Karnataka Politics| ಸಿಎಂ ಬೊಮ್ಮಾಯಿ ಅವಧಿ ಪೂರೈಸುತ್ತಾರೆ: ಬಿಎಸ್‌ವೈ!

By Suvarna News  |  First Published Nov 13, 2021, 7:02 AM IST

* ಒಳ್ಳೆ ಕೆಲಸ ಮಾಡ್ತಿದ್ದಾರೆ, ಬದಲಾವಣೆ ಪ್ರಶ್ನೆಯೇ ಇಲ್ಲ

* ಸಿಎಂ ಬೊಮ್ಮಾಯಿ ಅವಧಿ ಪೂರೈಸುತ್ತಾರೆ: ಬಿಎಸ್‌ವೈ

* ರಾಜ್ಯಾಧ್ಯಕ್ಷ ಕಟೀಲ್‌ ಬದಲಾವಣೆ ಪ್ರಸ್ತಾಪವೂ ಇಲ್ಲ


ತುಮಕೂರು(ನ.13): ಬಿಟ್‌ ಕಾಯಿನ್‌  ಪ್ರಕರಣಕ್ಕೆ (Bitcoin Scam) ಸಂಬಂಧಿಸಿ ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ (Former CM BS Yediyurappa)) ತಿಳಿಸಿದ್ದಾರೆ. ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಯಡಿಯೂರಪ್ಪ, ಅವರು ಅಧಿಕಾರ ಪೂರ್ಣಗೊಳಿಸುತ್ತಾರೆ ಎಂದೂ ಸ್ಪಷ್ಟಪಡಿಸಿದ್ದಾರೆ.

ನಗರದ ಸ್ನೇಹಸಂಗಮ ಬ್ಯಾಂಕ್‌ ಉದ್ಘಾಟನಾ ಸಮಾರಂಭದ ಬಳಿಕ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಮುಖ್ಯಮಂತ್ರಿಗಳು ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಆದೇಶಿಸಿದ್ದಾರೆ. ಈ ಪ್ರಕರಣ ಪ್ರಧಾನಿ ಮೋದಿ ಗಮನಕ್ಕೂ ಬಂದಿದ್ದು, ಖಂಡಿತ ಇದು ಪ್ರಮುಖವಾದ ವಿಚಾರ. ಯಾರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೋ ಅವರ ವಿರುದ್ಧ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

Tap to resize

Latest Videos

undefined

ಅವಧಿ ಪೂರ್ಣಗೊಳಿಸುತ್ತಾರೆ:

ಮುಖ್ಯಮಂತ್ರಿ ಬೊಮ್ಮಾಯಿ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಅವರು ಅವಧಿ ಪೂರ್ಣಗೊಳಿಸುತ್ತಾರೆ. ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಯಡಿಯೂರಪ್ಪ ಸ್ಪಷ್ಟಪಡಿಸಿದರು. ಜತೆಗೆ, ಬಿಜೆಪಿ ಅಧ್ಯಕ್ಷರ(BJP President) ಬದಲಾವಣೆಯ ಯಾವುದೇ ಪ್ರಸ್ತಾಪ ಇಲ್ಲ ಎಂದು ಹೇಳಿದರು.

ವೈಯಕ್ತಿಕ ಕೆಲಸದಿಂದಾಗಿ ಭೇಟಿ:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chef Minister Basavaraj Bommai) ಭೇಟಿ ಬೆನ್ನಲ್ಲೇ ಮಾಜಿ ಸಚಿವ ಜಗದೀಶ ಶೆಟ್ಟರ್‌ ಅವರು ದೆಹಲಿಗೆ ತೆರಳಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಅವರ ಜೊತೆಗೆ ಮಾತನಾಡಿದ್ದೇನೆ. ವೈಯಕ್ತಿಕ ಕೆಲಸದ ನಿಮಿತ್ತ ದೆಹಲಿಗೆ ಹೋಗಿದ್ದಾರೆ ಎಂದು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಬಿಜೆಪಿಗರಿಂದಲೇ ನನ್ನ ವಿರುದ್ಧ ವದಂತಿ: ಶಾಗೆ ಸಿಎಂ ದೂರು

