ಮೇ ತಿಂಗಳಲ್ಲಿ ಮತ್ತೆ ಕುರ್ಚಿಗೆ ಜಂಗಿ ನಿಕಾಲಿ ಕುಸ್ತಿ: ಕಾಂಗ್ರೆಸ್ ಕಾಲೆಳೆದ ಸಂಸದ ಬೊಮ್ಮಾಯಿ

Published : Apr 02, 2026, 12:25 AM IST
Basavaraj Bommai

ಸಾರಾಂಶ

ರಾಜ್ಯದಲ್ಲಿ ಕುರ್ಚಿ ಕದನಕ್ಕೆ ತಾತ್ಕಾಲಿಕ ವಿರಾಮ ಸಿಕ್ಕಿದ್ದು, ಮೇ ತಿಂಗಳಲ್ಲಿ ಸಿಎಂ ಕುರ್ಚಿಗಾಗಿ ರಾಜ್ಯದಲ್ಲಿ ಜಂಗಿ ನಿಕಾಲಿ ಕುಸ್ತಿ ಶುರುವಾಗಲಿದೆ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಕಾಲೆಳೆದಿದ್ದಾರೆ.

ದಾವಣಗೆರೆ (ಏ.02): ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆ ಕಾರಣಕ್ಕೆ ರಾಜ್ಯದಲ್ಲಿ ಕುರ್ಚಿ ಕದನಕ್ಕೆ ತಾತ್ಕಾಲಿಕ ವಿರಾಮ ಸಿಕ್ಕಿದ್ದು, ಮೇ ತಿಂಗಳಲ್ಲಿ ಸಿಎಂ ಕುರ್ಚಿಗಾಗಿ ರಾಜ್ಯದಲ್ಲಿ ಜಂಗಿ ನಿಕಾಲಿ ಕುಸ್ತಿ ಶುರುವಾಗಲಿದೆ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಕಾಲೆಳೆದಿದ್ದಾರೆ. ನಗರದ ಡಿಸಿಎಂ ಲೇಔಟ್‌ನ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಬುಧವಾರ ಆರ್ಯವೈಶ್ಯ ಸಮಾಜದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಮೇ ತಿಂಗಳಿನಲ್ಲಿ ಮತ್ತೆ ರಾಜ್ಯದಲ್ಲಿ ಕುರ್ಚಿಗಾಗಿ ಜಂಗಿ ನಿಖಾಲಿ ಕುಸ್ತಿ ಶುರುವಾಗಲಿದೆ. ಸದ್ಯಕ್ಕೆ ಕುರ್ಚಿ ಕುಸ್ತಿಗೆ ಉಪ ಚುನಾವಣೆ ಕಾರಣಕ್ಕೆ ವಿರಾಮ ಸಿಕ್ಕಿದೆಯಷ್ಟೇ ಎಂದರು.

ಒಂದು ಶಿಸ್ತಿನ ಸಮಾಜವಾದ, ಎಲ್ಲರನ್ನೂ ಪರ್ಫೆಕ್ಟ್ ಆಗಿ ಲೆಕ್ಕಾಚಾರ ಮಾಡಿ, ತೀರ್ಮಾನಿಸುವ ಸಮಾಜವೆಂದರೆ ಅದು ಆರ್ಯವೈಶ್ಯ ಸಮಾಜ. ಆರ್ಯವೈಶ್ಯ ಸಮಾಜ ಲೆಕ್ಕಚಾರ ಹಾಕಿ, ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕಬೇಕಿದೆ. ಇಲ್ಲಿ ಬಿಜೆಪಿಯು 3 ದಶಕದಿಂದ ಜಯಭೇರಿ ಭಾರಿಸಿಲ್ಲ. ಈ ಉಪ ಚುನಾವಣೆಯಲ್ಲಿ ನಿಮ್ಮ ಲೆಕ್ಕಾಚಾರದಿಂದ ಜಯ ಸಿಗಲಿದೆ. ಜನಪರವಾದ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಬಿಜೆಪಿಗೆ ಮತ ನೀಡಿ ಎಂದು ಅವರು ಮನವಿ ಮಾಡಿದರು.

