MLC Election: ಶಿಕ್ಷಕರ ನಂಬಿಗಸ್ಥ ಸೇವಕನಾಗಿ ಚುನಾವಣೆ ಗೆಲ್ಲುವೆ: ಬಸವರಾಜ ಹೊರಟ್ಟಿ

By Kannadaprabha News  |  First Published Jun 2, 2022, 4:10 AM IST

*  ಈಗಾಗಲೇ ನಾಲ್ಕು ಜಿಲ್ಲೆಯಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದೇವೆ
*  ವಿಧಾನ ಪರಿಷತ್‌ ಚುನಾವಣೆ ಪ್ರಚಾರದಲ್ಲಿ ಬಸವರಾಜ ಹೊರಟ್ಟಿ ವಿಶ್ವಾಸ
*  ಯಾರದ್ದೇ ಸರ್ಕಾರ ಇದ್ದರೂ ವಿಧಾನ ಪರಿಷತ್‌ನಲ್ಲಿ ಶಿಕ್ಷಕರ ಪರವಾಗಿ ಧ್ವನಿ ಎತ್ತಿದ್ದಾರೆ 


ಹುಬ್ಬಳ್ಳಿ(ಜೂ.02): ಶಿಕ್ಷಕರ ನಂಬಿಗಸ್ಥ ಸೇವಕನಾಗಿ ಕೆಲಸ ಮಾಡಿದ್ದರಿಂದ ಏಳು ಬಾರಿ ಚುನಾವಣೆ ಗೆದ್ದಿದ್ದೇನೆ ವಿನಃ, ಹೆದರಿಸಿ, ಆಮಿಷವೊಡ್ಡಿ ಜಯಗಳಿಸಿಲ್ಲ ಎಂದ ವಿಧಾನ ಪರಿಷತ್‌ ಚುನಾವಣೆ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ, ಆಧಾರವಿಲ್ಲದೆ ಮಾತನಾಡುವ ಕಾಂಗ್ರೆಸ್‌ ಅಯೋಗ್ಯ ಹೇಳಿಕೆಗೆ ಉತ್ತರಿಸುವುದಿಲ್ಲ ಎಂದರು.

ನಗರದ ಕುಸುಗಲ್‌ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿದರು. ಈಗಾಗಲೇ ನಾಲ್ಕು ಜಿಲ್ಲೆಯಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದೇವೆ. ನಾಳೆಯಿಂದ ಪುನಃ ಜಿಲ್ಲಾ ಪ್ರಚಾರ ಹಮ್ಮಿಕೊಳ್ಳಲಾಗಿದೆಎಂದರು. ಕ್ಷೇತ್ರದಲ್ಲಿ ಈ ವರೆಗೆ ಕಾಂಗ್ರೆಸ್‌ನವರು ಆಯ್ಕೆ ಆಗಿಲ್ಲ. ಇದೀಗ ಸ್ಪರ್ಧಿಸಿರುವ ನಾಲ್ಕು ಪಕ್ಷೇತರರು ಯಾರೆಂಬುದೆ ಮತದಾರರಿಗೆ ಗೊತ್ತಿಲ್ಲ. ತಮ್ಮ ಸಾಧನೆ ಎಂಬುದು ಸ್ವತಃ ಗೊತ್ತಿಲ್ಲದವರು ಚುನಾವಣೆಗೆ ಬಂದಿದ್ದಾರೆ. ಇಂಥವರು ಚುನಾವಣೆ ಬಂದಾಗ ಮಾತ್ರ ಅಭ್ಯರ್ಥಿಯಾಗಿ ಬರುತ್ತಾರೆ ಎಂದು ವ್ಯಂಗ್ಯವಾಡಿದರು.