ಬಿಟ್‌ ಕಾಯಿನ್‌ ಹಗರಣದ ವಿಚಾರದಲ್ಲಿ ಬಿಜೆಪಿಯ ಕೆಲ ಮುಖಂಡರ ವರ್ತನೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ದೆಹಲಿಯಲ್ಲಿ ಶಾ ಅವರನ್ನು ಭೇಟಿ ಮಾಡಿದ್ದ ಬೊಮ್ಮಾಯಿ ಅವರು, ಪ್ರತಿಪಕ್ಷಗಳ ಮುಖಂಡರಿಗಿಂತ ನಮ್ಮ ಪಕ್ಷದ ಕೆಲವು ಮುಖಂಡರೇ ಅತ್ಯುತ್ಸಾಹ ತೋರುತ್ತಿದ್ದಾರೆ. ಮಾಧ್ಯಮಗಳ ಮೂಲಕ ಮುಖ್ಯಮಂತ್ರಿ ಬದಲಾವಣೆ ಕುರಿತು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಇಂಥವರನ್ನು ನಿಯಂತ್ರಿಸಿ ಎಂದು ಮನವಿ ಮಾಡಿದರು ಎನ್ನಲಾಗಿದೆ.

ಗುರುವಾರ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರನ್ನು ಭೇಟಿ ಮಾಡುವ ಮೊದಲೇ ಮುಖ್ಯಮಂತ್ರಿ ಬೊಮ್ಮಾಯಿ ಅವರು ಬುಧವಾರ ತಡರಾತ್ರಿ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಈ ವೇಳೆ ಬಿಟ್‌ ಕಾಯಿನ್‌ ಪ್ರಕರಣದ ಬಗ್ಗೆ ವಿವರಣೆ ನೀಡಿದ ಬಳಿಕ ಸ್ವಪಕ್ಷೀಯರ ವಿರುದ್ಧ ಬೇಸರ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ

ಬಿಟ್‌ಕಾಯಿನ್‌: ಸಿಎಂ ಪರ ಕೆ.ಎನ್‌.ರಾಜಣ್ಣ ಬ್ಯಾಟಿಂಗ್‌

 

ತುಮಕೂರು: ಬಿಟ್‌ ಕಾಯಿನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬೆಂಬಲಕ್ಕೆ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ನಿಂತಿದ್ದು, ಮುಖ್ಯಮಂತ್ರಿಗಳು ಇಂತಹ ನೀಚ ಕೃತ್ಯಕ್ಕೆ ಕೈ ಹಾಕುವ ವ್ಯಕ್ತಿಯಲ್ಲ ಎಂದಿದ್ದಾರೆ. ಮುಖ್ಯಮಂತ್ರಿಗಳು ಇಂತಹ ಕೆಲಸಕ್ಕೆ ಪ್ರೋತ್ಸಾಹ ಕೊಡುವಂತಹ ವ್ಯಕ್ತಿಯಲ್ಲ. ಅವರ ಬಗ್ಗೆ ನನಗೆ ಗೊತ್ತಿರುವುದರಿಂದ ನಾನು ಹೇಳುತ್ತಿದ್ದೇನೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಅವರ ಕಡೆಯವರು ಯಾರಾದರೂ ಇವರ ಹೆಸರು ಹೇಳಿ ದುರುಪಯೋಗ ಮಾಡಿಕೊಂಡಿರಬಹುದು. ಈ ಬಗ್ಗೆ ಸರಿಯಾದ ತನಿಖೆಯಾಗಬೇಕು ಎಂದರು.

ದೊಡ್ಡವರಿರಲಿ, ಚಿಕ್ಕವರಿರಲಿ ಶಿಕ್ಷೆ ಆಗಬೇಕು. ಆಗ ಮಾತ್ರ ಸರ್ಕಾರಕ್ಕೆ ಕೀರ್ತಿ ಬರುವುದು. ಬಿಟ್‌ ಕಾಯಿನ್‌ ದಂಧೆಯಲ್ಲಿ ಭಾಗಿಯಾದವರಿಗೆ ಶಿಕ್ಷೆ ಆಗದಿದ್ದರೆ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂದರು.

click me!