Latest Videos

ಸಚಿವ ಸ್ಥಾನ ಬಯಸದೇ ಬಂದ ಭಾಗ್ಯ: ಕೇಂದ್ರ ಸಚಿವ ಸೋಮಣ್ಣ

By Kannadaprabha NewsFirst Published Jun 16, 2024, 12:59 PM IST
Highlights

ತಾಳಿದವನು ಬಾಳಿಯಾನು ಎಂಬ ನಾಣ್ಣುಡಿಗೆ ತಕ್ಕಂತೆ ವಿ.ಸೋಮಣ್ಣ ಅವರು ಕೇಂದ್ರ ಸಚಿವ ಸ್ಥಾನ ದೊರೆತಿದ್ದು, ಶ್ರೀಯುತರು ಶ್ರೀ ಮಠದ ವಿದ್ಯಾರ್ಥಿ ಹಾಗೂ ಪರಮಭಕ್ತರು ಎಂಬುದು ಸಂತೋಷ ಹಾಗೂ ಹೆಮ್ಮೆಯ ವಿಷಯ ಎಂದು ಶ್ರೀ ದೇಗುಲಮಠದ ಕಿರಿಯ ಸ್ವಾಮೀಜಿ ಚನ್ನಬಸವ ಶ್ರೀಗಳು ಹರ್ಷ ವ್ಯಕ್ತಪಡಿಸಿದರು. 

ಕನಕಪುರ (ಜೂ.16): ತಾಳಿದವನು ಬಾಳಿಯಾನು ಎಂಬ ನಾಣ್ಣುಡಿಗೆ ತಕ್ಕಂತೆ ವಿ.ಸೋಮಣ್ಣ ಅವರು ಕೇಂದ್ರ ಸಚಿವ ಸ್ಥಾನ ದೊರೆತಿದ್ದು, ಶ್ರೀಯುತರು ಶ್ರೀ ಮಠದ ವಿದ್ಯಾರ್ಥಿ ಹಾಗೂ ಪರಮಭಕ್ತರು ಎಂಬುದು ಸಂತೋಷ ಹಾಗೂ ಹೆಮ್ಮೆಯ ವಿಷಯ ಎಂದು ಶ್ರೀ ದೇಗುಲಮಠದ ಕಿರಿಯ ಸ್ವಾಮೀಜಿ ಚನ್ನಬಸವ ಶ್ರೀಗಳು ಹರ್ಷ ವ್ಯಕ್ತಪಡಿಸಿದರು. ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ವಿ.ಸೋಮಣ್ಣಗೆ ಶ್ರೀ ಮಠದ ಹಳೆಯ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಅಭಿನಂದಿಸಿ ಮಾತನಾಡಿದರು.

ಸರಳ, ಸಜ್ಜನಿಕೆಯ ವ್ಯಕ್ತಿಯಾಗಿರುವ ಸೋಮಣ್ಣ ಸದಾ ಕ್ರಿಯಾಶೀಲ ವ್ಯಕ್ತಿಯಾಗಿದ್ದು, ಅವರು ತಮ್ಮ ಸರ್ಕಾರದ ಅಧಿಕಾರದ ಅವಧಿಯಲ್ಲಿ ಕೈಗೊಂಡ ಹಲವು ಜನಪ್ರಿಯ ಕಾರ್ಯಕ್ರಮಗಳು ಜನರ ಮನಸ್ಸಿನಲ್ಲಿ ಈಗಲೂ ಇದೆ. ಇಂತಹ ವ್ಯಕ್ತಿಯನ್ನು ಗುರುತಿಸಿ ಕೇಂದ್ರ ಸರ್ಕಾರದ ಉನ್ನತ ಸ್ಥಾನ ನೀಡಿರುವುದು ಅವರ ಶ್ರಮಕ್ಕೆ ಸಿಕ್ಕ ಪ್ರತಿಫಲವನ್ನು ದೇವರು ನೀಡಿದ್ದಾರೆ. ಮಾನ್ಯ ಮಂತ್ರಿಗಳು ತಮಗೆ ಸಿಕ್ಕ ಸ್ಥಾನದಿಂದ ರಾಜ್ಯ ಹಾಗೂ ದೇಶದ ಅಭಿವೃದ್ಧಿಗೊಳಿಸಲಿ ಎಂದು ಶುಭ ಹಾರೈಸಿದರು. ಶ್ರೀ ಮಠದ ಭಕ್ತರು ಹಾಗೂ ಹಿತೈಷಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಕೇಂದ್ರ ಸಚಿವ ಸೋಮಣ್ಣ, ನನಗೆ ಸಚಿವ ಸ್ಥಾನ ಬಯಸದೇ ಬಂದ ಭಾಗ್ಯ. 

