
ಶಿವಮೊಗ್ಗ (ನ.08): ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒಬ್ಬ ಅಲೆಮಾರಿ ರಾಜಕಾರಣಿ. ಅಲೆಮಾರಿ ಎಲ್ಲಿಯೇ ನಿಂತರೂ ಸೋಲುತ್ತಾರೆ. ಕೋಲಾರಕ್ಕೆ ಆಹ್ವಾನಿಸಿದ್ದಾರೆ, ಜಮೀರ್ ಕರೆಯುತ್ತಿದ್ದಾರೆ ಅಂತಾರೆ. ಎಲ್ಲರೂ ಸುಮ್ಮನೆ ಕರೆಯುತ್ತಾರೆ. ಯಾರು ತಮ್ಮ ಕ್ಷೇತ್ರ ಬಿಟ್ಟು ಕೊಡಲು ಸಿದ್ಧರಿಲ್ಲ. ಸಿದ್ದರಾಮಯ್ಯ ಎರಡು ಕಡೆ ಅಲ್ಲ, ರಾಜ್ಯದ 224 ಕ್ಷೇತ್ರದಲ್ಲೂ ನಿಲ್ಲಲಿ. ಎಲ್ಲಿ ನಿಂತರೂ ಅವರಿಗೆ ಸೋಲು ನಿಶ್ಚಿತ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕುಟುಕಿದರು.
ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ಹಿರಿಯ ರಾಜಕಾರಣಿ. ಅವರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಿದ್ದು ಇದೇ ಕಾಂಗ್ರೆಸ್ಸಿಗರು, ಸಿದ್ದರಾಮಯ್ಯ. ಇದೀಗ ಡಿ.ಕೆ.ಶಿವಕುಮಾರ್‌ಗೂ ಅಡ್ಡಗಾಲು ಹಾಕುತ್ತಿದ್ದಾರೆ. ನನಗೆ ಆಗ ಅನ್ಯಾಯ ಮಾಡಿದ್ದೆ, ಈಗ ನಾನೂ ಸರಿಯಾಗಿ ಮಾಡ್ತೀನಿ ಅಂತ ಸಿದ್ದರಾಮಯ್ಯಗೆ ಬುದ್ಧಿ ಕಲಿಸಲು ಖರ್ಗೆ ಸಿದ್ಧರಾಗಿದ್ದಾರೆ. ಕಾಂಗ್ರೆಸ್‌ನ ಅನೇಕರ ಪರಿಸ್ಥಿತಿಯೂ ಇದೇ ಆಗಿದೆ. ಇನ್ನು 150 ಸ್ಥಾನ ಎಲ್ಲಿ ಗೆಲ್ಲೋದು? ಎಂದರು
ಸಿದ್ದರಾಮಯ್ಯಗೆ ಬಿಜೆಪಿ ಬಿಟ್ಟು ಬೇರೆ ಮಾತಾಡಲು ಏನಿದೆ?: ಕೆ.ಎಸ್.ಈಶ್ವರಪ್ಪ
ಕಾಂಗ್ರೆಸ್ ಬೆತ್ತಲಾಗಿದೆ: ಕಾಂಗ್ರೆಸ್ ಪಕ್ಷ ಬಿಟ್ಟು ಹೋದವರನ್ನು ಮರಳಿ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡೆ ಕುರಿತು ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ಈ ರೀತಿ ಆಹ್ವಾನ ನೀಡುವ ಮೂಲಕ ತಮ್ಮ ಪಕ್ಷ ಬೆತ್ತಲೆ ಆಗಿದೆ ಎಂದು ಅವರೇ ಒಪ್ಪಿಕೊಂಡಂತಾಗಿದೆ ಎಂದು ಹೇಳಿದ್ದಾರೆ. ಅಂದು ಪಕ್ಷ ಬಿಟ್ಟು ಹೋದವರನ್ನು ಮರಳಿ ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲ್ಲ ಅಂದಿದ್ದರು. ಈಗ ಆವರೇ ಮರಳಿ ಬರುವಂತೆ ಆಹ್ವಾನ ನೀಡುತ್ತಿದ್ದಾರೆ. ಇಂಥ ಪರಿಸ್ಥಿತಿ ಕಾಂಗ್ರೆಸ್‌ಗೆ ಬರಬಾರದಿತ್ತು. ಕಾಂಗ್ರೆಸ್‌ನಲ್ಲಿ ಚುನಾವಣೆಗೆ ನಿಲ್ಲುವವರು ಎರಡು ಲಕ್ಷ ಕೊಡಬೇಕಂತೆ. ನಿಷ್ಠಾವಂತ ಕಾಂಗ್ರೆಸ್ಸಿಗ ಎರಡು ಲಕ್ಷ ಎಲ್ಲಿಂದ ತರುತ್ತಾನೆ. ಬಡವರು ಚುನಾವಣೆಗೆ ನಿಲ್ಲಬಾರದು ಅಂತ ಕಾಂಗ್ರೆಸ್ ಹೇಳಿ ಬಿಡಲಿ. ಈ ರೀತಿಯ ಹೇಳಿಕೆ ನೀಡಿದ ಡಿ.ಕೆ.ಶಿವಕುಮಾರ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
150 ಕ್ಷೇತ್ರದಲ್ಲಿ ಬಿಜೆಪಿ ಗೆಲುವು: ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ವಿಭಾಗದ ಶೃಂಗೇರಿ, ಭದ್ರಾವತಿ, ಹಳಿಯಾಳ ಕ್ಷೇತ್ರದಲ್ಲಿ ಬಿಜೆಪಿ ಸೋತಿದೆ. ಈ ಬಾರಿ ಚುನಾವಣೆಯಲ್ಲಿ ಆ ಮೂರು ಕ್ಷೇತ್ರದಲ್ಲೂ ನಮಗೂ ಗೆಲುವು ಸಿಗಲಿದ್ದು, ರಾಜ್ಯದಲ್ಲಿ 150 ಸ್ಥಾನ ಗಳಿಸುವುದು ಖಚಿತ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಶಿವಮೊಗ್ಗ ವಿಭಾಗ ಸಭೆ (ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆ)ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ನಮ್ಮ ಕ್ಷೇತ್ರಗಳಲ್ಲಿ ಬಿಜೆಪಿ ಯಾವ ರೀತಿಯಲ್ಲಿ ಸಂಘಟನೆಯಾಗಿದೆ.
