಟ್‌ನಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ನಂತರ ಭೋಜನ ಸ್ವೀಕರಿಸಿ ಮಧ್ಯಾಹ್ನ 2.30 ರಿಂದ 3.30 ರವರೆಗೆ ಸಂವಾದ ಕಾರ್ಯಕ್ರಮ ನಡೆಸಲಿದ್ದಾರೆ. ಸಂಜೆ 4ರ ವೇಳೆಗೆ ಆರಂಭವಾಗಲಿರುವ ಪಾದಯಾತ್ರೆಯು 5.30ರ ವೇಳೆಗೆ ನಂಜನಗೂಡು ಪಟ್ಟಣವನ್ನು ತಲುಪಲಿದೆ. ಮಧ್ಯೆ ವಿರಮಿಸುವ ಸಲುವಾಗಿ ಸಿಂಧುವಳ್ಳಿಯ ಸಂತಾನ ಗಣಪತಿ ದೇವಾಲಯ, ಸಿಂಧುವಳ್ಳಿಪುರದ ಬಳಿ ಟೆಂಟ್ ಹಾಕಲಾಗಿದೆ. ಸಂಜೆ 6.30ರ ವೇಳೆಗೆ ತಾಲೂಕಿನ ಚಿಕ್ಕಯ್ಯನಛತ್ರದ ಬಳಿಯಲ್ಲಿ ಆ ದಿನದ ಕಾರ್ನರ್ ಸಭೆ ನಡೆಸುವ ರಾಹುಲ್‌ಗಾಂಧಿಯವರು ತಾಂಡವಪುರ ಎಂಐಟಿ ಕಾಲೇಜಿನ ಬಳಿ ಕ್ಯಾರವಾನ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಭಾರತ ಜೋಡೋ ಯಾತ್ರೆಯನ್ನು ವಿಭಜಿಸುವ ಯತ್ನ: BJP - RSS ವಿರುದ್ಧ Rahul Gandhi ವಾಗ್ದಾಳಿ
ರಾಹುಲ್ ಗಾಂಧಿ ಅವರನ್ನು ಅಭೂತ ಪೂರ್ವವಾಗಿ ಸ್ವಾಗತಿಸಲು ಕೆಪಿಸಿಸಿ ಮತ್ತು ಜಿಲ್ಲೆಯ ಕಾಂಗ್ರೆಸ್ ನಾಯಕರು ಎಲಚಗೆರೆ ಬೋರೆ ಬಳಿ ಸ್ವಾಗತ ಕಮಾನು ನಿರ್ಮಿಸಿದೆ. ವರುಣ, ಹುಣಸೂರು, ಎಚ್.ಡಿ. ಕೋಟೆ ಕ್ಷೇತ್ರದ ಮತ್ತು ಬೆಂಗಳೂರು ಗ್ರಾಮಾಂತರದ ರಾಮನಗರ, ಕನಕಪುರ ಸೇರಿದಂತೆ 8 ಕ್ಷೇತ್ರದ ಕಾರ್ಯಕರ್ತರು ನಂಜನಗೂಡಿಗೆ ಆಗಮಿಸಿದ್ದಾರೆ.
ಬೃಹತ್ ಬ್ಯಾನರ್ ಮತ್ತು ಬಾವುಟ
ಮೈಸೂರು- ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಯುದ್ದಕ್ಕೂ ಸಹ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಧ್ರುವನಾರಾಯಣ್, ಎಚ್.ಸಿ. ಮಹದೇವಪ್ಪ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಸೇರಿದಂತೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರ ಬೃಹತ್ ಬ್ಯಾನರ್‌ಗಳನ್ನು ಅಳವಡಿಸಿದೆ. ರಸ್ತೆಯುದ್ದಕ್ಕೂ ಬಾವುಟಗಳ ಹಾರಾಟ ನೋಡುಗರ ಕಣ್ಮನ ಸೆಳೆಯುತ್ತಿವೆ.
