* ಬಿರುಸಿನ ಪ್ರಚಾರ ನಡೆಸಿದ ಬಿಜೆಪಿ ಅಭ್ಯರ್ಥಿ ಹೊರಟ್ಟಿ
* ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ಕೊಡ್ತೇವೆ; ಶೆಟ್ಟರ್
* ಹಾಸ್ಯದ ಮೂಲಕ ತಿರಸ್ಕೃತ ಮತದ ಪಾಠ ಮಾಡಿದ ಹೊರಟ್ಟಿ
ಹುಬ್ಬಳ್ಳಿ(ಜೂ.05): ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಶನಿವಾರ ಹುಬ್ಬಳ್ಳಿಯಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ವಿವಿಧ ಶಾಲಾ ಕಾಲೇಜುಗಳಿಗೆ ತೆರಳಿ ತಮ್ಮ ಸಾಧನೆ ಮನವರಿಕೆ ಮಾಡಿಕೊಟ್ಟು ಮತಯಾಚನೆ ಮಾಡಿದ್ದಾರೆ.
ಇಲ್ಲಿನ ವುಮೆನ್ಸ್ ಕಾಲೇಜಿನಲ್ಲಿ ಮಾತನಾಡಿದ ಹೊರಟ್ಟಿ, 1980ರಲ್ಲಿ ಮೊದಲ ಬಾರಿ ಚುನಾವಣೆ ಎದುರಿಸಿದ್ದೆ. ಅಲ್ಲಿಂದ ಇಲ್ಲಿವರೆಗೂ ಶಿಕ್ಷಕರು ಅದೇ ಪ್ರೀತಿ, ವಿಶ್ವಾಸವನ್ನು ತೋರುತ್ತಿದ್ದಾರೆ. ಎರಡು ತಲೆಮಾರಿನ ಶಿಕ್ಷಕರು ನನ್ನನ್ನು ನಂಬಿ ಮತ ನೀಡಿದ್ದಾರೆ. ಪ್ರಚಾರಕ್ಕೆ ಹೋದ ಹಲವೆಡೆ ಶಿಕ್ಷಕಿಯರು ಹಿಂದಿನ ಕಷ್ಟನೆನೆದು ಕಣ್ಣೀರು ಹಾಕಿದ್ದಿದೆ. ಅವರ ನಂಬಿಕೆ ಉಳಿಸಿಕೊಂಡ ಕಾರಣದಿಂದಲೆ ಸತತ ಏಳು ಬಾರಿ ಗೆಲ್ಲಲು ಕಾರಣವಾಗಿದೆ ಎಂದರು.
Karnataka Politics: 'ಜೆಡಿಎಸ್‌ಗೆ ದ್ರೋಹ ಎಸಗಿದ ಹೊರಟ್ಟಿ'
ಶಿಕ್ಷಕರು ಯಾವುದೇ ಸಮಯದಲ್ಲಿ ಸಮಸ್ಯೆ ಎಂದು ಮನೆಗೆ ಬಂದರೆ ತಕ್ಷಣ ಸ್ಪಂದಿಸಿ ನ್ಯಾಯ ದೊರಕಿಸಿ ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಹಿಂದೆ ಅನುದಾನ ರಹಿತ ಶಾಲಾ-ಕಾಲೇಜು ಶಿಕ್ಷಕರಿಗೆ ನಾಳೆ ಕೆಲಸ ಬಿಟ್ಟು ಮನೆಗೆ ಹೋಗು ಎಂದರೆ ಹೋಗುವ ಅನಿವಾರ್ಯತೆ ಇತ್ತು. ಆದರೆ ಈ ಶಿಕ್ಷಕರಿಗೆ ಸೇವಾ ಭದ್ರತೆ ಒದಗಿಸುವ ಸಲುವಾಗಿ ಹೋರಾಟ ಮಾಡಿದ್ದೇನೆ. ಅನುದಾನರಹಿತ ಪರಿಸ್ಥಿತಿಯಿಂದ ಅನುದಾನ ಸಹಿತವಾದ ಕಾರಣ 30 ಸಾವಿರ ಶಿಕ್ಷಕರು ಸಂಬಳ ಪಡೆಯುವಂತಾಯಿತು. 40 ಸಾವಿರ ಶಿಕ್ಷಕರು ಉದ್ಯೋಗ ಕಂಡುಕೊಂಡರು. ಹಿಂದೆ ಬಂದ ಯಾವುದೇ ಸರ್ಕಾರ ಶಿಕ್ಷಕರ ಸಲುವಾಗಿ ನನ್ನಷ್ಟುಕೆಲಸ ಮಾಡಿಲ್ಲ ಎಂದು ಧೈರ್ಯದಿಂದ ಹೇಳಬಲ್ಲೆ ಎಂದರು.
