ವಿರೋಧಿಗಳ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ: ಶಾಸಕ ಬಾಲಚಂದ್ರ ಜಾರಕಿಹೊಳಿ

Published : Sep 26, 2025, 11:26 PM IST
Balachandra Jarkiholi

ಸಾರಾಂಶ

ನಮ್ಮ ವಿರೋಧಿಗಳು ಸಾವಿರ ಸಲ ಟೀಕಿಸಲಿ, ಬೈಯಲಿ.‌ ಅಂತಹ ಯಾವುದೇ ಟೀಕೆ- ಟಿಪ್ಪಣಿಗಳಿಗೆ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಅವುಗಳ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಬೆಳಗಾವಿ (ಸೆ.26): ನಮ್ಮ ವಿರೋಧಿಗಳು ಸಾವಿರ ಸಲ ಟೀಕಿಸಲಿ, ಬೈಯಲಿ.‌ ಅಂತಹ ಯಾವುದೇ ಟೀಕೆ- ಟಿಪ್ಪಣಿಗಳಿಗೆ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಅವುಗಳ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ. ನಾವು ಯಾರನ್ನೂ ಟೀಕಿಸುವುದಿಲ್ಲ. ಮತ್ತೊಬ್ಬರನ್ನು ಬೈಯುವಂತಹ ಸಂಸ್ಕೃತಿಯೂ ನಮ್ಮದಲ್ಲ ಎಂದು ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದ ಹೊರವಲಯದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ಚುನಾವಣಾ ನಿಮಿತ್ತ ರಾತ್ರಿ ನಡೆದ ಘೋಡಗೇರಿ ಜಿಪಂ ವ್ಯಾಪ್ತಿಯ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು. ವಿರೋಧಿಗಳು ಎಷ್ಟೇ ಅಪಪ್ರಚಾರ, ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದರೂ ಅವುಗಳಿಗೆ ಕಿವಿಗೊಡದಂತೆ ಮನವಿ ಮಾಡಿದರು.

ಈ ಚುನಾವಣೆಯಲ್ಲಿ ರೈತರ ಹಿತಕ್ಕಾಗಿ ಯಾವ ಯೋಜನೆಗಳನ್ನು ಹಾಕಿಕೊಳ್ಳದೇ ಪ್ರತಿ ಸಂದರ್ಭದಲ್ಲೂ ನಮ್ಮನ್ನು ಬೈಯುವ ಒಂದಂಶದ ಕಾರ್ಯಕ್ರಮವನ್ನು ಅವರು ಹಾಕಿಕೊಂಡಂತಿದೆ. ಸಮಯ- ಸಂದರ್ಭಗಳನ್ನು ಲೆಕ್ಕಿಸದೇ ಎಲ್ಲ ಕಡೆಯೂ ಬೈಯುತ್ತ ಹೋಗುತ್ತಿದ್ದಾರೆ. ನಾವು ಮಾತ್ರ ರೈತರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. ಯಾರ ಅಂಜಿಕೆಯೂ ನಮಗಿಲ್ಲ. ಅಚಲ ವಿಶ್ವಾಸ, ಧೈರ್ಯದಿಂದ ಈ ಚುನಾವಣೆ ಎದುರಿಸುತ್ತಿದ್ದೇವೆ ಎಂದು ತಿಳಿಸಿದರು. ಸೆ.28ರಂದು ನಡೆಯುವ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಚುನಾವಣೆಯಲ್ಲಿ ದಿ.ಅಪ್ಪಣ್ಣಗೌಡ ಪಾಟೀಲ ಸಹಕಾರಿ ಪ್ಯಾನಲ್ ರಚಿಸಿಕೊಂಡು ಎಲ್ಲಾ ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಹಾಕಿದ್ದೇವೆ.

ಎಲ್ಲ ಅಭ್ಯರ್ಥಿಗಳು ರೈತರ ಸೇವೆ ಮಾಡುವ ಯೋಗ್ಯ ವ್ಯಕ್ತಿಗಳಾಗಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ನಮ್ಮ ವಿರೋಧಿಗಳಿಗೆ ಆಶೀರ್ವಾದ ಮಾಡಿದಂತೆ ಈ ಸಲ ನಮ್ಮ ಪ್ಯಾನಲ್ ಅಭ್ಯರ್ಥಿಗಳಿಗೆ ಮತವನ್ನು ನೀಡಿ ಹೆಚ್ಚಿನ ಆಶೀರ್ವಾದ ಮಾಡುವಂತೆ ಕೋರಿದರು. ಈ ಸಲ ದೇವರು ದೊಡ್ಡ ಅವಕಾಶವನ್ನು ಕೊಟ್ಟಿದ್ದಾನೆ. ಬದಲಾವಣೆ ಕಾಲ ಬಂದಿದೆ. ವಿರೋಧಿಗಳ ಸರ್ವಾಧಿಕಾರತ್ವ ಧಿಕ್ಕರಿಸಿ ವಿದ್ಯುತ್ ಸಂಘದ ಅಭಿವೃದ್ಧಿಗೆ ನಮ್ಮ ಪ್ಯಾನಲ್ ಬೆಂಬಲಿಸುವಂತೆ ಅವರು ಮನವಿ ಮಾಡಿದರು. ಸಚಿವ ಸತೀಶ್ ಜಾರಕಿಹೊಳಿಯವರು ವಿದ್ಯುತ್ ಸಹಕಾರ ಸಂಘದ ಪ್ರಗತಿಗಾಗಿ ಅನೇಕ ಮಾರ್ಗೋಪಾಯಗಳನ್ನು ಹಾಕಿದ್ದಾರೆ. ಸಂಘವು ಈಗ ದಿವಾಳಿನಂಚಿನಲ್ಲಿದೆ. ಇದಕ್ಕೀಗ ಕಾಯಕಲ್ಪ ಬೇಕೇ ಬೇಕು. ಅದು ಸತೀಶ್ ಜಾರಕಿಹೊಳಿಯವರಿಂದ ಮಾತ್ರ ಸಾಧ್ಯವಿದೆ.

