ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!

Published : Dec 07, 2025, 01:17 PM IST
Siddaramaiah Kumaraswamy

ಸಾರಾಂಶ

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರಿಸಲು ಕೇಂದ್ರಕ್ಕೆ ಪತ್ರ ಬರೆದಿದ್ದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಸಿಎಂ ಸಿದ್ದರಾಮಯ್ಯ 'ಮನುವಾದಿ' ಎಂದು ಟೀಕಿಸಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ತಾವು ಕೃಷ್ಣತತ್ತ್ವವನ್ನು ನಂಬಿದವರು, ಕಂಸ ಹಿಂಸೆಯನ್ನಲ್ಲ ಎಂದರು.

ಬೆಂಗಳೂರು (ಡಿ.07): ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಸೇರಿಸುವಂತೆ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (ಹೆಚ್‌ಡಿಕೆ) ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಮನುವಾದಿ' ಎಂದು ಟೀಕಿಸಿದ ಬೆನ್ನಲ್ಲೇ, ರಾಜ್ಯ ರಾಜಕಾರಣದಲ್ಲಿ ಸೈದ್ಧಾಂತಿಕ ಸಮರ ಭುಗಿಲೆದ್ದಿದೆ. ಸಿದ್ದರಾಮಯ್ಯ ಮತ್ತು ಸಚಿವ ಡಾ. ಹೆಚ್.ಸಿ. ಮಹದೇವಪ್ಪ ವಿರುದ್ಧ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದು, ಟ್ವೀಟರ್‌ನಲ್ಲಿ (ಈಗಿನ ಎಕ್ಸ್‌ನಲ್ಲಿ) ಸುದೀರ್ಘ ಪೋಸ್ಟ್‌ ಹಾಕಿ ಸೈದ್ಧಾಂತಿಕ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

'ನಾನು ಕೃಷ್ಣತತ್ತ್ವ ನಂಬಿದವನೇ ಹೊರತು ಕಂಸ ಹಿಂಸೆಯನ್ನಲ್ಲ'

ತಮ್ಮನ್ನು 'ಮನುವಾದಿ' ಎಂದು ಕರೆದ ಮುಖ್ಯಮಂತ್ರಿಗಳಿಗೆ ಕುಮಾರಸ್ವಾಮಿ ನೇರ ತಿರುಗೇಟು ನೀಡಿದ್ದಾರೆ. 'ನಾನು ಕೃಷ್ಣತತ್ತ್ವ ನಂಬಿದವನೇ ಹೊರತು ಕಂಸ ಹಿಂಸೆಯನ್ನಲ್ಲ. ಆದರೆ ಕಾಂಗ್ರೆಸ್ ಮಾತ್ರ ಕಂಸನಲ್ಲಿ ನಂಬಿಕೆ ಇಟ್ಟಂತಿದೆ' ಎಂದು ವ್ಯಂಗ್ಯವಾಡಿದ್ದಾರೆ. ತಮ್ಮನ್ನು 'ಮನುವಾದಿ' ಎಂದಿರುವ ಮುಖ್ಯಮಂತ್ರಿ ಹಾಗೂ ಅದನ್ನು 'ಸೈದ್ಧಾಂತಿಕ ಅಧಃಪತನ' ಎಂದು ತಾಳ ಹಾಕಿರುವ ಸಚಿವ ಮಹದೇವಪ್ಪ ಅವರಿಗೆ, 'ಇವರಿಬ್ಬರೂ ಶಾಲಾ ಮಕ್ಕಳಿಗೆ ಏನು ಬೋಧಿಸುತ್ತಾರೆ ಎಂಬುದನ್ನು ಹೇಳಲಿ, ಬುದ್ಧಿಗೇಡಿತನಕ್ಕೂ ಮಿತಿ ಬೇಡವೇ?' ಎಂದು ಪ್ರಶ್ನಿಸಿದ್ದಾರೆ.

ಭಗವದ್ಗೀತೆ 'ಜಗದ ಬೆಳಕು'

ಭಗವದ್ಗೀತೆಯನ್ನು ಪಠ್ಯದಲ್ಲಿ ಸೇರಿಸುವ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿರುವ ಹೆಚ್‌ಡಿಕೆ, ಭಗವದ್ಗೀತೆ 'ಜಗದ ಬೆಳಕು, ಅರಿವು, ಸನ್ಮಾರ್ಗದ ದೀವಿಗೆ, ಆದರ್ಶಗಳ ಮಹಾಸಾರ' ಎಂದಿದ್ದಾರೆ. '"ಮಕ್ಕಳನ್ನು ಬಾಲ್ಯದಿಂದಲೇ ಒಳ್ಳೇ ಮಾರ್ಗದಲ್ಲಿ ನಡೆಸುವ ಸದುದ್ದೇಶದಿಂದ ನಾನು, ಕೇಂದ್ರದ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್‌ ಅವರಿಗೆ ಪತ್ರ ಬರೆದು ಪಠ್ಯದಲ್ಲಿ ಭಗವದ್ಗೀತೆ ಸೇರಿಸಬೇಕು ಎಂದು ವಿನಂತಿಸಿದ್ದೇನೆ' ಎಂದು ಸ್ಪಷ್ಟಪಡಿಸಿದ್ದಾರೆ.

