
ಬೆಂಗಳೂರು (ಆ.19): ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳಾಗುತ್ತಾ ಬಂದರೂ ವಿರೋಧ ಪಕ್ಷವಾಗಿರುವ ಬಿಜೆಪಿ ನಾಯಕನನ್ನು ಆಯ್ಕೆ ಮಾಡಿಲ್ಲ. ಆದ್ದರಿಂದ ರಾಜ್ಯದಲ್ಲಿರುವ ಸಮಸ್ಯೆಗಳ ಕುರಿತು ಸರ್ಕಾರ ವಿರುದ್ಧ ಹೋರಾಟಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವ ವಹಿಸುವಂತೆ ಬಿಜೆಪಿ ನಾಯಕರು ಮೊರೆಯನ್ನಿಟ್ಟಿದ್ದಾರೆ.
ಹೌದು, ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದರೂ ವಿಪಕ್ಷವಾಗಿರುವ ಬಿಜೆಪಿ ತನ್ನ ಆಯ್ಕೆಯನ್ನು ಮಾಡಿಲ್ಲ. ಆದರೆ, ಲೋಕಸಭಾ ಚುನಾವಣೆಗೆ ಇನ್ನು ಕೆಲವು ತಿಂಗಳಷ್ಟೇ ಬಾಕಿ ಉಳಿದಿದ್ದು, ಪಕ್ಷ ಸಂಘಟನೆಗೆಯನ್ನು ಎಲ್ಲರೂ ಒಗ್ಗಟ್ಟಾಗಿ ಮಾಡುವಂತೆ ಸೂಚಿಸಲಾಗಿದೆ. ಇನ್ನು ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಹೋರಾಟ ಮಾಡುವ ಅಗತ್ಯವಿದೆ. ಆದರೆ, ವಿಪಕ್ಷ ನಾಯಕರ ಆಯ್ಕೆಯಾಗದ ಹಿನ್ನೆಲೆಯಲ್ಲಿ ಯಾರು ನೇತೃತ್ವವಹಿಸಿಕೊಂಡರೂ ಬಿಜೆಪಿ ಶಾಸಕರು ಬಗ್ಗುವುದಿಲ್ಲ. ಆದ್ದರಿಂದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿಯೂ ಆಗಿರುವ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹೋರಾಟ ಮಾಡಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ರಾಜಕೀಯ ನನಗೆ ಅನಿವಾರ್ಯವಲ್ಲ, ಆಕಸ್ಮಿಕ: ಲೋಕಸಭೆಗೂ ಮುನ್ನ ಟ್ವಿಸ್ಟ್ ಕೊಟ್ಟ ಸುಮಲತಾ ಅಂಬರೀಶ್
ಯಡಿಯೂರಪ್ಪ ಬಿಟ್ಟರೆ ಬೇರಾವ ನಾಯಕರಿಗೂ ಕಾಂಗ್ರೆಸ್ ಹೆದರೊಲ್ಲ: ಇನ್ನು ರಾಜ್ಯಾಧ್ಯಕ್ಷರ ನೇಮಕ ಆಗುವ ತನಕ ನೀವೇ ನಾಯಕತ್ವ ವಹಿಸಿ. ನಿಮ್ಮನ್ನು ಕಂಡರೆ ಮಾತ್ರ ಆಡಳಿತಾರೂಢ ಕಾಂಗ್ರೆಸ್ ಬೆದರಲಿದೆ ಎಂದು ಬಿಜೆಪಿ ಶಾಸಕರು ರಾಜಾಹುಲಿ ಯಡಿಯೂರಪ್ಪ ಅವರಿಗೆ ದುಂಬಾಲು ಬಿದ್ದಿದ್ದಾರೆ. ಪಕ್ಷದ ಹಲವು ಶಾಸಕರಿಂದ ಯಡಿಯೂರಪ್ಪ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದೆ. ಈ ಕುರಿತು ಬಿಎಸ್ ಯಡಿಯೂರಪ್ಪ ನಿವಾಸದಲ್ಲಿ ನಡೆದ ಶಾಸಕರ ಸಭೆಯಲ್ಲಿ ಬೆಂಗಳೂರು ಶಾಸಕರು ಒತ್ತಾಯ ಮಾಡಿದ್ದಾರೆ. ಆದರೆ, ಮತ್ತೊಂದೆಡೆ ನಾಯಕತ್ವದ ಕೊರತೆಯ ಲಾಭ ಪಡೆಯಲು ಕಾಂಗ್ರೆಸ್ ಮುಂದಾಗಿದೆ. ಇದಕ್ಕೆ ಬ್ರೇಕ್ ಹಾಕಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಹೈಕಮಾಂಡ್ ಪ್ರತಿಪಕ್ಷ ನಾಯಕ, ಅಧ್ಯಕ್ಷರ ನೇಮಕ ಮಾಡುವ ತನಕ ನಾಯಕತ್ವ ನೀಡಲು ಒತ್ತಾಯ ಮಾಡಲಾಗುತ್ತಿದೆ.