ವಿಜಯನಗರದ ಸಿಟಿ ಶಾಲೆಯಲ್ಲಿ ಶಿಕ್ಷಕರ ಸಮಾಲೋನಾ ಸಭೆಯಲ್ಲಿ ಮಾತನಾಡಿದ ಜಗದೀಶ ಶೆಟ್ಟರ್, ರಾಜ್ಯದ ಎಲ್ಲ ಶಿಕ್ಷಕರಿಗಾಗಿ ಹೊರಟ್ಟಿಅವರು ಹಗಲಿರುಳು ಶ್ರಮಿಸಿದ್ದಾರೆ. 42 ವರ್ಷ ಕಳೆದರೂ ಶಿಕ್ಷಕರಿಗೆ ಅವರ ಮೇಲಿನ ಪ್ರೀತಿ, ವಿಶ್ವಾಸ ಕಡಿಮೆಯಾಗಿಲ್ಲ. ಹಿಂದೆ ನಡೆದ ಹಲವಾರು ಚುನಾವಣೆಗೂ ಈಗ ನಡೆಯುತ್ತಿರುವ ಚುನಾವಣೆಗೆ ತುಂಬ ವ್ಯತ್ಯಾಸವಿದೆ. ಹಿಂದೆ ಹೊರಟ್ಟಿಅವರಿಗೆ ಮಾತ್ರ ಶಿಕ್ಷಕರ ಬೆಂಬಲ ವ್ಯಕ್ತವಾಗುತ್ತಿತ್ತು. ಈಗ ಬಿಜೆಪಿ ಶಿಕ್ಷಕರು ಅವರನ್ನು ಬೆಂಬಲಿಸುತ್ತಿದ್ದಾರೆ. ಆದರಿಂದ ಹೆಚ್ಚು ಮತ ಪಡೆದು ಜಯಗಳಿಸುತ್ತಾರೆ. ಇದು ಏಕಪಕ್ಷೀಯ ಗೆಲವು ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ ಅವರಿಗೆ ಜೆಡಿಎಸ್‌ನಲ್ಲಿ ಉತ್ತಮ ಸ್ಥಾನಮಾನ ದೊರೆಯಲಿಲ್ಲ. ಅವರಿಗೆ ಅನ್ಯಾಯ ಮಾಡಿದ್ದಾರೆ. ಬಿಜೆಪಿ ಅವರಿಗೆ ಒಳ್ಳೆಯ ಸ್ಥಾನ ನೀಡಲಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಭಿವೃದ್ಧಿ ಯೋಜನೆಗಳು ಬಡವರಿಗೆ ನೇರವಾಗಿ ದೊರೆಯುತ್ತಿವೆ. ಅವರ ಕಾರ್ಯವನ್ನು ಇಡೀ ವಿಶ್ವವೇ ಹೊಗಳುತ್ತಿದ್ದೆ ಎಂದರು.
ವುಮೆನ್ಸ್ ಕಾಲೇಜಿನಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಪಶ್ಚಿಮ ಶಿಕ್ಷಕರ ಕ್ಷೇತ್ರ, ವಾಯವ್ಯ ಶಿಕ್ಷಕರ ಕ್ಷೇತ್ರ ಸೇರಿದಂತೆ ನಾಲ್ಕು ಅಭ್ಯರ್ಥಿಗಳು ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಇವರೆಲ್ಲರೂ ಮತಗಳನ್ನು ಪಡೆದು ಜಯಗಳಿಸುತ್ತಾರೆ. ಬಸವರಾಜ ಹೊರಟ್ಟಿಅವರು ಅತಿ ಹೆಚ್ಚು ಮತಗಳನ್ನು ಪಡೆದು ಜಯಗಳಿಸಿ ದಾಖಲೆ ನಿರ್ಮಿಸುತ್ತಾರೆ ಎಂದರು.