Tap to resize

Latest Videos

ಪ್ರತಿಸ್ಪರ್ಧಿಗಳಿಗೆ ವೇದಿಕೆಯಲ್ಲೆ ಚಾಟಿ ಬೀಸಿದ ಹೊರಟ್ಟಿ, ಮತದಾರರರು ಯಾಕೆ ಬದಲಾವಣೆ ಬಯಸುತ್ತಿದ್ದಾರೆ. ಮನೆ ಮಗನಾಗಿ ಕೆಲಸಕ್ಕೆ ಬಂದ ಹುಡುಗನನ್ನು 40-50 ವರ್ಷವಾದರೂ ಮನೆ ಮಾಲೀಕ ವಿಶ್ವಾಸದಿಂದ ನಡೆಸಿಕೊಳ್ಳುತ್ತಾನೆ. ಅದೇ ರೀತಿ ನಾನು ಶಿಕ್ಷಕರ ನಂಬಿಗಸ್ಥ ಸೇವಕನಾಗಿ ಕೆಲಸ ಮಾಡಿದ್ದೇನೆ. ಬಿಸಿಯೂಟ, ಶಾಲಾ ಸಮವಸ್ತ್ರ ಸೇರಿದಂತೆ ಹಲವಾರು ಕಾರ್ಯಗಳನ್ನು ಮಾಡಿದ್ದೇವೆ. ಶಿಕ್ಷಕರನ್ನು ಹೆದರಿಸಿ ಮತ ಪಡೆಯುತ್ತೇವೆ ಎಂಬ ಆರೋಪ ನಿರಾಧಾರ. ಚುನಾವಣೆಗೆ ನಿಂತವ ಒಂದೆರಡು ಬಾರಿ ಸುಳ್ಳು , ಹೆದರಿಸುವುದರಿಂದ ಗೆಲ್ಲಬಹುದು. ಆದರೆ ನಿರಂತರವಾಗಿ ಗೆಲ್ಲಬೇಕಾದರೆ ಅದಕ್ಕೆ ಪ್ರೀತಿ, ವಿಶ್ವಾಸ ಗಳಿಸಿಕೊಳ್ಳಬೇಕಾಗತ್ತದೆ. ಅಂತಹ ಪ್ರೀತಿಯನ್ನು ನಾನು ಗಳಿಸಿದ್ದೇನೆ ಎಂದರು.

MLC Election: ಹೊರಟ್ಟಿ ಚುನಾವಣೆಯಲ್ಲಿ ಗೆದ್ದಾಗಿದೆ: ಶಾಸಕ ಬಂಡಿ

ಶಿಕ್ಷಣ ಸಚಿವನಾಗಿದ್ದಾಗ ಅನುದಾನ ರಹಿತ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಕಾಲೇಜನ್ನು ಅನುದಾನಕ್ಕೆ ಒಳಪಡಿಸಿದ ಕಾರಣ 23 ಸಾವಿರಕ್ಕೂ ಅಧಿಕ ಶಿಕ್ಷಕರು ಸಂಬಳ ಪಡೆದರು. ವರ್ಗಾವಣೆ ಹೊಸ ನೀತಿಯಿಂದಾಗಿ ಕ್ರಾಂತಿಕಾರಕ ಬದಲಾವಣೆ ಆಯಿತು. ದೇಶದ 8 ರಾಜ್ಯಗಳು ಅದನ್ನು ಅಳವಡಿಸಿಕೊಂಡಿವೆ. ಶಿಕ್ಷಕರ ನೇಮಕ ಸೇರಿ ಹಲವು ಕ್ರಮ ಕೈಗೊಂಡಿದ್ದೇವೆ. ಸಭಾಪತಿ ಸ್ಥಾನವನ್ನು ಶಿಕ್ಷಕರಿಗೆ ಅರ್ಪಿಸಿದ್ದೇನೆ. ಇವೆಲ್ಲವು ನನ್ನ ಗೆಲುವಿಗೆ ಕಾರಣ. ಈಗಲೂ ಶಿಕ್ಷಕರಿಗೆ ಅನ್ಯಾಯವಾಗುತ್ತದೆ ಎಂದಾದರೆ ಪಕ್ಷವನ್ನು ಹೊರತುಪಡಿಸಿ ಹೋರಾಡುತ್ತೇವೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಮಾತನಾಡಿ, ಶಿಸ್ತುಬದ್ಧವಾಗಿ ಚುನಾವಣೆ ಎದುರಿಸಲಾಗುತ್ತಿದೆ. ಎಲ್ಲೆಡೆ ಪ್ರವಾಸದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಬಾರಿ ಹೊರಟ್ಟಿಯವರದ್ದು ಒನ್‌ ಸೈಡೆಡ್‌ ಗೆಲುವಾಗಬೇಕು. ಹಿಂದಿನಿಂದಲೂ ಶಿಕ್ಷಕರ ಸಮಸ್ಯೆ ಯಾವುದೇ ಇದ್ದರೂ ಬಿಜೆಪಿ ಬಗೆಹರಿಸುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶಿಕ್ಷಕರಿಗೂ ಅನುಕೂಲ ಆಗಲಿದೆ. ಕಾಂಗ್ರೆಸ್‌ ನಗಣ್ಯ ಆಗುತ್ತಿದ್ದು, ಕೇವಲ ನಾಮ್‌ ಕೇ ವಾಸ್ತೆ ಎಂಬಂತೆ ಚುನಾವಣೆಗೆ ನಿಂತಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌, ಬಿಜೆಪಿ ಡಬಲ್‌ ಎಂಜಿನ್‌ ಸರ್ಕಾರವಾಗಿದ್ದು ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ಸ್ವಾವಲಂಬನೆ, ಗೌರವದಿಂದ ಬದುಕು ನಡೆಸಲು ಸಹಕಾರಿಯಾಗಿದೆ. ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಲಿದ್ದಾರೆ ಎಂದು ಹೇಳಿದರು.