ಏನೇನು ಅಭಿವೃದ್ಧಿಗಳು ಆಗಿವೆ ಎಂಬ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ಅರಿತು ಜನರಿಗೆ ಮನದಟ್ಟು ಮಾಡಿಕೊಡುವಲ್ಲಿ ಯಶಸ್ವಿಯಾಗಬೇಕು ಎಂದು ಕರೆ ನೀಡಿದರು. ಪಕ್ಷದ ಸಿದ್ಧಾಂತ, ಸಂಘಟನೆ ಮತ್ತು ನಾಯಕತ್ವವನ್ನು ಜನ ಗುರುತಿಸಿ ಬಿಜೆಪಿ ಕಡೆಗೆ ಆಕರ್ಷಿತರಾಗುತ್ತಾರೆ. ಈ ಹಿಂದೆ ದೇಶದಲ್ಲಿ ರಾಷ್ಟ್ರಭಕ್ತಿ ಜಾಗೃತಿ ಮತ್ತು ನಮ್ಮತನ ಮರೆತ ನಾಯಕತ್ವವನ್ನು ಜನ ನೋಡಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾದ ನಂತರ ಸ್ವಾತಂತ್ರ್ಯ ಹೋರಾಟಗಾರರ ಕಲ್ಪನೆ ಒಂದೊಂದಾಗಿ ಈಡೇರುತ್ತಿದೆ. ಆರ್ಟಿಕಲ್ 370 ರದ್ದಾಯಿತು.
ಈಶ್ವರಪ್ಪ ಬಾಯ್‌ಬಿಟ್ರೆ ಶಿವಮೊಗ್ಗದಲ್ಲಿ ಗಲಭೆ ಸೃಷ್ಟಿಯಾಗುತ್ತೆ: ಸಿ.ಎಂ.ಇಬ್ರಾಹಿಂ ಆರೋಪ
ತ್ರಿವಳಿ ತಲಾಖ್ ನಿಷೇಧ ಜಾರಿಯಾಗಿ ಮುಸ್ಲಿಂ ಸಹೋದರಿಯರಿಗೆ ನೆಮ್ಮದಿ ಸಿಕ್ಕಿದೆ ಎಂದರು. ಅಯೋಧ್ಯೆ, ಮಥುರಾ, ಕಾಶಿ ಕ್ಷೇತ್ರಗಳ ಕುರಿತ ಭಾರತೀಯರ ಕನಸು ಈಗ ನನಸಾಗುತ್ತಿದೆ. ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ಕಟ್ಟುತ್ತಿದ್ದಾರೆ. ಮಥುರಾ, ಕಾಶಿ ಕೂಡ ವಿಮುಕ್ತವಾಗಿ ಕೋಟ್ಯಂತರ ಭಾರತೀಯರ ಕನಸು ನನಸಾಗಲಿದೆ. ದೇಶಭಕ್ತಿ ಎಂಬ ಭಾವನೆ ಬಂದಾಗ ಎಲ್ಲರೂ ಒಟ್ಟಾಗಿ ಪಕ್ಷಬೇಧ ಮರೆತು ಬಿಜೆಪಿ ಬೆಂಬಲಿಸುತ್ತಿದ್ದಾರೆ. ಸರ್ಜಿಕಲ್ ಸ್ಟೆ್ರೖಕ್ ಆದಾಗ ಇಡೀ ವಿಶ್ವವೇ ಪ್ರಧಾನಿ ಮೋದಿ ಜೊತೆಗೆ ನಿಂತಿತ್ತು. ಈಗ ಜನ ಬಿಜೆಪಿಯವರು ರಾಷ್ಟ್ರವಾದಿಗಳು. ಕಾಂಗ್ರೆಸ್‌ನವರೇ ಕೋಮುವಾದಿಗಳು ಎಂದು ತೀರ್ಮಾನಿಸಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.