Latest Videos

ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ನಾಳೆ ಬಿಜೆಪಿ ಪ್ರತಿಭಟನೆ; ಆರ್. ಅಶೋಕ್

By Sathish Kumar KHFirst Published Jun 16, 2024, 4:47 PM IST
Highlights

ಪೆಟ್ರೋಲ್, ಡೀಸೆಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ನಾಳೆ ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ಮಾಡಲಾಗುತ್ತದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ.

ಬೆಂಗಳೂರು (ಜೂ.16): ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕಳೆದ ಒಂದು ವರ್ಷದ ಅವಧಿಯಲ್ಲಿ ಹಾಲಿನ ಬೆಲೆ ಜಾಸ್ತಿ, ಸ್ಟಾಂಪ್ ಡ್ಯೂಟಿ ಜಾಸ್ತಿ ಮಾಡಿದರು. ವಿದ್ಯುತ್ ತೆರಿಗೆ, ಮನೆ ತೆರಿಗೆ ಜಾಸ್ತಿ ಮಾಡಿದರು. ಈಗ ಪೆಟ್ರೋಲ್  3 ರೂಪಾಯಿ ಹಾಗೂ ಡೀಸೆಲ್ ಬೆಲೆ 3.50 ರೂಪಾಯಿ ಜಾಸ್ತಿ ಮಾಡಿದ್ದಾರೆ. ಈ ಬೆಲೆ ಏರಿಕೆಯನ್ನು ಖಂಡಿಸಿ ಬೆಂಗಳೂರಿನಲ್ಲಿ ನಾಳೆ (ಜೂ.17) ಪ್ರತಿಭಟನೆ ಮಾಡಲಿದ್ದೇವೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. 

ಈ ಕುರಿತು ವಿಧಾನಸೌಧದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಬೆಲೆ ಏರಿಕೆ ಕುರಿತ ಪೋಸ್ಟರ್ ಮತ್ತು ಸಿಎಂ ಸಿದ್ದರಾಮಯ್ಯ ಮಾತನಾಡಿದ್ದ ವಿಡಿಯೋ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪೆಟ್ರೋಲ್ ಬೆಲೆ ಕಡಿಮೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕಳೆದ ಒಂದು ವರ್ಷದ ಅವಧಿಯಲ್ಲಿ ಎಲ್ಲಾ ರೀತಿಯ ಭಾಗ್ಯ ಕೊಟ್ಟಿದ್ದಾರೆ. ಕರ್ನಾಟಕದ ಜನತೆ ಮೇಲೆ ದೌರ್ಜನ್ಯ ಮಾಡ್ತಿದ್ದಾರೆ. ಹಾಲಿನ ಬೆಲೆ ಜಾಸ್ತಿ, ಸ್ಟಾಂಪ್ ಡ್ಯೂಟಿ ಜಾಸ್ತಿ ಮಾಡಿದರು.  ವಿದ್ಯುತ್ ಮತ್ತು ಮನೆ ತೆರಿಗೆ ಜಾಸ್ತಿ ಮಾಡಿದರು. ಈಗ ಪೆಟ್ರೋಲ್  3 ರೂಪಾಯಿ, ಡಿಸೇಲ್ ಬೆಲೆ 3.50 ರೂಪಾಯಿ ಜಾಸ್ತಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇವರ ಯೋಗ್ಯತೆಗೆ ಪಾರ್ಲಿಮೆಂಟ್ ನಲ್ಲಿ 100 ಸೀಟ್ ತಗೊಳ್ಳೋಕೆ ಆಗಿಲ್ಲ. ಅದರೆ, ಪೆಟ್ರೋಲ್ ರೇಟ್ ಮಾತ್ರವೇ ನೂರಕ್ಕೆ ದಾಟಿಸಿದ್ದಾರೆ. ತೆರಿಗೆ ಹಾಕೋಕೆ ಬೇರೆ ಎಲ್ಲೂ ಜಾಗ ಇಲ್ಲ. ಹೀಗಾಗಿ, ಕೊನೆಗೆ ಪೆಟ್ರೋಲ್ ಹಾಗೂ ಡಿಸೇಲ್ ಮೇಲೆ ತೆರಿಗೆ ಹಾಕಿದ್ದರು. ರೈತರಿಗೆ ಹಾಲಿನ ಸಬ್ಸಿಡಿ ಕೊಡ್ಲಿಲ್ಲ. ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ಮಾಡಬೇಕು, ಅದನ್ನು ಇನ್ನೂ ಮಾಡಿಲ್ಲ. ಟಕಾ ಟಕ್ ಅಂತ ರಾಹುಲ್ ಗಾಂಧಿ ಹೇಳಿದ್ದರು. ಬಿಜೆಪಿ ನಾಳೆ ಇಡೀ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ. ಬೆಂಗಳೂರಿನಲ್ಲಿ ನಾಳೆ ವಿಪಕ್ಷ ಆರ್.ಅಶೋಕ್ ಹಾಗೂ ವಿಜಯೇಂದ್ರ‌ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಿದ್ದೇವೆ ಎಂದು ಹೇಳಿದರು.