ಜೆಡಿಎಸ್ ಉಳಿಯಲ್ಲ ಎನ್ನುವವರಿಗೆ ಜನರಿಂದ ತಕ್ಕ ಉತ್ತರ: ನಿಖಿಲ್ ಕುಮಾರಸ್ವಾಮಿ

ತಾಲೂಕಿನ ಕುಗ್ರಾಮ ಯಲವನಾಥದಿಂದ ದೆಹಲಿಗೆ ಇಡೀ ವಿಶ್ವವೇ ಮೆಚ್ಚಿ ಗುರುವಿನ ಸ್ಥಾನದಲ್ಲಿ ಕಾಣುತ್ತಿರುವ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯೊಂದಿಗೆ ಕುಳಿತುಕೊಳ್ಳುವ ಹಾಗೂ ಕೆಲಸ ಮಾಡುವ ಅವಕಾಶ ದೊರೆತಿರುವುದು ನನ್ನ ಪೂಜ್ಯ ತಂದೆ-ತಾಯಿ, ಆದಿಚುಂಚನಗಿರಿ, ಸಿದ್ಧಗಂಗಾ ಹಾಗೂ ದೇಗುಲ ಮಠದ ಪರಮ ಪೂಜ್ಯರ ಆಶೀರ್ವಾದದಿಂದ ಸಾಧ್ಯವಾಗಿದೆ ಎಂದು ಸ್ಮರಿಸಿದರು. ನಿಮ್ಮ ತಾಲೂಕಿನ ಮಗನನ್ನು ತುಮಕೂರಿನ ಜನತೆ ತಮ್ಮ ಮನೆಯ ಮಗನಂತೆ ಕಂಡು ಪ್ರೀತಿ, ವಿಶ್ವಾಸವಿಟ್ಟು ನನಗೆ ಅಭೂತಪೂರ್ವ ಬೆಂಬಲ ನೀಡಿ ಗೆಲ್ಲಿಸಿದ್ದು ಅವರ ಋಣ ನಾನೆಂದಿಗೂ ಮರೆಯಲು ಸಾಧ್ಯವಿಲ್ಲ. ಒಳ್ಳೆಯತನಕ್ಕೆ ದೇವರು ಎಂದಿಗೂ ಜೊತೆ ಇರುತ್ತಾನೆ ಎಂಬುದಕ್ಕೆ ನಾನೇ ಸಾಕ್ಷಿ. 

ಸೋಲಿನಿಂದ ಕಂಗೆಟ್ಟಿದ್ದ ನನ್ನ ಮೇಲೆ ವಿಶ್ವಾಸವಿಟ್ಟು ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿ ಸಂಸದನಾಗಿ ಆಯ್ಕೆಯಾಗಲು ನನಗೆ ಶಕ್ತಿ ತುಂಬಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹಮಂತ್ರಿ ಅಮಿತ್ ಶಾ, ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಕುಮಾರಸ್ವಾಮಿಯವರ ಬೆಂಬಲದ ಜೊತೆಗೆ ಸಿದ್ಧಗಂಗಾ ಮಠದ ನಡೆದಾಡುವ ದೇವರು ಡಾ. ಶಿವಕುಮಾರ ಮಹಾ ಸ್ವಾಮೀಜಿ, ಆದಿ ಚುಂಚನಗಿರಿಯ ಶ್ರೀ ಬಾಲಾ ಗಂಗಾಧರನಾಥ ಮಹಾಸ್ವಾಮೀಜಿ ಹಾಗೂ ದೇಗುಲಮಠದ ಹಿರಿಯ ಶ್ರೀಗಳ ಆಶೀರ್ವಾದ ಮತ್ತು ತುಮಕೂರು ಜಿಲ್ಲೆಯ ಜನತೆಯ ಪ್ರೀತಿ, ವಿಶ್ವಾಸದಿಂದ ಲಭಿಸಿದ್ದು ನನ್ನ ಜೀವ ಇರುವವರೆಗೂ ಅವರಿಗೆ ನಾನು ಚಿರಋಣಿಯಾಗಿರುವುದಾಗಿ ತಿಳಿಸಿದರು.