ಈ ವೇಳೆ ಶಿಕ್ಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಜಿ.ಕೆ. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಗದೀಶ ಕಲ್ಯಾಣ ಶೆಟ್ಟರ್, ಗೋವಿಂದ ಜೋಶಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ವಿನೋದ ಬಾಕ್ಳೆ, ಟಿ.ಬಿ. ಪಾಟೀಲ, ಮಲ್ಲಿಕಾರ್ಜುನ ಸಾಹುಕಾರ ಇದ್ದರು.
MLC Election: ಹೊರಟ್ಟಿ ಚುನಾವಣೆಯಲ್ಲಿ ಗೆದ್ದಾಗಿದೆ: ಶಾಸಕ ಬಂಡಿ
ಬಿರುಸಿನ ಪ್ರಚಾರ
ಬೆಳಗ್ಗೆ ಬಾಸೆಲ್ ಮಿಷನ್ ಪ್ರೌಢಶಾಲೆಯಲ್ಲ ಶಿಕ್ಷಕರೊಂದಿಗೆ ಚರ್ಚೆ ನಡೆಸಿದ ಹೊರಟ್ಟಿ, ಬಳಿಕ ಮೂರುಸಾವಿರ ಮಠದ ಮಹಿಳಾ ಪದವಿ ಕಾಲೇಜಿನಲ್ಲಿ ಪ್ರಚಾರ ನಡೆಸಿದರು. ತದನಂತದ ಸಿಟಿ ಪ್ರೌಢಶಾಲೆಯಲ್ಲಿ ಶಿಕ್ಷಕರೊಂದಿಗೆ ಸಂವಾದದಲ್ಲಿ ಪಾಲ್ಗೊಂಡರು.
ಹಾಸ್ಯದ ಮೂಲಕ ತಿರಸ್ಕೃತ ಮತದ ಪಾಠ ಮಾಡಿದ ಹೊರಟ್ಟಿ
ನಮ್ಮ ಮೇಲಿನ ಅಪಾರ ಪ್ರೀತಿಯಿಂದ ಶಿಕ್ಷಕರು ಎಡವಟ್ಟು ಮಾಡುವುದುಂಟು. ಹಿಂದೊಮ್ಮೆ ಶಿಕ್ಷಕರೊಬ್ಬರು ಮೊದಲ ಮತ ಚಲಾಯಿಸುವ ಹುಮ್ಮಸ್ಸಿನಲ್ಲಿ ಬಂದು ಮತದಾನ ಮಾಡಿದರು. ಹೊರಬಂದು ಈ ಬಾರಿ ನಿಮಗೆ ಮತ ಹಾಕಿದ್ದೇನೆ, ಉಳಿದವರಿಗೆ ಬುದ್ಧಿ ಕಲಿಸಿದ್ದೇನೆ ಎಂದರು. ಏನು ಮಾಡಿದ್ದೀಯಾ ಎಂದು ಪ್ರಶ್ನಿಸಿದಾಗ, ಹೊರಟ್ಟಿಹೆಸರಿನ ಮುಂದೆ ರೈಟ್ ಚಿಹ್ನೆ, ಉಳಿದ ಹೆಸರಿನ ಎದುರು ತಪ್ಪು ಚಿಹ್ನೆ ಹಾಕಿದ್ದೇನೆ ಎಂದುಬಿಟ್ಟ. ಹೀಗೆ ಶಿಕ್ಷಕರು ಇನ್‌ವ್ಯಾಲಿಡ್ ಆಗದಂತೆ ಜಾಗರೂಕವಾಗಿ ಮತದಾನ ಮಾಡಿ ಎಂದು ಹಾಸ್ಯದ ಮೂಲಕ ಹೊರಟ್ಟಿ ಮೇಷ್ಟ್ರು ಪಾಠ ಮಾಡಿದರು.