ಬಿಜೆಪಿ ಲಕ್ಷ್ಮಣ ಸವದಿ ಅಂಡ್ ರಮೇಶ ಜಾರಕಿಹೊಳಿ ಸೈಲೆಂಟ್
ಕಾಂಗ್ರೆಸ್ 2ನೇ ಪಟ್ಟಿ ಬಿಡುಗಡೆ ಬೆನ್ನಲ್ಲೇ ದೆಹಲಿಗೆ ಹಾರಿದ ಸತೀಶ್ ಅಂಡ್ ಲಕ್ಷ್ಮೀ ಹೆಬ್ಬಾಳ್ಕರ್
ರಾಜ್ಯದ ಚುಕ್ಕಾಣಿ ಹಿಡಿಯಲು ಬೆಳಗಾವಿ ರಾಜಕಾರಣ ನಿರ್ಣಾಯಕ
ವರದಿ - ಅನಿಲ್ ಕಾಜಗಾರ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಳಗಾವಿ (ಏ.04): ರಾಜ್ಯದಲ್ಲಿ ಯಾವ ಸರ್ಕಾರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರುತ್ತದೆ ಎಂದು ನಿರ್ಣಾಯಕ ಪಾತ್ರವಹಿಸುವ ಜಿಲ್ಲೆಯೆಂದರೆ ಬೆಳಗಾವಿ ಆಗಿದೆ. ಆದರೆ, ಈ ಜಿಲ್ಲೆಯ ಪ್ರಭಾವಿ ನಾಯಕರ ನಡೆ ಮಾತ್ರ ವಿಚಿತ್ರವಾಗಿದೆ.
ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಮಾಜಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಪ್ರಭಾವ ಹೊಂದಿರುವ ನಾಯಕರು. ಬಿಜೆಪಿಯ ಹೈಕಮಾಂಡ್ ಮಟ್ಟದಲ್ಲಿ ಲಕ್ಷ್ಮಣ ಸವದಿ, ರಮೇಶ ಜಾರಕಿಹೊಳಿ ಪ್ರಭಾವ ಹೊಂದಿದರೆ, ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಕಾಂಗ್ರೆಸ್ ರಾಷ್ಟ್ರ ಮಟ್ಟದ ನಾಯಕರ ಜೊತೆಗೆ ಅತ್ಯಾಪ್ತರಾಗಿದ್ದಾರೆ. ಅಷ್ಟರ ಮಟ್ಟಿಗೆ ಈ ನಾಲ್ಕೂ ಜನ ನಾಯಕರು ತಮ್ಮ ತಮ್ಮ ಪಕ್ಷದಲ್ಲಿ ಪ್ರಭಾವ ಹೊಂದಿದ್ದಾರೆ.
ಆದರೆ, ಬೆಳಗಾವಿಯಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕ ನಿಗದಿಯಾಗುವ ಮುಂಚಿನಿಂದಲೂ ಬಣಬಡೆದಾಟ ಮೂಲಕ ಸುದ್ದಿ ಆಗುತ್ತಿದ್ದ ಲಕ್ಷ್ಮಣ ಸವದಿ ಹಾಗೂ ರಮೇಶ ಜಾರಕಿಹೊಳಿ ಹೈಕಮಾಂಡ್ ಮೂಗುದಾರ ಹಾಕಿದ್ದು, ಉಭಯ ನಾಯಕರು ಈಗ ಸೈಲೆಂಟ್ ಆಗಿದ್ದಾರೆ. ಕಾಂಗ್ರೆಸ್ ಟಿಕೆಟ್ ಕಗ್ಗಂಟು ಮಧ್ಯೆಯೇ ಒಂದೇ ವಿಮಾನದಲ್ಲಿ ಶಾಸಕರಾದ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ದಿಢೀರ್ ದೆಹಲಿಗೆ ಹಾರಿ ಕುತೂಹಲ ಮೂಡಿಸಿದ್ದಾರೆ.
