ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆ ಹೋಗಲಾಡಿಸಿ ನಾವೆಲ್ಲರೂ ಒಂದೇ ಎನ್ನುವ ತತ್ವದಡಿ ಬದುಕಲು ರಾಹುಲ್ ಗಾಂಧಿ ಅವರು ಭಾರತ ಜೋಡೋ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು
ಕಲಘಟಗಿ (ಅ.12) : ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆ ಹೋಗಲಾಡಿಸಿ ನಾವೆಲ್ಲರೂ ಒಂದೇ ಎನ್ನುವ ತತ್ವದಡಿ ಬದುಕಲು ರಾಹುಲ್ ಗಾಂಧಿ ಅವರು ಭಾರತ ಜೋಡೋ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು. ತಾಲೂಕಿನ ಮಡಕಿಹೊನ್ನಳ್ಳಿಯ ತಮ್ಮ ನಿವಾಸದಲ್ಲಿ ಭಾರತ ಜೋಡೋ ಯಾತ್ರೆ ಯಶಸ್ವಿಗೊಳ್ಳಿಸಲು ಕರೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಅ. 13ರಂದು ಬಳ್ಳಾರಿ ಜಿಲ್ಲೆಯಲ್ಲಿನ ಪಾದಯಾತ್ರೆಗೆ ಮತ ಕ್ಷೇತ್ರದ ಜನರಿಗೆ ವಾಹನದ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು. ಗಾಂಧಿ ಕುಟುಂಬದ ಇತಿಹಾಸ ಅರಿಯದ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಟೀಕೆ ಮಾಡುವದು ಬಿಟ್ಟರೆ ಅವರ ಸಾಧನೆ ಏನು ಎಂದು ಆರೋಪಿದರು.
ನೋಟ್‌ಬ್ಯಾನ್, ಮನ ಕೀ ಬಾತ್, ಮೇಕ್ ಇನ್ ಇಂಡಿಯಾ, . 15 ಲಕ್ಷ ಜನರ ಖಾತೆಗೆ ಹಾಕುವುದು, ಬುಲೆಟ್ ಟ್ರೈನ್ ತರುವುದೆಂಬ ಹೇಳಿಕೆಗಳೇ ಮೋದಿ ಅವರ ಸಾಧನೆಯಾಗಿವೆ. ಬೆಲೆ ಏರಿಕೆಯಿಂದ ಜನ ಬೇಸತ್ತು ಹೋಗಿದ್ದಾರೆ. ಎಂಟು ವರ್ಷಗಳಲ್ಲಿ ಅದಾನಿ, ಅಂಬಾನಿ ಕಂಪನಿಗಳ ಆದಾಯ ಮಾತ್ರ ದ್ವಿಗುಣಗೊಳ್ಳಿಸಿದ್ದಾರೆ ಹೊರತು ಜನಸಾಮಾನ್ಯರ, ರೈತರ, ಬಡವರ, ನಿರುದ್ಯೋಗಿ ಯುವಕರಿಗೆ ಏನು ಯೋಜನೆ ರೂಪಿಸಿದ್ದಾರೆ ಎಂದು ಲಾಡ್ ಪ್ರಶ್ನಿಸಿದರು. ರಾಜ್ಯ ಸರ್ಕಾರ ಶೇ. 40ರಷ್ಟುಕಮಿಷನ್ ಸರ್ಕಾರ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿ ಕಚೇರಿಗೆ ದೂರು ಕೊಟ್ಟರು ಮೌನ ವಹಿಸಿರುವುದು ಏಕೆ ಎಂದು ಪ್ರಶ್ನೆ ಮಾಡಿದರು. ಎಸ್.ಆರ್ ಪಾಟೀಲ, ಮಂಜುನಾಥ ಮರಳ್ಳಿ, ನರೇಶ ಮಲೆನಾಡು, ವೈ.ಬಿ. ದಾಸನಕೊಪ್ಪ, ವೃಷಭಬೇಂದ್ರ ಪಟ್ಟಣಶೆಟ್ಟಿ, ಗಂಗಾಧರ ಚಿಕ್ಕಮಠ, ಆನಂದ ಕಲಾಲ ಇದ್ದರು.
ಜೋಡೋ ಯಾತ್ರೆಯಲ್ಲಿ ಧಾರವಾಡದಿಂದ ಐದು ಸಾವಿರ ಜನ
ರಾಹುಲ್ ಗಾಂಧಿ ನೇತೃತ್ವದ ‘ಭಾರತ ಜೋಡೋ’ ಯಾತ್ರೆಗೆ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಐದು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಐಸಿಸಿ ಸದಸ್ಯ ದೀಪಕ ಚಿಂಚೋರೆ, ಈಗಾಗಲೇ ಚಿತ್ರದುರ್ಗ ಜಿಲ್ಲೆ ತಲುಪಿರುವ ಯಾತ್ರೆಯು ಅ. 14ರಂದು ಬಳ್ಳಾರಿಯ ಶ್ರೀರಾಮಪುರ ಗ್ರಾಮದಿಂದ ಆರಂಭವಾಗಲಿದೆ. ಹೀಗಾಗಿ ಕ್ಷೇತ್ರದಿಂದ ಬಸ್, ಖಾಸಗಿ ವಾಹನಗಳಲ್ಲಿ ಹೆಚ್ಚಿನ ಜನರು ತೆರಳಲಿದ್ದಾರೆ ಎಂದರು.