ಸಚಿವ ಮಹದೇವಪ್ಪನವರಿಗೆ ತಿರುಗೇಟು ನೀಡಿದ ಅವರು, 'ಬಹುಶಃ ಮಹದೇವಪ್ಪನವರಿಗೆ ಭಗವದ್ಗೀತೆಯ ಸಾರ ಗೊತ್ತಿಲ್ಲ. ಅವರಿಗೆ ಇನ್ನಾವುದೋ ಗ್ರಂಥದ ಸಾರ ಗಾಢವಾಗಿ ಇಳಿದಿರಬೇಕು!. ಜೊತೆಗೆ, ಎಲ್ಲ ಜನಪ್ರತಿನಿಧಿಗಳು ಸಂವಿಧಾನಬದ್ಧವಾಗಿಯೇ ಪ್ರಮಾಣ ಸ್ವೀಕರಿಸಿದರು ಸಹ, 'ದೇವರು, ತಂದೆ ತಾಯಿ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸುತ್ತೇವೆ. ಇದು ಕೂಡ ಸನ್ಮಾರ್ಗವೇ. ಹಾಗಾದರೆ ಮಹದೇವಪ್ಪನವರ 'ಮಾರ್ಗ' ಯಾವುದು? ಕಂಸ ಮಾರ್ಗವೇ!? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

'ಭಾರತದ ರಾಜನೀತಿ ನಿಂತಿರುವುದೇ ಕೃಷ್ಣತತ್ತ್ವದ ಮೇಲೆ'

'ಇವತ್ತು ಭಾರತದ ರಾಜನೀತಿ ನಿಂತಿರುವುದೇ ಕೃಷ್ಣತತ್ತ್ವದ ಮೇಲೆ. ಸಮರ, ರಾಜಕೀಯ, ಜ್ಞಾನ, ಆಡಳಿತ, ಮನುಷ್ಯ ಸಂಬಂಧಗಳು ಎಲ್ಲಕ್ಕೂ ಭಗವದ್ಗೀತೆಯೇ ದೀವಿಗೆ. ಕೃಷ್ಣಬೋಧೆ ಸಾರ್ವಕಾಲಿಕ, ಭಗವದ್ಗೀತೆ ಕಾಲಾತೀತ. ನಿಮ್ಮನ್ನು ಅಜ್ಞಾನಿ ಎನ್ನುವುದು ನನಗೆ ಇಷ್ಟವಿಲ್ಲ. ಸಂವಿಧಾನ, ಪ್ರಜಾಪ್ರಭುತ್ವ ಎಂದು ಸದಾ ಜಪಿಸುವ ನೀವು, ಭಗವದ್ಗೀತೆಯ ಜತೆಗೆ ರಾಮಾಯಣ, ಮಹಾಭಾರತವನ್ನೂ ಓದಿ. ಇದು ನನ್ನ ಸಲಹೆಯಷ್ಟೇ. ಭಗವದ್ಗೀತೆ ಓದಬೇಡಿ ಎಂದು ನಾನೆಂದೂ ಹೇಳಿಲ್ಲ. ಹೇಳುವುದೂ ಇಲ್ಲ' ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು?

ಭಗವದ್ಗೀತೆಯನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸುವಂತೆ ಕುಮಾರಸ್ವಾಮಿ ಅವರು ಕೇಂದ್ರ ಶಿಕ್ಷಣ ಸಚಿವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, 'ಕುಮಾರಸ್ವಾಮಿಯವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ನಂತರ ಮನುವಾದಿಯಾಗಿದ್ದಾರೆ' ಎಂದು ಟೀಕಿಸಿದ್ದರು. ಅಲ್ಲದೆ, ಡಾ. ಬಿ.ಆರ್. ಅಂಬೇಡ್ಕರ್ ಅವರು ಹಿಂದೂ ಧರ್ಮದಲ್ಲಿನ ಜಾತಿ ವ್ಯವಸ್ಥೆಯಿಂದ ಬೇಸರಗೊಂಡು ಬೌದ್ಧ ಧರ್ಮವನ್ನು ಸ್ವೀಕರಿಸಿದ ಸಂಗತಿಯನ್ನು ಸಿದ್ದರಾಮಯ್ಯ ಉಲ್ಲೇಖಿಸಿದ್ದರು. ಕುಮಾರಸ್ವಾಮಿ ಅವರ ಈ ನಡೆಯು ಮೈತ್ರಿ ನಂತರದ ಸೈದ್ಧಾಂತಿಕ ಬದಲಾವಣೆಯನ್ನು ಸೂಚಿಸುತ್ತದೆ ಎಂದು ಸಿಎಂ ವಾದಿಸಿದ್ದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