
ಕೊಪ್ಪಳ (ಮೇ.28): ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಸರ್ಕಾರ ಬಂದ ಮೇಲೆ ಈಡೇರಿಸುವುದು ಉತ್ತಮ, ಮಾತಿನಂತೆ ನಡೆಯುವುದು ಧರ್ಮ ಎಂದು ಮೇಲ್ಮನೆ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಈ ಮೂಲಕ ಸರ್ಕಾರಕ್ಕೆ ಸೂಚ್ಯವಾಗಿ ಭರವಸೆ ಈಡೇರಿಸುವುದು ಒಳಿತು ಎನ್ನುವ ಮಾತು ಹೇಳಿದ್ದಾರೆ. ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಠಕ್ಕೆ ಭೇಟಿ ನೀಡಿದ್ದ ಅವರು,ಶ್ರೀಗಳೊಂದಿಗೆ ಸುಮಾರು ಹೊತ್ತು ಚರ್ಚೆ ಮಾಡಿದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾನು ಮೇಲ್ಮನೆ ಸಭಾಪತಿಯಾಗಿ ಈ ಮಾತು ಹೇಳುತ್ತಿಲ್ಲ. ಸಾಮಾನ್ಯ ವ್ಯಕ್ತಿಯಾಗಿ ಹೇಳುವುದು ಏನೆಂದರೇ ಕೊಟ್ಟಮಾತನ್ನು ಪಾಲಿಸಬೇಕು.ಜನರ ಆಶೋತ್ತರ ಈಡೇರಿಸಬೇಕು, ತಕ್ಷಣಕ್ಕೆ ನಿಯಮ ಜಾರಿ ಮಾಡಬೇಕು.ಜನರು ಭರವಸೆ ಈಡೇರುವ ಉತ್ಸುಕದಲ್ಲಿ ಇರುವುದರಿಂದ ಈ ರೀತಿ ಪ್ರಕರಣಗಳು ಆಗುತ್ತವೆ ಎಂದು ಜೆಸ್ಕಾಂ ಸಿಬ್ಬಂದಿ ಮತ್ತು ಬಸ್ ಸಿಬ್ಬಂದಿ ಮೇಲೆ ಹಲ್ಲೆಯಾಗುತ್ತಿರುವ ಪ್ರಕರಣಗಳ ಕುರಿತ ಪ್ರಶ್ನೆ ಉತ್ತರಿಸಿದರು.
ನನಗೂ 200 ಯೂನಿಟ್ ಕರೆಂಟ್ ಬೇಕು, ಇಲ್ಲವಾದರೆ ಪ್ರತಿಭಟನೆ: ಶಾಸಕ ಸಿ.ಸಿ.ಪಾಟೀಲ್ ಎಚ್ಚರಿಕೆ
ರಾಜಿನಾಮೆ ಕೊಡುವುದು ಸರಿಯಲ್ಲ: ಬಿ.ಕೆ.ಹರಿಪ್ರಸಾದ ಸಚಿವ ಸ್ಥಾನ ಸಿಗದೆ ಇರುವುದಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಸರಿಯಲ್ಲ. ಈ ವಿಷಯವನ್ನು ಅವರಿಗೆ ನಾನೇ ದೂರವಾಣಿ ಕರೆ ಮಾಡಿ ಹೇಳಿದ್ದೇನೆ, ಅವರೇನು ನನ್ನನ್ನು ಸಂಪರ್ಕ ಮಾಡಿರಲಿಲ್ಲ. ನಾನೇ ಅವರನ್ನು ಸಂಪರ್ಕ ಮಾಡಿದ್ದೇನೆ ಎಂದರು. ಉಳಿದ ಅವಧಿಯನ್ನು ಕೆಲಸ ಮಾಡಿಕೊಂಡು ಹೋಗಿ, ನಿಮ್ಮ ಅನುಭವ ಸದನಕ್ಕೆ ಬೇಕು ಎಂದಿದ್ದೇನೆ. ಅವರು ನನಗೆ ಆತ್ಮೀಯ ಸ್ನೇಹಿತರು. ಹೀಗಾಗಿ, ಸದನದಲ್ಲಿ ಇಂಥವರು ಇರಬೇಕು ಎನ್ನುವ ಕಾರಣಕ್ಕೆ ಹೇಳಿದ್ದೇನೆ ಎಂದರು.
ಸಂಸತ್ ಭವನ ಉದ್ಘಾಟನೆ ದೊಡ್ಡ ವಿಷಯ. ಈ ಕುರಿತು ನಾನು ಏನು ಹೇಳುವುದಿಲ್ಲ. ಯಾರನ್ನು ಕರೆಯಬೇಕು, ಯಾರನ್ನು ಕರೆಯಬಾರದು ಎನ್ನುವುದು ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದರು. ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ಸಿಗುತ್ತದೆ ಎಂದು ನಾನು ಅಂದುಕೊಂಡಿದ್ದೆ. ಆದರೆ ಅದು ಆಗಿಲ್ಲ. ಅವರಿಗೆ ಕೊಡಬೇಕಾಗಿತ್ತು ಎನ್ನುವುದು ನನ್ನ ಭಾವನೆ. ಅವರು ನನ್ನ ಸ್ನೇಹಿತರಾಗಿದ್ದರು. ಅವರು ಪಕ್ಷ ತೊರೆಯುವ ವೇಳೆಯಲ್ಲಿಯೂ ಅವರೊಂದಿಗೆ ಮಾತನಾಡಿದ್ದೇನೆ.
ಅಭಿವೃದ್ಧಿ ಬಿಟ್ಟು ಹಿಂದೂ ಧರ್ಮ ವಿರೋಧಿಸುವ ಹೊಸ ಸರ್ಕಾರ: ಆರಗ ಜ್ಞಾನೇಂದ್ರ
ಸ್ವಾಮೀಜಿಗಳ ಬಗ್ಗೆ ಗೌರವ: ನನಗೆ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳ ಬಗ್ಗೆ ಅಪಾರ ಗೌರವ ಇದೆ. ಈ ಕಾಲದಲ್ಲಿ ಇಂಥ ಸ್ವಾಮೀಜಿಗಳು ಇರುವುದು ಅಪರೂಪ. ಹೀಗಾಗಿ, ಈ ಭಾಗದಲ್ಲಿ ಬಂದಾಗಲೆಲ್ಲ ಅವರನ್ನು ಭೇಟಿಯಾಗಿ ಹೋಗುತ್ತೇನೆ. ಸದ್ಯದ ಬೆಳವಣಿಗೆಗಳು, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಕುರಿತು ಚರ್ಚೆ ಮಾಡಿದ್ದೇನೆ.ಅವರದು ದೊಡ್ಡ ಸೇವೆ ಇದೇ ಈ ಭಾಗಕ್ಕೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.