ಜಿಲ್ಲೆಯ ಜನರು ಪಾಲ್ಗೊಳ್ಳಲು ಅ. 14ರಂದು ಪಶ್ಚಿಮ ವಿಧಾನಸಭೆ ಕ್ಷೇತ್ರಕ್ಕೆ ವಿಶೇಷ ಅವಕಾಶ ಕಲ್ಪಿಸಿದ್ದಾರೆ. ಹೀಗಾಗಿ, ಅಂದು ಬೆಳಗ್ಗೆ 6 ಗಂಟೆಗೆ ಇಲ್ಲಿಂದ ತೆರಳುವ ಜನರು ಸಂಜೆಯ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕೆ ಮುಖಂಡ ಇಸ್ಮಾಯಿಲ್ ತಮಟಗಾರ ಸಹ ಸಾಥ್ ನೀಡಿದ್ದಾರೆ ಎಂದರು.
ಬಿಜೆಪಿ ನಾಯಕರು ಅಭಿವೃದ್ಧಿ ಕಾರ್ಯ ಬಿಟ್ಟು ‘ಭಾರತ ಜೋಡೋ’ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡುವಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಅಧಿಕಾರದ ಮದ ಏರಿದೆ. ಅವರು ಈದ್ಗಾದಲ್ಲಿ ಧ್ವಜ ಹಾರಿಸುವ ಮೂಲಕ ರಾಜಕೀಯ ಪ್ರವೇಶ ಪಡೆದಿದ್ದಾರೆ ಹೊರತು ಜನ ಸೇವೆಯಿಂದ ಅಲ್ಲ. ಇನ್ನು ಕ್ಷೇತ್ರದ ಅಭಿವೃದ್ಧಿ ಮರೆತ ಶಾಸಕ ಅರವಿಂದ ಬೆಲ್ಲದಗೆ ಈ ಬಾರಿಯ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು. ಮುಖಂಡ ಹಾಜಿ ಹಿಂಡಸಗೇರಿ, ನವನಗರ ಬ್ಲಾಕ್ ಅಧ್ಯಕ್ಷ ಬಸವರಾಜ ಕಿತ್ತೂರ, ತುಳಜಪ್ಪ ಪೂಜಾರ, ಪಾಲಿಕೆ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಇದ್ದರು.
ಕಾಂಗ್ರೆಸ್‌ನದ್ದು ಭಾರತ್ ಚೋಡೋ: ಸುಧಾಕರ
ಕಾಂಗ್ರೆಸ್ಸಿನವರದ್ದು ಭಾರತ್ ಚೋಡೋ ಆಗಿದೆ ಎಂದು ಭಾರತ್ ಜೋಡೋ ಬಗ್ಗೆ ಆರೋಗ್ಯ ಸಚಿವ ಡಾ.ಸುಧಾಕರ ವ್ಯಂಗ್ಯವಾಡಿದ್ದಾರೆ.ವ ಕುಮಟಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸದ್ಯ ಕಾಂಗ್ರೆಸ್ ಕೈಯಲ್ಲಿ ಒಂದೆರಡು ರಾಜ್ಯಗಳು ಉಳಿದಿವೆ. ಏನಾದರೂ ಕಾರ್ಯಕ್ರಮ ಮಾಡಿದರೆ ಅದಾದರೂ ಉಳಿಯುತ್ತದೆ. ಇಲ್ಲ ಅದೂ ಇರಲ್ಲ ಎಂದರು.
ಸ್ಪಷ್ಟಬಹುಮತದೊಂದಿಗೆ ನಾವು ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ. ರಚನಾತ್ಮಕ ಹಾಗೂ ತರ್ಕಬದ್ಧ ಕಾರ್ಯಕ್ರಮಗಳ ಮೂಲಕ ಬಲಹೀನರಿಗೆ ಸರ್ಕಾರ ಶಕ್ತಿತುಂಬುತ್ತಿದೆ. ಇಂದು ಅತ್ಯಂತ ಎತ್ತರದಲ್ಲಿರುವ ಅಹಿಂದ ನಾಯಕ ಎಂದರೆ ನರೇಂದ್ರ ಮೋದಿ. ಆದರೆ ಅವರು ಹಾಗೆ ಹೇಳಿಕೊಳ್ಳದೆ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುತ್ತಿದ್ದಾರೆ ಎಂದು ಹೇಳಿದರು.