ಸಂಸ್ಥೆಯ ಬೆಳವಣಿಗೆಗೆ ಕೈ ಜೋಡಿಸಿದ್ದಾರೆ

ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿರುವುದರಿಂದ ಈ ಸಂಘಕ್ಕೆ ಆರ್ಥಿಕ ನೆರವು ಮಾಡುತ್ತಾರೆ. ಇದರಿಂದ ಸಂಘವು ಮತ್ತಷ್ಟು ಬೆಳೆಯಲಿಕ್ಕೆ ಅವಕಾಶವಿದೆ. ಸತೀಶ್ ಅವರ ಜತೆಗೆ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಸಹ ಈ ಸಂಸ್ಥೆಯ ಬೆಳವಣಿಗೆಗೆ ಕೈ ಜೋಡಿಸಿದ್ದಾರೆ. ಸಂಘಕ್ಕೆ ಪುನಶ್ಚೇತನ ನೀಡಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸವನ್ನು ಮಾಡುವ ಅಭ್ಯರ್ಥಿಗಳನ್ನು ನಾವು ನಿಲ್ಲಿಸಿದ್ದೇವೆ. ಹುಕ್ಕೇರಿ ತಾಲೂಕಿನವರೇ ಅಭ್ಯರ್ಥಿಗಳಾಗಿದ್ದು, ಅವರನ್ನು ಗೆಲ್ಲಿಸಿ, ನಿಮ್ಮ ಸೇವೆ ಮಾಡಲು ಇವರನ್ನು ಇಲ್ಲಿಯೇ ಬಿಟ್ಟು ಹೋಗುತ್ತಿದ್ದೇವೆಂದು ಎಂದು ತಿಳಿಸಿದರು. ಶಾಸಕ ಬಾಲಚಂದ್ರ ಜಾರಕಿಹೊಳಿಗೆ ಕಾರ್ಯಕರ್ತರು ಬೃಹತ್‌ ಹಾರ ಹಾಕಿ ಗೌರವಿಸಿದರು.

ವೇದಿಕೆಯಲ್ಲಿ ಮಾಜಿ ಸಚಿವ ಶಶಿಕಾಂತ ನಾಯಿಕ, ಹೀರಾ ಶುಗರ್ಸ್ ಅಧ್ಯಕ್ಷ ಅಜ್ಜಪ್ಪ ಕಲ್ಲಟ್ಟಿ, ದಿ.ಅಪ್ಪಣ್ಣಗೌಡ ಪಾಟೀಲ ಸಹಕಾರಿ ಪ್ಯಾನಲ್ ಅಭ್ಯರ್ಥಿಗಳಾದ ಶಿವಕುಮಾರ ಮಟಗಾರ, ಅಮರ ನಲವಡೆ, ಅಶೋಕ ಪಟ್ಟಣಶೆಟ್ಟಿ, ಕಿರಣ ಕಲ್ಲಟ್ಟಿ, ಪ್ರಭುದೇವ ಪಾಟೀಲ, ಶಶಿರಾಜ ಪಾಟೀಲ, ಬಸಪ್ಪ ಮರಡಿ, ಬಸಗೌಡ ಮಗೆನ್ನವರ, ಶಂಕರೆಪ್ಪ ಶಿರಕೋಳಿ, ಭಾಗ್ಯಶ್ರೀ ಪಾಟೀಲ, ಸುಮಿತ್ರಾ ಶಿಡ್ಲಿಹಾಳ, ಶಂಕರ ಹೆಗಡೆ, ದಯಾನಂದ ಪಾಟೀಲ, ಲಕ್ಷ್ಮಣ ಹೂಲಿ, ಬಸವರಾಜ ನಾಯಿಕ ಅವರು ಮತಯಾಚಿಸಿದರು. ನಂತರ ಅಣ್ಣಾಸಾಹೇಬ್ ಜೊಲ್ಲೆಯವರು ಅಭ್ಯರ್ಥಿಗಳ ಪರ ಮತಯಾಚಿಸಿ ಮಾತನಾಡಿದರು.

ಒಳ್ಳೆಯ ಕೆಲಸಗಳನ್ನು ಮಾಡಿ ಜನರ ಮನಸ್ಸನ್ನು ಗೆಲ್ಲಬೇಕು. ಇದನ್ನು ಬಿಟ್ಟು ಕೇವಲ ಟೀಕೆಗಳನ್ನು ಮಾಡುವುದರಿಂದ ಯಾವ ಉದ್ದೇಶಗಳೂ ಈಡೇರಲಾರವು. ಇನ್ನಾದರೂ ಟೀಕೆ- ಟಿಪ್ಪಣಿಗಳನ್ನು ಮಾಡದೇ ರೈತರ ಸಂಕಷ್ಟಗಳನ್ನು ಪರಿಹರಿಸುವ ಒಳ್ಳೆಯ ಸದ್ಬುದ್ಧಿಯನ್ನು ದೇವರು ನಮ್ಮ ವಿರೋಧಿಗಳಿಗೆ ನೀಡಲಿ.
- ಬಾಲಚಂದ್ರ ಜಾರಕಿಹೊಳಿ ಶಾಸಕರು, ಬೆಮುಲ್ ಅಧ್ಯಕ್ಷರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