ಬೆಳಗಾವಿ ರಾಜಕಾರಣ ಹುಬ್ಬಳ್ಳಿಗೆ ಶಿಫ್ಟ್: ರಹಸ್ಯ ಸಭೆಯಲ್ಲಿ ನಡೆದಿದ್ದೇನು?
ಪ್ರಹ್ಲಾದ್ ಜೋಶಿಯಿಂದ ಬೆಳಗಾವಿ ನಾಯಕರಿಗೆ ತಪರಾಕಿ: ಬೆಂಗಳೂರು ನಂತರ ಅತಿಹೆಚ್ಚು ವಿಧಾನಸಭೆ ಕ್ಷೇತ್ರ ಹೊಂದಿರುವ ಜಿಲ್ಲೆ ಬೆಳಗಾವಿ. ಬೆಳಗಾವಿಯಲ್ಲಿ ಅತಿಹೆಚ್ಚು ಸ್ಥಾನ ಗೆಲ್ಲುವ ಪಕ್ಷವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೆ ಎಂಬ ಪ್ರತಿತಿಯೂ ಇದೆ. ಬೆಳಗಾವಿಯ 18 ಸ್ಥಾನಗಳ ಪೈಕಿ 16 ಸ್ಥಾನ ಗೆಲ್ಲುವ ಗುರಿಯನ್ನು ಬಿಜೆಪಿ ಹೈಕಮಾಂಡ್ ಹಾಕಿಕೊಂಡಿದೆ. ಟಿಕೆಟ್ ವಿಚಾರಕ್ಕೆ ಜಿಲ್ಲೆಯ ಬಿಜೆಪಿ ಹಿರಿಯ ನಾಯಕರಾದ ಲಕ್ಷ್ಮಣ ಸವದಿ ಹಾಗೂ ರಮೇಶ ಜಾರಕಿಹೊಳಿ ಬಣಗಳ ಮಧ್ಯದ ಬಡೆದಾಟ ತಾರತಕಕ್ಕೇ ಏರಿತ್ತು. ಚುನಾವಣೆ ಹೊತ್ತಲ್ಲಿ ಜಿಲ್ಲಾ ನಾಯಕರ ಬಣಬಡೆದಾಟ ನಿಯಂತ್ರಿಸಲು ಸ್ವತಃ ಬಿಜೆಪಿ ಹೈಕಮಾಂಡ್ ಎಂಟ್ರಿ ಕೊಟ್ಟಿತ್ತು. ಹೈಕಮಾಂಡ್ ನೀಡಿದ್ದ ಸೂಚನೆಗಳನ್ನು ಬೆಳಗಾವಿಗೆ ಬಂದಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜಿಲ್ಲಾ ನಾಯಕರಿಗೆ ವಿವರಿಸಿದ್ದಾರೆ. ಹೈಕಮಾಂಡ್ ನೀಡುವ ಸೂಚನೆಗಳನ್ನು ಪಾಲಿಸದಿದ್ದರೆ ಕಠಿಣ ಕ್ರಮದ ಎಚ್ಛರಿಕೆಯನ್ನೂ ಸಚಿವ ಜೋಶಿ ಮೂಲಕ ಹೈಕಮಾಂಡ್ ರವಾನಿಸಿತ್ತು.
