ಬಳ್ಳಾರಿ: ಆನಂದ್ ಸಿಂಗ್ ಇನ್, ಶ್ರೀರಾಮುಲು ಔಟ್, ಏನದು ಬಿಜೆಪಿ ಲೆಕ್ಕಾಚಾರ?/ ಜನಾರ್ದನ ರೆಡ್ಡಿ ಬಳಿಕ ಶ್ರೀರಾಮಲು ಬಳ್ಳಾರಿ ರಾಜಕಾರಣದಿಂದ ಹೊರಕ್ಕೆ/ ಕಾಂಗ್ರೆಸ್ ವಿರುದ್ಧ ಸೆಣೆಸಲು ಬಿಜೆಪಿಯ ಹೊಸ ತಂತ್ರಗಾರಿಕೆ
ಬೆಂಗಳೂರು/ ಬಳ್ಳಾರಿ(ನ. 15) ಅನರ್ಹ ಶಾಸಕರು ಬಿಜೆಪಿಯನ್ನು ಸೇರಿದ ತಕ್ಷಣವೇ ರಾಜ್ಯರಾಜಕಾರಣದ ದಿಕ್ಕು ದೆಸೆ ಬದಲಾಗಿವೆ. ಬಂಡಾಯ ಏಳಬಹುದು ಎಂಬ ಮುನ್ಸೂಚನೆ ಮೊದಲೆ ಸಿಕ್ಕಿದ್ದರಿಂದ ಬಿಜೆಪಿ ಅನರ್ಹರ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ಮೂಲ ಬಿಜೆಪಿಗರಿಗೆ ನಿಗಮ ಮಂಡಳದ ಹೊಣೆಗಾರಿಕೆ ನೀಡಿ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಂಡಿತ್ತು. ಆದರೂ ಅಲ್ಲಿಲ್ಲಿ ಬಂಡಾಯದ ಬಿಸಿ ಹಾಗೇ ಉಳಿದುಕೊಂಡಿದೆ.
ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆ, ನಂತರ ಜನಾರ್ದನ ರೆಡ್ಡಿ ಅವರ ಪ್ರಭಾವದ ಸಂದರ್ಭ ಬಿಜೆಪಿ ಭದ್ರಕೋಟೆ, ನಂತರ ಮತ್ತೆ ಪಕ್ಷಾಂತರದ ಸಂದರ್ಭ ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲ..ಹೀಗೆ ಬದಲಾವಣೆಗಳ ಹಾದಿಯಲ್ಲೇ ಬಳ್ಳಾರಿಯಿದೆ. ಈಗ ಮತ್ತೊಂದು ದೊಡ್ಡ ಬದಲಾವಣೆಗೆ ತೆರೆದುಕೊಳ್ಳಬೇಕಿದೆ.
ಬಿಜೆಪಿ ಸೇರಿದ ಆನಂದ್ ಸಿಂಗ್ ಮೊದಲ ಪ್ರತಿಕ್ರಿಯೆ
ರಾಜೀನಾಮೆ ಕತೆ ; ಹೊಸಪೇಟೆ ವಿಜಯನಗರ ಶಾಸಕರಾಗಿದ್ದ ಆನಂದ್ ಸಿಂಗ್ ಕಾಂಗ್ರೆಸ್ ನಿಂದ ಶಾಸಕರಾಗಿದ್ದವರು ರಾಜೀನಾಮೆ ನೀಡಿ ಹೊರಬಂದಿದ್ದು ಹಳೆಯ ಕತೆ. ಆನಂದ್ ಸಿಂಗ್ ಈ ಮೊದಲು ಬಿಜೆಪಿಯಲ್ಲೇ ಇದ್ದವರು. ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಪ್ರಭಾವಳಿಯಲ್ಲಿ ಆನಂದ್ ಸಿಂಗ್ ಪ್ರಖರವಾಗಿರಲಿಲ್ಲ.
ಸಂಪೂರ್ಣ ಬಳ್ಳಾರಿ ಆನಂದ್ ಸಿಂಗ್ ಹೆಗಲಿಗೆ: ಬಳ್ಳಾರಿಯಿಂದ ಬಿಜೆಪಿಯೇ ಶ್ರೀರಾಮಲು ಅವರನ್ನು ಹೊರಗೆ ಉದ್ದೇಶಪೂರ್ವಕವಾಗಿ ಇಟ್ಟಿತೆ? ಹೌದು ಹೀಗೊಂದು ಪ್ರಶ್ನೆಯನ್ನು ಕೇಳಿಕೊಳ್ಳಬೇಕಿದೆ. ವಿಧಾನಸಭೆ ಚುನಾವಣೆ ವೇಳೆಯೂ ಬಳ್ಳಾರಿಗೆ ಪ್ರವೇಶ ಮಾಡದಂತೆ ಜನಾರ್ದನ ರೆಡ್ಡಿಗೆ ಪರಿಸ್ಥಿತಿ ಎದುರಾಗಿದ್ದರೆ ಇನ್ನೊಂದು ಕಡೆ ಶ್ರೀರಾಮುಲು ಬಳ್ಳಾರಿಯಿಂದ ಸ್ಪರ್ಧೆ ಮಾಡಬೇಕು ಎಂದುಕೊಂಡಿದ್ದರು. ಆದರೆ ಅವರಿಗೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಟಿಕೆಟ್ ನೀಡಲಾಗಿತ್ತು. ಜತೆಗೆ ಸಿದ್ದರಾಮಯ್ಯ ವಿರುದ್ಧ ಸೆಣೆಸಲು ಬಾದಾಮಿಯಲ್ಲಿ ಸ್ಪರ್ಧೆ ಮಾಡಲು ಸೂಚಿಸಲಾಗಿತ್ತು.
ಬಿಜೆಪಿ ಸೇರಲು ರಮೇಶ್ ಮತ್ತು ತಂಡ ಶಾ ಬಳಿ ಮುಂದಿಟ್ಟಿದ್ದ ಒಂದೇ ಒಂದು ಕಂಡಿಶನ್
ದೋಸ್ತಿ ಸರ್ಕಾರ ಖತಂ ಆಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಶ್ರೀರಾಮುಲು ಡಿಸಿಎಂ ಆಗೇ ಬಿಡುತ್ತಾರೆ ಎಂದು ಪರಿಭಾವಿಸಲಾಗಿತ್ತು. ಆದರೆ ಸಿಕ್ಕಿದ್ದು ಆರೋಗ್ಯ ಖಾತೆ. ನಿಧಾನವಾಗಿ ತೆರೆಮರೆಯಿಂದಲೇ ಶ್ರೀರಾಮುಲು ಅವರನ್ನು ಹೊರಗಿಡುವ ಕೆಲಸ ಮಾಡಿಕೊಂಡು ಬರಲಾಯಿತು.
ಒಟ್ಟಿನಲ್ಲಿ ಒಂದು ಕಡೆ ಕಾಂಗ್ರೆಸ್ ನಿಂದ ಡಿಕೆ ಶಿವಕುಮಾರ್ ಬಳ್ಳಾರಿ ಕೋಟೆ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದರೆ ಅತ್ತ ಶ್ರೀರಾಮುಲು ಅವರನ್ನು ಹೊರಗಿಟ್ಟು ಆನಂದ್ ಸಿಂಗ್ ಅವರನ್ನೇ ಬಳ್ಳಾರಿ ಚಕ್ರಾಧಿಪತಿ ಮಾಡಲು ಬಿಜೆಪಿ ಹಠ ತೊಟ್ಟಿರುವ ಹಾಗೆ ಕಾಣುತ್ತದೆ.