ವಿಪ ಸದಸ್ಯ ಎಸ್‌.ವಿ. ಸಂಕನೂರು ಮಾತನಾಡಿ, ಹೊರಟ್ಟಿ ಅವರದ್ದು ಹೋರಾಟದ ಬದುಕು. ಯಾರದ್ದೇ ಸರ್ಕಾರ ಇದ್ದರೂ ವಿಧಾನ ಪರಿಷತ್‌ನಲ್ಲಿ ಶಿಕ್ಷಕರ ಪರವಾಗಿ ಧ್ವನಿ ಎತ್ತಿದ್ದಾರೆ. ಕಡಿಮೆ ಅವಧಿಗೆ ಸಚಿವರಾಗಿ ಕೆಲಸ ಮಾಡಿದ್ದರೂ ಕೂಡ ಆಯಾ ಇಲಾಖೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಧಾರವಾಡ ವಿಭಾಗ ವಿಜ್ಞಾನ ಕೇಂದ್ರ, ಕಾನೂನು ವಿಶ್ವವಿದ್ಯಾಲಯದ ಸ್ಥಾಪನೆ ಸೇರಿ ಹಲವು ಸಾಧನೆಗಳು ಅಚ್ಚಳಿಯದೆ ಉಳಿದಿದೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್‌ ಟೆಂಗಿನಕಾಯಿ, ಬಿಜೆಪಿ ಅಭ್ಯರ್ಥಿ ಹೊರಟ್ಟಿಅವರ ಗೆಲವು ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿಗಳ ಠೇವಣಿ ಕಳೆದುಕೊಳ್ಳುವಂತೆ ಆಗಲಿದೆ ಎಂದರು.

ಸಚಿವ ಶಂಕರಪಾಟೀಲ ಮುನೇನಕೊಪ್ಪ, ಮಾಜಿ ಶಾಸಕ ಅಶೋಕ ಕಾಟವೆ, ಉಪಮೇಯರ್‌ ಉಮಾ ಮುಕ್ಕುಂದ, ಸಂತೋಷ ಚವ್ಹಾಣ್‌, ನಾಗೇಶ ಕಲಬುರಗಿ, ಶ್ಯಾಮ ಮಲ್ಲನಗೌಡರ, ಜಿ.ಆರ್‌. ಭಟ್‌ ಸೇರಿ ಹಲವರಿದ್ದರು.
 

click me!