ಬಿಜೆಪಿ ಹೈಕಮಾಂಡ್ ವಾರ್ನಿಂಗ್‌ಗೆ ಬಗ್ಗಿದ ನಾಯಕರು: ಅಥಣಿ ಕ್ಷೇತ್ರದಲ್ಲಿ ನನಗೇ ಬಿಜೆಪಿ ಟಿಕೆಟ್ ಕೊಡಬೇಕು ಎಂದು ಲಕ್ಷ್ಮಣ ಸವದಿ ಹೈಕಮಾಂಡ್ ಮಟ್ಟದಲ್ಲಿ ಲಾಬಿಗೆ ಇಳಿದಿದ್ದರು. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಕಾರಣರಾಗಿದ್ದ ಅಥಣಿ ಶಾಸಕ ಮಹೇಶ ಕುಮಟಳ್ಳಿ, ಕಾಗವಾಡ ಶಾಸಕ ಶ್ರೀಮಂತ ಪಾಟೀಲಗೆ ಈ ಸಲವೂ ಬಿಜೆಪಿ ಟಿಕೆಟ್ ನೀಡಬೇಕು. ಅದರ ಜೊತೆಗೆ ಬೆಳಗಾವಿ ಗ್ರಾಮೀಣ ಮತ್ತು ಬೆಳಗಾವಿ ದಕ್ಷಿಣದಲ್ಲಿ ತಾವು ಸೂಚಿಸುವರಿಗೆ ಬಿಜೆಪಿ ಟಿಕೆಟ್ ನೀಡುವಂತೆ ರಮೇಶ ಪಟ್ಟು ಹಿಡಿದಿದ್ದರು. ರಮೇಶ ನಡೆ ಲಕ್ಷ್ಮಣ ಸವದಿ ಆದಿಯಾಗಿ ಬಿಜೆಪಿಯ ಮೂಲ ನಾಯಕರಿಗೆ ಇರಿಸು ಮುರಿಸಿಗೆ ಕಾರಣವಾಗಿತ್ತು. ಅಲ್ಲದೇ ಈ ಬೆಳವಣಿಗೆ ರಮೇಶ ಹಾಗೂ ಸವದಿ ಜಟಾಪಟಿಗೂ ಕಾರಣವಾಗಿತ್ತು. ಹೈಕಮಾಂಡ್ ವಾರ್ನಿಂಗ್‍ಗೆ ಇದೀಗ ಉಭಯ ನಾಯಕರು ಸೈಲೆಂಟ್ ಆಗಿದ್ದಾರೆ.
ಹೈಕಮಾಂಡ್ ನೀಡಿದ ಖಡಕ್ ಸೂಚನೆಗಳೇನು?: ಬೆಳಗಾವಿ ಬಣ ರಾಜಕೀಯವನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಹೈಕಮಾಂಡ್ ಕೇಂದ್ರ ಸಚಿವ ಜೋಶಿ ಮೂಲಕ ಸೂಚನೆಗಳನ್ನು ರವಾನಿಸಿತ್ತು. ಟಿಕೆಟ್ ಘೋಷಣೆ ಆಗುವವರೆಗೆ ಂಅನ್ಯ ಕ್ಷೇತ್ರಗಳಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು. ಹೈಕಮಾಂಡ್ ಅನುಮತಿ ಇಲ್ಲದೇ ಬೇರೆ ಕ್ಷೇತ್ರಗಳಿಗೆ ತೆರಳುವಂತಿಲ್ಲ. ಪಕ್ಷಕ್ಕೆ ಡ್ಯಾಮೇಜ್ ಆಗುವ ರೀತಿಯಲ್ಲಿ ಯಾರೂ ಮಾಧ್ಯಮಗಳ ಎದುರು ಹೇಳಿಕೆ ನೀಡುವಂತಿಲ್ಲ. ಮಾಧ್ಯಮಗಳಿಗೆ ಅಭಿಪ್ರಾಯ ಹಂಚಿಕೊಳ್ಳಬೇಕಾದರೆ ಪಕ್ಷದ ಅನುಮತಿಯನ್ನು ಕಡ್ಡಾಯವಾಗಿ ಪಡೆಯಲೇಬೇಕು.
