ಬೆಂಗಳೂರು ಗ್ರಾಮಾಂತರ ಕ್ಷೇತ್ರಾದ್ಯಂತ ಭರ್ಜರಿ ಬೆಟ್ಟಿಂಗ್‌ ಭರಾಟೆ!

By Kannadaprabha News  |  First Published Jun 2, 2024, 9:43 AM IST

ತೀವ್ರ ಕುತೂಹಲ ಮೂಡಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶಕ್ಕೆ ಎರಡು ದಿನಗಳಷ್ಟೇ ಬಾಕಿ ಉಳಿದಿದೆ. ಇದರ ಬೆನ್ನಲ್ಲೇ ಕ್ಷೇತ್ರದಾದ್ಯಂತ ಬೆಟ್ಟಿಂಗ್‌ ಭರಾಟೆ ಜೋರಾಗಿದ್ದು


ರಾಮನಗರ (ಜೂ.2): ತೀವ್ರ ಕುತೂಹಲ ಮೂಡಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶಕ್ಕೆ ಎರಡು ದಿನಗಳಷ್ಟೇ ಬಾಕಿ ಉಳಿದಿದೆ. ಇದರ ಬೆನ್ನಲ್ಲೇ ಕ್ಷೇತ್ರದಾದ್ಯಂತ ಬೆಟ್ಟಿಂಗ್‌ ಭರಾಟೆ ಜೋರಾಗಿದ್ದು ಎಲ್ಲ ಪಕ್ಷಗಳ ಮುಖಂಡರು ನಮ್ಮದೇ ಗೆಲುವು ಎಂದು ಬೀಗುತ್ತಿದ್ದಾರೆ. ಇನ್ನೊಂದೆಡೆ ಕ್ಷೇತ್ರವಾರು ಮತಗಳಿಕೆ ಬಗ್ಗೆಯೂ ಚರ್ಚೆ ಜೋರಾಗಿದೆ.

ಏಪ್ರಿಲ್‌ 26 ರಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ(Bengaluru rural Lok sabha constituency) ಚುನಾವಣೆ ನಡೆದಿತ್ತು. ಮತದಾನ ನಡೆದು ಬರೋಬ್ಬರಿ 36 ದಿನಗಳು ಕಳೆದಿದ್ದು, ಜೂ.4ರಂದು ಫಲಿತಾಂಶ ಹೊರ ಬೀಳಲಿದೆ. ಮತ ಎಣಿಕೆ ದಿನ ಹತ್ತಿರವಾಗುತ್ತಿದ್ದಂತೆ ಕ್ಷೇತ್ರದಲ್ಲಿ ಬೆಟ್ಟಿಂಗ್‌ ಭರಾಟೆಯೂ ಭರ್ಜರಿಯಾಗಿ ನಡೆಯುತ್ತಿದ್ದು, ಲಕ್ಷ ಲಕ್ಷ ಬಾಜಿ ಕಟ್ಟುವವರ ಸಂಖ್ಯೆಯೂ ಹೆಚ್ಚುತ್ತಿರುವುದು ಗುಟ್ಟಾಗೇನೂ ಇಲ್ಲ.

Latest Videos

undefined

ಪ್ರಧಾನಿ ನರೇಂದ್ರ ಮೋದಿ ಹ್ಯಾಟ್ರಿಕ್‌ ! ಸಮೀಕ್ಷೆಗಳ ಉತ್ತರ ಇಲ್ಲಿದೆ ನೋಡಿ!

ಕೈ ಪಾಳಯದಲ್ಲಿ ಗೆಲುವಿನ ಲೆಕ್ಕಾಚಾರ:

