* ಬೆಳಗಾವಿಯಲ್ಲಿ ಸಹೋದರರ ಸವಾಲ್
* ರಾಜೀನಾಮೆ ನೀಡುವ ಮಾತುಗಳನ್ನಾಡಿದ ರಮೇಶ್ ಜಾರಕಿಹೊಳಿ
* ಗೋಕಾಕ್ ಕ್ಷೇತ್ರ ಅಭಿವೃದ್ಧಿಯಾಗಿಲ್ಲ ಎಂದರೆ ಸ್ಥಳದಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಎಂದ ಸಾಹುಕಾರ
ಚಿಕ್ಕೋಡಿ, (ಜ.29): ಬೆಳಗಾವಿ ಜಿಲ್ಲೆಯಲ್ಲಿ ರಮೇಶ್ ಜಾರಕಿಹೊಳಿ(Ramesh Jarkiholi) ಹಸ್ತಕ್ಷೇಪದ ಬಗ್ಗೆ ಸ್ವತಃ ಬಿಜೆಪಿ ನಾಯಕರೇ ಅಸಮಾಧಾನಗೊಂಡಿದ್ದಾರೆ. ಅಲ್ಲದೇ ಅವರಿಂದ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಕಷ್ಟ ಎಂದು ಸಿಎಂ ಬೊಮ್ಮಾಯಿಗೆ ದೂರು ಹೋಗಿದೆ. ಇದರ ಮಧ್ಯೆ ರಮೇಶ್ ಜಾರಕೊಹೊಳಿ ರಾಜೀನಾಮೆ ಸವಾಲು ಹಾಕಿದ್ದಾರೆ.
ಹೌದು...ಗೋಕಾಕ್ ಕ್ಷೇತ್ರ ಅಭಿವೃದ್ಧಿಯಾಗಿಲ್ಲ ಎಂದರೆ ಸ್ಥಳದಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
Belagavi Politics ಬೆಳಗಾವಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ, ಒಪ್ಪಿಕೊಂಡ ಜಾರಕಿಹೊಳಿ
ಚಿಕ್ಕೋಡಿಯಲ್ಲಿ ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಕಾಕ್ ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿ ಆಗಿಲ್ಲ ಎಂದು ಸತೀಶ್ ಜಾರಕಿಹೊಳಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಸತೀಶ್ ಜಾರಕಿಹೊಳಿಗೆ ಚಾಲೆಂಜ್ ಮಾಡುತ್ತೇನೆ. ರಸ್ತೆ ಕೆಟ್ಟಿದೆ, ರಸ್ತೆಯೇ ಇಲ್ಲ ಎಂದು ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಸವಾಲೆಸೆದರು.
ಮೂಲ ಜಗಳ ಆರಂಭವಾಗಿದ್ದೇ ಅಥಣಿ ಮತಕ್ಷೇತ್ರಕ್ಕಾಗಿ. ಅಲ್ಲಿ ನೀರಾವರಿ ಯೋಜನೆ ಅನುಷ್ಠಾನ ಮಾಡದಿರುವುದಕ್ಕೆ ನಾನು ಕಾಂಗ್ರೆಸ್ ತೊರೆದಿದ್ದೆ. ಆದರೆ ಅಥಣಿ ಮತಕ್ಷೇತ್ರದ ಅಭಿವೃದ್ಧಿಯನ್ನು ಬಿಜೆಪಿ ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು.
ನಾನು ಹಾಗೂ ಮಹೇಶ್ ಕುಮಟಳ್ಳಿ ಸಚಿವರಾಗುವುದರ ಬಗ್ಗೆ ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಈ ಬಗ್ಗೆ ಪಕ್ಷ ತೀರ್ಮಾನ ಕೈಗೊಳ್ಳುತ್ತದೆ. ಪಕ್ಷದ ತೀರ್ಮಾನಕ್ಕೆ ನಾವು ಬದ್ಧ ಎಂದ ಅವರು, ಲಖನ್ ಜಾರಕಿಹೊಳಿ ಸ್ವತಂತ್ರರು. ಅವರ ಹೇಳಿಕೆ ಬಗ್ಗೆ ನನಗೆ ಮಾಹಿತಿಯಿಲ್ಲ. ಲಕ್ಷ್ಮಣ ಸವದಿ ನಾವು ಒಂದೇ ಪಕ್ಷದಲ್ಲಿ ಇರುವ ಕಾರಣ ಪಕ್ಷದ ಆಂತರಿಕ ಸಭೆಯಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು.
