ತಣ್ಣಗಾಗಿದ್ದ ವೀರ ಸಾವರ್ಕರ್ ವಿಚಾರವನ್ನು ರಾಹುಲ್ ಗಾಂಧಿ ಮತ್ತೆ ಕೆದಕಿದ್ದಾರೆ. ಸಾವರ್ಕರ್ ಬ್ರಿಟೀಷರಿಗೆ ನೆರವಾಗಿದ್ದಾರೆ. ಕ್ಷಮೆ ಕೇಳಿದ್ದಾರೆ ಎಂದಿದ್ದಾರೆ. ಈ ಮಾತಿಗೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಶಿವಸೇನೆ ಕಿಡಿ ಕಾರಿದೆ. ಉದ್ಧವ್ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದು, ರಾಹುಲ್ ಮಾತು ಒಪ್ಪಲ್ಲ ಎಂದಿದ್ದಾರೆ.
ಮುಂಬೈ(ನ.17): ಭಾರತ್ ಜೋಡೋ ಯಾತ್ರೆ ಮೂಲಕ ಭಾರತವನ್ನು ಒಗ್ಗೂಡಿಸಲು ಹೊರಟ ಕಾಂಗ್ರೆಸ್‌ಗೆ ಶಾಕ್ ಎದುರಾಗಿದೆ. ಇದೀಗ ಮೈತ್ರಿ ಪಕ್ಷವೇ ರಾಹುಲ್ ಗಾಂಧಿ ವಿರುದ್ಧ ಕಿಡಿ ಕಾರಿದೆ. ಇದು ಮೈತ್ರಿ ಮುರಿದುಕೊಳ್ಳುವ ಮುನ್ಸೂಚನೆಯನ್ನು ನೀಡಿದೆ. ವೀರ ಸಾವರ್ಕರ್ ಬ್ರಿಟಿಷರಿಗೆ ನೆರವು ನೀಡಿದ ವ್ಯಕ್ತಿ, ಬ್ರಿಟಿಷರಿಗೆ ಕ್ಷಮೆ ಕೇಳಿ ಜೈಲಿನಿದ ಹೊರಬಂದ ವ್ಯಕ್ತಿ ಎಂದ ರಾಹುಲ್ ಗಾಂಧಿ, ದಾಖಲೆ ಬಿಡುಗಡೆ ಮಾಡಿದ್ದಾರೆ. ಈ ಮಾತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಕೆರಳಿಸಿದೆ. ರಾಹುಲ್ ಗಾಂಧಿ ಮಾತು ಒಪ್ಪಲ್ಲ ಎಂದಿದ್ದಾರೆ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಹಾರಾಷ್ಟ್ರಕ್ಕೆ ಎಂಟ್ರಿಕೊಟ್ಟ ಬೆನ್ನಲ್ಲೇ ರಾಹುಲ್ ಗಾಂಧಿ ಜೊತೆ ಶಿವಸೇನೆ ನಾಯಕ, ಉದ್ಧವ್ ಪುತ್ರ ಆದಿತ್ಯ ಠಾಕ್ರೆ ಹೆಜ್ಜೆ ಹಾಕಿದ್ದರು. ಇದೀಗ ರಾಹುಲ್ ವಿರುದ್ಧ ಶಿವಸೇನೆ ಆಕ್ರೋಶ ವ್ಯಕ್ತಪಡಿಸಿ ಅಂತರ ಕಾಯ್ದುಕೊಂಡಿದೆ.
ಮಹಾರಾಷ್ಟ್ರದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಸಾಗುತ್ತಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು, ಈ ಹಿಂದೆ ಹೇಳಿದ್ದಂತೆಯೇ ಹಿಂದುತ್ವ ಪ್ರತಿಪಾದಕ ವೀರ ಸಾವರ್ಕರ್ ಬಗ್ಗೆ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ಸಾವರ್ಕರ್ ಅವರು ಕ್ಷಮಾದಾನ ಕೋರಿ ಬ್ರಿಟಿಷರಿಗೆ ಪತ್ರ ಬರೆದಿದ್ದರು ಹಾಗೂ ಬ್ರಿಟಿಷರಿಗೆ ಸಹಾಯ ಮಾಡಿದ್ದರು’ ಎಂದು ಆರೋಪಿಸಿದ್ದಾರೆ. ರಾಹುಲ್ ಹೇಳಿಕೆಗೆ ಮಹಾರಾಷ್ಟ್ರದಲ್ಲಿನ ಕಾಂಗ್ರೆಸ್ ಮಿತ್ರಪಕ್ಷವಾದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಮೈತ್ರಿಯಲ್ಲಿ ಒಡಕು ಮೂಡಿದೆ.