ಕಾಂಗ್ರೆಸ್‌ ಮತ್ತು ಬಿಜೆಪಿ -ಜೆಡಿಎಸ್‌ ಮೈತ್ರಿ ಪಕ್ಷಗಳೂ ಗೆಲುವು ನಮ್ಮದೇ ಎಂದು ಬೀಗುತ್ತಿವೆ. ಕಾಂಗ್ರೆಸ್‌ ಪಕ್ಷದ ಮುಖಂಡರು ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ನಮ್ಮದೇ ಶಾಸಕರಿದ್ದಾರೆ. ರಾಜರಾಜೇಶ್ವರಿ ಕ್ಷೇತ್ರದಲ್ಲಿ ಡಿಕೆ ಸಹೋದರರು ಹೆಚ್ಚಿನ ವರ್ಕ್ ಔಟ್ ಮಾಡಿದ್ದಾರೆ. ಹೀಗಾಗಿ ಬೆಂಗಳೂರು ದಕ್ಷಿಣ ಹಾಗೂ ಚನ್ನಪಟ್ಟಣ ಹೊರತುಪಡಿಸಿದರೆ ಮಿಕ್ಕೆಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಭಾರೀ ಅಂತರದ ಮತಗಳನ್ನು ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೇಶ್ ಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ದಕ್ಷಿಣ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್(Dr CN Manjunath) ಅವರಿಗೆ ಲೀಡ್‌ ಬಂದರೂ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಲಿದ್ದು ಗೆಲುವು ನಿರಾಯಾಸವಾಗಲಿದೆ ಎಂಬ ಲೆಕ್ಕಾಚಾರ ಹಾಕಲಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಹೊಂದಿರುವ ಶಾಸಕರ ಬಲ ಹಾಗೂ ಗ್ಯಾರಂಟಿಗಳ ಪ್ರಭಾವದ ಮೇಲೆ ನಂಬಿಕೆ ಇರಿಸಿದ್ದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಮೈತ್ರಿ ಕೂಟದಲ್ಲೂ ಜಯದ ವಿಶ್ವಾಸ:

ಮತ್ತೊಂದೆಡೆ ಬಿಜೆಪಿ - ಜೆಡಿಎಸ್‌ ಮಿತ್ರ ಪಕ್ಷಗಳ ಮುಖಂಡರು ಈ ಬಾರಿ ಜಯ ನಮ್ಮದಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದ ಬಿಜೆಪಿ ಕಡಿಮೆ ಅಂತರದಿಂದ ಸೋಲು ಅನುಭವಿಸಿತ್ತು.ಆದರೆ, ಈ ಬಾರಿ ಜೆಡಿಎಸ್‌ ಕೂಡಾ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿರುವುದರಿಂದ ಮೈತ್ರಿ ಅಭ್ಯರ್ಥಿಗೆ ಗೆಲುವು ಖಚಿತ ಎಂಬ ವಿಶ್ವಾಸದಲ್ಲಿದ್ದಾರೆ.

ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ, ಚನ್ನಪಟ್ಟಣ ಹಾಗೂ ಮಾಗಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆಯಲಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಉಳಿದ ಕ್ಷೇತ್ರಗಳಲ್ಲಿ ಲೀಡ್‌ ಪಡೆದರೂ ಈ ನಾಲ್ಕು ಕ್ಷೇತ್ರಗಳಲ್ಲಿ ಗಳಿಸುವ ಮತಗಳೇ ಬಿಜೆಪಿಯ ಗೆಲುವಿಗೆ ಸಾಕಾಗಲಿದೆ ಎಂಬ ಲೆಕ್ಕಾಚಾರದಲ್ಲಿದೆ. ಕಾಂಗ್ರೆಸ್‌ ಪಕ್ಷಕ್ಕೆ ಸದ್ಯಕ್ಕೆ ಬಿಜೆಪಿ ಮತಗಳ ಭಯಕ್ಕಿಂತ ಜೆಡಿಎಸ್‌ ಮತಗಳದ್ದೇ ಆತಂಕ. ಏಕೆಂದರೆ ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ, ಮಾಗಡಿ, ಚನ್ನಪಟ್ಟಣ, ಕುಣಿಗಲ್ ಕ್ಷೇತ್ರಗಳಲ್ಲಿ ಜೆಡಿಎಸ್‌ ಒಳ್ಳೆಯ ಮತಗಳನ್ನು ಪಡೆದಿತ್ತು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವುದರಿಂದ ಜೆಡಿಎಸ್‌ನ ಶೇ.80 ರಷ್ಟು ಮತಗಳು ಬಿಜೆಪಿಗೆ ಬಂದರೂ ಕಾಂಗ್ರೆಸ್‌ನ್ನು ಅತಿ ಹೆಚ್ಚಿನ ಮತಗಳ ಅಂತರದಿಂದ ಸೋಲಿಸಬಹುದು ಎಂಬ ವಿಶ್ವಾಸ ಮೈತ್ರಿ ಮುಖಂಡರಲ್ಲಿದೆ.

