Ballari| ಮೇಯರ್‌-ಉಪ ಮೇಯರ್‌ ಚುನಾವಣೆಗೆ ಮುಹೂರ್ತ ಫಿಕ್ಸ್‌!

Kannadaprabha News   | Asianet News
Published : Nov 08, 2021, 11:42 AM ISTUpdated : Nov 08, 2021, 12:03 PM IST
Ballari| ಮೇಯರ್‌-ಉಪ ಮೇಯರ್‌ ಚುನಾವಣೆಗೆ ಮುಹೂರ್ತ ಫಿಕ್ಸ್‌!

ಸಾರಾಂಶ

*  ನ. 18ರಂದು ಚುನಾವಣೆ ನಡೆಸಲು ಪ್ರಾದೇಶಿಕ ಆಯುಕ್ತರ ಆದೇಶ * ಕಾಂಗ್ರೆಸ್‌ ಪಕ್ಷದಲ್ಲಿ ರಾಜಕೀಯ ಚಟುವಟಿಕೆ ಚುರುಕು * ಮೇಯರ್‌ ಸ್ಥಾನಕ್ಕೆ ಹೆಚ್ಚಿದ ಪೈಪೋಟಿ  

ಕೆ.ಎಂ. ಮಂಜುನಾಥ್‌

ಬಳ್ಳಾರಿ(ನ.08):  ಬಳ್ಳಾರಿ ಮಹಾನಗರ ಪಾಲಿಕೆಯ(Ballari City Corporation) ಮೇಯರ್‌-ಉಪಮೇಯರ್‌ ಚುನಾವಣೆಗೆ(Election ) ಕೊನೆಗೂ ಮುಹೂರ್ತ ಫಿಕ್ಸ್‌ ಆಗಿದೆ. ನ. 18ಕ್ಕೆ ಚುನಾವಣೆ ನಡೆಸುವಂತೆ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದು, ಚುನಾವಣೆ ಮುಗಿದ ಬಳಿಕ ಅಧಿಕಾರ ಇಲ್ಲದೆ ತೊಳಲಾಟ ಅನುಭವಿಸುತ್ತಿದ್ದ ಕೈ ಪಕ್ಷದ ಸದಸ್ಯರಲ್ಲಿ ನಿರಾಳ ಮೂಡಿದೆ.

ಏತನ್ಮಧ್ಯೆ ಚುನಾವಣೆಯ ದಿನಾಂಕ ನಿಗದಿಗೊಳಿಸುತ್ತಿದ್ದಂತೆಯೇ ಮೇಯರ್‌-ಉಪಮೇಯರ್‌(Mayor-Deputy Mayor) ಸ್ಥಾನಕ್ಕೆ ಕಾಂಗ್ರೆಸ್‌(Congress) ಪಕ್ಷದಲ್ಲಿ ಪೈಪೋಟಿ ಶುರುಗೊಂಡಿದ್ದು, ಮೇಯರ್‌ ಆಕಾಂಕ್ಷಿತರು ತಮ್ಮ ಬೆಂಬಲಿಗ ನಾಯಕರ ಮೂಲಕ ಅಧಿಕಾರ ಚುಕ್ಕಾಣಿ ಹಿಡಿಯಲು ತೆರೆಮರೆಯ ಕಸರತ್ತು ನಡೆಸಿದ್ದಾರೆ.

'ಬಳ್ಳಾರಿ ಪಾಲಿಕೆ ಮೇಲೆ ಕಾಂಗ್ರೆಸ್‌ ಧ್ವಜ ಹಾರಾಡುವುದು ಖಚಿತ'

ಸಾಮಾನ್ಯ ವರ್ಗಕ್ಕೆ ಮೇಯರ್‌:

ಪಾಲಿಕೆಯ ಮೇಯರ್‌ ಸಾಮಾನ್ಯ ವರ್ಗ ಹಾಗೂ ಉಪಮೇಯರ್‌ ಹಿಂದುಳಿದ ವರ್ಗ ‘ಅ’ ಮಹಿಳೆಗೆ ಮೀಸಲಾಗಿದೆ(Reserve). ಮೇಯರ್‌ ಸ್ಥಾನಕ್ಕಾಗಿ ಮಾತ್ರ ಹೆಚ್ಚಿನ ಪೈಪೋಟಿ ಇದೆ. ಪಕ್ಷದ ಮೂಲಗಳ ಪ್ರಕಾರ 18ನೇ ವಾರ್ಡ್‌ನ ಸದಸ್ಯ ಮುಲ್ಲಂಗಿ ನಂದೀಶ್‌ಕುಮಾರ್‌ ಅವರ ಹೆಸರು ಮುಂಚೂಣಿಯಲ್ಲಿದೆ. ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ(Somashekhar Reddy) ಅವರ ಪುತ್ರನ ವಿರುದ್ಧ ಜಯಗಳಿಸಿದ್ದಾರೆ ಎಂಬ ಕಾರಣಕ್ಕಾಗಿ ನಂದೀಶ್‌ ಅವರನ್ನು ಮೇಯರ್‌ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂಬ ಒತ್ತಾಸೆ ಪಕ್ಷದ ನಾಯಕರಲ್ಲಿದೆ ಎಂದು ತಿಳಿದು ಬಂದಿದೆ. 30ನೇ ವಾರ್ಡ್‌ನ ಆಸೀಫ್‌ ಅವರನ್ನು ಮೇಯರ್‌ ಮಾಡಬೇಕು ಎಂದು ಕಾಂಗ್ರೆಸ್‌ ಪಕ್ಷದ ಮತ್ತೊಂದು ಬಣ ಪ್ರಯತ್ನಿಸುತ್ತಿದೆ ಎನ್ನಲಾಗುತ್ತಿದ್ದು, 23ನೇ ವಾರ್ಡ್‌ನ ಪೂಜಾರಿ ಗಾದೆಪ್ಪ, 20ನೇ ವಾರ್ಡ್‌ನ ವಿಕ್ಕಿ ಸಹ ಮೇಯರ್‌ ಸ್ಥಾನದ ರೇಸ್‌ನಲ್ಲಿರುವ ಪ್ರಮುಖರಾಗಿದ್ದಾರೆ.

ಪಕ್ಷದ ನಾಯಕರ ಜತೆ ಚರ್ಚೆ:

ಬಳ್ಳಾರಿ ಮೇಯರ್‌-ಉಪಮೇಯರ್‌ ಆಯ್ಕೆ ಸಂಬಂಧ ಕೆಪಿಸಿಸಿ(KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ್‌(DK Shivakumar) ಅವರ ಜತೆ ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್‌ ನಾಯಕರು, ಪಾಲಿಕೆ ಸದಸ್ಯರು, ಹಾಲಿ, ಮಾಜಿ ಶಾಸಕರು ಕಳೆದ ಅಕ್ಟೋಬರ್‌ನಲ್ಲಿ ನಡೆದ ಸಭೆಯಲ್ಲಿ ಪಾಲಿಕೆ ಚುನಾವಣೆಯಲ್ಲಿ ಗೆದ್ದಿರುವ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಗಿತ್ತಲ್ಲದೆ, ಮೇಯರ್‌- ಉಪಮೇಯರ್‌ ಆಯ್ಕೆ ವೇಳೆ ಒಗ್ಗಟ್ಟು ಕಾಪಾಡಿಕೊಳ್ಳಬೇಕು. ಮುಂಬರುವ ವಿಧಾನಸಭಾ ಚುನಾವಣೆಯನ್ನು(Assembly Election) ಗಮನದಲ್ಲಿಟ್ಟುಕೊಂಡು ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದ್ದಾರೆ. ಇದೇ ವೇಳೆ ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡಿಕೊಂಡು ಬಂದಿರುವ ಹಾಗೂ ಪಕ್ಷ ಸಂಘಟನೆಯಲ್ಲಿ ಈ ಹಿಂದಿನಿಂದಲೂ ತೊಡಗಿಸಿಕೊಂಡು ಬಂದಿರುವವರಿಗೆ ಆದ್ಯತೆ ನೀಡಬೇಕು ಎಂಬ ಚರ್ಚೆ ನಡೆದಿದೆ. ಇಷ್ಟಾಗಿಯೂ ಮೇಯರ್‌ ಸ್ಥಾನದ ಆಕಾಂಕ್ಷಿತರು ತಮ್ಮ ನಾಯಕರ ಮೂಲಕ ಕಸರತ್ತು ಮುಂದುವರಿಸಿದ್ದಾರೆ.