ಸ್ವಾತಂತ್ರ್ಯ ಸೇನಾನಿಗೆ ಅಪಮಾನ, ರಾಹುಲ್ ಗಾಂಧಿ ವಿರುದ್ಧ ಸಾವರ್ಕರ್ ಮೊಮ್ಮಗನಿಂದ ಕೇಸ್!
ಬುಧವಾರ ವಾಶಿಂನಲ್ಲಿ ನಡೆದ ಸಾರ್ವಜನಿಕ ರಾರಯಲಿಯಲ್ಲಿ ಸಾವರ್ಕರ್ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್, ‘ಸಾವರ್ಕರ್ ಅವರು ಬಿಜೆಪಿ ಹಾಗೂ ಆರೆಸ್ಸೆಸ್ ವಿರುದ್ಧ ಸಂಕೇತ ಇದ್ದಂತೆ. ಅಂಡಮಾನ್ ಜೈಲಿನಲ್ಲಿ 2-3 ವರ್ಷ ಇದ್ದರು. ಕ್ಷಮಾದಾನ ಕೋರಿ ಬ್ರಿಟಿಷರಿಗೆ ಪತ್ರ ಬರೆಯುತ್ತಿದ್ದರು’ ಎಂದು ಆರೋಪಿಸಿದ್ದರು. ಗುರುವಾರ ಅಕೋಲಾದಲ್ಲಿ ಸುದ್ದಿಗೋಷ್ಠಿಯಲ್ಲಿ ತಮ್ಮ ಹೇಳಿಕೆ ಸಮರ್ಥಿಸಿಕೊಂಡ ಅವರು, ‘ನಾನು ನಿಮ್ಮ (ಬ್ರಿಟಿಷರ) ವಿಧೇಯ ಸೇವಕ ಆಗಿರುತ್ತೇನೆ’ ಎಂದು ಸಾವರ್ಕರ್ ಅವರು ಬ್ರಿಟಿಷರಿಗೆ ಬರೆದಿದ್ದರು ಎನ್ನಲಾದ ಪತ್ರ ಪ್ರದರ್ಶಿಸಿದರು.
ರಾಹುಲ್ ಹೇಳಿಕೆಗೆ ಅವರ ಮಿತ್ರಪಕ್ಷವಾದ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಕಿಡಿಕಾರಿದ್ದು, ‘ಸಾವರ್ಕರ್ ಕುರಿತ ರಾಹುಲ್ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಸಾವರ್ಕರ್ ಸ್ವಾತಂತ್ರ್ಯಕ್ಕೆ ಹೋರಾಡಿದ ಸೇನಾನಿ. ಅವರಿಗೇಕೆ ಭಾರತರತ್ನವನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ?’ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಮುಖಂಡ ಹಾಗೂ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರತಿಕ್ರಿಯಿಸಿ, ‘ರಾಹುಲ್ ನಾಚಿಕೆಗೆಟ್ಟು ಸಾವರ್ಕರ್ ಬಗ್ಗೆ ಸುಳ್ಳು ಹೇಳಿದ್ದಾರೆ’ ಎಂದು ಆಕ್ಷೇಪಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಈ ಬಗ್ಗೆ ಉದ್ಧವ್‌ರನ್ನು ಟಾರ್ಗೆಟ್ ಮಾಡಿ, ‘ಕಾಂಗ್ರೆಸ್ ಜತೆ ಏಕೆ ಮೈತ್ರಿ ಮುಂದುವರಿಸಿದ್ದೀರಿ?’ ಎಂದು ಪ್ರಶ್ನಿಸಿದ್ದಾರೆ.
ಜನ ಗಣ ಮನದ ಬದಲು ನೇಪಾಳದ ರಾಷ್ಟ್ರಗೀತೆ, ಭಾರತ್ ಜೋಡೋ ಯಾತ್ರೆಯಲ್ಲಿ ಪ್ರಮಾದ!