25 ಸಾವಿರ ಮಂದಿಗೆ ಭೋಜನದ ವ್ಯವಸ್ಥೆ:
ಕಳಲೆಗೇಟ್ ಬಳಿ 25,000 ಕಾರ್ಯಕರ್ತರಿಗೆ ಭೋಜನದ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ 800 ಮಂದಿ ವಿಐಪಿಗಳಿಗೆ ಪ್ರತ್ಯೇಕವಾಗಿ ಭೋಜನದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಇದಲ್ಲದೆ ಹುಣಸೂರು, ಎಚ್.ಡಿ. ಕೋಟೆ ಸೇರಿದಂತೆ ಹಲವಾರು ಕ್ಷೇತ್ರದ ಶಾಸಕರು ರಸ್ತೆಯ ಉದ್ದಕ್ಕೂ ಕೂಡ ಅಲ್ಲಲ್ಲಿ ಟೆಂಟ್ ಹಾಕಿ ಮಜ್ಜಿಗೆ, ಹಣ್ಣು-ಹಂಪಲು, ಟೀ, ಕಾಫಿ, ಉಪ್ಪಿಟ್ಟು ಕೇಸರಿಬಾತ್, ಮೊಸರು ಅನ್ನ ವಿತರಿಸಲು ಸಜ್ಜಾಗಿದ್ದಾರೆ.
Bharat Jodo Yatra: ರಾಹುಲ್ ಕಾಲ್ನಡಿಗೆ ಬಿಜೆಪಿಗೆ ನಡುಕ: ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್
ಅ. 2ರಂದು ಗಾಂಧಿ ಜಯಂತಿ ಅಂಗವಾಗಿ ಕಡಕೋಳ ಜಂಕ್ಷನ್ ಬಳಿಯಿಂದ ವಾಹನದ ಮೂಲಕ ತಾಲೂಕಿನ ಬದನವಾಳು ಗ್ರಾಮಕ್ಕೆ ಬೆಳಗ್ಗೆ 7ಕ್ಕೆ ಆಗಮಿಸಲಿದ್ದಾರೆ. ರಾಷ್ಟ್ರ ಮತ್ತು ರಾಜ್ಯ ನಾಯಕರೊಂದಿಗೆ ಗಾಂಧಿಜಯಂತಿ ಆಚರಣೆ ಮಾಡಲಿದ್ದು, ಬದನವಾಳು ಗ್ರಾಮದಲ್ಲಿ ಮತ್ತು ಗಾಂಧೀಜಿ ಸ್ಥಾಪಿಸಿದ ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿರುವ ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ನಂತರ ಶ್ರಮದಾನ ನಡೆಸಲಿದ್ದಾರೆ. ನಂತರ ಪ್ರಾರ್ಥನೆ, ಭಜನೆ, ದೇಶಭಕ್ತಿಗೀತೆ ಗಾಂಧಿಜೀಯವರ ಜೀವನ ಚರಿತ್ರೆ, ಸ್ವಾತಂತ್ರ್ಯ ಹೋರಾಟವನ್ನು ಸಾರುವಂತಹ ಚಿತ್ರಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 3 ಗಂಟೆಯವರೆಗೂ ಸಹ ಖಾದಿ ಗ್ರಾಮೋದ್ಯೋಗ ಕೇಂದ್ರದ ಕಾರ್ಯಕ್ರಮದಲ್ಲಿ ಭಾಗಿಯಾಗುವ ರಾಹುಲ್ ಗಾಂಧಿ ಅವರು ಮಧ್ಯಾಹ್ನ 3.30ರ ವೇಳೆಗೆ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದು ಕಡಕೊಳ ಜಂಕ್ಷನ್‌ಬಳಿಗೆ ವಾಹನದ ಮೂಲಕವೇ ತೆರಳಿ ಪಾದಯಾತ್ರೆ ಮುಂದುವರೆಸಲಿದ್ದಾರೆ.
40 ಸಾವಿರಕ್ಕೂ ಹೆಚ್ಚಿನ ಜನರು ಪಾದಯಾತ್ರೆಯಲ್ಲಿ ಭಾಗಿಯಾಗುವ ನಿರೀಕ್ಷೆಯಿದ್ದು, ನಂಜನಗೂಡು ವರುಣ ಕ್ಷೇತ್ರದಿಂದ 20 ಸಾವಿರಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆಯನ್ನು ಹೊಂದಲಾಗಿದೆ ಎಂದು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ತಿಳಿಸಿದ್ದಾರೆ.