'ವಿಜಯೇಂದ್ರ ವೀರಶೈವ ಸಮಾಜ ಮುನ್ನಡೆಸುವ ಸಮರ್ಥ ನಾಯಕ'

7 ತಿಂಗಳ ಬಳಿಕ ಮೇಯರ್‌- ಉಪಮೇಯರ್‌ ಚುನಾವಣೆ!

ಪಾಲಿಕೆ ಚುನಾವಣೆ ನಡೆದು ಏಳು ತಿಂಗಳ ಬಳಿಕ ಮೇಯರ್‌-ಉಪಮೇಯರ್‌ ಚುನಾವಣೆ ನಡೆಯುತ್ತಿದೆ. ಕಳೆದ ಮೇ 28ರಂದು ಚುನಾವಣೆ ನಡೆದು, 31ರಂದು ಫಲಿತಾಂಶ(Result) ಹೊರಬಿತ್ತು. ಕೋವಿಡ್‌(Covid19) ನೆಪವೊಡ್ಡಿ ಮೇಯರ್‌-ಉಪ ಮೇಯರ್‌ ಚುನಾವಣೆಯನ್ನು ಮುಂದೂಡಲಾಗಿತ್ತು. 39 ಪಾಲಿಕೆ ಸದಸ್ಯರ ಪೈಕಿ ಕಾಂಗ್ರೆಸ್‌ 21, ಬಿಜೆಪಿ 13, ಪಕ್ಷೇತರರು ಐವರು ಗೆಲುವು ಸಾಧಿಸಿದ್ದರು.

ಹುಬ್ಬಳ್ಳಿ-ಧಾರವಾಡ ಪಾಲಿಕೆ: ಚುನಾಯಿತರಿಗಿಲ್ಲ ಅಧಿಕಾರ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು 2 ತಿಂಗಳುಗಳು ಆಗಿವೆ. ಆದರೆ ಮೇಯರ್‌, ಉಪಮೇಯರ್‌ ಆಯ್ಕೆಗೆ ಸರ್ಕಾರ ಮಾತ್ರ ಮೀನಾಮೇಷ ಎಣಿಸುತ್ತಿದೆ. ತಮ್ಮ ಆಪ್ತರಿಗೆ ಪಟ್ಟ ಕಟ್ಟಲು ತೆರೆಯಲ್ಲಿ ಬಿಜೆಪಿ ನಾಯಕರು ಭಾರೀ ಕಸರತ್ತು ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಹುಬ್ಬಳ್ಳಿಯವರೇ ಆದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದರೂ ಕೂಡ ವಿಳಂಬ ಯಾಕೆ? ಅಂತ ಅವಳಿ ನಗರದ ಸಾರ್ವಜನಿಕರ ಪ್ರಶ್ನೆಯಾಗಿದೆ. ಪಾಲಿಕೆಗೆ ಮೇಯರ್‌, ಉಪಮೇಯರ್‌ ಆಯ್ಕೆಯಾಗದ ಕಾರಣ ಮಹಾನಗರದಲ್ಲಿ ಘನತ್ಯಾಜ್ಯ ವಿಲೇವಾರಿ, ಒಳಚರಂಡಿ ದುರಸ್ತಿ, ಸ್ವಚ್ಛತೆ, ರಸ್ತೆ ಕೆಲಸ ವಿಳಂಬವಾಗಿದೆ. ಇದರಿಂದ ಸಾರ್ವಜನಿಕರು ಮಾತ್ರ ಇನ್ನಿಲ್ಲದ ತೊಂದರೆಗಳನ್ನ ಅನುಭವಿಸುತ್ತಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