ಕಾನೂನು ಮೀರಿ ಬಗರ್ ಹುಕುಂ ಅರ್ಜಿ ವಿಲೇ ಇಲ್ಲ: ಸಚಿವ ಕೃಷ್ಣ ಬೈರೇಗೌಡ

Published : Aug 19, 2025, 07:26 AM IST
Krishna Byre Gowda

ಸಾರಾಂಶ

2005ರ ವೇಳೆಗೆ ಹುಟ್ಟೇ ಇಲ್ಲದ ವ್ಯಕ್ತಿಗಳು ಸೇರಿ ಲಕ್ಷಾಂತರ ಅನರ್ಹರು ಸಾಗುವಳಿ ಮಾಡುತ್ತಿರುವುದಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ಮಂಜೂರಾತಿ ನೀಡುತ್ತೇವೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

ವಿಧಾನಸಭೆ (ಆ.19): ಬಗರ್‌ಹುಕುಂ ಅರ್ಜಿಗಳ ವಿಲೇ ವಿಚಾರದಲ್ಲಿ ಸರ್ಕಾರ ಅಥವಾ ಅಧಿಕಾರಿಗಳು ಕಾನೂನು ಮೀರಿ ನಡೆದಿಲ್ಲ. ಪ್ರಸ್ತುತ 14 ಲಕ್ಷ ಅರ್ಜಿ ಸಲ್ಲಿಕೆಯಾಗಿದ್ದು, ಈ ಪೈಕಿ 2005ರ ವೇಳೆಗೆ ಹುಟ್ಟೇ ಇಲ್ಲದ ವ್ಯಕ್ತಿಗಳು ಸೇರಿ ಲಕ್ಷಾಂತರ ಅನರ್ಹರು ಸಾಗುವಳಿ ಮಾಡುತ್ತಿರುವುದಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ಮಂಜೂರಾತಿ ನೀಡುತ್ತೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಸಲ್ಲಿಕೆಯಾಗಿರುವ 14 ಲಕ್ಷ ಅರ್ಜಿಗಳಲ್ಲಿ 60 ಸಾವಿರ ಮಂದಿಗಷ್ಟೇ ಜಮೀನು ಮಂಜೂರು ಮಾಡಬಹುದು. ಜತೆಗೆ ಹೀಗೆ ಸರ್ಕಾರಿ ಜಾಗ ಮಂಜೂರು ಮಾಡುತ್ತಲೇ ಹೋದರೆ ಸರ್ಕಾರಿ ಕಚೇರಿ, ಸ್ಮಶಾನಗಳಿಗೂ ಜಾಗ ಇಲ್ಲದಂತಾಗುತ್ತದೆ. ಸುಪ್ರೀಂ ಕೋರ್ಟ್‌ ಅರಣ್ಯ ಜಾಗ ಹಾಗೂ ಗೋಮಾಳ ಮಂಜೂರು ಮಾಡಬಾರದು ಎಂದು ಕೆಲ ಪ್ರಕರಣಗಳಲ್ಲಿ ತೀರ್ಪು ನೀಡಿದೆ. ಎಲ್ಲವನ್ನೂ ಪರಿಗಣಿಸಿ ಅರ್ಜಿ ವಿಲೇ ಮಾಡಲಾಗುವುದು. ಒಂದು ವೇಳೆ ರೈತರಿಗೆ ಅನ್ಯಾಯವಾಗಿದ್ದರೆ ನಮ್ಮ ಗಮನಕ್ಕೆ ತನ್ನಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಸದಸ್ಯರಿಗೆ ಭರವಸೆ ನೀಡಿದರು.

ವಿಧಾನಸೌಧದಲ್ಲಿ ಸೋಮವಾರ ಪ್ರಶ್ನೋತ್ತರ ವೇಳೆ ಜೆಡಿಎಸ್‌ ಸದಸ್ಯ ಎಂ.ಟಿ. ಕೃಷ್ಣಪ್ಪ ಪ್ರಶ್ನೆಗೆ ಉತ್ತರಿಸಿದ ಕೃಷ್ಣ ಬೈರೇಗೌಡ ಅವರು, ಬಗರ್ ಹುಕುಂ ಸಮಿತಿ ಮುಂದೆ ಅಧಿಕಾರಿಗಳು ಅರ್ಹ ಅರ್ಜಿಗಳನ್ನು ಮಾತ್ರ ಸಲ್ಲಿಸಬೇಕು ಎಂಬ ಕಾನೂನು ಇದೆ. ಹೀಗಾಗಿ ಅಧಿಕಾರಿಗಳು ಅನರ್ಹ ಅರ್ಜಿಗಳನ್ನು ಆರಂಭಿಕ ಹಂತದಲ್ಲೇ ತ್ಯಜಿಸಿಬಿಡುತ್ತಾರೆ. ಈ ಎಲ್ಲಾ ಪ್ರಕ್ರಿಯೆಗಳೂ ಕಾನೂನಿನಲ್ಲೇ ಇದ್ದು, ಕಾನೂನು ಮೀರಿ ಏನೂ ಮಾಡಿಲ್ಲ. ಒಂದು ವೇಳೆ ಕಣ್ತಪ್ಪಿನಿಂದ ಒಂದೆರಡು ರೈತರಿಗೆ ಅನ್ಯಾಯ ಆಗಿದ್ದರೆ ಶಾಸಕರು ನನ್ನ ಗಮನಕ್ಕೆ ತನ್ನಿ, ಸಮಸ್ಯೆಯನ್ನು ನಾನು ಸರಿಪಡಿಸುತ್ತೇನೆ ಎಂದರು.