ದುಡಿಮೆಯೇ ದೊಡ್ಡಪ್ಪ: ದಕ್ಷಿಣ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಶ್ರೀನಿವಾಸ ದಾಸಕರಿಯಪ್ಪಗೆ ಕಣಕ್ಕಿಳಿಸಿದ್ದೇವೆ. ಶ್ರೀನಿವಾಸ ಪರವಾಗಿ ನಿಮ್ಮಲ್ಲಿ ಬಿಜೆಪಿಗೆ ಮತಯಾಚನೆ ಮಾಡುತ್ತಿದ್ದೇನೆ. ನಿಮ್ಮ ಲೆಕ್ಕ ನೀವೇ ಬರೆದು, ಕಠಿಣ ಪರಿಶ್ರಮದಿಂದ ಬದುಕನ್ನು ರೂಪಿಸಿಕೊಳ್ಳುವವರು ನೀವು. ಮೊದಲು ದುಡ್ಡೇ ದೊಡ್ಡಪ್ಪ ಅನ್ನೋ ಕಾಲ ಇತ್ತು. ಆದರೆ, ಶ್ರೀನಿವಾಸನನ್ನು ಪೂಜಿಸುವವರು ನೀವು. ನೀವು ದುಡಿಮೆಯೇ ದೊಡ್ಡಪ್ಪ ಅಂತಾ ನಂಬಿ, ಸ್ವಾಭಿಮಾನದಿಂದ ದುಡಿಯುತ್ತಿದ್ದೀರಿ. ನಿಮ್ಮ ದುಡಿಮೆಯಲ್ಲಿ ಬೇರೆಯವರಿಗೆ ಕೊಡುವುದು ಸ್ವಾಭಿಮಾನ. ನಿಮ್ಮ ಆರಾಧ್ಯದೈವ ಶ್ರೀನಿವಾಸನ ಹೆಸರಿನ ಶ್ರೀನಿವಾಸನೇ ನಮ್ಮ ಅಭ್ಯರ್ಥಿ. ನಿಮ್ಮ ಮತ ಶ್ರೀನಿವಾಸನಿಗೆ ನೀಡಿ ಎಂದು ಅವರು ತಿಳಿಸಿದರು.

ರಾಜ್ಯದ ಹಣೆಬರದ ಬದಲಿಸುವ ಚುನಾವಣೆ ಇದು. ಕಾಂಗ್ರೆಸ್ ಅಧಿಕಾರದ ಅಹಂಕಾರದಲ್ಲೇ ತೇಲಾಡುತ್ತಿದೆ. ಸದ್ಯ ಕಾಂಗ್ರೆಸ್‌ಗೆ ಯಾರೂ ಕಣ್ಣಿಗೆ ಕಾಣಿಸುತ್ತಿಲ್ಲ. ಯಾವ ಸಮಾಜದ ಬಗ್ಗೆಯೂ ಗೌರವವಿಲ್ಲ. ಅಹಿಂದ ಸಮಾಜಕ್ಕೆ ಅವಮಾನಿಸಿದ ಕಾಂಗ್ರೆಸ್ ಪಕ್ಷವು ಕಳೆದ ವರ್ಷ ₹410 ಕೋಟಿ ಹಿಂದುಳಿದ ವರ್ಗಗಳ ಸಮಾಜದ ಅಭಿವೃದ್ಧಿಗೆ ಇಟ್ಟಿತ್ತು. ಆ ಹಣವನ್ನು ಜಾತಿಗಣತಿಗೆ ನೀಡಿ, ಹಿಂದುಳಿದ ವರ್ಗಗಳ ನಿಗಮಗಳಿಗೆ ಸೊನ್ನೆ ಕೊಟ್ಟಿದೆ ಎಂದು ಅವರು ಹೇಳಿದರು.

