ಒಡೆದ ಭಾರತವನ್ನು ಒಗ್ಗೂಡಿಸಲು ಜೋಡೋ ಯಾತ್ರೆ; ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಕಿಡಿ!

By Suvarna NewsFirst Published Nov 27, 2022, 6:04 PM IST
Highlights

ಭಾರತ್ ಜೋಡೋ ಯಾತ್ರೆ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದಾರೆ. ಇದು ಚುನಾವಣೆ ಉದ್ದೇಶಕ್ಕಾಗಿ ಮಾಡುತ್ತಿಲ್ಲ. ಬದಲಾಗಿ ಈ ದೇಶದ ಸಂವಿಧಾನ,  ಜನರ ಸ್ವಾತಂತ್ರ್ಯವನ್ನು ಕಸಿಯುತ್ತಿರುವ ಬಿಜೆಪಿಯಿಂದ ಭಾರತ ಒಡೆದು ಹೋಗಿದೆ. ಹೀಗಾಗಿ ಭಾರತವನ್ನು ಒಗ್ಗೂಡಿಸಲು ಯಾತ್ರೆ ಮಾಡುತ್ತಿರುವುದಾಗಿ ಖರ್ಗೆ ಹೇಳಿದ್ದಾರೆ. 

ನವದೆಹಲಿ(ನ.27): ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಕುರಿತು ಕಾಂಗ್ರೆಸ್ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದಾರೆ. ಇದು ಚುನಾವಣೆಗಾಗಿ ನಡೆಯುತ್ತಿರುವ ಯಾತ್ರೆಯಲ್ಲ. ಭಾರತವನ್ನು ಒಡೆಯುತ್ತಿರುವ ಶಕ್ತಿಗಳ ವಿರುದ್ಧ ನಡೆಯುತ್ತಿರುವ ಒಗ್ಗಟ್ಟಿನ ಯಾತ್ರೆ ಎಂದಿದ್ದಾರೆ. ಕೆಲ ರಾಜಕೀಯ ಪಕ್ಷಗಳು ಸಂವಿಧಾನದಲ್ಲಿ ಜನರಿಗೆ ನೀಡಿರುವ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಯತ್ನ ಮಾಡುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದೆ. ಇದರ ವಿರುದ್ಧ ಒಗ್ಗಟ್ಟಾಗಿ ಹೋರಾಡಲು ಭಾರತ್ ಜೋಡೋ ಯಾತ್ರೆ ಆಯೋಜಿಸಲಾಗಿದೆ ಎಂದು ಖರ್ಗೆ ಹೇಳಿದ್ದಾರೆ.

ಸದ್ಯ ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶದಲ್ಲಿ ಸಂಚರಿಸುತ್ತಿದೆ. ಶೀಘ್ರದಲ್ಲೇ ರಾಜಸ್ಥಾನಕ್ಕೆ ಎಂಟ್ರಿ ಕೊಡಲಿದೆ. ಮಧ್ಯಪ್ರದೇಶದಲ್ಲಿ ಯಶಸ್ವಿಯಾದ ಭಾರತ್ ಜೋಡೋ ಯಾತ್ರೆ ಇದೀಗ ರಾಜಸ್ಥಾನದಲ್ಲಿ ಹಲವು ಸವಾಲು ಎದುರಿಸಲಿದೆ. ಸಿಎಂ ಅಶೋಕ್ ಗೆಹ್ಲೋಟ್ ಬಣ ಹಾಗೂ ಸಚಿನ್ ಪೈಲೆಟ್ ಬಣದ ನಡುವಿನ ಗುದ್ದಾಟ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ.

 

ಕೇಂದ್ರ ಸರ್ಕಾರ ಸಂಪೂರ್ಣವಾಗಿ ಆರ್‌ಎಸ್‌ಎಸ್‌ಗೆ ಶರಣಾಗಿದೆ, ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ!