ಪಕ್ಷದ ಆಜ್ಞೆಯನ್ನು ಪಾಲಿಸುವಂತೆ ಬಿಜೆಪಿ ಖಡಕ್ ಸೂಚನೆ: ಬೆಂಬಲಿಗರಿಗೆ ಟಿಕೆಟ್ ನೀಡುವಂತೆ ಪಕ್ಷದ ವೇದಿಕೆಗಳಲ್ಲಿ ಮಾತ್ರ ವೈಯಕ್ತಿಕ ಅಭಿಪ್ರಾಯ ಹೇಳಬೇಕೆ ಹೊರತು, ಬಹಿರಂಗ ಹೇಳಿಕೆ ನೀಡುವಂತಿಲ್ಲ. 18 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಲಿದ್ದು, ಯಾರಿಗೆ ಟಿಕೆಟ್ ಸಿಕ್ಕರೂ ಅವರ ಪರವಾಗಿ ಕೆಲಸ ಮಾಡಬೇಕು ಎಂದು ಜಿಲ್ಲೆಯ ನಾಯಕರಿಗೆ ಸೂಚನೆ ನೀಡಲಾಗಿದೆ. ಪಕ್ಷದ ಆಜ್ಞೆಯನ್ನು ಪಾಲಿಸುವುದಾಗಿ ಒಪ್ಪಿರುವ ಲಕ್ಷ್ಮಣ ಸವದಿ ಹಾಗೂ ರಮೇಶ ಭಿನ್ನಮತ ಮರೆತು ಒಂದೇ ವಾಹನದಲ್ಲಿ ಅಕ್ಕಪಕ್ಕದಲ್ಲಿ ಕುಳಿತು ಬೆಳಗಾವಿಯಿಂದ ಹುಬ್ಬಳ್ಳಿಗೆ ತೆರಳಿದ್ದಾರೆ.
ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಹಂಚಿದ್ದ ಕುಕ್ಕರ್ ಬ್ಲಾಸ್ಟ್: ಮತದಾರರಲ್ಲಿ ಆತಂಕ
ದೆಹಲಿಗೆ ಹಾರಿದ್ದೇಕೆ ಸತೀಶ, ಹೆಬ್ಬಾಳ್ಕರ್?: ಈ ಹಿಂದೆ ಕಾಂಗ್ರೆಸ್ ಭದ್ರಕೋಟೆ ಆಗಿದ್ದ ಕಿತ್ತೂರು ಕರ್ನಾಟಕ ಭಾಗ ಈಗ ಬಿಜೆಪಿ ವಶದಲ್ಲಿದೆ. ಬರುವ ಚುನಾವಣೆಯಲ್ಲಿ ಕಿತ್ತೂರು ಕರ್ನಾಟಕ ಭಾಗವನ್ನು ವಶಕ್ಕೆ ಪಡೆಯಲು ಕಾಂಗ್ರೆಸ್ ರಣತಂತ್ರ ಹೆಣೆಯುತ್ತಿದೆ. ಈ ಕಾರಣಕ್ಕೆ ಕಾಂಗ್ರೆಸ್ ಅಳೆದು ತೂಗಿ ಟಿಕೆಟ್ ಹಂಚಿಕೆ ಮಾಡುತ್ತಿದೆ. ಈಗಾಗಲೇ ಬೆಳಗಾವಿಯ 18 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 9 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದೆ. ಇನ್ನೂ 9 ಕ್ಷೇತ್ರಗಳ ಟಿಕೆಟ್ ಘೋಷಣೆ ಬಾಕಿ ಇದ್ದು, ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸಲು ಇದೀಗ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಹೈಕಮಾಂಡ್ ಮಟ್ಟದಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಉಭಯ ನಾಯಕರು ಇಂದು ಬೆಳಗ್ಗೆ ಒಂದೇ ವಿಮಾನದಲ್ಲಿ ದೆಹಲಿಗೆ ಹಾರುವ ಮೂಲಕ ಅಚ್ಛರಿ ಮೂಡಿಸಿದ್ದು, ಅಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಭೇಟಿಯಾಗಿ ತಮ್ಮ ಆಪ್ತರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿಕೊಳ್ಳಲಿದ್ದಾರೆ ಎಂದು ಮೂಲಗಳು ಖಚಿತ ಪಡಿಸಿವೆ.