ಬಿಜೆಪಿ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ತಗ್ಗಿಸಿತ್ತು, ನಾವು ಬೆಲೆ ಏರಿಕೆ ಮಾಡಿದ್ದೇವೆಂದ ಸಿಎಂ ಸಿದ್ದರಾಮಯ್ಯ

ಕರ್ನಾಟಕದ ಜನ ಕಾಂಗ್ರೆಸ್ ಗೆ ವೋಟ್ ಹಾಕಿಲ್ಲ ಅಂತ ದರ ಏರಿಕೆ ಹೆಚ್ಚಳ ಮಾಡಿದ್ದಾರೆ. ಮಾನ ಮರ್ಯಾದೆ ಇದ್ದರೆ ಕೂಡಲೇ ದರ ಏರಿಕೆ ವಾಪಸ್ ಪಡೆಯಬೇಕು. ಸರ್ಕಾರ ಪಾಪರ್ ಆಗಿದೆ, ಕಮಿಷನ್ ಹೊಡೆಯೋಕು ದುಡ್ಡು ಇಲ್ಲ. ಕಾರ್ಪೋರೇಷನ್ ವಾರ್ಡ್ ಆಫೀಸ್ ಅಡ ಇಡಲು ನೀಲಿ ನಕ್ಷೆ ರೆಡಿಯಾಗ್ತಿದೆ. ಈ ಸರ್ಕಾರ ಒಂದು ವರ್ಷ ಇದ್ದರೆ, ವಿಧಾನಸೌಧ ಅಡ ಇಡಬಹುದು. ಸಿದ್ದರಾಮಯ್ಯ ಔಟ್ ಗೋಯಿಂಗ್ ಮುಖ್ಯಮಂತ್ರಿ. ಇವರು ಹೋಗುವಾಗ ವಿಧಾನಸೌಧ ಅಡ ಇಟ್ಟು ಹೋಗಬಹುದು ಎಂದು ಆರೋಪಿಸಿದರು.

ರಾಜ್ಯದಲ್ಲಿ ದರ ಏರಿಕೆ ವಿರುದ್ಧವಾಗಿ ಪ್ರತಿಭಟನೆ ಮಾಡುತ್ತೇವೆ. ಜನರು ಸಹ ಈ ಪ್ರತಿಭಟನೆಯಲ್ಲಿ ಭಾಗಿಯಾಗಬೇಕು ಎಂದು ಒತ್ತಾಯ ಮಾಡುತ್ತೇವೆ. ಆರ್ಥಿಕ ಇಲಾಖೆ ಸಂಪೂರ್ಣವಾಗಿ ದಿವಾಳಿ ಆಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಶ್ವೇತ ಪತ್ರ ಹೊರಡಿಸಿ ಎಂದು ಬಹಳಷ್ಟು ಸಾರಿ ಕೇಳಿದ್ದೇವೆ. ಆದರೂ, ಕ್ಯಾರೇ ಎನ್ನುತ್ತಿಲ್ಲ. ಕಾರ್ಪೊರೇಷನ್, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಜನ ಇವರಿಗೆ ಚೊಂಬು ತೋರಿಸ್ತಾರೆ. ಬಿಬಿಎಂಪಿ, ಇತರೆ ಚುನಾವಣೆಯಲ್ಲಿ ಗ್ಯಾರಂಟಿ ಚೊಂಬು ಕೊಡ್ತಾರೆ ಎಂದು ವಾಗ್ದಾಳಿ ನಡೆಸಿದರು.

ಇಂಧನದ ಮೇಲೆ ಸೇಲ್ಸ್ ಟಾಕ್ಸ್ ಹಾಕಿದ ರಾಜ್ಯ ಸರ್ಕಾರ: ಪೆಟ್ರೋಲ್ ಡಿಸೇಲ್ ದರದಲ್ಲಿ 3 ರೂ. ಏರಿಕೆ

ವಾಲ್ಮೀಕಿ ನಿಗಮದ ಹೋರಾಟ ಯಾವುದೇ ಕಾರಣಕ್ಕೂ ಬಿಡೋದಿಲ್ಲ. ನಿನ್ನೆ ಎಸ್ಟಿ ಮೋರ್ಚಾದ ಸಭೆ ನಡೆಸಲಾಗಿದೆ. ಮಾಜಿ ಸಚಿವ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ಅವರು ತಗೊಂಡಿರೋದು‌ ಕೇವಲ ಶೇ.20 ಅಷ್ಟೇ. ಉಳಿದವರದ್ದು ಶೇ.80 ಹಣ ಪಡೆದಿದ್ದಾರೆ. ವಿಧಾನಸೌಧದಲ್ಲಿ ಇನ್ನೂ ಮೂವರು ಇದ್ದಾರೆ. ಅವರು ಕೂಡ ರಾಜೀನಾಮೆ ಕೊಡಬೇಕು. ಇನ್ನು ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಜನರ ಖಾತೆಗೆ ಟಕಾ ಟಕ್ ಅಂತ ಹಣ ಹಾಕ್ತೀವಿ ಎಂದಿದ್ದರು. ಈ ಮಾತನ್ನು ಹೇಳಿದ ರಾಹುಲ್ ಗಾಂಧಿಗೆ ನಾಚಿಕೆ ಆಗಬೇಕು. ಯಾವ ಮುಖ‌ ಇಟ್ಟುಕೊಂಡು ಇಲ್ಲಿಗೆ ಬರ್ತಾರೋ. ಕರ್ನಾಟಕದಲ್ಲಿ ಕಾಂಗ್ರೆಸ್ ಶನಿ ಸಂತಾನ ಆಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದರು.

click me!