ಪೈಲಟ್‌ ಸಿಎಂ ಮಾಡದಿದ್ರೆ ರಾಹುಲ್‌ಗೆ ನೋ ಎಂಟ್ರಿ: ಗುರ್ಜರ್‌ ಮುಖಂಡ
ಸಚಿನ್‌ ಪೈಲಟ್‌ರನ್ನು ರಾಜಸ್ಥಾನ ಮುಖ್ಯಮಂತ್ರಿಯನ್ನಾಗಿ ಮಾಡುವ ತಮ್ಮ ಬೇಡಿಕೆ ಈಡೇರಿಸುವ ತನಕ ರಾಹುಲ್‌ ಗಾಂಧಿ ಭಾರತ್‌ ಜೋಡೊ ಯಾತ್ರೆ ರಾಜಸ್ಥಾನ ಪ್ರವೇಶಿಸಲು ಬಿಡುವುದಿಲ್ಲ ಎಂದು ಗುರ್ಜರ್‌ ನಾಯಕ ವಿಜಯ್‌ ಸಿಂಗ್‌ ಬೈನ್‌ಸ್ಲಾ ಹೇಳಿದ್ದಾರೆ. ಡಿ.3ರಂದು ಯಾತ್ರೆ ರಾಜಸ್ಥಾನ ಪ್ರವೇಶಿಸಲಿದೆ. ಇದರ ನಡುವೆ ಬೈನ್‌ಸ್ಲಾ ಅವರ ಈ ಹೇಳಿಕೆ ಸಂಚಲನ ಮೂಡಿಸಿದೆ. ಆದರೆ, ಇದಕ್ಕೆ ತಿರುಗೇಟು ನೀಡಿರುವ ಸಚಿನ್‌ ಪೈಲಟ್‌, ‘ರಾಹುಲ್‌ ಯಾತ್ರೆ ಯಶಸ್ವಿಯಾಗಲಿದೆ. ಆದರೆ ಯಾತ್ರೆ ಯಶಸ್ವಿಯಾಗಬಾರದು ಎಂದು ಬಿಜೆಪಿ ಸಂಚು ನಡೆಸಿದೆ. ಇದು ಫಲಿಸಲ್ಲ’ ಎಂದು ಹೇಳಿದ್ದು, ಬೈನ್‌ಸ್ಲಾ ಹೇಳಿಕೆಯಿಂದ ಉಂಟಾಗಿರುವ ಬಿರುಗಾಳಿ ಶಮನಕ್ಕೆ ಯತ್ನ ಮಾಡಿದ್ದಾರೆ.

ನಮ್ಮ ಸಮುದಾಯದ ನಾಯಕರನ್ನು ಸಿಎಂ ಆಗಿ ನೇಮಿಸಬೇಕೆಂಬುದು ಗುರ್ಜರ್‌ಗಳ ಬಹುದಿನದ ಬೇಡಿಕೆ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತವಿದ್ದು 4 ವರ್ಷಗಳನ್ನು ಪೂರೈಸಿದೆ. ಸರ್ಕಾರಕ್ಕೆ ಇನ್ನೊಂದು ವರ್ಷ ಬಾಕಿ ಇದ್ದು ‘ಪೈಲಟ್‌ರನ್ನು ಸಿಎಂ ಆಗಿ ನೇಮಿಸಿದರೆ ರಾಜ್ಯಕ್ಕೆ ರಾಹುಲ್‌ಗೆ ಸ್ವಾಗತ. ಇಲ್ಲದಿದ್ದರೆ ವಿರೋಧ’ ಎಂದು ಬೈನ್‌ಸ್ಲಾ ಹೇಳಿದ್ದರು.

ಓಲೈಕೆಗಾಗಿ ಖರ್ಗೆ ಕುಟುಂಬದ ಅವಹೇಳನ ಸಲ್ಲ: ಬಿಜೆಪಿ ವಿರುದ್ಧ ಕಾಂಗ್ರೆಸ್‌ ಆಕ್ರೋಶ

ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೊ ಯಾತ್ರೆಯಲ್ಲಿ ಶುಕ್ರವಾರವೂ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಂಕಾ ಗಾಂಧಿ ವಾದ್ರಾ ಭಾಗಿಯಾದರು. ಮುಂಜಾನೆ ಖೇರ್ದಾದಿಂದ ಖಾರ್ಗೋನೆಗೆ ಸಾಗುತ್ತಿದ್ದ ರಾಜ್ಯದಲ್ಲಿನ 3ನೇ ದಿನದ ಪಾದಯಾತ್ರೆಯಲ್ಲಿ ಪ್ರಿಯಾಂಕಾ ಹಾಗೂ ಪತಿ ರಾಬರ್ಚ್‌ ವಾದ್ರಾ ಮತ್ತು ಮಗ ರೆಹಾನ್‌ ರಾಹುಲ್‌ರೊಂದಿಗೆ ಹೆಜ್ಜೆ ಹಾಕಿದರು. ಗುರುವಾರ ಮೊದಲ ಬಾರಿಗೆ ಪ್ರಿಯಾಂಕಾ ಸಹೋದರ ರಾಹುಲ್‌ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಸಂಜೆಯ ವೇಳೆ ರಾಹುಲ್‌, ಪ್ರಿಯಾಂಕಾ ಹಾಗೂ ಅವರ ಪತಿ ಮತ್ತು ಪುತ್ರ ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಉಜ್ಜ​ಯಿನಿ ಓಂಕಾರೇಶ್ವರ ದೇವಾಲಯಕ್ಕೆ ಭೇಟಿ ನೀಡಿ ನರ್ಮದಾ ಆರತಿಯಲ್ಲಿ ಪಾಲ್ಗೊಂಡರು.

click me!