ಒಟ್ಟಾರೆ ಚುನಾವಣೆಯಲ್ಲಿ ಚಲಾವಣೆಯಾಗಿರುವ ಮತಗಳೆಷ್ಟು, ಅದರಲ್ಲಿ ಪುರುಷ ಮತ್ತು ಮಹಿಳಾ ಮತಗಳೆಷ್ಟು, ಜಾತಿವಾರು ಚಲಾವಣೆಯಾದ ಮತಗಳೆಷ್ಟು, ಯಾರ ಪರವಾಗಿ ಜನರು ಮಾತನಾಡುತ್ತಿದ್ದಾರೆ ಹೀಗೆ ನಾನಾ ರೀತಿಯ ಲೆಕ್ಕಾಚಾರದ ಪ್ರಕಾರ ಗೆಲುವಿನ ಸೂಕ್ಷ್ಮತೆಯನ್ನು ನಿರ್ಧರಿಸುವ ಪ್ರಯತ್ನಗಳು ನಡೆಯುತ್ತಿವೆ.

ಮಂಡ್ಯದಿಂದ ಬೂತ್ ಮಟ್ಟದವರೆಗೂ ಬೆಟ್ಟಿಂಗ್

ಬೆಂಗಳೂರು ಗ್ರಾಮಾಂತರ ಮಾತ್ರವಲ್ಲ, ಮಂಡ್ಯ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶದ ಬಗ್ಗೆಯೂ ಬೆಟ್ಟಿಂಗ್ ನಡೆಯುತ್ತಿದೆ. 2019ರ ಚುನಾವಣೆಯಲ್ಲಿ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಮತ್ತು ಅಂಬರೀಷ್ ಪತ್ನಿ ಸುಮಲತಾ ಅವರ ಸ್ಪರ್ಧೆಯಿಂದ ರಂಗು ಪಡೆದಿದ್ದ ಮಂಡ್ಯ ಸಂಸತ್ ಕ್ಷೇತ್ರ, ಈ ಬಾರಿ ಎಚ್.ಡಿ.ಕುಮಾರಸ್ವಾಮಿ ಅವರ ಸ್ಪರ್ಧೆಯಿಂದ ಮಹತ್ವ ಪಡೆದುಕೊಂಡಿದೆ.

ಜೆಡಿಎಸ್‌ ಭದ್ರ ಕೋಟೆ ಮಂಡ್ಯ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೈ ವಶವಾಯಿತು. ಈ ಬಾರಿ ಕುಮಾರಸ್ವಾಮಿ ಅವರೇ ಸ್ಪರ್ಧೆ ಮಾಡಿರುವ ಕಾರಣ, ಗೆಲುವು ಯಾರ ಪಾಲಾಗಲಿದೆ ಎನ್ನುವ ಬೆಟ್ಟಿಂಗ್ ರಾಮನಗರ ಜಿಲ್ಲೆಯಲ್ಲಿಯೂ ಜೋರಾಗಿಯೇ ನಡೆದಿದೆ. ಇದರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಫೇವರಿಟ್ ಆಗಿದ್ದಾರೆ.

ಇಂಡಿಯಾ ಕೂಟಕ್ಕೆ 295 ಸ್ಥಾನ, ಅಧಿಕಾರ: ಮಲ್ಲಿಕಾರ್ಜುನ ಖರ್ಗೆ

ಇಷ್ಟೇ ಅಲ್ಲದೇ, ರಾಮನಗರ ಜಿಲ್ಲೆಯಲ್ಲಿ ಈ ಬಾರಿ ಬೂತ್‌ ಮಟ್ಟಕ್ಕೂ ಸಹ ಬೆಟ್ಟಿಂಗ್ ಇಳಿದಿದೆ. ಯಾವ ಬೂತ್‌ನಲ್ಲಿ ಯಾರು ಎಷ್ಟು ಮತ ಪಡೆದುಕೊಳ್ಳಲಿದ್ದಾರೆ ಎಂದು ಲಕ್ಷಾಂತರ ರುಪಾಯಿ ಬೆಟ್ಟಿಂಗ್ ಕಟ್ಟುತ್ತಿದ್ದಾರೆ.

ವಿಧಾನಸಭೆ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಗೆ ಎಷ್ಟು ಲೀಡ್ ಸಿಗಲಿದೆ. ಇಂತಿಷ್ಟೇ ಮತಗಳನ್ನು ಅಭ್ಯರ್ಥಿಗಳು ಪಡೆದುಕೊಳ್ಳಲಿದ್ದಾರೆ ಎಂದು ಬಾಜಿ ಕಟ್ಟಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಪರವಾಗಿ ಬೆಟ್ಟಿಂಗ್ ಕಟ್ಟಲಾಗುತ್ತಿದೆ. 

click me!