ಕಾಂಗ್ರೆಸ್‌ ಟ್ವಿಟ್ಟರ್‌ ಖಾತೆ ಬ್ಲಾಕ್‌ ಮಾಡಲು ಕೋರ್ಟ್‌ ಆದೇಶಿಸಲು ಕಾರಣವೇನು? ಇಲ್ಲಿದೆ ಕಾಪಿರೈಟ್‌ ಕಥೆ

By Sharath Sharma KalagaruFirst Published Nov 8, 2022, 10:53 AM IST
Highlights

Congress twitter account block: ಕೆಜಿಎಫ್‌ ಹಾಡುಗಳನ್ನು ಬಳಸಿರುವ ಕಾರಣಕ್ಕೆ ಕಾಂಗ್ರೆಸ್‌ ಟ್ವಿಟ್ಟರ್‌ ಖಾತೆಯನ್ನು ತಾತ್ಕಾಲಿಕವಾಗಿ ಬ್ಲಾಕ್‌ ಮಾಡುವಂತೆ ಬೆಂಗಳೂರಿನ ನ್ಯಾಯಾಲಯ ಆದೇಶಿಸಿದೆ. ಇಷ್ಟಕ್ಕೂ ಕಾಪಿರೈಟ್‌ ಕಾಯ್ದೆಯೇನು? ಇದರಿಂದ ಆಗುವ ಸಮಸ್ಯೆಗಳೇನು? ಇಲ್ಲಿದೆ ಮಾಹಿತಿ

ಬೆಂಗಳೂರು: ಭಾರತ್‌ ಜೋಡೊ ಯಾತ್ರೆಯಲ್ಲಿ ಕೆಜಿಎಫ್‌ ಸಿನೆಮಾದ ಹಾಡನ್ನು ಬಳಕೆ ಮಾಡಿದ ಕಾರಣದಿಂದ ಎಂಆರ್‌ಟಿ ಮ್ಯೂಸಿಕ್‌ ಸಂಸ್ಥೆ ಕಾಂಗ್ರೆಸ್‌ ವಿರುದ್ಧ ಪ್ರಕರಣ ದಾಖಲಿಸಿತ್ತು. ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ಕಾಪಿರೈಟ್‌ ಪ್ರಕರಣ ದಾಖಲಾದ ನಂತರ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿತ್ತು. ಇದೀಗ ನ್ಯಾಯಾಲಯ ಕಾಂಗ್ರೆಸ್‌ನ ಟ್ವಿಟ್ಟರ್‌ ಖಾತೆಯನ್ನು ಬ್ಲಾಕ್‌ ಮಾಡುವಂತೆ ಆದೇಶ ನೀಡಿದೆ. ಆದರೆ ಕಾಂಗ್ರೆಸ್‌ ಈ ಕುರಿತಂತೆ ಯಾವುದೇ ಮಾಹಿತಿ ನಮಗೆ ಸಿಕ್ಕಿರಲಿಲ್ಲ. ನ್ಯಾಯಾಲಯದಲ್ಲಿ ತೀರ್ಪು ಬರುವ ಸಂದರ್ಭದಲ್ಲೂ ನಮ್ಮ ವಕೀಲರು ನ್ಯಾಯಾಲಯದಲ್ಲಿ ಇರಲಿಲ್ಲ. ನಮಗೆ ನೊಟೀಸ್‌ ಕೂಡ ಸಿಕ್ಕಿಲ್ಲ. ನಾವು ಎಲ್ಲ ರೀತಿಯ ಕಾನೂನಾತ್ಮಕ ಹೋರಾಟ ನಡೆಸಲೂ ಬದ್ಧರಾಗಿದ್ದೇವೆ ಎಂದು ಟ್ವೀಟ್‌ ಮಾಡಿದೆ. 