ಇನ್ನು ಬೆಳಗಾವಿ ಬಿಜೆಪಿ ಶಾಸಕರ ನಿಯೋಗ ಸಿಎಂಗೆ ದೂರು ನೀಡಿರುವುದರ ಬಗ್ಗೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ಅದ್ಯಾವುದು ನನಗೆ ಗೊತ್ತಿಲ್ಲ,. ಈ ಬಗ್ಗೆ ಸಿಎಂ ಹಾಗೂ ಹೈಕಮಾಂಡ್ ಕರೆದು ಕೇಳಿದಾಗ ಉತ್ತರ ಕೊಡುತ್ತೇನೆ ಎಂದು ತಿಳಿಸಿದರು.
ಉಮೇಶ್ ಕತ್ತಿ ಅವರ ಹೇಳಿಕೆ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ. ಬೆಳಗಾವಿ ರಾಜಕಾರಣದಲ್ಲಿ ಭಿನ್ನಮತ ವಿಚಾರ ಬಗೆಹರಿಸಲು ಬಾಲಚಂದ್ರ ಜಾರಕಿಹೊಳಿ ಮುಂದಾಳತ್ವ ವಹಿಸಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಹಾಗೂ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದರು.
ಜಾರಕಿಹೊಳಿ ವಿರುದ್ಧ ಸಿಎಂಗೆ ದೂರು!
ರಾಜ್ಯ ಬಿಜೆಪಿಯಲ್ಲಿ ಮೂಲ ವರ್ಸಸ್ ವಲಸೆ ತಿಕ್ಕಾಟ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಅದರಲ್ಲೂ ಬೆಳಗಾವಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಾಬಲ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸ್ಥಳೀಯ ಮೂಲ ಬಿಜೆಪಿ ನಾಯಕರು ಒಗ್ಗಟ್ಟಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ರಾಜಕೀಯ ಬೆಳವಣಿಗೆಗಳು ನಡೆಯುವ ಸಾಧ್ಯತೆ ದಟ್ಟವಾಗಿದೆ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ರಮೇಶ್ ಜಾರಕಿಹೊಳಿ ಸದ್ಯ ಸಿಡಿ ಕಾರಣಕ್ಕಾಗಿ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಆದರೆ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವ ಪ್ರಯತ್ನದಲ್ಲಿ ವಿಫಲರಾಗುತ್ತಿದ್ದಾರೆ. ಮತ್ತೊಂದು ಕಡೆಯಲ್ಲಿ ಬೆಳಗಾವಿಯ ಬಿಜೆಪಿಯಲ್ಲಿ ತಮ್ಮ ಪ್ರಾಬಲ್ಯ ಕಾಪಾಡಿಕೊಳ್ಳುವಲ್ಲೂ ರಮೇಶ್ ಯಶಸ್ವಿಯಾಗುತ್ತಿಲ್ಲ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿಗೆ ಸಚಿವ ಉಮೇಶ್ ಕತ್ತಿ ಹಾಗೂ ಬಣ ದೂರು ನೀಡಿದೆ ಎಂದು ತಿಳಿದುಬಂದಿದೆ. ಸಚಿವ ಉಮೇಶ್ ಕತ್ತಿ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ಬೆಳಗಾವಿ ಜಿಲ್ಲಾ ಬಿಜೆಪಿ ಪ್ರಮುಖರು ಜಾರಕಿಹೊಳಿ ಸಹೋದರರ ವಿರುದ್ಧ ದೂರು ನೀಡಿದ್ದಾರೆ ಎಂಬ ಮಾಹಿತಿ ಇದೆ.