ಆಳುವ ಪಕ್ಷಕ್ಕೆ ಪಾಠ ಕಲಿಸಿ

ಜಾತಿಗಣತಿ ಕೇವಲ ಹಿಂದುಳಿದವರಿಗೆ ಇದೆಯಾ? ಬೇರೆ ಜಾತಿಗಣತಿ ಮಾಡಿಲ್ವಾ? ಹಿಂದುಳಿದ ವರ್ಗಕ್ಕೆ ಶೂನ್ಯ ಕೊಟ್ಟ ಸಿಎಂ ಸಿದ್ದರಾಮಯ್ಯ ಚುನಾವಣೆ ಬಂದಾಗ ಅಹಿಂದ ವರ್ಗ ನೀವು ಮುಂದೆ ಬನ್ನಿ ಎನ್ನುತ್ತಾರೆ. ಅಧಿಕಾರಕ್ಕೆ ಬಂದಾಗ ನೀವು ಹಿಂದುಳಿದವರು ಹಿಂದೆಯೇ ಉಳಿಯಿರಿ. ನಾವು ಮುಂದೆ ಹೋಗುತ್ತೇವೆ ಎನ್ನುತ್ತಾರೆ. ಇಂತಹ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನತೆ ಜಾಗೃತರಾಗಬೇಕು. ಉಪ ಚುನಾವಣೆಗಳು ಆಳುವ ಪಕ್ಷಕ್ಕೆ ಪಾಠ ಕಲಿಸುವ ಸುವರ್ಣಾವಕಾಶವಾಗಿದ್ದು, ಉಭಯ ಕ್ಷೇತ್ರಗಳ ಮತದಾರರು ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಿ, ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.

ಆರ್ಯವೈಶ್ಯ ನಿಗಮಕ್ಕೆ ನಮ್ಮ ಸರ್ಕಾರ ಅನುದಾನ ನೀಡಿದಾಗ ಎಂಎಲ್‌ಸಿ ಅರುಣ ಅದನ್ನು ಸರಿಯಾಗಿ ಬಳಸಿ, ಶೇ.95ರಷ್ಟು ರಿಕವರಿ ಮಾಡಿ, ಯಶಸ್ವಿಯಾಗಿ ನಡೆಸಿದರು. ಕಾಂಗ್ರೆಸ್ ಸರ್ಕಾರ 2 ವರ್ಷದಲ್ಲಿ ಹಣ ನೀಡಿಲ್ಲ. ಎಸ್‌ಸಿಪಿ-ಟಿಎಸ್‌ಪಿ ಹಣ ₹40 ಸಾವಿರ ಕೋಟಿಯನ್ನು ಗ್ಯಾರಂಟಿಗೆ ನೀಡಿದೆ. ಎಲ್ಲ ಕಡೆ ಭ್ರಷ್ಟಾಚಾರವಿದೆ. ಸಿಎಂ ಮೂಗಿನಡಿಯೇ ಭ್ರಷ್ಟಾಚರ ನಡೆದಿದೆ. ಯಾರು ಲೂಟಿ ಹೆಚ್ಚು ಮಾಡುತ್ತಾರೆಂಬ ಪೈಪೋಟಿ ಕಾಂಗ್ರೆಸ್ಸಿಗರಲ್ಲಿ ನಡೆಯುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಶಾಸಕರಾದ ಸಿ.ಸಿ. ಪಾಟೀಲ, ವಿದ ಸದಸ್ಯ ಡಿ.ಎಸ್. ಅರುಣ, ಭಾರತಿ ಶೆಟ್ಟಿ, ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಯಶವಂತ ರಾವ್ ಜಾಧವ್, ಬಿ.ಜಿ.ಅಜಯಕುಮಾರ, ಡಾ.ನಾಗಪ್ರಕಾಶ ಸೇರಿದಂತೆ ಅನೇಕರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಲ್ಪಸಂಖ್ಯಾತರನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ: ಡಿಸಿಎಂ ಡಿ.ಕೆ. ಶಿವಕುಮಾರ್
ಕಾಂಗ್ರೆಸ್ ಅಧಿಕಾರದಿಂದ ರಾಜ್ಯ ಅಭಿವೃದ್ಧಿಯಾಗಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