
ದಾವಣಗೆರೆ (ಏ.01): ಚುನಾವಣೆ ಪ್ರಚಾರದ ಜವಾಬ್ದಾರಿಯನ್ನು ಸಚಿವ ಜಮೀರ್ ಅಹಮ್ಮದ್ ಅವರಿಗೆ ಪಕ್ಷವು ನೀಡಿದ್ದು, ಅದನ್ನು ಅವರು ಮುಗಿಸಿಕೊಳ್ಳುತ್ತಾರೆ. ಇನ್ನುಳಿದ ಅಲ್ಪಸಂಖ್ಯಾತ ನಾಯಕರಿಗೂ ನಾವು ಚುನಾವಣಾ ಪ್ರಚಾರದ ಜವಾಬ್ದಾರಿ ನೀಡಿದ್ದೇವೆ ಎಂದು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದ ಬಾಪೂಜಿ ಎಂಬಿಎ ಕಾಲೇಜು ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ವ್ಯಕ್ತಿಯ ಮೇಲೆ ಪಕ್ಷ ನಡೆಯುವುದಿಲ್ಲ. ಡಿ.ಕೆ.ಶಿವಕುಮಾರ್ ಮೇಲೂ ನಡೆಯುವುದಿಲ್ಲ.
ಸಿದ್ದರಾಮಯ್ಯ ಮೇಲೂ ನಡೆಯುವುದಿಲ್ಲ. ಜಮೀರ್ ಮೇಲೂ ನಡೆಯುವುದಿಲ್ಲ ಎಂದರು. ಪಕ್ಷವು ಸಿದ್ಧಾಂತ ಹಾಗೂ ಕಾರ್ಯಕರ್ತರ ಮೇಲೆ ನಡೆಯುತ್ತದೆ. ಚುನಾವಣೆಯಲ್ಲಿ ನಾವು ಮೊದಲಿನಿಂದಲೂ ಕೆಲಸ ಮಾಡಿಕೊಂಡು ಬಂದಿದ್ದೇವೆ. ಅಲ್ಪಸಂಖ್ಯಾತರಿಗೆ ನಾವು ಕೊಟ್ಟಿರುವ ಕೊಡುಗೆಯನ್ನು ಬಿಜೆಪಿಯವರು ಮುಸ್ಲಿಮರ ಓಲೈಕೆಯೆಂದು ಟೀಕಿಸುತ್ತಿದೆ. ಇದು ಮುಸ್ಲಿಮರ ಪಕ್ಷವೆಂದು ಟೀಕಿಸುತ್ತಾರೆ. ಅಲ್ಪಸಂಖ್ಯಾತರನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಅಲ್ಪಸಂಖ್ಯಾತರಿಗೆ ರಕ್ಷಣೆ ಮಾಡಿಕೊಂಡು, ಅಧಿಕಾರವನ್ನೂ ನೀಡುತ್ತಾ ಬಂದಿದ್ದೇವೆ. ಈ ದೃಷ್ಟಿಯಿಂದಲೇ ನಾವು ಇದೇ ಭಾಗದ ಅಬ್ದುಲ್ ಜಬ್ಬಾರ್ ಅವರಿಗೆ ವಿಧಾನ ಪರಿಷತ್ತು ಸದಸ್ಯ ಸ್ಥಾನ ನೀಡಿದ್ದೇವೆ. ಶಿಗ್ಗಾವಿ ಕ್ಷೇತ್ರದವರಿಗೂ ಸ್ಥಾನ ನೀಡಲಾಗಿದೆ. 16 ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಅಲ್ಪಸಂಖ್ಯಾತರಿಗೆ ನೀಡಲಾಗಿದೆ ಎಂದು ಡಿಕೆಶಿ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಸೆಡ್ಡು ಹೊಡೆದು, ರಣರಂಗದ ಮೈದಾನಕ್ಕೆ ಇಳಿದಿದ್ದೇನೆ, ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ಬಂಡಾಯ ಸಾರಿದ್ದ ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಸಾದಿಕ್ ಪೈಲ್ವಾನ್ ನಿವಾಸಕ್ಕೆ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ನೀಡಿದರು. ಈ ವೇಳೆ ಡಿ.ಕೆ.ಶಿವಕುಮಾರ ಜೊತೆಗೆ ಹ್ಯಾರಿಸ್, ಸಲೀಂ ಅಹಮ್ಮದ್, ಮಹಮ್ಮದ್ ನಲಪಾಡ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
ಇದೇ ವೇಳೆ ಡಿಕೆಶಿ ಸೇರಿದಂತೆ ಕಾಂಗ್ರೆಸ್ ಮುಖಂಡರಿಗೆ ಸಾದಿಕ್ ಪೈಲ್ವಾನರ ನಿವಾಸದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ನಂತರ ಸಾದಿಕ್ ಪೈಲ್ವಾನರ ಜೊತೆಗೆ ಚರ್ಚಿಸಿದ ಡಿ.ಕೆ.ಶಿವಕುಮಾರ, ಕ್ಷೇತ್ರಾದ್ಯಂತ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ಪರ ಪ್ರಚಾರ ಕೈಗೊಳ್ಳುವಂತೆ, ಭಾರೀ ಮತಗಳ ಅಂತರದಿಂದ ದಾವಣಗೆರೆ ಕ್ಷೇತ್ರದಿಂದ ಕಾಂಗ್ರೆಸ್ಸನ್ನು ಗೆಲ್ಲಿಸಲು ಎಲ್ಲರೂ ಸೇರಿ, ಕೆಲಸ ಮಾಡೋಣ ಎಂದು ಕರೆ ನೀಡಿದರು. ಸಾದಿಕ್ ಪೈಲ್ವಾನ ಕುಟುಂಬ ಸದಸ್ಯರು, ಮುಸ್ಲಿಂ ಮುಖಂಡರು, ಸಮಾಜ ಬಾಂಧವರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.