ಪ್ರಮುಖವಾಗಿ ಶಾಸಕರು ಯಡಿಯೂರಪ್ಪ ಅವರಿಗೆ ಹೇಳಿದ್ದೇನು? ಬಿಜೆಪಿ ಶಾಸಕರ ಸಮಸ್ಯೆ ಕೇಳಲು ರಾಜ್ಯದಲ್ಲಿ ಪ್ರಬಲ ನಾಯಕರೇ ಇಲ್ಲದಂತಾಗಿದೆ. ಕ್ಷೇತ್ರದ ಸಮಸ್ಯೆ ಕುರಿತು ಚರ್ಚಿಸಲು ಯಾರು ಮುಂದಾಗ್ತಿಲ್ಲ. ನಮ್ಮ ಕೊರತೆಯನ್ನು ಕಾಂಗ್ರೆಸ್ ಬಳಕೆ ಮಾಡುತ್ತಿದೆ. ಬಿಜೆಪಿ ಗುರಿಯಾಗಿಸಿ ತನಿಖೆ ಮಾಡ್ತಿದೆ. ಅದನ್ನು ತಡೆಯಲು ನೀವೇ ಮುಂದಾಗಬೇಕು. ಕಾಂಗ್ರೆಸ್ ನಿಮ್ಮ ನಾಯಕತ್ವಕ್ಕೆ ಮಾತ್ರ ಹೆದರುತ್ತದೆ. ಉಳಿದ ನಾಯಕರ ಹೇಳಿಕೆ, ಹೋರಾಟವನ್ನು ಕಾಂಗ್ರೆಸ್ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಮಾಜ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.
ಮಹಿಳೆಯರಿಗೆ ಮತ್ತೆ ನಿರಾಸೆ: 2000 ರೂ. ಕೊಡುವ ಗೃಹಲಕ್ಷ್ಮಿ ಯೋಜನೆ ಮುಂದೂಡಿಕೆ
ಆ.23ರಂದು ಹೋರಾಟ ಘೋಷಣೆ ಮಾಡಿದ ಯಡಿಯೂರಪ್ಪ: ಮತ್ತೊಂದೆಡೆ, ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ನೀವು ಚುನಾವಣಾ ರಾಜಕಾರಣಕ್ಕೆ ಮಾತ್ರ ನಿವೃತ್ತಿ ಘೋಷಣೆ ಮಾಡಿರೋದು. ಪಕ್ಷ ಸಂಘಟನೆಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿಲ್ಲ. ನೀವು ಮನೆ ಸೇರಿದ್ರೆ ತಪ್ಪು ಸಂದೇಶ ಹೋಗಲಿದೆ. ರಾಜ್ಯದಲ್ಲಿ ನಾಯಕತ್ವ ವಹಿಸಿಕೊಂಡು ಶಾಸಕರ ಬೆನ್ನಿಗೆ ನಿಲ್ಲಬೇಕು. ಈ ಬಗ್ಗೆ ಸ್ವತಃ ಶಾಸಕರಾದ ಮುನಿರತ್ನ ಮತ್ತು ಗೋಪಾಲಯ್ಯ ಯಡಿಯೂರಪ್ಪಗೆ ಒತ್ತಾಯ ಮಾಡಿದ್ದಾರೆ. ಶಾಸಕರ ಒತ್ತಾಯದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಆ.23ರಂದು ಹೋರಾಟದ ಘೋಷಣೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.