ಎಂಆರ್‌ಟಿ ಮ್ಯೂಸಿಕ್‌ ಸಂಸ್ಥೆಯ ಎಂ ನವೀನ್‌ ಕುಮಾರ್‌ ಎಂಬುವವರು ಕಾಂಗ್ರೆಸ್‌ ಮತ್ತು ರಾಹುಲ್‌ ಗಾಂಧಿ ವಿರುದ್ಧ ದೂರು ದಾಖಲಿಸಿದ್ದರು. ಸೂಪರ್‌ ಹಿಟ್‌ ಕೆಜಿಎಫ್‌ 2 ಚಿತ್ರದ ಹಾಡುಗಳನ್ನು ಕರ್ನಾಟಕದ ಭಾರತ್‌ ಜೋಡೊ ಯಾತ್ರೆಯಲ್ಲಿ ಬಳಸಲಾಗಿದೆ. ಆದರೆ ಅದಕ್ಕೆ ಅನುಮತಿ ಪಡೆದಿಲ್ಲ ಎಂದು ದೂರು ದಾಖಲಿಸಿದ್ದರು. ಕರ್ನಾಟಕದಿಂದ ಭಾರತ್‌ ಜೋಡೊ ಯಾತ್ರೆ ಆಂದ್ರ ಪ್ರದೇಶಕ್ಕೆ ತೆರಳಿತ್ತು. ಈ ನಡುವೆ ಕರ್ನಾಟಕದಲ್ಲಿ ಕೆಜಿಎಫ್‌ ಹಾಡುಗಳನ್ನು ಯಾತ್ರೆಯಲ್ಲಿ ಬಳಸಲಾಗಿದೆ ಎಂದು ಆರೋಪಿಸಲಾಗಿದೆ. 

ಭಾರತ್‌ ಜೋಡೊ ಯಾತ್ರೆಯ ಟ್ವಿಟ್ಟರ್‌ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ನ್ಯಾಯಾಲಯ ಆದೇಶಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ನಮಗೆ ಯಾವುದೇ ಮಾಹಿತಿಯಿಲ್ಲ, ನಮಗೆ ಕೋರ್ಟ್‌ನ ಆದೇಶ ಪ್ರತಿ ಕೂಡ ಸಿಕ್ಕಿಲ್ಲ ಎಂದು ಟ್ವೀಟ್‌ ಮಾಡಿದೆ. "ನಾವು ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರು ನ್ಯಾಯಾಲಯ ಐಎನ್‌ಸಿ ಮತ್ತು ಭಾರತ್‌ ಜೋಡೊ ಯಾತ್ರಾ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳನ್ನು ಸ್ಥಗಿತಗೊಳಿಸುವಂತೆ ಕೋರ್ಟ್‌ ನೀಡಿರುವ ಆದೇಶದ ಬಗ್ಗೆ ನೋಡಿದ್ದೇವೆ. ನಮಗೆ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ ಮತ್ತು ನ್ಯಾಯಾಲಯದಲ್ಲಿ ನಾವು ಇರಲೂ ಇಲ್ಲ. ಆದೇಶ ಪ್ರತಿಯೂ ನಮಗೆ ಸಿಕ್ಕಿಲ್ಲ. ಎಲ್ಲ ರೀತಿಯ ಕಾನೂನಾತ್ಮಕ ಕ್ರಮಗಳನ್ನೂ ಪರಿಶೀಲಿಸುತ್ತಿದ್ದೇವೆ," ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ. 

ಇದನ್ನೂ ಓದಿ: ಪಿಎಫ್‌ಐ ಬ್ಯಾನ್‌, ಕಾಂಗ್ರೆಸ್‌ ಮುಖ್ಯಮಂತ್ರಿ ಅಭ್ಯರ್ಥಿ ಮತ್ತು ಕೈ ಅಧ್ಯಕ್ಷ ಚುನಾವಣೆ ಬಗ್ಗೆ ರಾಹುಲ್‌ ಗಾಂಧಿ ಮಾತು

ಕಾಪಿರೈಟ್‌ ಕಾಯ್ದೆ ಏನು ಹೇಳುತ್ತದೆ?:

ಕಾಪಿರೈಟ್‌ ಕಾಯ್ದೆಯಡಿ ಪ್ರತಿಯೊಂದು ಕೃತಿ, ಹಾಡು, ಸಿನೆಮಾ, ಸಂಸ್ಥೆ ಎಲ್ಲವೂ ಪರವಾನಗಿ ಪಡೆದಿರುತ್ತದೆ. ಒಮ್ಮೆ ಕಾಪಿರೈಟ್‌ ಪಡೆದರೆ ಅದರ ಅವಧಿ ಮುಗಿಯುವರೆಗೂ ಅದನ್ನು ಬೇರೊಬ್ಬರು ಬಳಸುವಂತಿಲ್ಲ. ಹಾಗೊಂದು ವೇಳೆ ಬಳಸಿದರೆ ಕಾನೂನು ಕ್ರಮ ಜರುಗಿಸುವ ಹಕ್ಕು ಕಾಪಿರೈಟ್‌ ಹೊಂದಿರುವ ವ್ಯಕ್ತಿ ಅಥವಾ ಸಂಸ್ಥೆ ಹೊಂದಿರುತ್ತದೆ. ಇದೇ ಕಾರಣಕ್ಕಾಗಿ ಈಗ ಕಾಂಗ್ರೆಸ್‌ ಸಮಸ್ಯೆಯಲ್ಲಿ ಸಿಲುಕಿದೆ. ಕೃತಿ ಚೌರ್ಯ ದೊಡ್ಡ ಅಪರಾಧವಾಗಿದ್ದು, ಹಲವು ಸಂಸ್ಥೆಗಳು ಮಾಡಿದ ಸಣ್ಣ ತಪ್ಪುಗಳಿಗೆ ದೊಡ್ಡ ಬೆಲೆಗಳನ್ನು ತೆತ್ತಿವೆ. ಸಾರ್ವಜನಿಕ ಸಭೆಗಳಲ್ಲಿ, ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಕಾಪಿರೈಟ್‌ ಹೊಂದಿರುವ ಮ್ಯೂಸಿಕ್‌ ಹಾಕುವಂತಿಲ್ಲ. ಒಂದು ವೇಳೆ ಹಾಕಿದರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ.

ಇದನ್ನೂ ಓದಿ: "ಅವರು ಕಾಲಿಟ್ಟಲ್ಲೆಲ್ಲಾ ಕಮಲ ಅರಳತ್ತೆ"; ಸೋನಿಯಾ - ಪ್ರಿಯಾಂಕಾಗೆ ಸ್ವಾಗತ ಕೋರಿದ ಬಿಜೆಪಿಯ ಲಕ್ಷಣ್‌ ಸವದಿ

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಭಾರತ್‌ ಜೋಡೊ ಯಾತ್ರೆ ಆರಂಭವಾಗಿ ಎರಡು ತಿಂಗಳಾಗಿವೆ. ಕರ್ನಾಟಕದಲ್ಲಿ ಬರೋಬ್ಬರಿ 18 ದಿನಗಳ ಕಾಲ ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ನ ಇತರ ಮುಖಂಡರು ಪಾದಯಾತ್ರೆ ಮಾಡಿದ್ದಾರೆ. ಯಾತ್ರೆ ಸದ್ಯ ಪಕ್ಕದ ಆಂಧ್ರಪ್ರದೇಶದಲ್ಲಿದೆ. ಅಲ್ಲಿಂದ ಮುಂದುವರೆದು ಒರಿಸ್ಸಾಗೆ ತೆರಳಲಿದೆ. ಕೇರಳ, ತಮಿಳುನಾಡು, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಸದ್ಯ ಯಾತ್ರೆ ನಡೆದಿದೆ. ರಾಹುಲ್‌ ಗಾಂಧಿ ಭಾರತದ ಕೋಮು ಸೌಹಾರ್ದತೆಗಾಗಿ, ಭ್ರಾತೃತ್ವಕ್ಕಾಗಿ ಭಾರತ್‌ ಏಕತಾ ಯಾತ್ರೆ ಮಾಡುತ್ತಿದ್ದಾರೆ.

click me!