ಅನರ್ಹ ಅರ್ಜಿಗಳ ಬಗ್ಗೆಯೂ ಸದನದ ಗಮನ ಸೆಳೆದ ಸಚಿವರು, 2005ರ ಹಿಂದೆ ಸಾಗುವಳಿ ಮಾಡುತ್ತಿದ್ದವರು ಮಾತ್ರ ಅರ್ಜಿ ಸಲ್ಲಿಕೆಗೆ ಅರ್ಹರು. ಆದರೆ ಆ ವೇಳೆಗೆ ಹುಟ್ಟೇ ಇಲ್ಲದವರೆಲ್ಲ ಅರ್ಜಿ ಸಲ್ಲಿಸಿದ್ದಾರೆ. 5 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವ 7,564 ಜನ, ರಸ್ತೆ ಗುಂಡು ತೋಪು ಒತ್ತುವರಿ ಮಾಡಿರುವವರು 33,632, ಅರಣ್ಯ ಭೂಮಿ ಮಂಜೂರಾತಿಗೆ 1,00,565, ನಗರ-ನಗರಸಭೆ ವ್ಯಾಪ್ತಿಯಲ್ಲಿ ಭೂ ಮಂಜೂರಾತಿಗೆ 69,850, ಆ ತಾಲೂಕಿನಲ್ಲೇ ವಾಸಿಸದ ಪಕ್ಕದ ತಾಲೂಕಿನಲ್ಲೂ ವಾಸ ಇಲ್ಲದ 1,620, ಕೃಷಿಕರೇ ಅಲ್ಲದ 13,488, ಜಮೀನಿನ ಸ್ವಾಧೀನದಲ್ಲೇ ಇಲ್ಲದ 44,517, ಅಮೃತ್ ಮಹಲ್ ಕಾವಲ್‌ ಭೂ ಮಂಜೂರಾತಿಗೆ 13,488 ಹಾಗೂ ಕೆರೆ ಮಂಜೂರಿಗೂ 3040 ಅರ್ಜಿಗಳು ಬಂದಿವೆ ಎಂದು ಹೇಳಿದರು.

ನಾವು ಮಂಜೂರು ಮಾಡುತ್ತಲೇ ಇದ್ದೇವೆ. ಆದರೆ ಸರ್ಕಾರ ಸ್ಮಶಾನಕ್ಕೆ ಜಾಗ ಬೇಕಾದರೂ ಖರೀದಿ ಮಾಡಬೇಕಾದ ಸ್ಥಿತಿ ಬಂದಿದೆ. 12,000 ಅಂಗನವಾಡಿಗಳಿಗೆ ಈವರೆಗೆ ಜಾಗ ನೀಡಲಾಗಿಲ್ಲ. ಮೊರಾರ್ಜಿ ದೇಸಾಯಿ ಶಾಲೆಗೆ, ಹೊಸ ತಾಲೂಕುಗಳ ಪ್ರಜಾಸೌಧ, ಶಾಲೆ, ಮೈದಾನಕ್ಕೂ ಜಮೀನು ಖರೀದಿಸುವಂತಾಗಿದೆ. ಹೀಗಾಗಿ ಎಲ್ಲವನ್ನೂ ಪರಿಗಣಿಸಿ ಯಾವ್ಯಾವ ಜಮೀನು ಮಂಜೂರಿಗೆ ಅರ್ಜಿ ಸಲ್ಲಿಸಿದ್ದಾರೆ ಎಂಬುದನ್ನು ಸ್ಯಾಟಲೈಟ್ ಇಮೇಜ್‌ ಸಹಿತ ಅಧ್ಯಯನ ನಡೆಸಿ 18 ವರ್ಷಗಳಿಂದ ಬೆಳೆ ಬೆಳೆಯುತ್ತಿರುವುದು ಖಾತ್ರಿ ಆದರೆ ಮಾತ್ರ ಪರಿಗಣಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!