ಪ್ರಧಾನ ಮಂತ್ರಿಗಳ ವೇಗದ ಮುಂದೆ ನಾನು ಇನ್ನೂ ಒಂದನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಅವರ ಆಶಯ ಹಾಗೂ ಮಾರ್ಗದರ್ಶನದಂತೆ ನನ್ನ ಖಾತೆಯಲ್ಲಿನ ಯೋಜನೆಗಳನ್ನು ತ್ವರಿತವಾಗಿ ಅನುಷ್ಕಾನಗೊಳಿಸಲು ಉತ್ಸುಕನಾಗಿದ್ದೇನೆ. ಈ ಭಾಗದ ಜನರ ಬಹುದಿನದ ಬೇಡಿಕೆಯಾದ ಬೆಂಗಳೂರಿನಿಂದ ಸತ್ಯಮಂಗಲದವರೆಗಿನ ರೈಲ್ವೆ ಯೋಜನೆ ಬಗ್ಗೆ ಶೀಘ್ರದಲ್ಲೇ ರೈಲ್ವೆ ಇಲಾಖೆ ಅಧಿಕಾರಿಗಳ ಹಾಗೂ ರಾಜ್ಯ ಸರ್ಕಾರದ ಜೊತೆ ಮಾತುಕತೆ ನಡೆಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು. ಮೇಕೆದಾಟು ಯೋಜನೆಯ ಸುದ್ದಿಗಾರರ ಪ್ರಶ್ನೆ ಬಗ್ಗೆ ಪ್ರಸ್ತಾಪಿಸಿದ ಅವರು, ಕರ್ನಾಟಕ ರಾಜ್ಯ ಸೇರಿದಂತೆ ತಮಿಳುನಾಡು, ಕೇರಳ, ಪಾಂಡಿಚೇರಿ ರಾಜ್ಯಗಳು ಈ ದೇಶದ ಆಸ್ತಿ ಎಂಬುದನ್ನು ಮರೆಯದೆ ಎಲ್ಲಾ ಜನರಿಗೂ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತರುವುದು ಎಲ್ಲಾ ರಾಜಕೀಯ ಪಕ್ಷ ಹಾಗು ಜನಪ್ರತಿನಿಧಿಗಳ ಆದ್ಯತೆ ಆಗಬೇಕೆಂದು ಇದೇ ವೇಳೆ ಉತ್ತರಿಸಿದರು.

ಮೈಸೂರು ಮೃಗಾಲಯವನ್ನು ವಿಶ್ವ ಮಟ್ಟದ ಪ್ರವಾಸಿ ತಾಣ ಮಾಡಲು ಕ್ರಮ: ಸಚಿವ ಈಶ್ವರ್ ಖಂಡ್ರೆ

ಸಮಾರಂಭದಲ್ಲಿ ಶ್ರೀ ದೇಗುಲಮಠದ ಪೂಜ್ಯ ಹಿರಿಯ ಶ್ರೀಗಳಾದ ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿ, ಶೈಲಜಾ ಸೋಮಣ್ಣ, ವೀರಶೈವ ಮಹಾ ಸಭಾದ ತಾಲೂಕು ಅಧ್ಯಕ್ಷ ಶಂಭು, ಪಾಲನೇತ್ರ, ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಬಿ. ನಾಗರಾಜು, ಸಿದ್ಧಮರೀಗೌಡ, ನಗರಸಭಾ ಸದಸ್ಯ ಸ್ಟೂಡಿಯೋ ಚಂದ್ರು, ಬಿಜೆಪಿ ಮುಖಂಡ ಬೊಮ್ಮನಹಳ್ಳಿ ಕುಮಾರ್ ಸೇರಿದಂತೆ ಶ್ರೀ ಮಠದ ಹಳೆಯ ವಿದ್ಯಾರ್ಥಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.

click me!