ಫಲಿಸದ ಪ್ರಯತ್ನ.. ಸಿಎಂ ಭೇಟಿ ಬೆನ್ನಲ್ಲೇ ಸಭಾಪತಿ ಸ್ಥಾನಕ್ಕೆ ಬಸವರಾಜ್ ಹೊರಟ್ಟಿ ರಾಜೀನಾಮೆ

Published : Aug 07, 2026, 02:27 PM IST
Basavaraj Horatti

ಸಾರಾಂಶ

ರಾಜ್ಯ ರಾಜಕಾರಣದಲ್ಲಿ ಇವತ್ತು ಮತ್ತೊಂದು ಬೆಳವಣಿಗೆ ನಡೆದಿದೆ. ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬೆನ್ನಲ್ಲೇ ಭಾವುಕರಾಗಿ ಮಾತನ್ನಾಡಿದ್ದಾರೆ.

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ರಾಜ್ಯ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಭಾಪತಿ ಸ್ಥಾನದಲ್ಲಿ ಮುಂದುವರಿಯಲು ಅವರು ನಡೆಸಿದ ಕೊನೆಯ ಹಂತದ ಕಸರತ್ತುಗಳು ಫಲ ನೀಡದ ಹಿನ್ನೆಲೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರ ಸೂಚನೆಯಂತೆ ಅಧಿಕೃತವಾಗಿ ಅಧಿಕಾರದಿಂದ ಕೆಳಗಿಳಿದಿದ್ದಾರೆ.

ಫಲಿಸದ ಸಂಧಾನ, ಸಿದ್ಧವಾಗಿದ್ದ ಪತ್ರಕ್ಕೆ ಬಿತ್ತು ದಿನಾಂಕ!

ಸಭಾಪತಿ ಸ್ಥಾನದಲ್ಲಿ ಮುಂದುವರಿಯುವ ಆಸೆಯನ್ನು ಹೊರಟ್ಟಿ ಹೊಂದಿದ್ದರು ಎನ್ನಲಾಗಿತ್ತು. ಇದೇ ವಿಚಾರವಾಗಿ ಇಂದು ಡಿ.ಕೆ.ಶಿವಕುಮಾರ್ ಮತ್ತು ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಕಾಂಗ್ರೆಸ್ ನಾಯಕರು ರಾಜೀನಾಮೆ ನೀಡುವಂತೆ ಸ್ಪಷ್ಟ ಸಲಹೆ ನೀಡಿದ್ದರಿಂದ ಸಂಧಾನ ವಿಫಲವಾಯಿತು. ಈ ವೇಳೆ ಮೊದಲೇ ಸಿದ್ಧಪಡಿಸಿಕೊಂಡಿದ್ದ ರಾಜೀನಾಮೆ ಪತ್ರವನ್ನು ಹೊರತೆಗೆದ ಹೊರಟ್ಟಿ, ಸಿಎಂ ಸಮ್ಮುಖದಲ್ಲೇ ದಿನಾಂಕ ಹಾಕಿ, ಸಹಿ ಮಾಡಿ ಸಲ್ಲಿಕೆ ಮಾಡಿದರು.

ಸಿಎಂ ಡಿಕೆಶಿ ಹೇಳಿದ್ದೇನು?

ಬಸವರಾಜ ಹೊರಟ್ಟಿ ಅವರ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಡಿಕೆಶಿ, ಹೊರಟ್ಟಿ ಅವರು ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಪತ್ರವನ್ನು ಕಾರ್ಯದರ್ಶಿಗೆ ಸಲ್ಲಿಸಲಾಗುವುದು. ತೆರವಾಗಿರುವ ಸಭಾಪತಿ ಸ್ಥಾನಕ್ಕೆ ಹೊಸಬರ ಆಯ್ಕೆ ಪ್ರಕ್ರಿಯೆ ಶೀಘ್ರದಲ್ಲೇ ನಡೆಯಲಿದೆ. ಆಗಸ್ಟ್ 14ರಂದು ಉಪಸಭಾಪತಿ ಚುನಾವಣೆ ನಡೆಯಲಿದ್ದು, ಆ ನಂತರ ಸಭಾಪತಿಗಳ ಆಯ್ಕೆಯೂ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

ರಾಜೀನಾಮೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ ಹೊರಟ್ಟಿ, ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಇಷ್ಟು ದಿನ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಕಾಂಗ್ರೆಸ್ ನಾಯಕರು ರಾಜೀನಾಮೆ ಕೊಡಲು ಹೇಳಿದರು, ಅದಕ್ಕೆ ಕೊಟ್ಟಿದ್ದೇನೆ. ಇದರಲ್ಲಿ ಯಾವುದೇ ಒತ್ತಡವಿಲ್ಲ. ನಾನು ಆಗಸ್ಟ್ 14ಕ್ಕೆ ಕೊಡಬೇಕು ಅಂದುಕೊಂಡಿದ್ದೆ, ಆದರೆ ಅವರ ಸೂಚನೆಯಂತೆ ಇಂದೇ ನೀಡಿದ್ದೇನೆ. ಒಂದು ವೇಳೆ ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗುವ ಪರಿಸ್ಥಿತಿ ಬಂದಿದ್ದರೆ, ನಾನೇ ಮೊದಲೇ ರಾಜೀನಾಮೆ ಕೊಟ್ಟು ಹೊರಬರುತ್ತಿದ್ದೆ ಎಂದು ಭಾವುಕರಾಗಿ ನುಡಿದರು. ಬಸವರಾಜ ಹೊರಟ್ಟಿ ಅವರ ನಿರ್ಗಮನದೊಂದಿಗೆ ಈಗ ಮೇಲ್ಮನೆಯ ನೂತನ ಸಭಾಪತಿ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ. ಈಗಾಗಲೇ ಕಾಂಗ್ರೆಸ್ ವಲಯದಲ್ಲಿ ಹಲವು ಹೆಸರುಗಳು ಕೇಳಿಬರುತ್ತಿದ್ದು, 14ರ ಚುನಾವಣೆಯ ನಂತರ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೋನಿಯಾ ಗಾಂಧಿ ಫೆವರೆಟ್ ನೂರಿ ಜೊತೆ ವಿಡಿಯೋ ಹಂಚಿಕೊಂಡ ರಾಹುಲ್ ಗಾಂಧಿ ಹೇಳಿದ್ದೇನು?
ಎರಡನೇ ಬಾರಿ ಸಿಎಂ ಡಿಕೆ ಶಿವಕುಮಾರ್ ಭೇಟಿಯಾಗಿ ಸಿಟ್ಟಿನಿಂದಲೇ ಹೊರಬಂದ ಬಸವರಾಜ್ ಹೊರಟ್ಟಿ